ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿಕುಂಟೆ: ಶಾಸಕರಿಬ್ಬರ ಊರಗಳೇ ಎತ್ತಂಗಡಿ!

ಹುಲಿಕುಂಟೆ: ಭೂಸ್ವಾಧೀನ ಕೈಬಿಡದಿದ್ದರೆ ಪ್ರತಿಭಟನೆ ತೀವ್ರಗೊಳಿಸುವ ಎಚ್ಚರಿಕೆ
Last Updated 5 ಫೆಬ್ರುವರಿ 2021, 1:41 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಕೆಐಡಿಬಿಯಲ್ಲಿನ ಅಧಿಕಾರಿಗಳು ಹುಲಿಕುಂಟೆ ಸುತ್ತ ಕೆಐಡಿಬಿಗೆ ಭೂಸ್ವಾಧೀನಕ್ಕೆ ಒಳಪಡುತ್ತಿರುವ ಜಮೀನು ಕುರಿತು ಮಾಹಿತಿ ನೀಡಿರುವ ಆಧಾರದ ಮೇಲೆ ಪ್ರಭಾವಿ ರಾಜಕಾರಣಿಗಳು ಹಾಗೂ ಹಿರಿಯ ಅಧಿಕಾರಿಗಳ ಸಂಬಂಧಿಗಳು ಒಂದು ವರ್ಷದಿಂದ ಈಚೆಗೆ ಜಮೀನು ಖರೀದಿಸಿದ್ದಾರೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಗಂಭೀರ ಆರೋಪ ಮಾಡಿದರು.

ಅವರು ತಾಲ್ಲೂಕಿನ ಹುಲಿಕುಂಟೆ ಸಮೀಪ ಮಲ್ಟಿ ಮಾರ್ಡನ್‌ ಲಾಜಿಸ್ಟಿಕ್‌ ಪಾರ್ಕ್‌ ಸ್ಥಾಪನೆಗೆ 600 ಎಕರೆ ಭೂಸ್ವಾಧೀನ ಕೈಬಿಡುವಂತೆ ಆಗ್ರಹಿಸಿ ಗುರುವಾರ ರಾಷ್ಟ್ರೀಯ ಹೆದ್ದಾರಿ 207ರಲ್ಲಿ ರೈತರು ನಡೆಸಿದ ರಸ್ತೆ ತಡೆಯಲ್ಲಿ ಮಾತನಾಡಿದರು.

ಸಣ್ಣ ಹಿಡುವಳಿದಾರ ರೈತರೆ ಹೆಚ್ಚಾಗಿರುವ ಈ ಭಾಗದಲ್ಲಿ ಯಾವೊಬ್ಬರೂ ಪಾರ್ಕ್‌ ಸ್ಥಾಪನೆಗೆ ಜಮೀನು ನೀಡಲು ಸಿದ್ಧರಿಲ್ಲ. ಆದರೆ, ಲಾಭ ಮಾಡುವ ಉದ್ದೇಶದಿಂದಲೇ ಜಮೀನು ಖರೀದಿಸಿರುವ ಪ್ರಭಾವಿ ರಾಜಕಾರಣಿಗಳ ಹಾಗೂ ಅಧಿಕಾರಿಗಳ ಸಂಬಂಧಿಗಳು ಮಾತ್ರ ಒಂದಕ್ಕೆ ಎರಡು ಪಟ್ಟು ಹಣ ನೀಡಿದರೆ ಜಮೀನು ನೀಡಲು ಸಿದ್ಧ ಎನ್ನುತ್ತಿದ್ದಾರೆ. ಇಂತಹವರ ಮಾತು ನಂಬಿ ಕೆಐಡಿಬಿ ಅಧಿಕಾರಿಗಳು ಸರ್ಕಾರಕ್ಕೆ ವರದಿ ನೀಡಿರುವುದು ಖಂಡನೀಯ ಎಂದರು.

ಅಧಿಕಾರಿಗಳಿಗೆ ತರಾಟೆ: ಯಾವುದೇ ಒಂದು ಪ್ರದೇಶದಲ್ಲಿ ಕೈಗಾರಿಕೆಗೆ ಭೂ ಸ್ವಾಧೀನ ಮಾಡಿಕೊಳ್ಳುವ ಮುನ್ನ ಸ್ಥಳೀಯ ರೈತರ ಅಥವಾ ಅಲ್ಲಿನ ಜನರ ಜೀವನ ಯಾವುದರ ಮೇಲೆ ಅವಲಂಬಿತವಾಗಿದೆ ಎನ್ನುವ ಅಧ್ಯಯನ ಮಾಡಬೇಕೀತ್ತು. ಆದರೆ, ಈ ಭಾಗದಲ್ಲಿ ಜಮೀನು ಖರೀದಿಸಿರುವ ರಾಜಕಾರಣಿಗಳ, ಅಧಿಕಾರಿಗಳ ಸಂಬಂಧಿಗಳಿಗೆ ಲಾಭ ಮಾಡಿಕೊಡುವ ದೃಷ್ಟಿಯಿಂದ ಯಾವುದೇ ಸಭೆ ನಡೆಸದೆ ಭೂಸ್ವಾಧೀನಕ್ಕೆ ಸಿದ್ಧತೆ ಆರಂಭಿಸಿರುವುದಕ್ಕೆ ಶಾಸಕರು ಕೆಐಡಿಬಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ: ಈ ಭಾಗದಲ್ಲಿ 600 ಎಕರೆ ಭೂಸ್ವಾಧೀನವಾಗಿವುದರಿಂದ ಹೈನುಗಾರಿಕೆ ನಂಬಿರುವ ರೈತರು ಬೀದಿಗೆ ಬೀಳಲಿದ್ದಾರೆ. ಪ್ರತಿದಿನ 4 ಸಾವಿರ ಲೀಟರ್‌ ಹಾಲು ಈ ಭಾಗದಿಂದ ಸರಬರಾಜು ಆಗುತ್ತಿದೆ. ರೈತರೇ ಸ್ವಂತವಾಗಿ ನೀರಾವರಿ ಸೌಲಭ್ಯ ಮಾಡಿಕೊಂಡು ಅಡಿಕೆ, ತೆಂಗು ಸೇರಿದಂತೆ ತರಕಾರಿ ಬೆಳೆಯುತ್ತಿದ್ದಾರೆ. ಈ ಎಲ್ಲ ಅಂಶ ಕೈಗಾರಿಕಾ ಸಚಿವರಿಗೆ ಮನವರಿಕೆ ಮಾಡಿಕೊಡುವ ಮೂಲಕ ಭೂಸ್ವಾಧೀನ ‌ಕೈಬಿಡುವಂತೆ ಮನವರಿಕೆ ಮಾಡಿಕೊಡಲಾಗುವುದು. ಜಿಲ್ಲಾಧಿಕಾರಿ ಈ ಬಗ್ಗೆ ಆಸಕ್ತಿ ವಹಿಸಿ ಸಚಿವರ ಸಮ್ಮುಖದಲ್ಲಿ ಸಭೆ ನಡೆಸಲು ಸಮಯ ನಿಗದಿ ಮಾಡಬೇಕು. ಸಭೆ ನಡೆಯುವವರೆಗೂ ಈ ಭಾಗದಲ್ಲಿ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಕೆಐಡಿಬಿ ಅಧಿಕಾರಿಗಳು ಯಾವುದೇ ರೀತಿ ಕಾನೂನು ಪ್ರಕ್ರಿಯೆ ಆರಂಭಿ
ಸಬಾರದು ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

ಶಾಸಕರ ಊರುಗಳೇ ಎತ್ತಂಗಡಿ!: ಮಲ್ಟಿ ಮಾರ್ಡನ್‌ ಲಾಜಿಸ್ಟಿಕ್‌ ಪಾರ್ಕ್‌ ಸ್ಥಾಪನೆಗೆ ಕೆಐಡಿಬಿ 1,100 ಎಕರೆ ಭೂ ಸ್ವಾಧೀನ ಮಾಡಿಕೊಳ್ಳುತ್ತಿರುವ ಭೂಮಿ ನೆಲಮಂಗಲ ಕ್ಷೇತ್ರದ ಶಾಸಕ ಡಾ.ಶ್ರೀನಿವಾಸ್‌ ಹಾಗೂ ದೊಡ್ಡ
ಬಳ್ಳಾಪುರ ಕ್ಷೇತ್ರದ ಶಾಸಕ ಟಿ.ವೆಂಕಟರಮಣಯ್ಯ ಇಬ್ಬರು ಶಾಸಕರ ಗ್ರಾಮಗಳ ರೈತರ ಭೂಮಿಯೂ ಸೇರಿವೆ. ಭೂಸ್ವಾಧೀನವಾದರೆ ಇಬ್ಬರು ಶಾಸಕರ ಸ್ವಗ್ರಾಮದ ರೈತರು ಬೀದಿಪಾಲಾಗಲಿದ್ದಾರೆ.

ಮನವಿ ಸ್ವೀಕಾರ: ರಸ್ತೆ ತಡೆ ನಡೆಸುತ್ತಿದ್ದ ಸ್ಥಳಕ್ಕೆ ಜಿಲ್ಲಾಧಿಕಾರಿ ಪಿ.ಎನ್‌.ರವೀಂದ್ರ ಹಾಗೂ ಕೆಐಡಿಬಿ ಭೂ ಸ್ವಾಧೀನ ಅಧಿಕಾರಿ ಅನಿಲ್‌ಕುಮಾರ್‌ ಭೇಟಿ ನೀಡಿ ಶಾಸಕರಿಂದ ಮನವಿ ಸ್ವೀಕರಿಸಿ ಮಾತನಾಡಿ, ಶಾಸಕರು ಹಾಗೂ ರೈತರು ನೀಡಿರುವ ಮನವಿಯ ಮೇರೆಗೆ ಕೈಗಾರಿಕಾ ಸಚಿವರೊಂದಿಗೆ ಚರ್ಚಿಸಿ ಸಭೆ ನಡೆಸುವ ದಿನಾಂಕ ತಿಳಿಸಲಾಗುವುದು ಎಂದರು.

ಪ್ರತಿಭಟನೆಯಲ್ಲಿ ಕೋಡಿಗೇಹಳ್ಳಿ ಲಕ್ಷ್ಮಣಸ್ವಾಮೀಜಿ ಮಠದ ಮೋಹನರಾಮಸ್ವಾಮೀಜಿ, ಕೃಷಿ ಭೂರಕ್ಷಣಾ ಸಮಿತಿ ರಘು, ದೇವರಾಜ್‌, ಎಚ್‌.ಎಸ್‌.ಸೋಮಶೇಖರ್‌, ವಿಶ್ವನಾಥ್‌, ರಾಜ್ಯ ರೈತ ಸಂಘದ ಮುಖಂಡರಾದ ಕೆ.ಸುಲೋಚನಮ್ಮ, ಪ್ರಸನ್ನ, ಹನುಮೇಗೌಡ, ಮುತ್ತೇಗೌಡ, ಕನ್ನಡ ಪಕ್ಷದ ಅಧ್ಯಕ್ಷ ಸಂಜೀವ್‌ನಾಯ್ಕ್‌ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ರೈತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT