ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ನಂತರದ ಪರಿಸರ ಕಾಳಜಿ

ವಿಶ್ವ ಪರಿಸರ ದಿನಾಚರಣೆ ವಿಶೇಷ
Last Updated 4 ಜೂನ್ 2020, 16:52 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಪ್ರತಿ ವರ್ಷ ನಡೆಯುತ್ತಿದ್ದ ವಿಶ್ವಪರಿಸರ ದಿನಾಚರಣೆಗಿಂತಲೂ ಲಾಕ್‌ಡೌನ್‌ ನಂತರ ಬರುತ್ತಿರುವ ಪರಿಸರ ದಿನಾಚರಣೆಗೆ ಅತ್ಯಂತ ಮಹತ್ವ ಬಂದಿದೆ. ಪ್ರಕೃತಿ ಮುನಿದರೆ ಮನುಷ್ಯನಿಗೆ ಏನೆಲ್ಲ ಕಷ್ಟವನ್ನು ಕೊಡಬಲ್ಲದು ಎನ್ನುವ ಅರಿವು ಆಗಿದೆ. ಹೀಗಾಗಿಯೇ ಲಾಕ್‌ಡೌನ್‌ ಸಂದರ್ಭದಲ್ಲಿ ಹಲವಾರು ಜನ, ಸಂಘಟನೆಗಳು ತಮ್ಮ ಮನೆಯ ಸುತ್ತಮುತ್ತಲಿನ ರಸ್ತೆ ಬದಿ, ಪಾರ್ಕ್‌ ಸೇರಿದಂತೆ ಖಾಲಿ ಸ್ಥಳ ಇದ್ದಕಡೆಯಲ್ಲಿ ಸಸಿಗಳನ್ನು ನೆಟ್ಟರು. ಮಳೆ ಆರಂಭವಾದ ನಂತರ ಸಸಿಗಳನ್ನು ನೆಡಲು ಗುಣಿಗಳನ್ನು ಸಿದ್ದ ಮಾಡಿಕೊಂಡಿದ್ದಾರೆ. ಹೀಗಾಗಿಯೆ ಈ ಬಾರಿಯ ವಿಶ್ವ ಪರಿಸರ ದಿನಾಚರಣೆ ಮಹತ್ವ ಪಡೆದಿದೆ.

ಪರಿಸರ ಪ್ರಜ್ಞೆಯ ಹೆಜ್ಜೆ ಗುರುತುಗಳು:ನಗರದಲ್ಲಿನ ಹಳೆಯ ಆಲದ ಮರ, ಅರಳಿ ಮರಗಳನ್ನು ನೋಡಿದರೆ ಹಿರಿಯರು ಮೊದಲು ನೆನಪು ಮಾಡಿಕೊಳ್ಳುವುದು ಲೋಕಸೇವಾ ನಿರತ ಡಿ.ಕೊಂಗಾಡಿಯಪ್ಪ ಅವರನ್ನು.

ಶಿಕ್ಷಕರಾಗಿದ್ದ ಕೊಂಗಾಡಿಯಪ್ಪ ಅವರು ಮಳೆಗಾಲದಲ್ಲಿ ಸಂಜೆ ವೇಳೆ ವಿದ್ಯಾರ್ಥಿಗಳೊಂದಿಗೆ ವಾಯು ವಿಹಾರಕ್ಕೆ ಹೋಗುವಾಗ ಕೈಯಲ್ಲಿನ ಕೊಡೆ (ಛತ್ರಿ) ಯಿಂದ ಮಣ್ಣಿನಲ್ಲಿ ಸಣ್ಣ ಗುಣಿ ಮಾಡಿ ಬೀಜಗಳನ್ನು ಹಾಕುತ್ತ ಹೋಗುತ್ತಿದ್ದರಂತೆ. ಹಾಗೆಯೇ ಒಂದಿಷ್ಟು ಆಲದ ಸಣ್ಣ ರೆಂಬೆಗಳನ್ನು ವಿದ್ಯಾರ್ಥಿಗಳ ಕೈಯಿಂದ ನೆಡಿಸುತ್ತಿದ್ದರಂತೆ. ಈ ರೀತಿ ಅಂದು ಅವರು ಹಾಕಿದ ಬೀಜಗಳ ಫಲವೇ ಈ ಹೆಮ್ಮರಗಳು ಎನ್ನುತ್ತಾರೆ ಹಿರಿಯರು.

ಕೊಂಗಾಡಿಯಪ್ಪ ಅವರ ಒಡನಾಡಿಗಳ ಸಾಲಿನಲ್ಲಿಯೇ ಇದ್ದ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಎಚ್‌.ಮುಗುವಾಳಪ್ಪ ಅವರು ಸಿಪಿಐಎಂ ಪಕ್ಷದ ಹಲವಾರು ಕಾರ್ಮಿಕ ಸಂಘಟನೆಗಳೊಂದಿಗೆ ಪ್ರತಿ ವರ್ಷವು ಮಳೆಗಾಲದಲ್ಲಿ ಎಲ್ಲಾದರು ಒಂದು ಕಡೆ ಸಸಿಗಳನ್ನು ನೆಡುವ ಕೆಲಸವನ್ನು ಅವರ ಜೀವಿತದವರೆಗೂ ಮಾಡುತ್ತಿದ್ದರು.

ಹೊಂಗೆ ಕ್ರಾಂತಿ: ಪರಿಸರ ಸಂರಕ್ಷಣೆಯಕೆಲಸ ಮಾಡಿ ತೋರಿಸಿದವರು 2005ರಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಸದಸ್ಯರಾಗಿದ್ದ ಆರ್‌.ಎಲ್‌.ಜಾಲಪ್ಪ ಅವರು. ಇಡೀ ತಾಲ್ಲೂಕಿನ ಕೆರೆ ಅಂಗಳ, ರಸ್ತೆ ಬದಿ, ಗುಂಡು ತೋಪುಗಳು ಸೇರಿದಂತೆ ಎಲ್ಲಿ ನೋಡಿದರೂ ಹೊಂಗೆ ಸಸಿಗಳು ಸಮೃದ್ಧವಾಗಿ ಬೆಳೆದು ನಿಂತಿರುವುದನ್ನು ಕಾಣಲು ಕಾರಣಕರ್ತರಾದವರು ಆರ್‌.ಎಲ್‌.ಜಾಲಪ್ಪ.

ಅಂದಿನ ಕಾಲಕ್ಕೆ ಸಂಸತ್‌ ಸದಸ್ಯರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ₹ 4 ಲಕ್ಷವನ್ನು ಅರಣ್ಯ ಇಲಾಖೆಗೆ ನೆರವು ನೀಡಿ ಹೊಂಗೆ ಸಸಿಗಳನ್ನು ಬೆಳೆಸಲು ಪ್ರೋತ್ಸಾಹ ನೀಡಿದ್ದರು. ನಂತರದ ದಿನಗಳಲ್ಲಿ ದೇವರಾಜ ಅರಸು ಎಜುಕೇಷನಲ್‌ ಟ್ರಸ್ಟ್‌ ವತಿಯಿಂದ ಗೌರಿಬಿದನೂರು, ದೊಡ್ಡಬಳ್ಳಾಪುರ, ಕೋಲಾರ ತಾಲ್ಲೂಕುಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೆ ₹ 50 ಸಾವಿರ ಆರ್ಥಿಕ ನೆರವು ನೀಡುವ ಮೂಲಕ ಹೊಂಗೆ ಸಸಿಗಳನ್ನು ಬೆಳೆಸಲು ಪ್ರೋತ್ಸಾಹ ನೀಡಿದ್ದರು. ಇದಾದ ನಂತರ ಶಾಲಾ ಮಕ್ಕಳಿಗೆ ಹೊಂಗೆ ಸಸಿಗಳನ್ನು ನೀಡಿ ಸಸಿಗಳನ್ನು ನೀಡಲಾಯಿತು. ಈ ಎಲ್ಲಾ ಪ್ರಯತ್ನದ ಫಲವಾಗಿ ಇಂದು ಇಡೀ ತಾಲ್ಲೂಕಿನಲ್ಲಿ ಹೊಂಗೆ ಸಸಿಗಳ ಹಸಿರು ಕ್ರಾಂತಿ ಆಗಿದೆ.

ಭಾನುವಾರದ ರಜಾ ದಿನ ನಮ್ಮ ಗೆಳೆಯ ಗುಂಪಿನಿಂದ ಆರಂಭವಾದ ಪಾರ್ಕ್‌ ಅಭಿವೃದ್ಧಿಗೊಳಿಸುವ ಕೆಲಸ ಮನಸ್ಸಿಗೆ ಖುಷಿಕೊಟ್ಟಿದ್ದಲ್ಲದೆ ಇಂದು ಬೆಳೆದು ನಿಂತಿರುವ ಮರಗಳ ಕೆಳಗೆ ಕುಳಿತರೆ ಬದುಕು ಸಾರ್ಥಕ ಅನ್ನಿಸುತ್ತದೆ ಎನ್ನುತ್ತಾರೆ ಪರಿಸರ ಸಿರಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಂಜುನಾಥ್‌ರೆಡ್ಡಿ.

ನಗರದ ಸ್ಕೌಟ್‌ಕ್ಯಾಂಪ್‌ ರಸ್ತೆಯ ಎಂ.ಎ.ಪ್ರಕಾಶ್‌ ಬಡಾವಣೆಯಲ್ಲಿ ಗೆಳೆಯರು ಹಾಗೂ ನಗರಸಭೆಯೊಂದಿಗೆ ಸೇರಿ ಅಭಿವೃದ್ಧಿಗೊಳಿಸಿದ ಪಾರ್ಕ್‌ನಲ್ಲಿನ ಹಸಿರೀಕರಣವನ್ನು ನೋಡಿರುವ ಗೆಳೆಯರು ನಮ್ಮ ವಾರ್ಡ್‌ನಲ್ಲಿನಲ್ಲಿ ಪಾಳುಬಿದ್ದಿರುವ ಪಾರ್ಕ್‌ ಅಭಿವೃದ್ಧಿಗೂ ಒಂದಿಷ್ಟು ಮಾರ್ಗದರ್ಶನ ನೀಡಿ, ಸಹಕಾರ ನೀಡಿ ಎಂದು ಕರೆಯುತ್ತಾರೆ. ಇದಲ್ಲದೆ ಮುತ್ತೂರು ಕೆರೆಯ ಸುತ್ತ ಎಲ್‌ ಅಂಡ್‌ ಟಿ ಕಂಪನಿ ಸಹಕಾರದಿಂದ ಒಂದು ಸಾವಿರ ಸಸಿಗಳನ್ನು ನೆಡಲಾಯಿತು. ಇವುಗಳಲ್ಲಿ ಶೇ 90ರಷ್ಟು ಬೆಳೆದು ದೊಡ್ಡದಾಗಿವೆ. ಹಾಗೆಯೇ ನಾಗರಕೆರೆ ಏರಿಯ ಮೇಲೆ ಏಸ್ಸಿಲಾರ್‌ ಕಂಪನಿ ವತಿಯಿಂದ 500 ಸಸಿಗಳನ್ನು ನೆಟ್ಟು ಬೇಸಿಗೆಯಲ್ಲಿ ಹನಿ ನೀರಾವರಿ ಸೌಲಭ್ಯ ಮಾಡಿ ಬೆಳೆಸಲಾಯಿತು. ಈ ಎಲ್ಲಾ ಕೆಲಸಗಳು ಅತ್ಯಂತ ಹೆಮ್ಮೆಯ ವಿಚಾರ ಎನ್ನುತ್ತಾರೆ ಪರಿಸರ ಸಿರಿ ಕ್ಷೇಮಾಭಿವೃದ್ಧಿ ಸಂಘದ ಸದಸ್ಯ ಜಿ.ರಾಜಶೇಖರ್‌.

‘ಮನೆಗೊಂದು ಮರ- ಊರಿಗೊಂದು ವನ’ ಘೋಷಣೆಯೊಂದಿಗೆ ಸಸಿ ನೆಟ್ಟು ಬೆಳೆಸುವ ಆಂದೋಲನಕ್ಕೆ ಮುಂದಾಗಿರುವ ಸುಚೇತನ ಎಜುಕೇಷನಲ್‌ ಆಂಡ್‌ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಸಕ್ತರಿಗೆ ಇಷ್ಟವಾದ ಸಸಿಯನ್ನು ನೆಟ್ಟುಕೊಡುವ ಕೆಲಸ ಮಾಡಲಾಗುತ್ತಿದೆ ಎನ್ನುತ್ತಾರೆ ಟ್ರಸ್ಟ್‌ನ ಅಧ್ಯಕ್ಷ ವಿ.ಸುನೀಲ್‌.

ನಗರದಲ್ಲಿ ರಸ್ತೆ ವಿಸ್ತರಣೆಗಾಗಿ ಅನಗತ್ಯವಾಗಿ ಬೃಹತ್‌ ಮರಗಳನ್ನು ಕತ್ತರಿಸುವುದರ ವಿರುದ್ದ ನಡೆದ ಹೋರಾಟದಲ್ಲಿ ಸಂದರ್ಭದಲ್ಲಿ ರಾಜಕಾರಣಿಗಳು, ಅಧಿಕಾರಿಗಳಿಂದ ಆದ ಅವಮಾನವನ್ನೇ ಸವಾಲಾಗಿ ಸ್ವೀಕರಿಸಿ ಜನ್ಮ ದಿನಕ್ಕೊಂದು ಸಸಿ ನೆಡುವ ಮೂಲಕ ನಗರದ ರಸ್ತೆ ಬದಿಗಳಲ್ಲಿ ಮತ್ತೆ ಸಸಿಗಳನ್ನು ಬೆಳೆಸುವ ಅಭಿಯಾನಕ್ಕೆ ಈಗ ಎರಡು ವರ್ಷ ತುಂಬಿದೆ. ಇಲ್ಲಿಯವರೆಗೆ 205 ಸಸಿಗಳನ್ನು ನೆಡಲಾಗಿದೆ. ನೆಟ್ಟಿರುವ ಇಷ್ಟೂ ಸಸಿಗಳು ಬೆಳೆದು ನಿಂತಿವೆ ಎನ್ನುತ್ತಾರೆ ಯುವ ಸಂಚಲನ ಸಂಘಟನೆಯ ಅಧ್ಯಕ್ಷ ಚಿದಾನಂದ್‌.

ಗುಂಡು ತೋಪುಗಳಂತೆ ಹೊಸ ಮಾದರಿಯಲ್ಲಿ ಪುಟ್ಟ ಪುಟ್ಟ ವನಗಳನ್ನು ಬೆಳೆಸುವ ನಿಟ್ಟಿನಲ್ಲಿ ಏಕಾಶಿಪುರ ಗ್ರಾಮದಲ್ಲಿ ಆರಂಭಿಸಲಾದ ಅಶೋಕ ವನ, ಹನುಮ ಪುಷ್ಪವನ, ನಗರದಲ್ಲಿನ ಮುತ್ಸಂದ್ರದಲ್ಲಿ ಆರಂಭಿಸಲಾದ ಔಷಧಿಯ ಪಾರ್ಕ್‌ಗೆ ಜನರಿಂದ ಉತ್ತಮ ಸ್ಪಂದನೆಯು ದೊರೆತಿದೆ ಎನ್ನುತ್ತಾರೆ ಚಿದಾನಂದ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT