ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | ಬಿಸಿಲಿನ ಝಳ: ಟೊಮೆಟೊ ಸಸಿಗಳ ಎಲೆಗೆ ಮುದುಡುರೋಗ

ಬಿಸಿಲಿನ ಝಳಕ್ಕೆ ಬೆಳೆ ಕುಂಠಿತ: ರೈತರಲ್ಲಿ ಆತಂಕ
Published 10 ಮೇ 2024, 13:46 IST
Last Updated 10 ಮೇ 2024, 13:46 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ಬಿಸಿಲಿನ ತಾಪಮಾನದಿಂದ ತಾಲ್ಲೂಕಿನಲ್ಲಿ ನಾಟಿ ಮಾಡಿರುವ ಟೊಮೆಟೊ ಸಸಿಗಳ ಬೆಳವಣಿಗೆ ಕುಂಠಿತವಾಗಿದ್ದು, ಎಲೆ ಮುದುಡು ರೋಗ ಕಾಡುತ್ತಿದೆ.

ಬಿಸಿಲಿನ ಝಳಕ್ಕೆ ಬೆಳೆ ಕುಂಠಿತ ಆಗಿರುವುದ ರೈತರನ್ನು ಕಾಡುತ್ತಿದ್ದರೆ, ಅದರ ಜತೆ ಎಲೆ ಮುದುಡುವ ನಂಜುರೋಗ, ಸೊರಗು ರೋಗದ ಕಾಟವು ಜಾಸ್ತಿ ಆಗಿದೆ. ರೋಗಗಳು ಕಾಣಿಸಿಕೊಂಡು ತೋಟಗಳಲ್ಲಿ ಗಿಡ ಬೆಳವಣಿಗೆ ಆಗದೆ ಸೊರಗಿ ಹೋಗಿವೆ.

ಸಸಿ ನಾಟಿ ವೇಳೆ ಮಂಚಿಂಗ್ (ಕವರ್) ಮಾಡಿದ್ದೇವೆ. ನಾಲ್ಕೈದು ಬಾರಿ ನೀರು ಹರಿಸಿ, ಮಣ್ಣಿನಲ್ಲಿ ತೇವಾಂಶ ಹಿಡಿದಿಟ್ಟುಕೊಂಡ ಮೇಲೆ ಗಿಡ ನಾಟಿ ಮಾಡಲಾಗಿದೆ. ಆದರೂ ಗಿಡಗಳು ಸರಿಯಾಗಿ ಬೆಳವಣಿಗೆ ಆಗಲಿಲ್ಲ ಎಂದು ರೈತ ಕೆ.ಮುನಿರಾಜು ಹೇಳಿದರು.

‘ಟೊಮೆಟೊ ಸಸಿಗೆ ₹1.30 ನಂತೆ ಎರಡು ಎಕರೆಗೆ ಸುಮಾರು 12 ಸಾವಿರ ಸಸಿಗಳು ನಾಟಿ ಮಾಡಿದ್ದೇವೆ. ಇದುವರೆಗೂ ಬೆಳೆಗೆ ₹3 ಲಕ್ಷ ಬಂಡವಾಳ ಹೂಡಿಕೆ ಮಾಡಿದ್ದೇವೆ. ಈಗ ನಂಜುರೋಗ ಕಾಡುತ್ತಿದೆ. ಎಲೆಗಳ ಹಿಂಭಾಗದಲ್ಲಿ ಬಿಳಿ ನೊಣಗಳ ಕಾಟ ಜಾಸ್ತಿಯಾಗಿದೆ. ರೋಗಪೀಡಿತ ಗಿಡದ ಎಲೆಗಳು ಚಿಕ್ಕದಾಗುತ್ತವೆ. ಎಲೆಗಳಲ್ಲಿನ ಸಾರವನ್ನು ಹೀರುವುದರಿಂದ ಮೇಲ್ಮುಖವಾಗಿ ಮುದುಡಿಕೊಳ್ಳುತ್ತಿವೆ. ಇದರಿಂದ ಗಿಡಗಳ ಬೆಳವಣಿಗೆ ಕುಂಠಿತಗೊಂಡು ಹೂವು ಮತ್ತು ಕಾಯಿ ಬಿಡುವುದಿಲ್ಲದ ಕಾರಣ ನಾವು ಹೂಡಿಕೆ ಮಾಡಿರುವ ಬಂಡವಾಳ ಕೈಗೆ ಬರುತ್ತದೋ ಇಲ್ಲವೋ ಎನ್ನುವ ಭಯ ಶುರುವಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಎಲೆಯ ಹಿಂಭಾಗದಲ್ಲಿ ಬಿಳಿ ನೊಣಗಳು
ಎಲೆಯ ಹಿಂಭಾಗದಲ್ಲಿ ಬಿಳಿ ನೊಣಗಳು

ಮುಂಜಾಗ್ರತಾ ಕ್ರಮ

ಪ್ರತಿ ಎಕರೆಗೆ 10-15 ಹಳದಿ ಅಂಟು ಪಟ್ಟಿಗಳನ್ನು ಗಿಡಕ್ಕಿಂತ ಒಂದು ಅಡಿ ಎತ್ತರದಲ್ಲಿ ಜಿಗ್ ಜಾಗ್ ಮಾದರಿಯಲ್ಲಿ ಕಟ್ಟುಬೇಕು. 15 ದಿನಗಳ ಅಂತರದಲ್ಲಿ ಅಂಟು ಪಟ್ಟಿ ಬದಲಾಯಿಸುವುದು ತೋಟದ ಸುತ್ತಲಿನ ಪ್ರದೇಶದಲ್ಲಿ ಬೆಳೆದಿರುವ ಪಾರ್ಥೆನಿಯಂ ಕಳೆ ಮುಳ್ಳು ಮುಂತಾದ ಕಳೆ ಗಿಡ ಕಿತ್ತು ನಾಶಪಡಿಸಬೇಕು. ಗಿಡಗಳು ನಾಟಿ ಮಾಡಿದ 30 45 ಮತ್ತು 60 ದಿನಗಳ ನಂತರ ಸಿವೀಡ್ ಎಕ್ಸ ಟ್ರಾಕ್ಟ್ ಅನ್ನು 2. ಮೀ.ಲಿ. ನಂತೆ ಸಿಂಪಡಣೆ ಮಾಡುವುದರಿಂದ ಗಿಡದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಬಿಳಿ ನೊಣ ನಿಯಂತ್ರಣಕ್ಕೆ ನಾಟಿ ಮಾಡಿದ 15 ದಿನಗಳ ನಂತರ 0.4 ಮಿ.ಲೀ ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್. ಅಥವಾ 0.3 ಗ್ರಾಮ ಥಿಯಾಮೆಥಾಕ್ಸಾಮ್ 25 ಡಬ್ಲೂ.ಜಿ. ಅಥವಾ 1.5 ಮಿ.ಲೀ ಫಿಪ್ರೋನಿಲ್ 58 ಎಸ್.ಎಲ್. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಮಾಡಬೇಕು. ಅವಶ್ಯಕತೆಗೆ ಅನುಗುಣವಾಗಿ ಬೇವಿನ ಎಣ್ಣೆ ಆಧಾರಿತ ಕೀಟನಾಶಕವನ್ನು 8-10 ದಿನಗಳಿಗೊಮ್ಮೆ ಕೀಟನಾಶಕ ಬದಲಿಸಿ ಸಿಂಪಡಿಸಬೇಕು. ಡಯಾಪ್ನೆಥ್ಯರಾನ್ 50 ಡಬ್ಲ್ಯು.ಪಿ. 1 ಮೀ. ಫಿಪ್ರೋನಿಲ್ ಶೇ 5 ಎಸ್.ಎಲ್. 1.5 ಗ್ರಾಂ ಅಸಿಟಮಾಪ್ರಿಡ್ ಎಸ್.ಪಿ. ಮತ್ತು 1 ಮೀ.ಲಿ ಬೇವಿನ ಎಣ್ಣೆ ಶೇ 1 ಸಿಂಪಡಣೆ ಮಾಡಬೇಕು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರಿಗೆ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT