ಭಾನುವಾರ, ಆಗಸ್ಟ್ 25, 2019
27 °C
ಪ್ರಸಕ್ತ ಸಾಲಿನಲ್ಲಿ 1,615 ಮಂಜೂರು; ರೈತರಿಗೆ ಅನುಕೂಲ

ಬೆಳಗಾವಿ: 20,049 ‘ಹೊಂಡ’ಕ್ಕೆ ಸರ್ಕಾರದ ಅನುದಾನ

Published:
Updated:
Prajavani

ಬೆಳಗಾವಿ: ಜಿಲ್ಲೆಯಲ್ಲಿ 2014–15ನೇ ಸಾಲಿನಿಂದ ಇಲ್ಲಿಯವರೆಗೆ 20,049 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದ್ದು, ಇವುಗಳು ಮಳೆಯಾಶ್ರಿತ ಜಮೀನುಗಳ ರೈತರಿಗೆ ವರದಾನವಾಗಿ ಪರಿಣಮಿಸಿವೆ.

ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಅವುಗಳ ಒಡಲು ಭರ್ತಿಯಾಗುತ್ತಿದ್ದು, ‘ನೀರ ನೆಮ್ಮದಿಯ ನಾಳೆ’ಗಳ ಸೂಚನೆ ನೀಡುತ್ತಿವೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಕೃಷಿ ಹೊಂಡಗಳನ್ನು ನಿರ್ಮಿಸಿಕೊಳ್ಳಲು ರೈತರಿಗೆ ಸಹಾಯಧನ ನೀಡುವ ಕೃಷಿ ಭಾಗ್ಯ ಯೋಜನೆ ಜಾರಿಗೊಳಿಸಿತು. 2014–15ನೇ ಸಾಲಿನಲ್ಲಿ ಅಥಣಿ, ಗೋಕಾಕ, ರಾಯಬಾಗ, ರಾಮದುರ್ಗ, ಸವದತ್ತಿ, 2015–16ರಿಂದ ಬೈಲಹೊಂಗಲ, ಚಿಕ್ಕೋಡಿ ಹಾಗೂ ಹುಕ್ಕೇರಿ, 2017–18ರಿಂದ ಬೆಳಗಾವಿ ಹಾಗೂ ಖಾನಾಪುರ ತಾಲ್ಲೂಕುಗಳಿಗೆ ಯೋಜನೆ ವಿಸ್ತರಿಸಲಾಯಿತು. ಇದರಿಂದ ಜಿಲ್ಲೆಯ ಸಾವಿರಾರು ರೈತರು ಪ್ರಯೋಜನ ಪಡೆದಿದ್ದಾರೆ. ರೈತರಿಂದ ಉತ್ತಮ ಪ್ರತಿಕ್ರಿಯೆ ದೊರೆತ ಹಿನ್ನೆಲೆಯಲ್ಲಿ ಯೋಜನೆಯನ್ನು 2017–18ನೇ ಸಾಲಿನಿಂದ ಎಲ್ಲ ತಾಲ್ಲೂಕುಗಳಿಗೂ ವಿಸ್ತರಿಸಲಾಗಿದೆ.

ವರದಿ ಬಂದ ನಂತರ: 2019–20ನೇ ಸಾಲಿನ ಕ್ರಿಯಾಯೋಜನೆ ಪ್ರಕಾರ, 1,615 ಕೃಷಿ ಹೊಂಡಗಳಿಗೆ ಸಹಾಯಧನ ನೀಡಲು ಮಂಜೂರಾತಿ ದೊರೆತಿದೆ. ಈ ಪೈಕಿ ಈಗಾಗಲೇ 270 ಹೊಂಡಗಳನ್ನು ನಿರ್ಮಿಸಲಾಗಿದೆ. ಫಲಾನುಭವಿಗಳಾಗ ಬಯಸುವವರು ರೈತ ಸಂಪರ್ಕ ಕೇಂದ್ರಗಳಿಗೆ ಅರ್ಜಿ ಸಲ್ಲಿಸಬೇಕು. ಮಳೆಯಾಶ್ರಿತ ಪ್ರದೇಶಗಳ ರೈತರಿಗೆ ಮಾತ್ರ ಅವಕಾಶವಿದೆ. ಕೃಷಿ ಇಲಾಖೆ ಅಧಿಕಾರಿಗಳು ಉದ್ದೇಶಿತ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಿದ ನಂತರ ಆಯ್ಕೆ ಮಾಡಲಾಗುತ್ತದೆ.

‘ಮಳೆ ಪ್ರಮಾಣ ಕಡಿಮೆ ಇದ್ದಾಗ ಎದುರಾಗುವ ಸಂಕಷ್ಟದ ಸಂದರ್ಭದಲ್ಲಿ ಈ ಹೊಂಡಗಳು ಕೃಷಿಕರ ಕೈಹಿಡಿದಿವೆ. ಬೆಳೆಗಳಿಗೆ ನೀರುಣಿಸಲು ನೆರವಾಗುತ್ತವೆ. ಹೀಗಾಗಿ, ಬೇಡಿಕೆ ಕಂಡುಬರುತ್ತಿದೆ. ಈ ಬಾರಿ ಕಡಿಮೆ ಪ್ರಮಾಣದಲ್ಲಿ ಗುರಿ ನೀಡಲಾಗಿದೆ. ಬೆಳೆ ಕಟಾವು ಆದ ನಂತರದ ದಿನಗಳಲ್ಲಿ ಹೆಚ್ಚಿನ ಹೊಂಡಗಳನ್ನು ಕಟ್ಟಿಕೊಳ್ಳುತ್ತಾರೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಲಾನಿ ಮೊಕಾಶಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಮಳೆ ನೀರಿನ ಸಂಗ್ರಹಣೆ ಹಾಗೂ ಆ ನೀರನ್ನು ಸಂದಿಗ್ಧ ಪರಿಸ್ಥಿತಿಯಲ್ಲಿ ಬಳಸುವುದು, ಈ ಮೂಲಕ ರೈತರ ಆದಾಯ ಹೆಚ್ಚಿಸುವ ಉದ್ದೇಶ ಯೋಜನೆಯಾಗಿದೆ. ಸುಸ್ಥಿರ ಅಭಿವೃದ್ಧಿಯ ಗುರಿ ಹೊಂದಲಾಗಿದೆ. ಇದು ಸಾಕಾರವಾಗುತ್ತಿದೆ. ಈ ಬಾರಿ ಉತ್ತಮ ಮಳೆಯಾಗುತ್ತಿರುವುದು ಹೊಂಡಗಳಲ್ಲಿ ನೀರು ಸಂಗ್ರಹವಾಗಲು ಅನುಕೂಲಕರವಾಗಿದೆ’ ಎನ್ನುತ್ತಾರೆ ಅವರು.

Post Comments (+)