ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಉಪಚುನಾವಣೆ| ಇದ್ದಲ್ಲಿಂದಲೇ ಮತದಾನ ಮಾಡುವ ವ್ಯವಸ್ಥೆಗೆ ನಿರಾಸಕ್ತಿ

54,936ದಲ್ಲಿ ಅರ್ಜಿ ಕೊಟ್ಟವರು 7,682 ಮಂದಿ ಮಾತ್ರ
Last Updated 2 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಬೆಳಗಾವಿ: ಕೋವಿಡ್–19 ಹೆಚ್ಚುತ್ತಿರುವುದರಿಂದಾಗಿ, ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಚುನಾವಣಾ ಆಯೋಗ ಜಾರಿಗೊಳಿಸಿರುವ ಹೊಸ ವ್ಯವಸ್ಥೆ ಸದ್ಬಳಕೆಗೆ ಚುನಾವಣಾ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿರುವುದು ಕಂಡುಬಂದಿದೆ.

ಕ್ಷೇತ್ರದಲ್ಲಿ 2,566 ಮತಗಟ್ಟೆಗಳಿದ್ದು, 18.07 ಲಕ್ಷ ಮತದಾರರಿದ್ದಾರೆ. ಮತಪತ್ರ ಪಡೆದು ಇದ್ದಲ್ಲಿಯೇ ಅಥವಾ ಸಮೀಪದಲ್ಲಿ ಮತದಾನ ಮಾಡಬಹುದಾದ ಅವಕಾಶವನ್ನು 80 ವರ್ಷಕ್ಕಿಂತ ಮೇಲಿನವರು, ಅಂಗವಿಕಲರು ಹಾಗೂ ಕೋವಿಡ್–19 ಶಂಕಿತರು ಮತ್ತು ಸೋಂಕಿತರಿಗೆ ನೀಡಲಾಗಿತ್ತು.

ಕ್ಷೇತ್ರದಲ್ಲಿ 41,596 ಮಂದಿ 80 ವರ್ಷಕ್ಕಿಂತ ಮೇಲಿನವರು, 12,414 ಅಂಗವಿಕಲರು ಹಾಗೂ 386 ಕೋವಿಡ್ ಸೋಂಕಿತರು ಸೇರಿ ಒಟ್ಟು 54,936 ಅಂತಹ ಅರ್ಹ ಮತದಾರರನ್ನು ‘ಅನುಪಸ್ಥಿತಿ ಮತದಾರರು’ ಎಂದು ಗುರುತಿಸಲಾಗಿದೆ. ಈ ಪೈಕಿ ನಿಗದಿತ ‘12ಡಿ ನಮೂನೆ’ಯನ್ನು ಚುನಾವಣಾ ಸಿಬ್ಬಂದಿಯು ವಿತರಿಸಿದ್ದು 43,957 ಮಂದಿಗೆ ಮಾತ್ರ. ಅವರಲ್ಲಿ ನಮೂನೆಯನ್ನು ಭರ್ತಿ ಮಾಡಿ, ನಿಯಮಾವಳಿಯಂತೆ ಮತಪತ್ರಕ್ಕೆ ಬೇಡಿಕೆ ಸಲ್ಲಿಸಿದವರು 7,682 ಮಂದಿ (6,195 ಮಂದಿ 80 ವರ್ಷ ಮೀರಿದವರು ಹಾಗೂ 1,485 ಅಂಗವಿಕಲರು)ಯಷ್ಟೆ.

ಜಾಗೃತಿ ಕೊರತೆ

ಜಾಗೃತಿಯ ಮತ್ತು ಪ್ರಚಾರದ ಕೊರತೆ ಹಾಗೂ ಸಂಬಂಧಿಸಿದ ಮತಗಟ್ಟೆ ಅಧಿಕಾರಿಗಳ ನಿಷ್ಕಾಳಜಿಯಿಂದಾಗಿ ‘ಅನುಪಸ್ಥಿತಿ ಮತದಾರರು’ ಕೂಡ ಮತಗಟ್ಟೆಗಳಿಗೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. 386 ಕೋವಿಡ್ ಸೋಂಕಿತರನ್ನು ಗುರುತಿಸಲಾಗಿದ್ದು, ಅವರಲ್ಲಿ 257 ಮಂದಿಗೆ 12ಡಿ ನಮೂನೆ ನಿಡಲಾಗಿತ್ತು. ಈ ಪೈಕಿ ಒಬ್ಬರಿಂದಲೂ ಮತಗಟ್ಟೆ ಅಧಿಕಾರಿಗಳು ನಮೂನೆ ಪಡೆದಿಲ್ಲ. ಅಂದರೆ, ಅವರು ಮತಪತ್ರಕ್ಕೆ (ಬ್ಯಾಲೆಟ್ ಪೇಪರ್‌) ಕೋರಿಕೆ ಸಲ್ಲಿಸಿಲ್ಲ. ಹೀಗಾಗಿ, ಅವರು ಮತಗಟ್ಟೆಗಳಿಗೆ ಬರಬಹುದು ಅಥವಾ ಮತದಾನದ ಹಕ್ಕು ಚಲಾಯಿಸುವುದರಿಂದ ದೂರವೇ ಉಳಿಯಬಹುದು.

‘ಅನುಪಸ್ಥಿತಿ ಮತದಾರರು’ ಮನೆಗೆ ಸಮೀಪದಲ್ಲೇ ಮತ ಚಲಾಯಿಸಲು ಕೊಟ್ಟಿದ್ದ ಅವಕಾಶ ಬಳಕೆಯಾಗದೇ, ಆಯೋಗದ ಉದ್ದೇಶಕ್ಕೆ ಹಿನ್ನಡೆಯಾಗಿ ಪರಿಣಮಿಸುವ ಸಾಧ್ಯತೆ ಇದೆ.

ವಿಡಿಯೊ ಮಾಡಲಾಗುವುದು

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ್, ‘ಕೋವಿಡ್ ಸೋಂಕು ಹರಡದಂತೆ ನಿಯಂತ್ರಿಸುವ ಉದ್ದೇಶದಿಂದ ‘ಅನುಪಸ್ಥಿತಿ ಮತದಾರರ’ ಬಳಿಗೇ ಹೋಗಿ ಮತ ಪಡೆಯುವ ಪ್ರಕ್ರಿಯೆ ಇದಾಗಿದೆ. 12ಡಿ ನಮೂನೆ ಪಡೆದುಕೊಳ್ಳುವ ಪ್ರಕ್ರಿಯೆ ಮಾರ್ಚ್‌ 28ಕ್ಕೆ ಕೊನೆಯಾಗಿದೆ. ಅವರಿಗೆ ಏ.5ರಿಂದ ಮತಪತ್ರ ನೀಡಲಾಗುವುದು. ಇದಕ್ಕಾಗಿ ಆಯಾ ವ್ಯಾಪ್ತಿಯಲ್ಲಿ ಒಂದು ತಂಡವೇ (ಬಿಎಲ್‌ಇ, ಚುನಾವಣಾ ವೀಕ್ಷಕ, ಪೊಲೀಸ್ ಸಿಬ್ಬಂದಿ ಹಾಗೂ ಅಭ್ಯರ್ಥಿಗಳ ಪರ ನೋಂದಾಯಿತ ಪ್ರತಿನಿಧಿ) ಕಾರ್ಯನಿರ್ವಹಿಸಲಿದೆ. ಪ್ರಕ್ರಿಯೆಯನ್ನು ವಿಡಿಯೊ ಮಾಡಲಾಗುವುದು. ಏ. 17ರಂದು ಮತದಾನ ನಿಗದಿಯಾಗಿದದೆ. ಅದಕ್ಕೂ ಒಂದು ದಿನ ಮುನ್ನವೇ ಅನುಪಸ್ಥಿತಿ ಮತದಾರರಿಂದ ಮತಪತ್ರ ಪಡೆಯುವ ಕಾರ್ಯ ಪೂರ್ಣಗೊಳಿಸಲಾಗುವುದು’ ಎಂದು ತಿಳಿಸಿದರು.

‘ಮತದಾರರ ಪಟ್ಟಿಯಲ್ಲಿ, ಮತಪತ್ರ ಪಡೆದು ಮತ ಚಲಾಯಿಸಿದವರ ಹೆಸರಿನ ಮುಂದೆ ಮಾರ್ಕ್‌ ಮಾಡಲಾಗುತ್ತದೆ. ಉಳಿದವರು ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಬಹುದು. ಹಿರಿಯ ನಾಗರಿಕರು, ಅಂಗವಿಕಲರಿಗೆ ಆದ್ಯತೆ ಕೊಡಲಾಗುವುದು. ಕೋವಿಡ್ ಸೋಂಕಿತರಿಗೆ ಸಂಜೆ 4ರ ನಂತರ ಅವಕಾಶ ಇರಲಿದೆ’ ಎಂದು ಸ್ಪಷ್ಟಪಡಿಸಿದರು.

***

ಅಂಕಿ ಅಂಶ

54,936:ಗುರುತಿಸಲಾದ ಒಟ್ಟು ‘ಅನುಪಸ್ಥಿತಿ ಮತದಾರರು’

43,957:ಚುನಾವಣಾ ಸಿಬ್ಬಂದಿಯಿಂದ 12ಡಿ ನಮೂನೆ ವಿತರಿಸಿದ ಸಂಖ್ಯೆ

7,682:ಮತಪತ್ರಕ್ಕೆ ಬೇಡಿಕೆ ಇಟ್ಟು 12ಡಿ ನಮೂನೆ ನೀಡಿದವರು

386:ಗುರುತಿಸಿದ ಕೋವಿಡ್ ಸೋಂಕಿತರು

***

ಕ್ಷೇತ್ರದಲ್ಲಿ 12ಡಿ ಅರ್ಜಿ ನಮೂನೆ ವಿತರಿಸಿದ ಹಾಗೂ ಸ್ವೀಕರಿಸಿದ ಪ್ರಮಾಣ ಬಹಳ ಕಡಿಮೆ ಇದೆ. ಇದಕ್ಕೆ ಬಿಎಲ್ಒಗಳಿಂದ ವಿವರಣೆ ಕೇಳಲಾಗುವುದು. ಈ ಅವಕಾಶದ ಬಗ್ಗೆ ಪ್ರಚಾರ ಮಾಡಲಾಗಿತ್ತು. ರಾಜಕೀಯ ಪಕ್ಷದವರಿಗೂ ತಿಳಿಸಲಾಗಿತ್ತು

- ಎಸ್. ಯೋಗೇಶ್ವರ್, ಹೆಚ್ಚುವರಿ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT