ಮಂಗಳವಾರ, ಅಕ್ಟೋಬರ್ 20, 2020
22 °C

ಆನೇಕಲ್: ಬಯಲು ಬಹಿರ್ದೆಸೆ, ಹೂಮಾಲೆ ಸ್ವಾಗತ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್: ಅಣ್ಣಯ್ಯನದೊಡ್ಡಿ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ಬಯಲು ಬಹಿರ್ದೆಸೆಗೆ ಹೋದವರಿಗೆ ಹೂಮಾಲೆ ಹಾಕಿ ಸ್ವಾಗತಿಸಿದ ವಿಚಿತ್ರ ಪ್ರಸಂಗ ನಡೆಯಿತು. 

ರಾಗಿಹಳ್ಳಿ ಗ್ರಾಮ ಪಂಚಾಯಿತಿ ಮತ್ತು ಶಿವನಹಳ್ಳಿ ರಾಮಕೃಷ್ಣಾಶ್ರಮವು ಗ್ರಾಮದಲ್ಲಿರುವ ನೂರು ಕುಟುಂಬಗಳಿಗೂ ಸುಸಜ್ಜಿತ ಶೌಚಾಲಯಗಳನ್ನು ನಿರ್ಮಿಸಿಕೊಟ್ಟಿವೆ. ಆದರೆ, ಗ್ರಾಮದ ಜನರು ಈ ಶೌಚಾಲಯಗಳನ್ನು ಬಳಸುತ್ತಿಲ್ಲ. 

ಈ ಬಗ್ಗೆ ಮಾಹಿತಿ ಪಡೆದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಸಿ.ದೇವರಾಜೇಗೌಡ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜಮ್ಮ ಬುಧವಾರ ಬೆಳಿಗ್ಗೆ 6ರ ವೇಳೆಗೆ ಅಣ್ಣಯ್ಯನದೊಡ್ಡಿಯಲ್ಲಿ ಹಾಜರಾದರು.

ಗ್ರಾಮಸ್ಥರು ಕೆರೆ, ಬೇಲಿ, ಹೊಲಗಳ ಕಡೆಗೆ ಬಹಿರ್ದೆಸೆಗೆ ಹೋಗಿ ಬರುತ್ತಿರುವ ದೃಶ್ಯಗಳನ್ನು ಕಣ್ಣಾರೆ ಕಂಡರು. ಕೆರೆ ಕಡೆಗೆ ಹೋಗಿ ಬರುತ್ತಿದ್ದವರನ್ನು ತಡೆದು ಹೂಮಾಲೆ ಹಾಕಿದರು. ಗ್ರಾಮಸ್ಥರು ಕಕ್ಕಾಬಿಕ್ಕಿಯಾದಾಗ, ಇನ್ನು ಮುಂದೆ ಮನೆಗಳಲ್ಲಿರುವ ಶೌಚಾಲಯಗಳನ್ನೇ ಬಳಸುವಂತೆ ಮನವಿ ಮಾಡಿದರು.

ಮನೆಯಲ್ಲಿ ಶೌಚಾಲಯವಿದ್ದರೂ ಮೊದಲಿನಿಂದಲೂ ರೂಢಿಸಿಕೊಂಡು ಬಂದಿರುವ ಬಯಲಿಗೆ ಹೋಗುವುದನ್ನು ಬಿಡಲಾಗುತ್ತಿಲ್ಲ ಎಂದು ಗ್ರಾಮಸ್ಥರು ಹೇಳಿದರು. ನಾಳೆಯಿಂದಲೇ ಶೌಚಾಲಯಗಳನ್ನು ಬಳಸುವುದಾಗಿ ಭರವಸೆ ನೀಡಿದರು. 

ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತ ಮಾಡಲು ಸರ್ಕಾರ ಮನೆ ಮನೆಗಳಿಗೂ ಶೌಚಾಲಯ ನಿರ್ಮಿಸಿಕೊಡಲು ಅನುದಾನ ಮಂಜೂರು ಮಾಡಿದೆ. ಆನೇಕಲ್‌ ತಾಲ್ಲೂಕಿನಲ್ಲಿ 28 ಗ್ರಾಮ ಪಂಚಾಯಿತಿಗಳಿದ್ದು, ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳೆಂದು ಸರ್ಕಾರ ಘೋಷಣೆ ಮಾಡಿದೆ. 

ಶೌಚಾಲಯಗಳಿದ್ದರೂ, ಗ್ರಾಮಸ್ಥರು ಮಾತ್ರ ಅವುಗಳ ಬಳಕೆ ಮಾಡುತ್ತಿಲ್ಲ. ಆನೇಕಲ್‌ ತಾಲ್ಲೂಕಿನ ರಾಗಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಣ್ಣಯ್ಯನದೊಡ್ಡಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಇಂದಿಗೂ ಬಯಲು ಬಹಿರ್ದಸೆ ಪದ್ಧತಿ ರೂಢಿಯಲ್ಲಿದೆ.  

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.