ಶನಿವಾರ, ಮೇ 21, 2022
23 °C
ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಾಹಿತಿ

ಮಕ್ಕಳಿಗಾಗಿ 882 ಹಾಸಿಗೆಗಳು ಮೀಸಲು: ಗೋವಿಂದ ಕಾರಜೋಳ ಮಾಹಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕೋವಿಡ್ 3ನೇ ಅಲೆ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮಕ್ಕಳಿಗಾಗಿ 882 ಹಾಸಿಗೆಗಳನ್ನು ಮೀಸಲಿಡಲಾಗಿದೆ. ಔಷಧಿಗಳೂ ಲಭ್ಯ ಇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಅಧಿಕಾರಿಗಳ ಸಭೆ ನಡೆಸಿದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಜ.1ರಿಂದ ಆರಂಭವಾದ ಅಲೆ ವೇಗವಾಗಿ ಹರಡುತ್ತಿದೆ. ನಿಯಂತ್ರಣಕ್ಕೆ ತಜ್ಞರ ಸಲಹೆ ಪಡೆದು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ 1,05,233 ಮಂದಿಯ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 6,383 ಮಂದಿಗೆ ಕೋವಿಡ್ ದೃಢಪಟ್ಟದೆ. 1,543 ಮಂದಿ ಗುಣಮುಖರಾಗಿ ಬಿಡುಗಡೆ ಆಗಿದ್ದಾರೆ. 7 ಮಂದಿ ಮೃತರಾಗಿದ್ದಾರೆ. 4,593 ಹೋಂ ಐಸೊಲೇಷನ್‌ನಲ್ಲಿದ್ದಾರೆ. 240 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ‘ ಎಂದು ಮಾಹಿತಿ ನೀಡಿದರು.

51 ಮಕ್ಕಳು ತಜ್ಞರು ಲಭ್ಯ:

‘ಪಾಸಿಟಿವಿಟಿ ಪ್ರಮಾಣ (ಸಕಾರಾತ್ಮಕ ಪ್ರಮಾಣ) ಶೇ 5.97ರಷ್ಟಿದೆ. ಗುಣಮುಖರಾದವರ ಪ್ರಮಾಣ ಶೇ 24.17ರಷ್ಟಿದೆ. ಕೋವಿಡ್ ಚಿಕಿತ್ಸೆಗಾಗಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 2,796  ಹಾಸಿಗೆಗಳು ಲಭ್ಯ ಇವೆ. 51 ಮಂದಿ ಚಿಕ್ಕ ಮಕ್ಕಳ ತಜ್ಞರು ಲಭ್ಯವಿದ್ದಾರೆ’ ಎಂದು ತಿಳಿಸಿದರು.

‘18 ವರ್ಷ ಮೇಲಿನ 36,11,869 ಮಂದಿಗೆ ಕೋವಿಡ್ ಮೊದಲ ಡೋಸ್ ನೀಡಲಾಗಿದೆ. ಶೇ 101.29ರಷ್ಟು ಸಾಧನೆಯಾಗಿದೆ. 31,25,205 ಮಂದಿ 2ನೇ ಡೋಸ್ ಪಡೆದಿದ್ದಾರೆ. ಶೇ 87.64ರಷ್ಟು ಸಾಧನೆಯಾಗಿದೆ. 15ರಿಂದ 17 ವರ್ಷದ 2,47,091 ಮಂದಿಗೆ ಲಸಿಕೆ ನೀಡಬೇಕಿದೆ. ಇದರಲ್ಲಿ 1,86,407 (ಶೇ 75.44) ಮಂದಿ ತೆಗೆದುಕೊಂಡಿದ್ದಾರೆ. ಕೊರೊನಾ ಮುಂಚೂಣಿ ಯೋಧರಿಗೆ ಮುನ್ನಚ್ಚರಿಕೆ ಡೋಸ್ ಕೊಡಲಾಗುತ್ತಿದೆ’ ಎಂದು ವಿವರಿಸಿದರು.

‘ಹಿರಿಯ ನಾಗರಿಕರು ಮುನ್ನೆಚ್ಚರಿಕೆ ಡೋಸ್ ಪಡೆಯಲು ಮುಂದೆ ಬರುತ್ತಿಲ್ಲ. ಹೀಗಾಗಿ, ಶೇ 29ರಷ್ಟು ಪ್ರಗತಿಯಷ್ಟೆ ಆಗಿದೆ. ಕೋವಿಡ್ ನಿರ್ವಹಣೆಗಾಗಿ ಜಿಲ್ಲೆಗೆ ₹ 46.89 ಕೋಟಿ ನೀಡಲಾಗಿತ್ತು. ಇದರಲ್ಲಿ 34.31 ಕೋಟಿ ಖರ್ಚಾಗಿದೆ. ₹ 12.58 ಕೋಟಿ ಜಿಲ್ಲಾಧಿಕಾರಿ ಖಾತೆಯಲ್ಲಿ ಲಭ್ಯವಿದೆ’ ಎಂದರು.

‘ರಾಮದುರ್ಗ ತಾಲ್ಲೂಕಿನಲ್ಲಿ ‘ರುಬೆಲ್ಲಾ’ ಲಸಿಕೆ ಪಡೆದಿದ್ದರಿಂದ ಸಾವಿಗೀಡಾದ ಮೂವರು ಶಿಶುಗಳ ಪೋಷಕರಿಗೆ ಪರಿಹಾರ ನೀಡುವ ಕುರಿತು ಚರ್ಚಿಸಲಾಗುವುದು. ಪ್ರಸ್ತಾವ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗುವುದು. ವೈದ್ಯರು ನಿರ್ಲಕ್ಷ್ಯ ವಹಿಸಿದ್ದರೆ ಅವರ ಮೇಲೂ ಕ್ರಮ ವಹಿಸಲಾಗುವುದು’ ಎಂದು ಭರವಸೆ ನೀಡಿದರು.

ಅಧಿಕಾರಿಗಳಿಗೆ ಸೂಚನೆ:

ಇದಕ್ಕೂ ಮುನ್ನ ಅಧಿಕಾರಿಗಳ ಸಭೆ ನಡೆಸಿದ ಅವರು, ‘ಈ ಭಾಗದ 7 ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ವೈದ್ಯಕೀಯ ಕೌಶಲ ನೀಡುವ ತರಬೇತಿ ಕಾರ್ಯವನ್ನು ಬೆಳಗಾವಿಯಲ್ಲಿ ನಡೆಸಲು ಪ್ರಸ್ತಾವ ಸಲ್ಲಿಸಬೇಕು’ ಎಂದರು.

‘ಜಾಂಬೋಟಿ ಜೇನು, ಶಹಾಪುರ ಸೀರೆ ಸೇರಿದಂತೆ ಸ್ಥಳೀಯ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ  ಒದಗಿಸಲು ಯೋಜನಾ ವರದಿಯನ್ನು ನಾಲ್ಕೈದು ದಿನಗಳಲ್ಲಿ ಸಲ್ಲಿಸಬೇಕು’ ಎಂದು ಸೂಚಿಸಿದರು.

‘ಸ್ಥಳೀಯವಾಗಿ ಲಭ್ಯವಿರುವ ಉತ್ಪನ್ನಗಳನ್ನು ಬಳಸಿಕೊಂಡು ತಯಾರಿಸುವ ಮೌಲ್ಯವರ್ಧಿತ ಪದಾರ್ಥಗಳಿಗೆ ದೇಶದಾದ್ಯಂತ ಮಾರುಕಟ್ಟೆ ಸೃಷ್ಟಿಸಲು ಬಜೆಟ್‌ನಲ್ಲಿ ಅವಕಾಶ ಕಲ್ಪಿಸಲು ಯೋಜನೆ ರೂಪಿಸಲಾಗುವುದು’ ಎಂದರು.

ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ. ಬೋರಲಿಂಗಯ್ಯ, ಜಿ.ಪಂ. ಸಿಇಒ ಎಚ್‌.ವಿ. ದರ್ಶನ್, ಎಸ್ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್ ಘಾಳಿ, ಬುಡಾ ಆಯುಕ್ತ ಪ್ರೀತಂ ನಸಲಾಪುರೆ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಮಹಾಂತೇಶ ಮುರಗೋಡ ಇದ್ದರು.

ಸೆಸ್‌ ಬಳಸಿಕೊಳ್ಳಬಹುದು: ಆರ್‌ಸಿ

‘ನಗರ ಸ್ಥಳೀಯ ಸಂಸ್ಥೆಗಳಿಂದ ಗ್ರಂಥಾಲಯ ಸೇರಿದಂತೆ ವಿವಿಧ ಬಗೆಯ ಬಾಕಿ ಇರುವ ಸೆಸ್‌ಗಳನ್ನು ಬಳಸಿಕೊಂಡು ಆರೋಗ್ಯ ಕ್ಷೇತ್ರದ ಸುಧಾರಣೆಗೆ ಬಳಸಬಹುದು’ ಎಂದು ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್ ಸಲಹೆ ನೀಡಿದರು.

ಸ್ಪಂದಿಸಿದ ಸಚಿವರು, ಕೂಡಲೇ ಸಭೆ ನಡೆಸಿ ಕ್ರಮ ಕೈಗೊಳ್ಳುವಂತೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಸೂಚಿಸಿದರು.

‘ಹೊರಗುತ್ತಿಗೆ ಆಧಾರದ ಮೇಲೆ‌ ಸಿಬ್ಬಂದಿ ನೇಮಕಾತಿಯನ್ನು ಕಿಯೋನಿಕ್ಸ್ ಮತ್ತಿತರ ಸರ್ಕಾರಿ ಸಂಸ್ಥೆಗಳ ಮೂಲಕ ಮಾಡಿಕೊಳ್ಳಲು ಆದ್ಯತೆ ನೀಡಬೇಕು’ ಎಂದು ಸಚಿವರು ತಿಳಿಸಿದರು.

ಸರಣಿ ಸಭೆಗೆ ಕ್ರಮ

ಪ್ರಮುಖ ಇಲಾಖೆಗಳ ಸರಣಿ ಸಭೆಗಳನ್ನು ಆಯೋಜಿಸುವ ಮೂಲಕ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಚುರುಕುಗೊಳಿಸಲಾಗುವುದು.

–ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು