ಶುಕ್ರವಾರ, ಸೆಪ್ಟೆಂಬರ್ 24, 2021
26 °C

29 ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಕ್ರಮ: ಬೆಳಗಾವಿ ಜಿಲ್ಲಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಜಿಲ್ಲೆಯಲ್ಲೂ ತೆರವುಗೊಳಿಸಬೇಕಾದ 46 ಅನಧಿಕೃತ ಧಾರ್ಮಿಕ ಕಟ್ಟಡಗಳಿದ್ದವು. ಅವುಗಳಲ್ಲಿ ಈಗಾಗಲೇ ಹದಿನೇಳನ್ನು ತೆರವುಗೊಳಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಮಂಗಳವಾರ ಮಾತನಾಡಿದ ಅವರು, ‘29 ಧಾರ್ಮಿಕ ಕಟ್ಟಡಗಳನ್ನು ತೆರವು ಮಾಡಬೇಕಿದೆ. ನಿಪ್ಪಾಣಿ ತಾಲ್ಲೂಕಿನಲ್ಲಿ 4 ಧಾರ್ಮಿಕ ಕೇಂದ್ರಗಳನ್ನು ಸ್ಥಳಾಂತರಿಸಲು ಯೋಜನೆ ರೂಪಿಸಲಾಗಿದೆ’ ಎಂದರು.

‘ನಗರದಲ್ಲಿ ಮಹಾನಗರ ಪಾಲಿಕೆ ಚುನಾವಣೆ ಹಾಗೂ ಗಣೇಶೋತ್ಸವ ಕಾರಣದಿಂದಾಗಿ ಕೆಲ ದೇವಸ್ಥಾನಗಳನ್ನು ತೆರವುಗೊಳಿಲ್ಲ. ಗಣೇಶೋತ್ಸವ ಮುಗಿದ ಬಳಿಕ ದೇವಸ್ಥಾನದ ಮಂಡಳಿಯವರು ಹಾಗೂ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅನಧಿಕೃತ ಕಟ್ಟಡಗಳನ್ನು ಯಾವುದೇ ತೊಂದರೆ ಆಗದಂತೆ ತೆರವುಗೊಳಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಅನಧಿಕೃತ ಧಾರ್ಮಿಕ ಕೇಂದ್ರಗಳ ಕಟ್ಟಡ ತೆರವಿಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. 29 ಅನಧಿಕೃತ ಕಟ್ಟಡಗಳಲ್ಲಿ ಎಲ್ಲ ಧರ್ಮದವೂ ಸೇರಿವೆ. ಇವುಗಳಲ್ಲಿ ಯಾವುದೇ ಪಾರಂಪರಿಕ ಕಟ್ಟಡಗಳಿಲ್ಲ. ವಾಹನಗಳ ಸಂಚಾರಕ್ಕೆ ಮತ್ತು ಸಾರ್ವಜನಿಕರಿಗೆ ತೊಂದರೆ ಆಗದೇ ಇರುವ ಕಟ್ಟಡಗಳನ್ನು ಮುಂದುವರಿಸಲು ಪರಿಗಣಿಸುವುದಕ್ಕೆ ಅವಕಾಶವಿದೆ. ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ವಹಿಸಲಾಗುವುದು’ ಎಂದರು.

‘ಕಪ್ಪು ಶಿಲೀಂಧ್ರ ಚಿಕಿತ್ಸೆಗೆ ಔಷಧಿ ಕೊರತೆ ಇಲ್ಲ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಸಮರ್ಪಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ರೋಗದಿಂದ ಗುಣಮುಖರಾದವರು ಔಷಧಿ ಕೇಳುತ್ತಿದ್ದಾರೆ; ಇದರಿಂದ ಸಮಸ್ಯೆಯಾಗಿದೆ’ ಎಂದು ಪ್ರತಿಕ್ರಿಯಿಸಿದರು.

ಅಶ್ವತ್ಥಾಮ ಮಂದಿರಕ್ಕೆ ತೆರವಿನ ಭೀತಿ: ನಗರದ ಪಾಂಗುಳ ಗಲ್ಲಿಯಲ್ಲಿರುವ ಶತಮಾನದ ಇತಿಹಾಸವುಳ್ಳ ಅಶ್ವತ್ಥಾಮ ಮಂದಿರಕ್ಕೆ ತೆರವಿನ ಭೀತಿ ಎದುರಾಗಿದೆ. ಸುಪ್ರೀಂ ಕೋರ್ಟ್‌ ಆದೇಶದಂತೆ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ಜಿಲ್ಲಾಡಳಿತ ಮುಂದಾಗಿದೆ.

2009ರಲ್ಲಿ ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ತೆರವಿಗೆ ಮುಂದಾದಾಗ ಅಧಿಕಾರಿಗಳ ವಿರುದ್ಧ ಸ್ಥಳೀಯರು ಹಾಗೂ ಭಕ್ತರು ತೀವ್ರ ವಿರೋಧ ದಾಖಲಿಸಿದ್ದರು. ಈಗ, ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಿದ ಬಗ್ಗೆ ಮಾಹಿತಿ ನೀಡುವಂತೆ ನ್ಯಾಯಾಲಯ ಕೇಳಿರುವುದರಿಂದಾಗಿ ಪ್ರಕ್ರಿಯೆ ಮುಂದುವರಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.