ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ(ದೇವನಹಳ್ಳಿ): ಹಬ್ಬಕ್ಕೆ ಏರಿಕೆಯಾಗದ ಹೂವಿನ ಬೆಲೆ

₹50ರಿಂದ ₹10ಕ್ಕಿಳಿದ ಚೆಂಡು ಹೂ
Published 4 ಸೆಪ್ಟೆಂಬರ್ 2024, 13:11 IST
Last Updated 4 ಸೆಪ್ಟೆಂಬರ್ 2024, 13:11 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ಹಬ್ಬಗಳ ಸರಣಿ ಆರಂಭವಾದರೂ ಚೆಂಡು ಹೂವು ಬೆಲೆ ಏರಿಕೆ ಆಗದಿರುವುದು ರೈತರಲ್ಲಿ ಆತಂಕ ಮೂಡಿಸಿದೆ.

ವರಮಹಾಲಕ್ಷ್ಮಿ ಹಬ್ಬದ ಬಳಿಕ ಹೂಗಳ ಬೆಲೆ ಏರಿಕೆಯಾಗುತ್ತಿತು. ಈಗ ಗೌರಿ–ಗಣೇಶ ಹಬ್ಬ ಸಮೀಪಿಸಿದರೂ ಚೆಂಡು ಹೂಗೆ ಸೂಕ್ತ‌ ಬೆಲೆ ಸಿಗುತ್ತಿಲ್ಲ. ಇದರಿಂದ ಹಾಕಿರುವ ಬಂಡವಾಳ ಕೈ ಸೇರುವುದೇ ಎಂಬ ಚಿಂತೆಯಲ್ಲಿ ಹೂ ಬೆಳೆಗಾರರು.

‘ಹಬ್ಬ ಆರಂಭ ಆಗುವಷ್ಟರಲ್ಲಿ ಹೂ ಕಟಾವಿಗೆ ಬಂದರೆ, ಒಂದಷ್ಟು ಹಣ ಸಂಪಾದನೆ ಮಾಡಬಹುದೆಂದು ಎರಡು ಬಣ್ಣಗಳ ಚೆಂಡು ಹೂ ಬೆಳೆ ನಾಟಿ ಮಾಡಿದ್ದೇವೆ. ಇದುವರೆಗೂ ಮೂರು ಕಟಾವು ಮಾಡಿದ್ದೇವೆ. ಕಳೆದ ತಿಂಗಳು ಪ್ರತಿ ಕೆ.ಜಿಗೆ ₹50 ಇದ್ದ ಹೂ ಈಗ ₹10ಕ್ಕೆ ಇಳಿದಿದೆ. 15 ಗುಂಟೆ ಪ್ರದೇಶದಲ್ಲಿ ಷರಿ ತಳಿಯ ಹೂವು ಮತ್ತು ಗುಲಾಬಿಯನ್ನು ₹20 ಸಾವಿರ ಬಂಡವಾಳ ಹಾಕಿ ಬೆಳೆದಿದ್ದೇನೆ. ಇದುವರೆಗೂ ಕೇವಲ ₹3 ಸಾವಿರ ಸಂಪಾದನೆಯಾಗಿದೆ’ ಎನ್ನುತ್ತಾರೆ ರೈತ ರಾಜಣ್ಣ.

ಹೂ ಕಟಾವು ಮಾಡುವ ಕಾರ್ಮಿಕರಿಗೆ ದಿನಕ್ಕೆ ₹600 ಕೂಲಿ ಕೊಡಬೇಕು. ಹೂವು ಮಾರುಕಟ್ಟೆಗೆ ಸಾಕಾಣಿಕೆ ಮಾಡಿದರೆ, ಕೂಲಿ ಕಾರ್ಮಿಕರಿಗೆ ಕೂಲಿಯೂ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

‌ಹನಿ ನೀರಾವರಿಯ ಮೂಲಕ ನೀರು ಹಾಯಿಸಿ, ಹೂ ಬೆಳೆ ಬೆಳೆದಿದ್ದೇವೆ. ಈಗಿನ ಬೆಲೆ ನೋಡುತ್ತಿದ್ದರೆ, ಹೂವು ಕಟಾವು ಮಾಡಿಕೊಂಡು ಹೋಗಿ ಮಾರುಕಟ್ಟೆಗೆ ಹಾಕಿ ನಷ್ಟ ಮಾಡಿಕೊಳ್ಳುವುದಕ್ಕಿಂತ ತೋಟದಲ್ಲೆ ಉಳುಮೆ ಮಾಡಿದರೆ ಒಂದಷ್ಟು ಗೊಬ್ಬರವಾದರೂ ಆಗುತ್ತೆ ಎನ್ನುವ ಭಾವನೆ ಮೂಡಿದೆ ಎಂದು ರೈತ ಹನುಮಂತರಾಯಪ್ಪ ಬೇಸರ ವ್ಯಕ್ತಪಡಿಸಿದರು.

ತೋಟಗಾರಿಕೆ ಬೆಳೆಗಳಿಂದ ಲಾಭ ಆಗುತ್ತಿಲ್ಲ. ಮನೆಗಳಲ್ಲಿ 2-3 ರಾಸು ಇರುವುದರಿಂದ ಕುಟುಂಬ ನಿರ್ವಹಣೆ ನಡೆಯುತ್ತಿದೆ. ಸಣ್ಣ ರೈತರ ಬೆಳೆಗಳಿಗೆ ಬೆಲೆಗಳು ಸಿಗದಿದ್ದಾಗ ಸರ್ಕಾರ ಕನಿಷ್ಠ ಪ್ರೋತ್ಸಾಹಧನ ನೀಡಬೇಕು ಎಂದು ರೈತ ನಾರಾಯಣಸ್ವಾಮಪ್ಪ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT