ಮಂಗಳವಾರ, ಫೆಬ್ರವರಿ 18, 2020
24 °C
ಹದಗೆಡುತ್ತಿರುವ ಪರಿಸರ, ಅನಾರೋಗ್ಯದ ಆತಂಕ

ವಿಜಯಪುರ: ವೈಜ್ಞಾನಿಕ ಕಸ ವಿಲೇವಾರಿ ಘಟಕ ಇನ್ನೂ ಕನಸು

ಎಂ.ಮುನಿನಾರಾಯಣ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಪಟ್ಟಣದ ಪರಿಸರ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ವಾತಾವರಣ ಕಲುಷಿತವಾಗುತ್ತಿದೆ. ಜನರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಇದಕ್ಕೆಲ್ಲಾ ಮೂಲ ಕಾರಣ ಇಲ್ಲಿ ಉತ್ಪತ್ತಿಯಾಗುತ್ತಿರುವ ಕಸ ವೈಜ್ಞಾನಿಕವಾಗಿ ವಿಲೇವಾರಿ ಆಗದೆ ಇರುವುದು.

23 ವಾರ್ಡ್‌ಗಳಿಂದ ದಿನನಿತ್ಯ ಉತ್ಪತ್ತಿಯಾಗುತ್ತಿರುವ ಕಸ 16 ಟನ್. ತಿಂಗಳಿಗೆ 480 ಟನ್ ಕಸ ಉತ್ಪಾದನೆಯಾಗುತ್ತಿದೆ. ಈ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಿಕ್ಕೆ ಸೂಕ್ತವಾದ ಜಾಗವಿಲ್ಲದ ಕಾರಣ. ಅಧಿಕಾರಿಗಳು ಅಸಹಾಯಕರಾಗಿದ್ದಾರೆ. ಪಟ್ಟಣದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿಗಳು ಬಿದ್ದಿದ್ದು, ದುರ್ವಾಸನೆ ಬೀರುತ್ತಾ ಜನರನ್ನು ಅನಾರೋಗ್ಯದ ಕೂಪಕ್ಕೆ ದೂಡುತ್ತಿವೆ. ಪಟ್ಟಣವನ್ನು ಕಸಮುಕ್ತ ಮಾಡುವ ನಿಟ್ಟಿನಲ್ಲಿ ಪುರಸಭೆ ಅಧಿಕಾರಿಗಳು ನಾನಾ ಕಸರತ್ತು ಮಾಡುತ್ತಿದ್ದಾರೆ. ಆದರೆ, ಸಂಗ್ರಹಿಸಿದ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವ ಕಾರ್ಯ ಸಾಧ್ಯವಾಗುತ್ತಿಲ್ಲ. ಪಟ್ಟಣ ಕಸದ ರಾಶಿಯಿಂದ ಸಾಂಕ್ರಾಮಿಕ ರೋಗ ಹರಡುವ ತಾಣವಾಗಿ ಮಾರ್ಪಡುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುರಸಭೆಯ ಸೂಚನೆಯಂತೆ ಪೌರಕಾರ್ಮಿಕರು ದಿನ ಬೆಳಗಾದರೆ 23 ವಾರ್ಡ್‌ಗಳಿಂದ ರಾಶಿ ಕಸ ಸಂಗ್ರಹಿಸಿಕೊಂಡು ಗ್ರಾಮಾಂತರ ಪ್ರದೇಶಗಳಲ್ಲಿರುವ ಪಾಳುಬಾವಿಗಳಲ್ಲಿ ಸುರಿಯುತ್ತಿದ್ದಾರೆ. ಇದರಿಂದ ಭವಿಷ್ಯದಲ್ಲಿ ಉಂಟಾಗಬಹುದಾದ ಅಂತರ್ಜಲದ ಕಲುಷಿತವಾದ ಕಾರಣ ವಿಷಯುಕ್ತ ನೀರನ್ನು ಜನರು ಕುಡಿಯಬೇಕಾಗುವಂತಹ ಪರಿಸ್ಥಿತಿ ಎದುರಾಗಬಹುದು ಎನ್ನುವ ಆತಂಕ ಜನರನ್ನು ಕಾಡಲಾರಂಭಿಸಿದೆ.

ಇದೀಗ ಬಾವಿಗಳಲ್ಲಿ ಸಂಗ್ರಹವಾಗಿರುವ ಕಸ, ವಿಲೇವಾರಿ ಘಟಕದಲ್ಲಿ ಸೂಕ್ತ ನಿರ್ವಹಣೆಯಾಗಬೇಕಾಗಿತ್ತು. ಆದರೆ, ಬಾವಿಗಳಲ್ಲಿ ಮಳೆಯ ನೀರಿನಲ್ಲಿ ತೇವಗೊಂಡು ಕೊಳೆತು ಇಲ್ಲಿ ಉತ್ಪತ್ತಿಯಾಗುತ್ತಿರುವ ಶಾಖದಿಂದಾಗಿ ಬೆಂಕಿ ಹೊತ್ತಿಕೊಂಡು ಸುಟ್ಟು ಹೋಗುತ್ತಿರುವುದರ ಜೊತೆಗೆ ಪರಿಸರ ಹಾಳು ಮಾಡುವಂತಾಗಿದೆ. ವೈಜ್ಞಾನಿಕವಾಗಿ ಕಸವಿಲೇವಾರಿ ಮಾಡುವಂತಹ ಘಟಕವನ್ನು ಇದುವರೆಗೂ ಆರಂಭಿಸಿಲ್ಲ.

ಇದರೊಂದಿಗೆ ಈ ನಡುವೆ ಕಸದ ರಾಶಿಗಳನ್ನು ತಂದು ಹಾಕುವ ಕಡೆಗಳಲ್ಲಿ ಕೆಟ್ಟ ವಾಸನೆ ಸೃಷ್ಟಿಯಾಗಿದೆ. ಜತೆಗೆ ಸೊಳ್ಳೆ, ನೊಣಗಳ ಹಾವಳಿಯಿಂದ ಜನರು ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿದ್ದಾರೆ.

ಪುರಸಭೆಯಿಂದ ಸಂಗ್ರಹಿಸುವ ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ವಹಿಸುವ ಗುರಿ ಹೊಂದಿತ್ತು. ಈ ಸಂಬಂಧ ಹೋಬಳಿಯ ಇರಿಗೇನಹಳ್ಳಿಯ ಸಮೀಪದಲ್ಲಿ 10 ಎಕರೆ 18 ಗುಂಟೆ ಭೂಮಿಯನ್ನೂ ಗುರುತಿಸಲಾಗಿತ್ತು. 7.23 ಎಕರೆ ಭೂಮಿಯನ್ನು ಖರೀದಿ ಮಾಡಿ ಮಂಜೂರು ಮಾಡಲಾಗಿದೆ. ಉಳಿದ 2 ಎಕರೆ 35 ಗುಂಟೆ ಭೂಮಿ ಮಂಜೂರಾಗಬೇಕಾಗಿದೆ.

ಇಲ್ಲಿ ಹಸಿಕಸ ಮತ್ತು ಒಣಕಸವನ್ನು ತಂದು ಗೊಬ್ಬರವಾಗಿ ಪರಿವರ್ತಿಸುವ ಯೋಜನೆಯನ್ನು ತಯಾರಿಸಿತ್ತು. ಆದರೆ, ಇದುವರೆಗೂ ಭೂಮಿಯ ಹಸ್ತಾಂತರದ ಗೊಂದಲ ಬಗೆಹರಿದಿಲ್ಲ.

ಪುರಸಭೆಯ ಹಿಂದಿನ ಯೋಜನೆಗಳಿಗೆ ಜೀವ ಕೊಡುವಲ್ಲಿ ಆಡಳಿತಾಧಿಕಾರಿ, ಹಾಗೂ ಪುರಸಭೆ ಅಧಿಕಾರಿಗಳು ಪಟ್ಟಣದ ಶುಚಿತ್ವದ ಕಡೆ ಚಿಂತನೆ ನಡೆಸಬೇಕಿದೆ. ಹಸಿ ಹಾಗೂ ಒಣಕಸ ಬೇರ್ಪಡಿಸುವ ಅತ್ಯಾಧುನಿಕ ಯಂತ್ರಗಳನ್ನು ಸ್ಥಾಪಿಸಿ, ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು.

ಇಲ್ಲಿ ಕಸ ವಿಲೇವಾರಿ ಸಮಸ್ಯೆ ಗಂಭೀರವಾಗಿ ತೋಡುಬಾವಿಗಳ ಒಳಗೆ ಸುರಿಯುತ್ತಿರುವ ಕಸದ ರಾಶಿಯಿಂದಾಗಿ ಭವಿಷ್ಯದಲ್ಲಿ ಮಕ್ಕಳು ಗಂಭೀರ ಸ್ವರೂಪದ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ. ಈ ಬಾವಿಗಳ ಸುತ್ತಮುತ್ತಲಿನಲ್ಲಿ ರೈತರು ನೀರು ಪಡೆಯುತ್ತಿರುವ ಕೊಳವೆ ಬಾವಿಗಳಲ್ಲೂ ಕಲುಷಿತ ನೀರು ಮಿಶ್ರಣವಾಗುವ ಸಾಧ್ಯತೆ ದಟ್ಟವಾಗಿದ್ದು ಈ ಬಗ್ಗೆ ಪರಿಶೀಲನೆ ನಡೆಸಿ, ತ್ಯಾಜ್ಯ ಸಂಗ್ರಹಕ್ಕೆ ಹಾಗೂ ವಿಲೇವಾರಿ ಮಾಡುವ ಸ್ಥಳವನ್ನು ವ್ಯವಸ್ಥಿತ ರೀತಿಯಲ್ಲಿ ಪರಿಸರ ಮಾಲಿನ್ಯ ಮತ್ತು ಜನರಿಗೆ ಸಾಂಕ್ರಾಮಿಕ ರೋಗ ಹರಡದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸ್ಥಳೀಯರು ಪತ್ರಗಳನ್ನೂ ಬರೆದಿದ್ದಾರೆ.

ಮನವಿಗೆ ಸ್ಪಂದಿಸಿರುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಸೂಕ್ತ ಕ್ರಮ ಹಾಗೂ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವರದಿ ನೀಡುವಂತೆ ಪುರಸಭೆಗೆ ಪತ್ರದ ಮೂಲಕ ಸೂಚನೆ ನೀಡಲಾಗುತ್ತದೆ ಎಂದು ತಿಳಿಸಿದ್ದರು.

ಪುರಸಭೆಯಿಂದ ಇಲ್ಲಿನ ಮಾಯಾ ಆಂಗ್ಲಶಾಲೆಯ ಪಕ್ಕದಲ್ಲೆ ಕಸ ಸಂಗ್ರಹಣಾ ಘಟಕ ಸ್ಥಾಪನೆ ಮಾಡಿದ್ದರೂ ಅದು ಪ್ರಯೋಜನಕ್ಕೆ ಬರುತ್ತಿಲ್ಲ. ಕಸ ಸಂಗ್ರಹಣೆಗಾಗಿ ಪಟ್ಟಣದಲ್ಲಿ ಇಟ್ಟಿದ್ದ ಕಸದ ತೊಟ್ಟಿಗಳು ಕಾಣಿಸದ ಕಾರಣ ಜನರು ಎಲ್ಲೆಂದರಲ್ಲಿ ಕಸವನ್ನು ತಂದು ಸುರಿಯುತ್ತಿದ್ದಾರೆ.

ಪುರಸಭೆಯಿಂದ ಟಬ್‌ ವಿತರಣೆ ಮಾಡಿ, ಹಸಿಕಸ ಮತ್ತು ಒಣಕಸವನ್ನು ಪ್ರತ್ಯೇಕಿಸಿ ಕೊಡಿ ಎಂದು ಜನರಿಗೆ ಎಷ್ಟೇ ಜಾಗೃತಿ ಮೂಡಿಸಿದರೂ ಜನರೂ ಕೂಡಾ ಎಚ್ಚೆತ್ತುಕೊಂಡಿಲ್ಲ. ಎಲ್ಲ ಕಸವನ್ನು ತಂದು ರಸ್ತೆಗಳ ಇಕ್ಕೆಲಗಳಲ್ಲಿ ಸುರಿಯುತ್ತಿದ್ದಾರೆ. ಇದರಿಂದಾಗಿ ಹಸಿಕಸ ಕೊಳೆತು ದುರ್ವಾಸನೆ ಬೀರಲಾರಂಭಿಸಿದೆ.

ಜನರ ಸಹಕಾರವೂ ಅಗತ್ಯ 

ಸ್ಥಳೀಯವಾಗಿ ಪುರಸಭೆ ಅಧಿಕಾರಿಗಳು ಕಸವಿಲೇವಾರಿ, ಪ್ಲಾಸ್ಟಿಕ್ ನಿಷೇಧ, ಕುಡಿಯುವ ನೀರಿನ ಮಿತಬಳಕೆ ಸೇರಿದಂತೆ ಎಲ್ಲಾ ವಿಚಾರಗಳಲ್ಲೂ ಜನರಿಗೆ ಸಾಕಷ್ಟು ಜಾಗೃತಿ ಮೂಡಿಸಿ, ಸಹಕರಿಸುವಂತೆ ಮನವಿ ಮಾಡುತ್ತಿದ್ದರೂ ಕೂಡಾ, ಜನರು ಮನೆಗಳಿಂದ ತಂದ ಕಸವನ್ನು ಚರಂಡಿಗಳ ಸಮೀಪದಲ್ಲಿ ಸುರಿಯುತ್ತಾರೆ. ಇದರಿಂದ ಚರಂಡಿಗಳಲ್ಲಿ ನೀರು ಸರಾಗವಾಗಿ ಮುಂದೆ ಹರಿಯದೇ ನಿಂತಲ್ಲೆ ನಿಂತು ದುರ್ವಾಸನೆ ಬೀರಲು ಕಾರಣವಾಗುತ್ತಿದೆ.

ಅಂಗಡಿ ವ್ಯಾಪಾರಿಗಳು, ಹೋಟೆಲ್ ಉದ್ಯಮಿಗಳು ಸೇರಿದಂತೆ ಬಹುತೇಕ ಕಡೆಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ಕವರ್‌ಗಳನ್ನು ವ್ಯಾಪಾರದ ದೃಷ್ಟಿಯಿಂದ ಮಾರಾಟ ಮಾಡುತ್ತಿರುವುದರ ಪರಿಣಾಮವಾಗಿ ಕಸದ ರಾಶಿಗಳಲ್ಲಿ ಹೆಚ್ಚು ಪ್ಲಾಸ್ಟಿಕ್ ಕವರ್‌ಗಳು ಬೀಳುವುದರಿಂದ ರಾಸುಗಳು ಇವುಗಳನ್ನು ತಿಂದು ಗರ್ಭಧಾರಣೆಯಾಗದೇ ಉಳಿಯುವಂತಾಗಿದೆ.

ಕೆಲವು ಕಡೆಗಳಲ್ಲಿ ಜನರೇ ಸುರಿದಿರುವ ಕಸದ ರಾಶಿಗೆ ಅವರೇ ಬೆಂಕಿ ಹಚ್ಚಿಹೋಗುತ್ತಾರೆ. ಕಸ ಸುಟ್ಟುಹೋಗಲಿ ಎನ್ನುವ ಕಾರಣಕ್ಕೆ ಬೆಂಕಿಹಚ್ಚುತ್ತಿದ್ದಾರಾದರೂ ಕಸದಲ್ಲಿನ ಪ್ಲಾಸ್ಟಿಕ್ ಕವರ್, ತ್ಯಾಜ್ಯಗಳು ಸುಟ್ಟುಹೋಗಿ ಹೊಗೆಯ ರೂಪದಲ್ಲಿ ಗಾಳಿಯಲ್ಲಿ ಮಿಶ್ರಣಗೊಳ್ಳುತ್ತಿರುವ ಕಾರಣದಿಂದ ಸುತ್ತಮುತ್ತಲಿನಲ್ಲಿ ವಾಸಮಾಡುತ್ತಿರುವ ಜನರು ಕ್ಯಾನ್ಸರ್‌ನಂತಹ ಗಂಭೀರವಾದ ಕಾಯಿಲೆಗಳಿಗೆ ಒಳಗಾಗುವಂತಹ ಸಾಧ್ಯತೆಗಳಿದೆ. ಜನರು ಸ್ವಯಂ ಜಾಗೃತರಾಗಬೇಕು. ಎಲ್ಲೆಂದರಲ್ಲಿ ಕಸವನ್ನು ಬಿಸಾಡುವ ಬದಲಿಗೆ ನಿರ್ದಿಷ್ಟ ಸ್ಥಳದಲ್ಲಿ ಹಾಕುವುದು ಉತ್ತಮ.

ಲಭ್ಯವಿರುವ ನೀರನ್ನು ಮಿತವಾಗಿ ಬಳಕೆ ಮಾಡಿಕೊಳ್ಳುವುದರ ಬದಲಿಗೆ ಅನಗತ್ಯವಾಗಿ ಬಳಕೆ ಮಾಡಿ ರಸ್ತೆಗಳಿಗೆ ನೀರು ಹರಿಯುವಂತೆ ಮಾಡುತ್ತಿರುವುದರಿಂದ ರಸ್ತೆಗಳು ಹದಗೆಡುತ್ತಿರುವುದರ ಜೊತೆಗೆ ನೀರು ಕೊಳಚೆನೀರಾಗಿ ಪರಿವರ್ತನೆಯಾಗಿ ಜನರಿಗೆ ಮತ್ತಷ್ಟು ಕಿರಿಕಿರಿಯನ್ನುಂಟು ಮಾಡುತ್ತಿದೆ.

ಪಟ್ಟಣವನ್ನು ಸ್ವಚ್ಚವಾಗಿಡಬೇಕು. ಜನರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಸರ್ಕಾರ ನಮಗೆ ಕೊಟ್ಟಿರುವ ಜವಾಬ್ದಾರಿ ಅನ್ನುವುದಕ್ಕಿಂತ ನಾವೂ ಇಲ್ಲೇ ಬದುಕುತ್ತಿದ್ದೇವೆ ಎಂದು ಬದ್ಧತೆಯ ಆಧಾರದಲ್ಲಿ ಕೆಲಸ ಮಾಡುತ್ತಿದ್ದೇವೆ. ನಾವು ಮಾತ್ರವೇ ದಿನನಿತ್ಯ ಪಟ್ಟಣದ ಏಳಿಗೆಗಾಗಿ ಶ್ರಮಪಟ್ಟರೆ ಸಾಲದು, ಸಂಘ ಸಂಸ್ಥೆಗಳು, ಸಂಘಟನೆಗಳು, ನಾಗರಿಕರು ನಮ್ಮೊಂದಿಗೆ ಕೈ ಜೋಡಿಸಿದರೆ ಅರ್ಧ ಸಮಸ್ಯೆ ಬಗೆಹರಿಯುತ್ತದೆ. ಅವರವರ ಮನೆಗಳ ಸಮೀಪದಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಲು ಜನರು ಮನಸ್ಸು ಮಾಡಬೇಕು.

ವ್ಯಾಪಾರಸ್ಥರು, ಗ್ರಾಹಕರು ಬರುವುದಿಲ್ಲ ಎನ್ನುವ ಕಾರಣಕ್ಕಾಗಿ ಪ್ಲಾಸ್ಟಿಕ್ ಬಳಕೆ ಮಾಡುತ್ತಾರೆ. ನಾವು ಕಾನೂನು ಪ್ರಕಾರ ಅವರಿಗೆ ಎಚ್ಚರಿಕೆ ಕೊಟ್ಟು ದಂಡ ವಿಧಿಸಬಹುದು. ಆದರೆ, ಮುಂದೊಂದು ದಿನ ಅದೇ ಪ್ಲಾಸ್ಟಿಕ್ ಅವರಿಗೆ ಮಾರಕವಾಗುತ್ತದೆ ಎನ್ನುವುದನ್ನು ಈಗ ಅರಿತರೆ ಉತ್ತಮ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು