ಶುಕ್ರವಾರ, ಅಕ್ಟೋಬರ್ 23, 2020
24 °C
ಬಿಬಿಎಂಪಿ: ಐದು ವರ್ಷಗಳ ಅಭಿವೃದ್ಧಿಯ ಮರ್ಮ ಬಿಚ್ಚಿಟ್ಟ ಬಿಎನ್‌ಪಿ

63,629 ಕಾಮಗಾರಿಗಳಲ್ಲಿ 28,314 ಮಾತ್ರ ಅನುಷ್ಠಾನ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಐದು ವರ್ಷಗಳಲ್ಲಿ ಬಿಬಿಎಂಪಿ ಅಂದಾಜು ₹21,653 ಕೋಟಿ ವೆಚ್ಚದ 63,629 ಕಾಮಗಾರಿಗಳಿಗೆ ಅನುಮೋದನೆ ನೀಡಿದೆ. ಈ ಪೈಕಿ 28,314 ಕಾಮಗಾರಿ ಮಾತ್ರ ಕಾರ್ಯಗತಗೊಂಡಿವೆ. ಸುಮಾರು ₹4,721 ಕೋಟಿ ವೆಚ್ಚದ ಕಾಮಗಾರಿಗಳಲ್ಲಿ ಶೇಕಡ 50ರಷ್ಟನ್ನು, ಒಬ್ಬರೇ ಗುತ್ತಿಗೆದಾರರಿಗೆ ನೀಡಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಐದು ವರ್ಷಗಳಲ್ಲಿ ನಡೆದ ಕಾಮಗಾರಿಗಳ ಮರ್ಮವನ್ನು ಬೆಂಗಳೂರು ನವನಿರ್ಮಾಣ ಪಕ್ಷವು (ಬಿಎನ್‍ಪಿ) ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಬಿಚ್ಚಿಟ್ಟಿದ್ದು ಹೀಗೆ. ಅನುಮೋದನಯಾಗಿರುವ ಕಾಮಗಾರಿಗಳ ಸಂಖ್ಯೆ, ಅವುಗಳಿಗೆ ಆಗಿರುವ ವೆಚ್ಚವನ್ನು ವಿವರಿಸಿದ ಪಕ್ಷದ ವಿಶ್ಲೇಷಣಾ ಘಟಕದ ಮುಖ್ಯಸ್ಥ ಸಂಜಯ್ ಮೆಹರೋತ್ರ, 'ಪಾಲಿಕೆಯ ಎಲ್ಲ ವಾರ್ಡ್‍ಗಳಲ್ಲಿ ಅನುಮತಿ ನೀಡಿರುವ ಯೋಜನೆಗಳ ಆಳವಾದ ಅಧ್ಯಯನದ ಬಳಿಕವೇ ಈ ಅಂಕಿ ಅಂಶ ನೀಡುತ್ತಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

ಪಕ್ಷದ ಖಜಾಂಚಿ ಸುಬ್ಬು ಹೆಗಡೆ, 'ಪಾಲಿಕೆ ಬಹುತೇಕ ಕಾಮಗಾರಿಗಳನ್ನು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಐಡಿಎಲ್‌) ವಹಿಸಲಾಗಿದ್ದು, ಟೆಂಡರ್ ಆಹ್ವಾನಿಸದೆಯೇ ಅನುಷ್ಠಾನಗೊಳಿಸಲಾಗುತ್ತಿದೆ. ಪ್ರತಿ ಯೋಜನೆಗೆ ಶೇ 10ರಷ್ಟು ಕಮಿಷನ್ ಪಡೆಯಲಾಗಿದೆ. ಸಾವಿರಾರು ಕೋಟಿ ವೆಚ್ಚದ ಯೋಜನೆಗಳನ್ನು ಯಾವುದೇ ಟೆಂಡರ್ ಕರೆಯದೆಯೇ ಒಬ್ಬರೇ ಗುತ್ತಿಗೆದಾರರಿಗೆ ನೀಡಿರುವುದು ಅಗಾಧ ಭ್ರಷ್ಟಾಚಾರ ಹಾಗೂ ಆಡಳಿತದ ದುರ್ಬಳಕೆಗೆ ಹಿಡಿದ ಕನ್ನಡಿ' ಎಂದು ದೂರಿದರು.

ಪದ್ಮನಾಭನಗರ ಕ್ಷೇತ್ರದ ಬಿಎನ್‍ಪಿ ಮುಖಂಡ ಸಿದ್ಧಾರ್ಥ ಶೆಟ್ಟಿ, 'ಕಾಮಗಾರಿಗಳ ಗುತ್ತಿಗೆ ನೀಡುವಾಗ ಕೆಟಿಪಿಪಿಎ ಕಾಯ್ದೆಯ ಷರತ್ತುಗಳನ್ನು ಗಾಳಿಗೆ ತೂರಲಾಗಿದೆ. ಮಳೆನೀರು ಚರಂಡಿ, ಬೀದಿದೀಪ, ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆಯಂತಹ ಕಾರ್ಯಗಳನ್ನೂ ಕೆಆರ್‌ಐಡಿಎಲ್‌ಗೆ ಒಪ್ಪಿಸುವ ಅಗತ್ಯವೇನಿದೆ’ ಎಂದು ಪ್ರಶ್ನಿಸಿದರು.

ಪಕ್ಷದ ತಾಂತ್ರಿಕ ವಿಭಾಗದ ಮುಖ್ಯಸ್ಥ ಅರುಣ್ ಮಹೇಂದ್ರನ್, 'ಬೆಂಗಳೂರಿನ ಎಲ್ಲ ನಾಗರಿಕರಿಗೆ ತಮ್ಮ ವಾರ್ಡ್‍ಗಳಲ್ಲಿ ನಡೆದಿರುವ ಯೋಜನೆಗಳ ವಿವರ ಹಾಗೂ ದುರುಪಯೋಗವಾಗಿರುವ ಹಣದ ದತ್ತಾಂಶವನ್ನು ವಾರ್ಡ್‍ವಾರು ವಿಂಗಡಿಸಲಾಗಿದೆ. ವಿವರಗಳನ್ನು ವೆಬ್‍ಸೈಟ್ www.nammabnp.org, 4g Scam section ಮೂಲಕ ಪಡೆಯಬಹುದು' ಎಂದರು.

’ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ನಮ್ಮ ಪಕ್ಷವು ಸ್ಪರ್ಧಿಸಲಿದೆ. ಆದರೆ, ಆ ಕಾರಣಕ್ಕೆ ನಾವು ಈ ಆರೋಪ ಮಾಡುತ್ತಿಲ್ಲ. ಜನರಿಗೆ ಮಾಹಿತಿ ನೀಡುವುದಷ್ಟೇ ನಮ್ಮ ಉದ್ದೇಶ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಶ್ರಿಕಾಂತ್‌ ನರಸಿಂಹನ್‌ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು