ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೋವಿಡ್’ ಭೀತಿಗೆ ಕುಕ್ಕುಟೋದ್ಯಮ ತತ್ತರ

ಕೆ.ಜಿ.ಗೆ ₹ 60: ಉದ್ಯಮಕ್ಕೆ ಭಾರಿ ಪೆಟ್ಟು, ಫಾರಂಗಳಲ್ಲಿ ಉಳಿದ ಕೋಳಿಗಳು
Last Updated 13 ಮಾರ್ಚ್ 2020, 12:41 IST
ಅಕ್ಷರ ಗಾತ್ರ

ವಿಜಯಪುರ: ಮಾಂಸಾಹಾರ ಸೇವನೆಯಿಂದಮಾರಣಾಂತಿಕ ಕೋವಿಡ್-19 ಸೋಂಕು ಹರಡಬಹುದು ಎನ್ನುವ ವದಂತಿ ಎಲ್ಲೆಡೆ ಹರಡುತ್ತಿರುವ ಕಾರಣ ಜಿಲ್ಲೆಯ ಕುಕ್ಕುಟೋದ್ಯಮಕ್ಕೆ ಭಾರಿ ಪೆಟ್ಟು ಬಿದ್ದಿದೆ.

ಕೋಳಿ ಮಾಂಸ ಹಾಗೂ ಮೊಟ್ಟೆ ವಹಿವಾಟು ಕುಸಿದಿರುವುದು ಉದ್ಯಮ ನಡೆಸುತ್ತಿರುವವರನ್ನು ಚಿಂತೆಗೀಡುಮಾಡಿದೆ. ಮಿಶ್ರ ಬೇಸಾಯ ನಡೆಸುತ್ತಿದ್ದ ಪ್ರಗತಿಪರ ಕೃಷಿಕರು ಹಾಗೂ ವ್ಯಾಪಾರಿಗಳು, ಸಣ್ಣ ರೈತರು ತೊಂದರೆಗೀಡಾಗಿದ್ದಾರೆ.

ಜಿಲ್ಲೆಯರೈತರು ಹೈನುಗಾರಿಕೆ ಹಾಗೂ ರೇಷ್ಮೆ ಕೃಷಿ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿತರಾಗಿದ್ದಾರೆ. ಕೃಷಿಗೆ ಪರ್ಯಾಯವಾಗಿ ಕುಕ್ಕುಟ ಉದ್ಯಮವು ರೈತರ ಜೀವನಕ್ಕೆ ಆಧಾರವಾಗಿದೆ. ಆದರೆ ಕೋವಿಡ್ ಕುರಿತು ಭೀತಿ ಹೆಚ್ಚಿಸುವ ಸಂದೇಶಗಳು ಫೇಸ್‌ಬುಕ್, ವಾಟ್ಸ್ಆ್ಯಪ್‌ ಗುಂಪುಗಳಲ್ಲಿ ಹರಿದಾಡುತ್ತಿವೆ. ಮೊಟ್ಟೆ ಹಾಗೂ ಮಾಂಸ ಪ್ರಿಯರು ಚಿಕನ್ ಮತ್ತು ಮೊಟ್ಟೆ ಖರೀದಿಗೆ ಹಿಂದೇಟು ಹಾಕುತ್ತಿದ್ದು, ಇದು ದೈನಂದಿನ ಕುಕ್ಕುಟ ವಹಿವಾಟಿನ ಮೇಲೆ ತೀವ್ರ ಪರಿಣಾಮ ಬೀರಿದೆ.

ಕೆ.ಜಿ.ಗೆ ₹ 170 ರ ಆಸುಪಾಸಿನಲ್ಲಿದ್ದ ಚಿಕನ್ ಬೆಲೆ ಸದ್ಯ ₹ 60 ಕ್ಕೆ ಕುಸಿತ ಕಂಡಿದೆ. ಆದರೂ, ಗ್ರಾಹಕರು ಖರೀದಿ ಮಾಡಲಿಕ್ಕೆ ಮುಂದಾಗುತ್ತಿಲ್ಲ ಎನ್ನಲಾಗಿದೆ ಎಂದು ವ್ಯಾಪಾರಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಲಕ್ಷಗಟ್ಟಲೇ ಮರಿಗಳನ್ನು ಬೆಳೆಸುವ ವಾಣಿಜ್ಯ ಉದ್ದೇಶದ ದೊಡ್ಡ ದೊಡ್ಡ ಫಾರಂಗಳನ್ನು ಹಲವೆಡೆ ನಿರ್ಮಾಣ ಮಾಡಲಾಗಿದ್ದು, ಹೆಚ್ಚಿನ ಬೇಡಿಕೆ ಇದ್ದುದರಿಂದ ಹೆಚ್ಚು ಫಾರಂಗಳನ್ನು ಸ್ಥಾಪನೆ ಮಾಡಲಾಗಿತ್ತು. ನೆರೆಯ ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧ ಕಡೆಗಳಿಂದ ಮರಿಗಳು ಮತ್ತು ಮೊಟ್ಟೆಗಳನ್ನು ಇಲ್ಲಿನ ಸಾಕಾಣಿಕೆದಾರರು ಹಾಗೂ ವ್ಯಾಪಾರಸ್ಥರು ಆಮದು ಮಾಡಿಕೊಂಡು ಉದ್ಯಮ ನಡೆಸುತ್ತಿದ್ದರು. ಇದೀಗ ಬೇಡಿಕೆ ಇಳಿಮುಖವಾಗಿರುವುದು ಮಾಂಸ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ.

ಪರಿಣಾಮ ಬೀರದ ಜಾಗೃತಿ

ಕೋವಿಡ್‌ಗೂ ಕೋಳಿಗೂ ಯಾವುದೇ ಸಂಬಂಧವಿಲ್ಲ ಎಂದು ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು, ವ್ಯಾಪಾರಸ್ಥರು, ಕೋಳಿ ಸಾಕಣೆದಾರರ ಸಂಘಗಳು ಜನರಲ್ಲಿ ಎಷ್ಟೇ ಅರಿವು ಮೂಡಿಸಿದರೂ ಗ್ರಾಹಕರ ಒಳಗಿನ ಭೀತಿ ಮಾತ್ರ ಕಡಿಮೆಯಾಗಿಲ್ಲ. ಇದರ ಪರಿಣಾಮವಾಗಿ ಚಿಕನ್ ಮಾರಾಟ ಗಣನೀಯವಾಗಿ ಕುಸಿತ ಕಂಡಿದೆ ಎಂದು ಸಾಕಾಣಿಕೆದಾರ ನರಸಿಂಹಮೂರ್ತಿ ಬೇಸರ ವ್ಯಕ್ತಪಡಿಸಿದರು.

ಕೋವಿಡ್ ಸೋಂಕಿನ ಸುದ್ದಿ ತಿಳಿದ ನಂತರ ಗ್ರಾಹಕರು ಕೋಳಿ ಮಾಂಸ ಖರೀದಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ. ವ್ಯಾಪಾರ ತುಂಬಾ ಕುಸಿದು ಹೋಗಿದೆ. ಸಾಮಾನ್ಯ ದಿನಗಳಲ್ಲಿ ನಿತ್ಯ ಸುಮಾರು 800 ಕೆ.ಜಿ ವರೆಗೆ ಚಿಕನ್ ಮಾರುತ್ತಿದ್ದೆ. ಸದ್ಯ ದಿನಕ್ಕೆ 200 ಕೆ.ಜಿ. ಮಾರುವುದು ಕಷ್ಟವಾಗುತ್ತಿದೆ. ಸೋಂಕಿಗೂ ಕೋಳಿಗೂ ಸಂಬಂಧವಿಲ್ಲ ಎಂದು ತಿಳಿ ಹೇಳಿದರೂ ಗ್ರಾಹಕರು ಮಾಂಸ ಖರೀದಿಗೆ ಆಸಕ್ತಿ ತೋರುತ್ತಿಲ್ಲ. ಇನ್ನೂ ಭಯದಲ್ಲೇ ಇದ್ದಾರೆ. ಹೀಗಾಗಿ ಬೇಡಿಕೆ ಕುಸಿದಿದೆ ಎಂದು ಚಿಕನ್ ಮಾರಾಟ ಮಳಿಗೆ ಮಾಲೀಕ ಅಲ್ತಾಫ್ ಹೇಳಿದರು.

ಅರಿವು ಮೂಡಿಸುವ ಕಾರ್ಯ

ಈ ಕುರಿತು ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ.ನಾರಾಯಣಸ್ವಾಮಿ ಮಾತನಾಡಿ, ನಾವು ಕೂಡಾ ಈ ಬಗ್ಗೆ ಸಾಕಷ್ಟು ಅರಿವು ಮೂಡಿಸುವ ಕೆಲಸ ಮಾಡಿದ್ದೇವೆ. ಕೋಳಿ ಮಾಂಸ ಅಥವಾ ಮೊಟ್ಟೆ ಸೇವನೆಯಿಂದ ಮನುಷ್ಯರಿಗೆ ಯಾವುದೇ ಸೋಂಕು ತಗುಲುವುದಿಲ್ಲ. ಅಲ್ಲದೇ, ಕೋಳಿ ಮಾಂಸ ಅಥವಾ ಮೊಟ್ಟೆಯನ್ನು ಬೇಯಿಸಿ ಸೇವಿಸಲು ಯಾವುದೇ ರೀತಿಯ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು.

ಮಾರಾಟದಲ್ಲಿ ಶೇ 80ರಷ್ಟು ಕುಸಿತ

ಕೋಳಿ ಮತ್ತು ಮೊಟ್ಟೆ ಪೂರೈಸುವ ಸುಮಾರು 10 ಪ್ರಮುಖ ಡೀಲರ್‌ಗಳಿದ್ದಾರೆ. ಸುಗುಣ, ವೆಂಕಾಬ್ ಸೇರಿದಂತೆ ಸುಮಾರು 15 ಕಂಪನಿಗಳು ಕೋಳಿಗಳನ್ನು ಪೂರೈಸುತ್ತವೆ. ಸದ್ಯ ಕೋವಿಡ್ ಸೋಂಕು ಭಯದಿಂದ ವಹಿವಾಟು ಕುಸಿದಿದೆ. ಸಾಮಾನ್ಯ ದಿನಗಳಲ್ಲಿ ಪ್ರತಿ ತಿಂಗಳಿಗೆ 50 ಸಾವಿರ ಕೆ.ಜಿ.ಚಿಕನ್ ಪೂರೈಕೆ ಮಾಡುತ್ತಿದ್ದೆವು. ಸದ್ಯ ಅದು 10 ಸಾವಿರ ಕೆ.ಜಿ.ಗೆ ಕುಸಿತಗೊಂಡಿದೆ.ಮಾರಾಟದಲ್ಲಿ ಶೇ 80ರಷ್ಟು ಕುಸಿತ ಕಂಡಿದೆ. ಕೆಲಸಗಾರರಿಗೆ ಸಂಬಳ ಕೊಟ್ಟು ಮನೆಗೆ ಕಳುಹಿಸಿದ್ದೇವೆ ಎಂದು ಚಿಕನ್ ಡೀಲರ್ ಹರೀಶ್ ಹೇಳಿದರು.

ಫಾರಂಗಳಲ್ಲೆ ಉಳಿಯುತ್ತಿರುವ ಕೋಳಿಗಳು

ಫಾರಂಗಳಲ್ಲಿ ಸಾಕಾಣಿಕೆ ಮಾಡುತ್ತಿರುವ ಕೋಳಿಗಳನ್ನು 38 ದಿನಗಳ ಒಳಗೆ ಮಾರಾಟ ಮಾಡಲಾಗುತ್ತಿತ್ತು. ಆದರೆ, ಕೋವಿಡ್ ಸೋಂಕಿನ ಬಗ್ಗೆ ಹರಡುತ್ತಿರುವ ವದಂತಿಗಳಿಂದಾಗಿ ಮಾರಾಟವಾಗಬೇಕಾಗಿದ್ದ ಕೋಳಿಗಳು ಫಾರಂಗಳಲ್ಲೆ ಉಳಿಯುತ್ತಿವೆ ಎಂದು ಕಾರ್ಮಿಕರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT