ಶನಿವಾರ, ಸೆಪ್ಟೆಂಬರ್ 18, 2021
24 °C
ಮೇ 29ರಂದು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಸರ್ಕಾರದ ನಿರ್ಧಾರ

ವಿಜಯಪುರ ಪುರಸಭೆಗೆ ಸಿಗದ ಚುನಾವಣೆ ಭಾಗ್ಯ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಚುನಾವಣಾ ಆಯೋಗ ಮೇ29ಕ್ಕೆ ದಿನಾಂಕ ನಿಗದಿಪಡಿಸಿದೆಯಾದರೂ ವಿಜಯಪುರ ಪುರಸಭೆಗೆ ಚುನಾವಣಾ ಯೋಗವಿಲ್ಲದಂತಾಗಿದೆ.

2013ರಲ್ಲಿ ನಡೆದಿದ್ದ ಪುರಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 16, ಜೆಡಿಎಸ್ 2, ಪಕ್ಷೇತರರಾಗಿ 5ಮಂದಿ ಸದಸ್ಯರು ಆಯ್ಕೆಯಾಗಿದ್ದರು. ಆಯ್ಕೆಯಾದ ನಂತರ ಅಧ್ಯಕ್ಷ ಸ್ಥಾನದ ಮೀಸಲಾತಿ ಪಟ್ಟಿ ಪ್ರಕಟಣೆಯಲ್ಲಿ ವಿಳಂಬವಾದ ಕಾರಣ ಒಂದು ವರ್ಷ ಅಧ್ಯಕ್ಷ, ಉಪಾಧ್ಯಕ್ಷರಿಲ್ಲದೆ ಸದಸ್ಯರಾಗಿಯೇ ಉಳಿಯುವಂತಾಗಿತ್ತು.

ಮೀಸಲಾತಿ ಪ್ರಕಟಿಸಿದ ನಂತರ ಎರಡೂವರೆ ವರ್ಷ 9ನೇ ವಾರ್ಡಿನ ಸದಸ್ಯೆ ಅನಸೂಯಮ್ಮ ಸಂಪತ್ ಕುಮಾರ್ ಅಧ್ಯಕ್ಷೆಯಾಗಿ ಕೆಲಸ ಮಾಡಿದ್ದರು. ಅವರ ಅವಧಿ ಮುಗಿದ ನಂತರ ಉಂಟಾದ ಅಧ್ಯಕ್ಷ ಸ್ಥಾನದ ಮೀಸಲಾತಿ ಗೊಂದಲದಿಂದಾಗಿ ಕಾಂಗ್ರೆಸ್ ಪಕ್ಷದ ಸದಸ್ಯರೇ ನ್ಯಾಯಾಲಯದ ಮೆಟ್ಟಿಲೇರಿದ್ದರ ಪರಿಣಾಮ ಉಳಿದ ಅವಧಿಗೆ ಅಧ್ಯಕ್ಷರಿಲ್ಲದೆ, ಆಡಳಿತಾಧಿಕಾರಿ ಅಧಿಕಾರದ ಚುಕ್ಕಾಣಿ ಹಿಡಿಯುವಂತಾಗಿತ್ತು.

ಪುರಸಭೆ 23ವಾರ್ಡ್‌ಗಳ ಗಡಿಗಳನ್ನು ಪುನರ್ ವಿಂಗಡಣೆ ಮಾಡಿ, ಗಡಿಗಳನ್ನು ಗುರುತಿಸಿ ವಾರ್ಡ್‌ವಾರು ಮೀಸಲಾತಿ ಪಟ್ಟಿಗಳನ್ನು ರಾಜ್ಯ ಸರ್ಕಾರ ರಾಜ್ಯಪತ್ರದಲ್ಲಿ ಘೋಷಣೆ ಮಾಡಿತ್ತು.  ಆದರೆ, ಕೆಲ ವಾರ್ಡ್‌ಗಳಲ್ಲಿ ಪುನರಾವರ್ತನೆಯಾಗಿದೆ. ರೋಟೇಷನ್ ಪದ್ಧತಿಯಲ್ಲಿ ಆಗಿಲ್ಲ ಎಂದು ಕೆಲವರು ನ್ಯಾಯಾಲಯ ಮೆಟ್ಟಿಲು ಹತ್ತಿದ್ದ ಹಿನ್ನೆಲೆಯಲ್ಲಿ ಕೂಡಲೇ ಹೊಸ ಪಟ್ಟಿ ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ ನೀಡಿತ್ತು.

ಹೊಸ ಮೀಸಲಾತಿ ಪಟ್ಟಿಯನ್ನು ಸಲ್ಲಿಸಲು  ಸಮಯಾವಕಾಶ ಕೋರಿದ್ದ ಸರ್ಕಾರ, ಇದುವರೆಗೂ ಮೀಸಲಾತಿ ಪಟ್ಟಿಯನ್ನು ಸಲ್ಲಿಸಿಲ್ಲ. ಈ ಕಾರಣದಿಂದಾಗಿ ನ್ಯಾಯಾಲಯದಲ್ಲಿರುವ ಅರ್ಜಿ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ಮೇ 29ಕ್ಕೆ ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಯ ಪಟ್ಟಿಯಿಂದ ಆಯೋಗ ವಿಜಯಪುರ ಪುರಸಭೆಯನ್ನು ಕೈ ಬಿಟ್ಟಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು