ಬುಧವಾರ, ಜುಲೈ 28, 2021
22 °C
ಮೂಡಲಗಿಯಲ್ಲಿ 1, ಅಥಣಿಯಲ್ಲಿ ಮೂವರು ಮಕ್ಕಳು ಸಾವು

PV Web Exclusive: 2,815 ಮಕ್ಕಳನ್ನು ಬಾಧಿಸಿದ ‘2ನೇ ಅಲೆ’

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಜಿಲ್ಲೆಯಲ್ಲಿ ಕೋವಿಡ್ 1ನೇ ಅಲೆಗಿಂತ 2ನೇ ಅಲೆಯ ಸಂದರ್ಭದಲ್ಲಿ ಹೆಚ್ಚಿನ ಮಕ್ಕಳು (18 ವರ್ಷದೊಳಗಿನವರು) ಸೋಂಕಿನಿಂದ ಬಾಧಿತರಾಗಿದ್ದಾರೆ.

ಟಿಎಚ್‌ಒಗಳ ಮೂಲಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಂಗ್ರಹಿಸಿರುವ ಮಾಹಿತಿ ಪ್ರಕಾರ, ನೂರಾರು ಮಕ್ಕಳ ಮೇಲೆ ಕೋವಿಡ್ ಪರಿಣಾಮ ಬೀರಿದೆ. ಈವರೆಗೆ, ಬೆಳಗಾವಿ ನಗರದಲ್ಲಿ ಹೆಚ್ಚಿನವರಲ್ಲಿ ಸೋಂಕು ದೃಢಪಟ್ಟಿದೆ. ಖಾನಾಪುರ ತಾಲ್ಲೂಕಿನಲ್ಲಿ ಅತ್ಯಂತ ಕಡಿಮೆ, ಅಂದರೆ ಮೂವರಿಗೆ ಮಾತ್ರ ಕೋವಿಡ್ ತಗುಲಿತ್ತು.

2ನೇ ಅಲೆಯಲ್ಲಿ ಮೂವರು ಸೇರಿ ಒಟ್ಟು ನಾಲ್ವರು ಮೃತರಾಗಿದ್ದಾರೆ. ಉಳಿದವರೆಲ್ಲರೂ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಮೂರನೇ ಅಲೆಯು 18 ವರ್ಷದೊಳಗಿನವರನ್ನು ಹೆಚ್ಚು ಬಾಧಿಸಲಿದೆ ಎಂಬ ತಜ್ಞರ ವರದಿಗಳಿರುವುದರಿಂದ, ಅಲ್ಲಲ್ಲಿ ಸಾಂಸ್ಥಿಕ ಆರೈಕೆಗಾಗಿ ಇಲಾಖೆಯಿಂದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

1ನೇ ಅಲೆಯಲ್ಲಿ ಒಟ್ಟು 773 ಮಕ್ಕಳು ಸೋಂಕಿತರಾಗಿದ್ದರು. ಈ ಪೈಕಿ ಬೆಳಗಾವಿ ಗ್ರಾಮೀಣದಲ್ಲಿ ಅತಿ ಹೆಚ್ಚು ಅಂದರೆ 213 ಹಾಗೂ 2ನೇ ಅಲೆಯಲ್ಲಿ ಬೆಳಗಾವಿ ನಗರದಲ್ಲಿ ಅತಿ ಹೆಚ್ಚು (835) ಮಕ್ಕಳು ಸೋಂಕಿತರಾಗಿದ್ದಾರೆ. ನಂತರದ ಸ್ಥಾನದಲ್ಲಿ ಬೆಳಗಾವಿ ಗ್ರಾಮೀಣ, ರಾಯಬಾಗ ಹಾಗೂ ಚಿಕ್ಕೋಡಿ ತಾಲ್ಲೂಕುಗಳಿವೆ.

ಜಿಲ್ಲೆಯಲ್ಲಿ 6 ವರ್ಷದೊಳಗಿನ 4,19,380 ಮತ್ತು 6ರಿಂದ 16 ವರ್ಷದೊಳಗಿನ 10,30,144 ಮಕ್ಕಳು ಇದ್ದಾರೆ. ಅವರನ್ನು ಕೋವಿಡ್‌ನಿಂದ ಪಾರು ಮಾಡುವುದು ಸವಾಲಿನ ಸಂಗತಿಯಾಗಿ ಪರಿಣಮಿಸಿದೆ.

ಇದನ್ನೂ ಓದಿ: ಕಪ್ಪು ಶಿಲೀಂಧ್ರ: 26 ದಿನಗಳಲ್ಲಿ 100 ಶಸ್ತ್ರಚಿಕಿತ್ಸೆ

‘ಆಸರೆ’ ಕಸಿದ ಕೊರೊನಾ:

ಜಿಲ್ಲೆಯಲ್ಲಿ ಇಬ್ಬರು ಮಕ್ಕಳು ಕೋವಿಡ್‌ನಿಂದಾಗಿ ತಂದೆ–ತಾಯಿ ಕಳೆದುಕೊಂಡಿದ್ದಾರೆ. 22 ಮಕ್ಕಳಿಗೆ ಇದ್ದ ಏಕ ಪೋಷಕರನ್ನು (ತಂದೆ ಅಥವಾ ತಾಯಿ) ಕೂಡ ಕೋವಿಡ್ ಸಾವಿನ ಮನೆಗೆ ಕರೆದೊಯ್ದಿದೆ. ಈ ಮಕ್ಕಳ ತಂದೆ ಅಥವಾ ತಾಯಿ ಕೋವಿಡ್‌ಗೂ ಮುನ್ನವೇ ಅನ್ಯ ಕಾರಣಗಳಿಂದ ಸಾವಿಗೀಡಾಗಿದ್ದರು. ಇಂತಹ ಪ್ರಕರಣದಲ್ಲಿ ಬೈಲಹೊಂಗಲದ ಅತಿ ಹೆಚ್ಚು ಅಂದರೆ 8 ಚಿಣ್ಣರು ಅನಾಥರಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಪರರ ಆಶ್ರಯದಲ್ಲಿ ಅವರು ಇರುವಂತಾಗಿದೆ.

ಬರೋಬ್ಬರಿ 875 ಮಕ್ಕಳು ಏಕಪೋಷಕರ ಆಶ್ರಯದಲ್ಲಿದ್ದಾರೆ. ಇವರಲ್ಲಿ ಅರಭಾವಿಯವರು ಹೆಚ್ಚಿದ್ದಾರೆ (137) ಮತ್ತು ಚಿಕ್ಕೋಡಿ ತಾಲ್ಲೂಕಿನವರು (107) ನಂತರದ ಸ್ಥಾನದಲ್ಲಿದ್ದಾರೆ. ಅವರ ಅಪ್ಪ ಅಥವಾ ಅಮ್ಮ ಕೋವಿಡ್‌ನಿಂದ ಸಾವಿಗೀಡಾಗಿದ್ದಾರೆ ಎಂಬ ಮಾಹಿತಿ ಇಲಾಖೆಯ ಸಮೀಕ್ಷೆಯಿಂದ ಲಭ್ಯವಾಗಿದೆ.

ಈ ಹಿನ್ನೆಲೆಯಲ್ಲಿ, ಸಂಭಾವ್ಯ ಕೋವಿಡ್ 3ನೇ ಅಲೆಯ ಸಂದರ್ಭದಲ್ಲಿ ಮಕ್ಕಳ ಆರೈಕೆಗಾಗಿ ನಗರದ ವಿವಿಧ ಆರು ವಸತಿ ಶಾಲೆ ಹಾಗೂ ವಸತಿನಿಲಯಗಳನ್ನು ಗುರುತಿಸಲಾಗಿದೆ. ಅಲ್ಲಿ ತಲಾ 100ರಂತೆ 600 ಹಾಸಿಗೆಗಳನ್ನು ವ್ಯವಸ್ಥೆ ಮಾಡಲಾಗಿದೆ. ಬೆಳಗಾವಿ, ಬೈಲಹೊಂಗಲ ಮತ್ತು ಚಿಕ್ಕೋಡಿ ಉಪ ವಿಭಾಗದಲ್ಲಿ ಆ ಭಾಗದ ತಾಲ್ಲೂಕುಗಳ ಮಕ್ಕಳಿಗಾಗಿ ಆರೈಕೆ ಕೇಂದ್ರಗಳಾಗಿ ಕಾರ್ಯನಿರ್ವಹಿಸಲು ಸರ್ಕಾರಿ ಅನುದಾನಿತ ಮಕ್ಕಳ ಪಾಲನಾ ಸಂಸ್ಥೆಗಳನ್ನು ಗುರುತಿಸಲಾಗಿದೆ.

ಮುಂಜಾಗ್ರತಾ ಕ್ರಮ:

‘ಮಕ್ಕಳಿಗಾಗಿ, ಜಿಲ್ಲಾಸ್ಪತ್ರೆಯಲ್ಲಿ 75 ಅಮ್ಲಜನಕ ಹಾಸಿಗೆಗಳ ವಾರ್ಡ್‌ ಗುರುತಿಸಲಾಗಿದೆ. 9 ತಾಲ್ಲೂಕು ಆಸ್ಪತ್ರೆ, 16 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಮುಂಜಾಗ್ರತಾ ಕ್ರಮವಾಗಿ 159 ಹಾಸಿಗೆಗಳನ್ನು ಒದಗಿಸಲಾಗುವುದು. 139 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ತಲಾ ಐದು ಹಾಸಿಗೆಗಳನ್ನು ಸಜ್ಜುಗೊಳಿಸಲಾಗಿದೆ’ ಎಂದು ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ ತಿಳಿಸಿದರು.

‘6 ವರ್ಷದೊಳಗಿನವರಿಗೆ, 7ರಿಂದ 18 ವರ್ಷದೊಳಗಿನ ಬಾಲಕಿಯರು ಹಾಗೂ 7ರಿಂದ 18 ವರ್ಷದೊಳಗಿನ ಬಾಲಕರಿಗೆ ಆರೈಕೆ ಮತ್ತು ಕ್ವಾರಂಟೈನ್ ಕೇಂದ್ರಗಳನ್ನು ಗುರುತಿಸಲಾಗಿದೆ. ಪೋಷಕರಿಗೆ ಸೋಂಕು ದೃಢಪಟ್ಟಲ್ಲಿ ಅವರ ಮಕ್ಕಳಿಗೆ ತಾತ್ಕಾಲಿಕವಾಗಿ ರಕ್ಷಣೆ ಹಾಗೂ ಪೋಷಣೆಗೂ ಕ್ರಮ ವಹಿಸಲಾಗಿದೆ’ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ.

‘ತಾಲ್ಲೂಕುವಾರು ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದೆ. ಅಲ್ಲಿ 766 ಹಾಸಿಗೆಗಳು ಲಭ್ಯವಾಗಲಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ 17 ಮಂದಿ ಮಕ್ಕಳ ತಜ್ಞ ವೈದ್ಯರಿದ್ದಾರೆ. ಅಗತ್ಯ ಬಿದ್ದರೆ ಖಾಸಗಿ ವೈದ್ಯರ ಸೇವೆ ಪಡೆದುಕೊಳ್ಳುವುದಕ್ಕೂ ಯೋಜಿಸಲಾಗಿದೆ’ ಎಂದು ತಿಳಿಸಿದರು.

‘ಮಕ್ಕಳ ರಕ್ಷಣೆ ಹಾಗೂ ಆರೈಕೆಗೆ ಆದ್ಯತೆ ನೀಡಲಾಗುವುದು. ಮುಂದಿನ ಅಲೆಯು ಅವರನ್ನು ಬಾಧಿಸಲಿದೆ ಎಂಬ ವರದಿ ಇರುವುದರಿಂದ ಜಿಲ್ಲಾವಾರು ಪ್ರವಾಸ ಮಾಡಿ ತಯಾರಿಗೆ ಕ್ರಮ ವಹಿಸುವಂತೆ ಸೂಚಿಸಿದ್ದೇನೆ. ಅನಾಥರಾದ ಮಕ್ಕಳಿಗೆ ಎಲ್ಲ ರೀತಿಯ ನೆರವನ್ನೂ ನೀಡಲಾಗುವುದು’ ಎನ್ನುತ್ತಾರೆ ಅವರು.

ಸೋಂಕಿತರಾದ ಮಕ್ಕಳ ವಿವರ

ವಲಯ;1ನೇ ಅಲೆ;2ನೇ ಅಲೆ

ಕಾಗವಾಡ;103;158

ಬೈಲಹೊಂಗಲ;80;123

ರಾಯಬಾಗ;10;222

ಖಾನಾಪುರ;00;03

ಸವದತ್ತಿ;85;197

ಬೆಳಗಾವಿ ನಗರ;11;835

ಅಥಣಿ;77;121

ಚಿಕ್ಕೋಡಿ;68;222

ಮೂಡಲಗಿ;1;175

ಗೋಕಾಕ;00;108

ನಿಪ್ಪಾಣಿ;77;158

ಹುಕ್ಕೇರಿ;27;134

ರಾಮದುರ್ಗ;23;40

ಬೆಳಗಾವಿ ಗ್ರಾಮೀಣ;216;316

ಏಕ ಪೋಷಕರ ಆಸರೆಯಲ್ಲಿರುವ ಮಕ್ಕಳು

ವಲಯ;ಸಂಖ್ಯೆ

ರಾಯಬಾಗ;85

ಅಥಣಿ;90

ಕಾಗವಾಡ;65

ಸವದತ್ತಿ;55

ಬೆಳಗಾವಿ ನಗರ‌;51

ಹುಕ್ಕೇರಿ;81

ಗೋಕಾಕ;12

ಅರಭಾವಿ;136

ಚಿಕ್ಕೋಡಿ;107

ನಿಪ್ಪಾಣಿ;107

ಬೆಳಗಾವಿ ಗ್ರಾಮೀಣ;71

ಖಾನಾ‍ಪುರ;25

ರಾಮದುರ್ಗ;34

ಬೈಲಹೊಂಗಲ;52

ಒಟ್ಟು;875

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು