ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ: ಮಳೆಗಾಗಿ ಜಾನಪದ ಶೈಲಿಯ ಮಳೆರಾಯನ ಮೆರವಣಿಗೆಯ ಆಚರಣೆ

Published 7 ಮೇ 2024, 13:27 IST
Last Updated 7 ಮೇ 2024, 13:27 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ಮಳೆಯ ಅಭಾವದಿಂದಾಗಿ ನೀರಿನ ಕೊರತೆಯಿಂದ ಬಳಲಿ ಬೆಂಡಾಗಿ ಹೋಗುತ್ತಿರುವ ಜನರು, ಹಳ್ಳಿಗಳಲ್ಲಿ ಮಳೆಗಾಗಿ ಜಾನಪದ ಶೈಲಿಯಲ್ಲಿ ಮಳೆರಾಯನನ್ನು ಪ್ರಾರ್ಥನೆ ಮಾಡಿ, ಮೆರವಣಿಗೆ ಮಾಡುವ ಪದ್ಧತಿ ಮಾಡುತ್ತಿದ್ದಾರೆ.

ಒಂದು ಮರದ ಹಲಗೆಯನ್ನು ಸಿದ್ಧಪಡಿಸಿಕೊಂಡು, ಅದರ ಮೇಲೆ ಜೇಡಿ ಮಣ್ಣಿನಿಂದ ತಯಾರಿಸಿದ ಮಳೆರಾಯನ ಪ್ರತಿಮೆಯನ್ನು ಇಟ್ಟು, ವಿವಿಧ ಬಗೆಯ ಹೂಗಳು ಹಾಗೂ ಸೊಪ್ಪುಗಳಿಂದ ಅಲಂಕಾರ ಮಾಡಿ, ಮಳೆರಾಯನನ್ನು ಹೊರಲು ಒಬ್ಬ ಹುಡುಗನನ್ನು ತಯಾರು ಮಾಡಿ, ತಲೆಯ ಮೇಲಿಟ್ಟು, ಊರೆಲ್ಲಾ ಹೊರಿಸುತ್ತಾರೆ.

ತಮಟೆ ವಾದನಗಳೊಂದಿಗೆ ಯುವಕರ ಗುಂಪು ಹಿರಿಯರೊಟ್ಟಿಗೆ ಹಳ್ಳಿಯಲ್ಲಿನ ಪ್ರತಿಯೊಂದು ಮನೆ, ಮನೆಗೆ ಹೋಗುತ್ತಾರೆ. ಮನೆಗಳಲ್ಲಿನ ಮಹಿಳೆಯರು ಮಳೆರಾಯನಿಗೆ ಪೂಜೆ ಸಲ್ಲಿಸಿ, ನಮ್ಮ, ಮನೆ, ಹೊಲಗದ್ದೆಗಳ ಮೇಲೆ ಸಂತೃಪ್ತಿಯಿಂದ ಮಳೆ ಸುರಿಸಪ್ಪಾ ಎಂದು ಪ್ರಾರ್ಥನೆ ಮಾಡಿಕೊಂಡು, ತಮ್ಮ ಮನೆಯಿಂದ ಒಂದು ಬಿಂದಿಗೆ ನೀರನ್ನು ಮಳೆರಾಯನ ಮೇಲೆ ಸುರಿಯುತ್ತಾರೆ. ಹೀಗೆ ಮನೆ, ಮನೆಗೆ ಸಂಚರಿಸಿ, ಪೂಜೆ ಸ್ವೀಕರಿಸಿದ ನಂತರ ಕೆರೆಯಲ್ಲಿ ಇಟ್ಟು ಬರುತ್ತಾರೆ.

ಮನೆಗಳ ಬಳಿಗೆ ಹೋದಾಗ, ಉಯ್ಯೋ.. ಉಯ್ಯೋ.. ಮಳೆರಾಯ ಹೂವಿನ ಗಿಡಕೆ ನೀರಿಲ್ಲ, ಬಾರೋ.. ಬಾರೋ.. ಮಳೆರಾಯನ ಬಾಳೇಗಿಡಕ್ಕೆ ನೀರಿಲ್ಲ.. ಬಾರಪ್ಪೋ..ಮಳೆರಾಯ ನೀ ಬರದಿದ್ರೆ ಬದುಕಿಲ್ಲ..ದನಕರು, ಕುರಿ ಮೇಕೆ, ಜನರೆಲ್ಲಾ ಒಣಗುತ್ತಿಹರು ಕರುಣೆ ತೋರಿಸಿ ಬಾರಪ್ಪೋ.. ಎನ್ನುವ ಜಾನಪದ ಹಾಡುಗಳನ್ನು ಹಾಡುತ್ತಾ ತೆರಳುತ್ತಾರೆ.

ಸಂಜೆ 6 ಗಂಟೆಗೆ ಮಳೆರಾಯನ ಮೆರವಣಿಗೆ ಆರಂಭಿಸುವ ಯುವಕರು ರಾತ್ರಿ 11 ಗಂಟೆಯವರೆಗೂ ಮೆರವಣಿಗೆ ಮಾಡುತ್ತಾರೆ. ಮೂರು ದಿನಗಳ ಕಾಲ ನಡೆಯುವ ಈ ಆಚರಣೆಯ ಮೂರನೇ ದಿನದಂದು ಪ್ರತಿಯೊಂದು ಮನೆಯಿಂದ ದವಸ ಧಾನ್ಯ, ಹಾಗೂ ಹಣವನ್ನು ಸಂಗ್ರಹಿಸುತ್ತಾರೆ. ಹೀಗೆ ಸಂಗ್ರಹಿಸಿದ ದವಸಧಾನ್ಯ ಹಾಗೂ ಹಣದಿಂದ ಕೆರೆಯಲ್ಲಿ ಪರುವು ಮಾಡುತ್ತಾರೆ (ಅನ್ನಸಂತರ್ಪಣೆ), ಕೊನೆಯ ದಿನದಂದು ಕೆರೆಯಲ್ಲಿ ಮಳೆರಾಯನಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಗ್ರಾಮಸ್ಥರೆಲ್ಲರೂ ಊಟ ಮಾಡಿಕೊಂಡು ವಾಪಸ್ಸು ಬರುವಾಗ ಕೊನೆಯಲ್ಲಿ ಬಾಯಿ ಬಡಿದುಕೊಂಡು ಮನೆಗೆ ಬಂದರೆ, ನಮ್ಮ ಆರ್ಥನಾಧವನ್ನು ಕೇಳುವ ಮಳೆರಾಯ ಭೂಮಿಗೆ ಇಳಿಯುತ್ತಾನೆ ಎನ್ನುವ ನಂಬಿಕೆಯಿದೆ ಎಂದು ಹಿರಿಯ ನಾರಾಯಣಪ್ಪ ಹೇಳಿದರು.

ತಂತ್ರಜ್ಞಾನ ಯುಗದಲ್ಲೂ ಮಳೆ ರಾಯನಿಗೆ ಮೊರೆ: ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ ತಮ್ಮ ಪೂರ್ವಿಕರಿಂದ ಬಂದಿರುವ ಮಳೆರಾಯನ ಮೆರವಣಿಗೆಯ ಸಂಪ್ರದಾಯವನ್ನು ಇಂದಿನ ಯುವಪೀಳಿಗೆ ನಂಬಿಕೆಯಿಂದ ಉಳಿಸಿಕೊಂಡು ಬರುತ್ತಿರುವುದು ಖುಷಿ ತಂದಿದೆ. ನಮ್ಮ ಆಚರಣೆಗಳು, ಸಂಪ್ರದಾಯಗಳು ಯುವಕರಿಗೆ ಪರಿಚಯವಾಗುತ್ತಿವೆ ಎಂದು ಹಿರಿಯ ಮುಖಂಡರೊಬ್ಬರು ಸಂತಸ ವ್ಯಕ್ತಪಡಿಸಿದರು.

ಹಲವು ವರ್ಷಗಳ ಕಾಲ ತೀರಾ ಬರಗಾಲ ಬಂದಿದ್ದ ಸ ಮಯದಲ್ಲಿ ನಾವೂ ಹೀಗೆ ಮಾಡುತ್ತಿದ್ದೆವು. ಆವಾಗ ಮಳೆ ಬರುತ್ತಿತ್ತು. ಕೆರೆ, ಕುಂಟೆಗಳು ತುಂಬುತ್ತಿದ್ದವು, ಮಳೆ ಹಿಂದಕ್ಕೆ ಹೋದರೆ ಮಳೆರಾಯನನ್ನು ಮೆರವಣಿಗೆ ಮಾಡುತ್ತಿದ್ದೇವು.
ವೆಂಕಟಸ್ವಾಮಪ್ಪ ಹಿರಿಯ ನಾಗರಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT