ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ ರೇಷ್ಮೆ ಮಾರುಕಟ್ಟೆ: ಸ್ಯಾಂಪಲ್ ಗೂಡು ತೆಗೆದುಕೊಂಡರೆ ಅಮಾನತು

ವಿಜಯಪುರ ರೇಷ್ಮೆ ಮಾರುಕಟ್ಟೆ: ರೈತರ ನಷ್ಟ ತಡೆಗೆ ನಿಯಮ
Published 18 ಫೆಬ್ರುವರಿ 2024, 6:12 IST
Last Updated 18 ಫೆಬ್ರುವರಿ 2024, 6:12 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಬೆಳಗ್ಗೆ 10 ಗಂಟೆಯೊಳಗೆ ರೈತರನ್ನು ಹೊರತುಪಡಿಸಿ, ನೂಲು ಬಿಚ್ಚಾಣಿಕೆದಾರರ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಈ ಅವಧಿಯೊಳಗೆ ಮಾರುಕಟ್ಟೆಯೊಳಗೆ ಪ್ರವೇಶ ಮಾಡುವವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರೇಷ್ಮೆ ಮಾರುಕಟ್ಟೆ ಉಪನಿರ್ದೇಶಕರ ಮುನಿರಾಜು ತಿಳಿಸಿದರು.

ಪಟ್ಟಣದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಶನಿವಾರ ನಡೆದ ನೂಲು ಬಿಚ್ಚಾಣಿಕೆದಾರರ ಸಭೆಯಲ್ಲಿ ಅವರು ಮಾತನಾಡಿದರು.

ನೂಲುಬಿಚ್ಚಾಣಿಕೆದಾರರು ರೈತರಿಂದ ನೂಲು ಬಿಚ್ಚಾಣಿಕೆಯಾಗುವ ಕುರಿತು ಖಚಿತ ಪಡಿಸಿಕೊಳ್ಳಲು ಸ್ಯಾಂಪಲ್ ಗೂಡು ತೆಗೆದುಕೊಂಡು ಹೋಗಲು ಅವಕಾಶ ನೀಡುವುದಿಲ್ಲ. ಇದರಿಂದ ರೈತರಿಗೆ ಮೋಸವಾಗುತ್ತಿದೆ. ಗೂಡು ಹರಾಜಾದ ನಂತರ ತೂಕ ಮಾಡುವಾಗ ತೂಕದ ಲೆಕ್ಕಕ್ಕೆ ಬಾರದೇ ರೈತರಿಂದ ಹೆಚ್ಚುವರಿಯಾಗಿ ಲಾಭದ ಗೂಡನ್ನು ಪಡೆದುಕೊಳ್ಳುವಂತಿಲ್ಲ. ರೈತರೂ ನೀಡುವಂತಿಲ್ಲ ಎಂದು ಎಚ್ಚರಿಸಿದರು.

ಯಾರಾದರೂ ಸ್ಯಾಂಪಲ್ ಗೂಡು ತೆಗೆದುಕೊಂಡು ಹೋಗುವುದು ಕಂಡು ಬಂದರೆ, ಅಂತಹ ನೂಲು ಬಿಚ್ಚಾಣಿಕೆದಾರರಿಗೆ 15 ದಿನಗಳವರೆಗೂ ಹರಾಜಿನಲ್ಲಿ ಭಾಗವಹಿಸದಂತೆ ಅವರ ಗುರುತಿನ ಚೀಟಿಯನ್ನು ಅಮಾನತ್ತಿನಲ್ಲಿಡಲಾಗುತ್ತದೆ. ಹರಾಜಿನಲ್ಲಿ ಗೂಡು ಖರೀಸುವ ನೂಲು ಬಿಚ್ಚಾಣಿಕೆದಾರರಿಗೆ ಲಾಭದ ಗೂಡು ನೀಡುವ ರೈತರ ಖಾತೆಗೆ ಜಮೆಯಾಗಬೇಕಾಗಿರುವ ಗೂಡಿನ ಹಣವನ್ನು 15 ದಿನಗಳವರೆಗೂ ತಡೆಹಿಡಿಯಲಾಗುತ್ತದೆಎಂದು ಎಚ್ಚರಿಕೆ ನೀಡಿದರು.

ಕೆಲವು ನೂಲು ಬಿಚ್ಚಾಣಿಕೆದಾರರು ಸಂಜೆಯವರೆಗೂ ಗೂಡು ತೂಕ ಮಾಡುವುದಿಲ್ಲ. 3 ಗಂಟೆಯ ನಂತರ ತೂಕ ಮಾಡಿ, ಲಾಭದ ಗೂಡಿಗೆ ಬೇಡಿಕೆ ಇಡುತ್ತಾರೆ. ಒಂದು ವೇಳೆ ಲಾಭದ ಗೂಡು ಕೊಡದಿದ್ದರೆ ಮುಂದಿನ ಬಾರಿ ರೈತರು ಗೂಡು ತಂದಾಗ ಹರಾಜು ಮಾಡದೇ ಸತಾಯಿಸುತ್ತಾರೆ ಎನ್ನುವ ಆರೋಪಗಳಿವೆ. ಇದರಿಂದ ರೈತರು ತಮ್ಮ ಮನೆಗಳಿಗೆ ಹೋಗಲು ತಡವಾಗುವುದರ ಜೊತೆಗೆ, ಅವರಿಗೆ ನಷ್ಟವಾಗುತ್ತದೆ. ಇದನ್ನು ತಡೆಗಟ್ಟಲು ಈ ನಿಯಮಗಳನ್ನು ರೂಪಿಸಲಾಗುತ್ತಿದೆ ಎಂದು ಹೇಳಿದರು.

ನೂಲುಬಿಚ್ಚಾಣಿಕೆದಾರರು ಮಾರುಕಟ್ಟೆಯ ಅಭಿವೃದ್ಧಿಗಾಗಿ ಇಲಾಖೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಮತ್ತಷ್ಟು ಗೂಡು ಆವಕವಾಗಲು ಸಹಕಾರ ನೀಡಬೇಕು. ಇಲಾಖೆಯಿಂದ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ದುರುಪಯೋಗ ಮಾಡಿಕೊಳ್ಳಬಾರದು ಎಂದರು.

ಕೆಲವರು ರೈತರು, ತೇವಾಂಶವಿರುವ ಗೂಡನ್ನು ಉತ್ತಮ ಗೂಡಿನಲ್ಲಿ ಬೆರೆಸಿಕೊಂಡು ಬಂದು ಲಾಟುಗಳು ಹಾಕುತ್ತಾರೆ. ನೂಲು ಬಿಚ್ಚಾಣಿಕೆ ಆಗುತ್ತದೋ ಇಲ್ಲವೋ ಎನ್ನುವುದು ತಿಳಿಯುವುದಿಲ್ಲ. ಅದಕ್ಕಾಗಿ ಸ್ಯಾಂಪಲ್ ಗೂಡು ತೆಗೆದುಕೊಂಡು ಹೋಗುತ್ತೇವೆ. ರೈತರು ವಿಶ್ವಾಸದಿಂದ ಕೊಡುವ ಗೂಡನ್ನಷ್ಟೆ ಲಾಭದ ಗೂಡನ್ನಾಗಿ ತೆಗೆದುಕೊಳ್ಳುತ್ತೇವೆ. ನಾವು ಯಾವತ್ತೂ ನಿಗದಿತ ಸಮಯಕ್ಕಿಂತ ಹೆಚ್ಚಾಗಿ ಗೂಡು ತೂಕ ಮಾಡುತ್ತಿಲ್ಲ ಎಂದು ನೂಲುಬಿಚ್ಚಾಣಿಕೆದಾರರು ತಿಳಿಸಿದರು.

ನಿಯಮಗಳನ್ನು ಕಡ್ಡಾಯ ಮಾಡಬೇಡಿ ಎಂದು ಕೆಲವು ನೂಲುಬಿಚ್ಚಾಣಿಕೆದಾರರು ಮನವಿ ಮಾಡಿದರಾದರೂ ಇದಕ್ಕೆ ಒಪ್ಪದ ಅಧಿಕಾರಿಗಳು ಸರ್ಕಾರದ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಗೂಡು ಹರಾಜಾದ ನಂತರ ಶೀಘ್ರವಾಗಿ ತೂಕ ಮಾಡಿಸಿಕೊಂಡು ಹೋದರೆ ರೈತರು ತಮ್ಮ ಊರುಗಳಿಗೆ ಹೋಗುವುದಕ್ಕೆ ಅನುಕೂಲವಾಗುತ್ತದೆ ಎಂದರು.

ಮಾರುಕಟ್ಟೆ ರೇಷ್ಮೆ ನಿರೀಕ್ಷಕರಾದ ಮಲ್ಲಪ್ಪ, ಡಿ.ಶ್ರೀನಿವಾಸ್, ರಾಮಚಂದ್ರಪ್ಪ, ಪ್ರಥಮ ದರ್ಜೆ ಸಹಾಯಕ ದುರಾನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT