ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋರೆ ಕೆಎಲ್‌ಇ ಕಾರ್ಯಾಧ್ಯಕ್ಷರಾಗಿ 40 ವರ್ಷ: ಅಷ್ಟಮ ಋಷಿಯ ಸಾರ್ಥಕ ಪಯಣ

Published 17 ಮೇ 2024, 18:28 IST
Last Updated 17 ಮೇ 2024, 18:28 IST
ಅಕ್ಷರ ಗಾತ್ರ

ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ ಪ್ರಭಾಕರ ಕೋರೆ ಅಧಿಕಾರ ಸ್ವೀಕರಿಸಿ 40 ವರ್ಷ ಪೂರ್ಣಗೊಂಡಿವೆ. ಈ ಹಿನ್ನೆಲೆಯಲ್ಲಿ ಮೇ 18ರಂದು ಸಂಜೆ 5.30ಕ್ಕೆ ಜವಾಹರಲಾಲ್‌ ನೆಹರೂ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.‌

1984ರ ಮೇ 16ರಂದು ಪ್ರಭಾಕರ ಕೋರೆ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಯ ನೊಗ ಹೊತ್ತರು. ಆಗ ಅವರಿಗೆ 38 ವರ್ಷ. ತಮ್ಮಲ್ಲಿನ ನಾಯಕತ್ವ ಗುಣದಿಂದಾಗಿಯೇ ಅವರು ದೊಡ್ಡ ಸಂಸ್ಥೆಯ ಜವಾಬ್ದಾರಿ ಹೊತ್ತರು. ನಾಲ್ಕು ದಶಕಗಳಿಂದಲೂ ಕೋರೆ ಅವರೇ ಕಾರ್ಯಾ
ಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುತ್ತ ಬಂದಿದ್ದಾರೆ. ಶಿಕ್ಷಣ ಸಂಸ್ಥೆಯ ಸೇವೆಯನ್ನು ಆರೋಗ್ಯ ಹಾಗೂ ಸಾಮಾಜಿಕ ಕ್ಷೇತ್ರಗಳಿಗೂ ವಿಸ್ತರಿಸಿದ್ದಾರೆ.

1984ರಲ್ಲಿ 38 ಅಂಗ ಸಂಸ್ಥೆಗಳು ಇದ್ದವು. ಈಗ ಅವುಗಳ ಸಂಖ್ಯೆ 310ಕ್ಕೇರಿದೆ. ಆಗ ₹9 ಕೋಟಿ ವಾರ್ಷಿಕ ಬಜೆಟ್‌ ರೂಪಿಸಲಾಗುತ್ತಿತ್ತು. ಈಗ ₹3,000 ಕೋಟಿ ದಾಟಿದೆ. ಶಿಕ್ಷಣ ಸಂಸ್ಥೆಯನ್ನು ಆರ್ಥಿಕವಾಗಿ ಸದೃಢಗೊಳಿಸಿದ್ದು ಪ್ರಭಾಕರ ಕೋರೆ ಅವರು ಎಂಬ ಹೆಮ್ಮೆ ವ್ಯಕ್ತಪಡಿಸುತ್ತಾರೆ ಸಂಸ್ಥೆಯ ನಿರ್ದೇಶಕರು.

ಕೋರೆ ಅವರ ನಾಯಕತ್ವದಲ್ಲಿ ದೇಶ–ವಿದೇಶಗಳಲ್ಲಿ ಶಾಲೆ– ಕಾಲೇಜು ಆರಂಭಿಸಲಾಗಿದೆ.ಅತ್ಯಾಧುನಿಕ ಸೌಲಭ್ಯ ಹೊಂದಿದ ಬೃಹತ್ ಆಸ್ಪತ್ರೆಗಳು ಮತ್ತು ಸಂಶೋಧನಾ ಸಂಸ್ಥೆಗಳು ಕ್ರಿಯಾಶೀಲವಾಗಿವೆ.

ಶೈಕ್ಷಣಿಕ ಕ ಕೋರೆ ಅವರ ಸೇವೆ ಪರಿಗಣಿಸಿ ಅಮೆರಿಕದ ಥಾಮಸ್ ಜಾಫರ್‌ಸನ್ ಯೂನಿವರ್ಸಿಟಿ ಗೌರವ ಡಾಕ್ಟರೇಟ್‌ ನೀಡಿದೆ. ಈ ಗೌರವ ಪಡೆದ ಮೊದಲ ಕನ್ನಡಿಗ ಅವರು. ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಹಲವು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ.

ಮರಾಠಿಮಯವಾಗಿದ್ದ ಬೆಳಗಾವಿಯಲ್ಲಿ ಕನ್ನಡತ್ವದ ಬೇರು ಗಟ್ಟಿಗೊಳಿಸುವಲ್ಲಿಯೂ ಕೋರೆ ಅವರು ಆಸ್ಥೆ ವಹಿಸಿದರು. ಕೆಎಲ್‍ಇ ಸ್ವಾಯತ್ತ ವಿಶ್ವವಿದ್ಯಾಲಯ, ಕೆಎಲ್‍ಇ ಟೆಕ್ನಿಕಲ್ ಯೂನಿವರ್ಸಿಟಿ, ಕೆಎಲ್‍ಇ– ಯುಎಸ್‍ಎಂ ಯೂನಿವರ್ಸಿಟಿಗಳನ್ನು ಸ್ಥಾಪಿಸಿದ್ದಾರೆ.

2006ರಲ್ಲಿ ಅವರ ಮೇಲೆ ಗುಂಡಿನ ದಾಳಿ ನಡೆಯಿತು. ಸಾವನ್ನೂ ಗೆದ್ದು ಬಂದ ಅವರು ಮೊದಲಿಗಿಂತಲೂ ಹೆಚ್ಚು ಕ್ರಿಯಾಶೀಲವಾದರು. ಇದಾಗಿ 18 ವರ್ಷ ಕಳೆದರೂ ಕಾರ್ಯಾಧ್ಯಕ್ಷ ಸ್ಥಾನದ ದಕ್ಷತೆಗೆ ಧಕ್ಕೆ ಬರದಂತೆ ನೋಡಿಕೊಂಡಿದ್ದಾರೆ.

ಅವರ ಶೈಕ್ಷಣಿಕ ಸೇವೆ ಹಾಗೂ ಸಾಮಾಜಿಕ ಬದ್ಧತೆ ಪರಿಗಣಿಸಿ ಸಂಸ್ಥೆಯವರು ‘ಅಷ್ಟಮ ಋಷಿ’ ಎಂದೇ ಅವರನ್ನು ಕರೆಯುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT