ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಜಿಗದ ಕೀಟಗಳು ತಂದಿಟ್ಟ ಸಂಕಷ್ಟ

ರಾತ್ರಿ ಸಮಯದಲ್ಲಿ ಮಾತ್ರ ‌ದಾಂಗುಡಿಗೆ ಇಡುವ ಕೀಟಗಳು * ಹಿಪ್ಪುನೇರಳೆ ಸೊಪ್ಪು ನಾಶ
Last Updated 26 ಏಪ್ರಿಲ್ 2020, 15:39 IST
ಅಕ್ಷರ ಗಾತ್ರ

ದೇವನಹಳ್ಳಿ: ಹಿಪ್ಪುನೇರಳೆ ಸೊಪ್ಪಿನ ಮೇಲೆ ರಾತ್ರೋರಾತ್ರಿ ಕೀಟಗಳು ದಾಳಿ ನಡೆಸುತ್ತಿವೆ. ಇದರಿಂದ ರೇಷ್ಮೆ ಬೆಳೆಗಾರರನ್ನು ಸಂಕಷ್ಟಕ್ಕೆ ದೂಡಿದೆ. ಕೊರೊನಾ ಮಾರಕ ಸೋಂಕಿಗೆ ಕಡಿವಾಣ ಹಾಕಲು ಲಾಕ್‌ಡೌನ್‌ ಜಾರಿಯಲ್ಲಿದೆ. ಇದರ ನಡುವೆ ರೇಷ್ಮೆಗೂಡಿನ ಮಾರುಕಟ್ಟೆ ಸಂಪೂರ್ಣ ಬಂದ್ ಆಗಿದೆ.

ಸಾವಿರಾರು ರೈತ ಕುಟುಂಬಗಳ ಜೀವನಕ್ಕೆ ಬೆಂಬಲವಾಗಿದ್ದ ರೇಷ್ಮೆ ಸೊಪ್ಪುನ್ನು ಕೆಲವರು ಅನಿವಾರ್ಯವಾಗಿ ಪಶುಗಳಿಗೆ ಮೇವುಗಾಗಿ ಕಟಾವು ಮಾಡಿದ್ದಾರೆ. ಇನ್ನು ಕೆಲವರು ಹಾಗೆಯೇ ಬಿಟ್ಟಿರುವ ಪರಿಣಾಮ ಎಲೆಗಳು ಹಣ್ಣಾಗಿ ಉದುರುತ್ತಿವೆ. ಈಗ ರೈತರಿಗೆ ಅನಿರೀಕ್ಷಿತ ಅಘಾತಕಾರಿ ಎಂಬಂತೆ ಎಣಿಕೆಗೆ ನಿಲುಕದ ಲಕ್ಷಾಂತರ ಕಪ್ಪು ಕೀಟಗಳು ಏಕಾಏಕಿ ರೇಷ್ಮೆ ಬೆಳೆ ಮೇಲೆ ದಾಳಿ ನಡೆಸುತ್ತಿವೆ. ಇದರಿಂದ ಬೆಳೆಗಾರರ ಅತ್ಮಸ್ಥೈರ್ಯವನ್ನೇ ಕುಗ್ಗಿಸಿದೆ.

ರೇಷ್ಮೆ ಸಾಕಾಣಿಕೆದಾರರು ಈಗಾಗಲೇ ಒಂದು ಮತ್ತು ಎರಡನೇ ಜ್ವರದಲ್ಲಿ ಹುಳು ಸಾಗಾಣಿಕೆ ಮಾಡುತ್ತಿದ್ದಾರೆ. ಕೆಲ ರೈತರು ಇನ್ನೆರಡು ಮೂರು ದಿನಗಳಲ್ಲಿ ಸಾಕಾಣಿಕೆ ಪೂರ್ಣಗೊಳಿಸಿ ಹುಳು ರೇಷ್ಮೆ ಗೂಡು ಕಟ್ಟಲು ಬಿಡಬೇಕು. ಗೂಡುಕಟ್ಟಲು ಹಣ್ಣಾಗುವ ಹುಳುಗಳಿಗೆ ಅಂತಿಮ ಒಂದೆರಡು ದಿನಗಳಲ್ಲಿ ಬಾರಿ ಪ್ರಮಾಣದಲ್ಲಿ ದುಪ್ಪಟ್ಟು ಸೊಪ್ಪುಬೇಕಾಗುತ್ತದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಈ ಕೀಟಗಳು ಉತ್ಪತ್ತಿಯಾಗಿದ್ದು ಹೇಗೆ ? ಎಲ್ಲಿಂದ ಬಂದಿವೆ ? ಒಂದೇ ಬಾರಿಗೆ ಅಸಂಖ್ಯಾತ ಕೀಟಗಳು ದಾಳಿ ಇಟ್ಟಿರುವುದು ರೈತರನ್ನು ಚಿಂತೆಗೀಡು ಮಾಡಿದೆ.

ಕ್ಷಣಾರ್ಥದಲ್ಲಿ ಇಡೀ ಗಿಡವನ್ನೇ ಅಪೋಶನ ತೆಗೆದುಕೊಳ್ಳುವ ಈ ಕೀಟಗಳು ನಂತರ ಕಾಂಡಾದಲ್ಲಿ ರಸಹೀರಿ ತಿನ್ನುತ್ತವೆ. ವಿಚಿತ್ರ ಮತ್ತು ಸೋಜಿಗ ಕೀಟಗಳನ್ನು ಇದುವರೆಗೂ ಕಂಡಿಲ್ಲ ಎನ್ನುತ್ತಾರೆ ರೇಷ್ಮೆ ಬೆಳೆಗಾರ ಚಂದ್ರಶೇಖರ್.

ಅಕಾಲಿಕ ಮತ್ತು ಅನಿರೀಕ್ಷಿತ ಕೀಟಗಳ ದಾಳಿ ರೇಷ್ಮೆ ಬೆಳೆಗಾರ ಆರ್ಥಿಕ ಮೂಲವನ್ನೇ ಕಸಿದುಕೊಂಡಿದೆ. ರೇಷ್ಮೆ ಇಲಾಖೆ ಕೀಟಬಾಧೆಗೆ ಕಡಿವಾಣ ಹಾಕಿ ನಷ್ಟವಾಗಿರುವ ರೇಷ್ಮೆ ಸೊಪ್ಪಿನ ಬೆಳೆ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ನೀಡಬೇಕು ಎನ್ನುತ್ತಾರೆ ರೇಷ್ಮೆ ಬೆಳೆಗಾರ ಚಿಕ್ಕೆಗೌಡ.

ರಾತ್ರಿ ಸಮಯದಲ್ಲಿ ಮಾತ್ರ ಹೊರಬರುವ ಈ ಕೀಟಗಳನ್ನು ಕೈಬಲೆಗಳ ಸಹಾಯದಿಂದ ನಾಶಪಡಿಸಬೇಕು ಎನ್ನುತ್ತಾರೆ ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಕೀಟಶಾಸ್ತ್ರ ವಿಭಾಗ ತಜ್ಞರಾದ ಕೆ.ವಿ.ಪ್ರಕಾಶ ಮತ್ತು ಡಾ.ಡಿ.ರಾಜಣ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT