ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಕಾರಿನಲ್ಲಿದ್ದ 4 ಕೆ.ಜಿ ಚಿನ್ನ ನಾಪತ್ತೆ ಪ್ರಕರಣ: ಐಜಿಪಿ ಎತ್ತಂಗಡಿ

Last Updated 22 ಮೇ 2021, 1:11 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಯಮಕನಮರಡಿ ಬಳಿ ಪೊಲೀಸರು ಕಾರು ತಡೆದು ತಪಾಸಣೆ ನಡೆಸಿದ ನಂತರ, ಕಾರಲ್ಲಿದ್ದ 4 ಕೆ.ಜಿ. 900 ಗ್ರಾಂ. ಚಿನ್ನ ನಾಪತ್ತೆಯಾದ ದೂರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ವಿಚಾರಣೆ ಆರಂಭಿಸುತ್ತಿದ್ದಂತೆಯೇ, ಐಜಿಪಿ ಸೇರಿ ಇಲ್ಲಿನ ಕೆಲವು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಉತ್ತರ ವಲಯ ಐಜಿಪಿ ಎಚ್‌.ಜಿ. ರಾಘವೇಂದ್ರ ಸುಹಾಸ್ ಅವರನ್ನು ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗದ ಐಜಿಪಿ ಹುದ್ದೆಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇವರೊಂದಿಗೆ, ಗೋಕಾಕ ಉಪ ವಿಭಾಗದ ಡಿವೈಎಸ್ಪಿ ಜಾವೀದ್ ಇನಾಮದಾರ್‌ ಅವರನ್ನು ಐಎಸ್‌ಡಿಗೆ, ಡಿಎಸ್‌ಬಿ ಇನ್‌ಸ್ಪೆಕ್ಟರ್‌ ಗುರುರಾಜಕಲ್ಯಾಣಶೆಟ್ಟಿ ಅವರನ್ನು ಹುಬ್ಬಳ್ಳಿ–ಧಾರವಾಡದ ಪೊಲೀಸ್ ತರಬೇತಿ ಶಾಲೆಗೆ ಮತ್ತು ಯಮಕನಮರಡಿ ಪೊಲೀಸ್ ಠಾಣೆ ಪಿಎಸ್‌ಐ ರಮೇಶ ಪಾಟೀಲ ಅವರನ್ನು ಹುಬ್ಬಳ್ಳಿ–ಧಾರವಾಡದ ಸಿಇಎನ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಈ ನಡುವೆ, ಮಂಗಳೂರಿನ ಉದ್ಯಮಿಗೆ ಸೇರಿದ ಚಿನ್ನ ನಾಪತ್ತೆಯಾಗಿದ್ದು ಹೇಗೆ? ಎಂಬ ನಿಟ್ಟಿನಲ್ಲಿ ಡಿಟೆಕ್ಟಿವ್ ಎಸ್ಪಿ ರಾಘವೇಂದ್ರ ಹೆಗಡೆ ನೇತೃತ್ವದ ತಂಡವು ಶುಕ್ರವಾರವೂ ಇಲ್ಲೇ ಬೀಡು ಬಿಟ್ಟಿದ್ದು, ತನಿಖೆ ಮುಂದುವರಿಸಿದೆ.

ಜ.9ರಂದು ಕಾರು ತಡೆದು ಪರಿಶೀಲನೆ ನಡೆಸಿದ್ದರು. ಕಾರಿನ ಒಳಗೆ ಮಾಡಿಫೈ ಮಾಡಿದ್ದರಿಂದ ಸಂಶಯಾಸ್ಪದ ವಾಹನವೆಂದು ಪ್ರಕರಣ ದಾಖಲಾಗಿತ್ತು. ನ್ಯಾಯಾಲಯವು ಪ್ರಕರಣವನ್ನು ಮುಂದೂಡಿತ್ತು. ಹೀಗಾಗಿ, ಕಾರನ್ನು ಯಮಕನಮರಡಿ ಠಾಣೆಯಲ್ಲಿ ನಿಲ್ಲಿಸಲಾಗಿತ್ತು. ಏ.16ಕ್ಕೆ ಕಾರು ನ್ಯಾಯಾಲಯದಲ್ಲಿ ಬಿಡುಗಡೆಯಾದಾಗ ಮಾಲೀಕರು ಪರಿಶೀಲಿಸಿದಾಗ ಅದರಲ್ಲಿ ಚಿನ್ನ ಇಲ್ಲದಿರುವುದು ಗೊತ್ತಾಗಿದೆ. ‌

ಈ ನಡುವೆ, ಕಾರಿನ ಹಿಂಬದಿಯ ಗಾಜು ಒಡೆದು ಹೊಸ ಗಾಜು ಹಾಕಿಸಲಾಗಿತ್ತು. ಅನುಮಾನಗೊಂಡ ಕಾರಿನ ಮಾಲೀಕರು ಚಿನ್ನ ಕಳವಾಗಿದೆ ಎಂದು ದೂರು ನೀಡಿದ್ದರು. ಕಾರಿನ ಏರ್‌ಬ್ಯಾಗ್‌ನ ಜಾಗದಲ್ಲಿ ಚಿನ್ನ ಇಡಲಾಗಿತ್ತು ಎಂದು ತಿಳಿಸಿದ್ದರು. ವಿಚಾರಣೆ ನಡೆಸಿದ್ದ ಜಿಲ್ಲಾ ಪೊಲೀಸರು, ಪ್ರಕರಣದಲ್ಲಿ ಇಲಾಖೆಯವರೇ ಇರಬಹುದಾದ ಸಾಧ್ಯತೆಗಳು ಇರುವುದರಿಂದ ಹೆಚ್ಚಿನ ತನಿಖೆ ನಡೆಸುವಂತೆ ಕೋರಿ ಸಿಐಡಿಗೆ ಬರೆದಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ಶುರುವಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT