ಬೆಳಗಾವಿ: ದೋಷರಹಿತ ಜಾನುವಾರು ಗಣತಿಗಾಗಿ ಕೇಂದ್ರ ಸರ್ಕಾರ ‘ಲೈವ್‌ಸ್ಟಾಕ್ ಸೆನ್ಸಸ್’ ಎಂಬ ‘ಆ್ಯಪ್’ ಸಿದ್ಧಪಡಿಸಿದೆ. ಅದರ ನೆರವಿನಿಂದ ಸೆಪ್ಟೆಂಬರ್‌ನಿಂದ ಡಿಸೆಂಬರ್‌ವರೆಗೆ ರಾಜ್ಯದಲ್ಲಿ ಮೂರು ಹಂತದ ಜಾನುವಾರು ಗಣತಿ ನಡೆಯಲಿದೆ.
ದೇಶದ ಜಿಡಿಪಿಯಲ್ಲಿ ಶೇ 4.1ರಷ್ಟು ಜಾನುವಾರುಗಳ ಕೊಡುಗೆ ಇದೆ. ಹಾಲು ಉತ್ಪಾದನೆಯಲ್ಲಿ ದೇಶ ಮೊದಲ ಸ್ಥಾನದಲ್ಲಿದೆ. ಇದರ ಮಹತ್ವ ಅರಿತ ಕೇಂದ್ರ ಸರ್ಕಾರ ನಿಖರ ಗಣತಿಗೆ ಸುಧಾರಿತ ತಂತ್ರಜ್ಞಾನ ಬಳಸುತ್ತಿದೆ.
1919ರಿಂದ ಪ್ರತಿ ಐದು ವರ್ಷಕ್ಕೊಮ್ಮೆ ಜಾನುವಾರು ಗಣತಿಯಂತೆ ಈವರೆಗೆ 20 ಬಾರಿ ಗಣತಿ ನಡೆದಿದೆ. ಈ ಹಿಂದೆ ಪುಸ್ತಕದಲ್ಲಿ 200 ಕಾಲಂ ಭರ್ತಿ ಮಾಡಿದರೂ ನಿಖರ ದತ್ತಾಂಶಗಳು ಸಿಗುತ್ತಿರಲಿಲ್ಲ. ಜಾನುವಾರುಗಳ ಸಂಖ್ಯೆ ದಾಖಲೀಕರಣ ಕಷ್ಟವಾಗುತಿತ್ತು. ಈ ಎಲ್ಲಾ ಸವಾಲುಗಳನ್ನು ಹೊಸ ‘ಆ್ಯಪ್’ ಸುಧಾರಿಸಿದೆ. ಜಾನುವಾರುಗಳ ಸಂಪೂರ್ಣ ವಿವರ 16 ಕಾಲಂಗಳಲ್ಲಿ ಭರ್ತಿ ಮಾಡಬಹುದು.
ಜಾನುವಾರು ತಳಿ, ಲಿಂಗ, ವಯಸ್ಸು, ಬಣ್ಣ, ಸದೃಢತೆ, ಫಲವತ್ತತೆ ದರ, ರೋಗ, ಔಷಧೋಪಚಾರ, ಲಸಿಕಾಕರಣ, ಮಾಲೀಕರು, ಅವರ ಜಾತಿ, ಜಾನುವಾರು ಸಾಕಣೆ ಮಾಡುವ ಮಹಿಳೆಯರ ಸಂಖ್ಯೆ ಸೇರಿ ಸಂಪೂರ್ಣ ವಿವರ ಇದರಲ್ಲಿ ದಾಖಲಿಸಬಹುದು. ಜಾನುವಾರು ಚಿತ್ರವನ್ನೂ ಅಪ್ಲೋಡ್ ಮಾಡಬಹುದು. ಇದರಿಂದ ಪುನರಾವರ್ತನೆ ಆಗುವ ಅಥವಾ ಗಣತಿಯಿಂದ ಹೊರಗುಳಿಯುವ ಸಾಧ್ಯತೆ ಇರುವುದಿಲ್ಲ.
ಸ್ಮಾರ್ಟ್‌ಫೋನ್ ಮೂಲಕ ಸುಧಾರಿತ ತಂತ್ರಜ್ಞಾನ ಬಳಸಿ ಮೊದಲ ಬಾರಿಗೆ ಗಣತಿ ನಡೆಯುತ್ತಿದೆ. ಗ್ರಾಮಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಸಾಮಾನ್ಯ. ಹೀಗಾಗಿ, ನೆಟ್‌ವರ್ಕ್ ಇಲ್ಲದಿದ್ದರೂ ಆ್ಯಪ್‌ನಲ್ಲಿ ಮಾಹಿತಿ ಸಂಗ್ರಹಿಸಿ ಇಡುವಂತೆ ವಿನ್ಯಾಸಗೊಳಿಸಲಾಗಿದೆ. ನೆಟ್‌ವರ್ಕ್ ಬಂದ ನಂತರ ಅದನ್ನು ಸರ್ವರ್‌ಗೆ ಅಪ್ಲೋಡ್ ಮಾಡಬಹುದು.
‘ಸರ್ಕಾರ ಭವಿಷ್ಯದಲ್ಲಿ ಯೋಜನೆಗಳು, ನೀತಿ ರೂಪಿಸಲು ಈ ಗಣತಿ ಪ್ರಯೋಜನವಾಗಲಿದೆ. ರೈತರು, ಜಾನುವಾರು ಸಾಕಣೆದಾರರ ಸಮಸ್ಯೆ ನಿವಾರಣೆ, ಬೇರೆ ದೇಶಗಳ ಜೊತೆ ಹೋಲಿಕೆ, ರೋಗ ನಿಯಂತ್ರಣ, ಸಮುದಾಯದ ಅಭಿವೃದ್ಧಿ, ಅರ್ಥಿಕ ನೀತಿ ಸೇರಿ ಎಲ್ಲ ಹಂತಗಳಲ್ಲೂ ನೆರವಾಗಲಿದೆ. ದೇಶದ ಜಿಡಿಪಿಗೆ ಜಾನುವಾರುಗಳ ಕೊಡುಗೆ ಎಷ್ಟು ಎಂಬ ನಿಖರ ಮಾಹಿತಿ ಸಿಗಲಿದೆ’ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ರಾಜೀವ ಕೊಲೇರ ‘ಪ್ರಜಾವಾಣಿ’ಗೆ ತಿಳಿಸಿದರು.
ಒಂದು ಪ್ರಾಣಿಯೂ ಹೊರಗುಳಿಯುವಂತಿಲ್ಲ:
ದನ, ಎತ್ತು, ಎಮ್ಮೆ, ಕೋಣ, ಆಡು, ಕುರಿ, ಕೋಳಿ, ನಾಯಿ, ಕುದುರೆ, ಹಂದಿ, ಬಾತುಕೋಳಿ, ಎಮು ಹಕ್ಕಿಗಳ ಮಾಹಿತಿ ಸಂಗ್ರಹಿಸಲಾಗುವುದು. ಬೀಡಾಡಿ ದನ, ಬೀದಿನಾಯಿ, ಗೋಶಾಲೆ, ದೇವಸ್ಥಾನದ ದನಗಳು, ಸಾಕಿದ ಆನೆಗಳನ್ನೂ ಪರಿಗಣಿಲಾಗುತ್ತದೆ. 10ಕ್ಕಿಂತ ಹೆಚ್ಚು ದನ, 1,000ಕ್ಕಿಂತ ಹೆಚ್ಚು ಕೋಳಿ, 50ಕ್ಕಿಂತ ಹೆಚ್ಚು ಆಡು ಸಾಕಣೆ ಮಾಡಿದ್ದರೆ ಅದನ್ನು ಫಾರ್ಮ್ ಎಂದು ಗುರುತಿಸಲಾಗುತ್ತದೆ.
‘ಜಿಲ್ಲೆಯಲ್ಲಿ 11,60,241 ಮನೆಗಳಿವೆ. 247 ಗಣತಿದಾರರು ಮತ್ತು 54 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಒಬ್ಬೊಬ್ಬರು ಗ್ರಾಮೀಣ ಪ್ರದೇಶದಲ್ಲಿ 4,500 ಮತ್ತು ನಗರ ಪ್ರದೇಶದಲ್ಲಿ 6,000 ಮನೆಗಳಿಗೆ ಭೇಟಿ ನೀಡಬೇಕು. ಭೇಟಿ ನೀಡಿದ ಬಗ್ಗೆ ಮನೆಗೆ ಸ್ಟಿಕರ್ ಅಂಟಿಸಬೇಕು’ ಎಂದೂ ಡಾ.ಕೊಲೇರ ತಿಳಿಸಿದರು.
ಜಿಲ್ಲೆಯಲ್ಲಿ 11 ಲಕ್ಷಕ್ಕೂ ಹೆಚ್ಚು ಮನೆಗಳಿವೆ. ಪ್ರತಿ ಮನೆಗೂ ಗಣತಿದಾರರು ಭೇಟಿ ನೀಡಿ ಮಾಹಿತಿ ಪಡೆಯುವುದು ಕಡ್ಡಾಯ ಮಾಡಲಾಗಿದೆ
-ರಾಹುಲ್ ಶಿಂಧೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಲ್ಲಾ ಪಂಚಾಯಿತಿ ಬೆಳಗಾವಿ
ಗಣತಿದಾರರು ಮೇಲ್ವಿಚಾರಕರು ಹಾಗೂ ಜಿಲ್ಲಾ ನೋಡಲ್ ಅಧಿಕಾರಿ; ಹೀಗೆ ಮೂರು ಹಂತಗಳಲ್ಲಿ ಗಣತಿ ದತ್ತಾಂಶಗಳನ್ನು ಪರಿಶೀಲಿಸಲಾಗುತ್ತದೆ
-ಡಾ.ರಾಜೀವ ಕೊಲೇರ ಉಪ ನಿರ್ದೇಶಕ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಬೆಳಗಾವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.