ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಾಠಿ ಭಾಷಿಕರೆಲ್ಲರೂ ಒಂದಾಗಿ ಹೋರಾಡಬೇಕು: ಮನೋಜ್‌ ಜರಾಂಗೆ ಪಾಟೀಲ

Published 30 ಏಪ್ರಿಲ್ 2024, 16:18 IST
Last Updated 30 ಏಪ್ರಿಲ್ 2024, 16:18 IST
ಅಕ್ಷರ ಗಾತ್ರ

ಬೆಳಗಾವಿ: ‘ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದ ಪ್ರಕರಣ ಇತ್ಯರ್ಥವಾಗಿ, ನಮ್ಮ ಹೋರಾಟದಲ್ಲಿ ಸಫಲತೆ ಕಾಣಲು ರಾಜ್ಯದಲ್ಲಿರುವ ಮರಾಠಿ ಭಾಷಿಕರೆಲ್ಲರೂ ಒಂದಾಗಿ ಹೋರಾಡಬೇಕು’ ಎಂದು ಮರಾಠ ಮೀಸಲಾತಿ ಹೋರಾಟಗಾರ ಮನೋಜ್‌ ಜರಾಂಗೆ ಪಾಟೀಲ ಹೇಳಿದರು.

ಇಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮಂಗಳವಾರ ಹಮ್ಮಿಕೊಂಡಿದ್ದ ರ್‍ಯಾಲಿಯಲ್ಲಿ ಅವರು ಮಾತನಾಡಿದರು.

‘ನಾನು ಗಡಿ ವಿವಾದ ಹೋರಾಟಕ್ಕೆ ಬರಬೇಕಾದರೆ, ಈ ಪ್ರಕರಣದ ಕುರಿತು ವಿಸ್ತೃತವಾಗಿ ಅಧ್ಯಯನ ಮಾಡುತ್ತೇನೆ. ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿರುವ ಗಡಿ ಹೋರಾಟಗಾರರಿಂದ ಸಮಗ್ರವಾಗಿ ಮಾಹಿತಿ ಪಡೆಯುತ್ತೇನೆ. ನಂತರವೇ ಇದರಲ್ಲಿ ಪಾಲ್ಗೊಳ್ಳುತ್ತೇನೆ. ಒಮ್ಮೆ ಹೋರಾಟಕ್ಕೆ ಇಳಿದರೆ, ಸಮಸ್ಯೆ ಇತ್ಯರ್ಥವಾಗುವವರೆಗೂ ಹಿಂದೆ ಸರಿಯುವುದಿಲ್ಲ’ ಎಂದರು.

‘ಮಹಾರಾಷ್ಟ್ರದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರು ನಮ್ಮ ಪರವಾಗಿರಲಿಲ್ಲ. ಆದರೂ, ಸಮುದಾಯದವರೆಲ್ಲ ಒಂದಾಗಿ ಬೀದಿಗೆ ಇಳಿದಿದ್ದರಿಂದ ಮೀಸಲಾತಿ ಹೋರಾಟದಲ್ಲಿ ಯಶಸ್ವಿಯಾಗಿದ್ದೇವೆ. ಇಲ್ಲಿಯೂ ನಿಮ್ಮ ಬೇಡಿಕೆಗಳು ಈಡೇರಬೇಕಾದರೆ ಮರಾಠಿ ಮಾತನಾಡುವವರು ಇದೇ ರೀತಿಯ ಒಗ್ಗಟ್ಟು ಪ್ರದರ್ಶಿಸಬೇಕು. ಪ್ರತಿ ಕುಟುಂಬದಿಂದ ಒಬ್ಬ ವ್ಯಕ್ತಿ ಬೀದಿಗಿಳಿಯುವಂತೆ ನೋಡಿಕೊಳ್ಳಬೇಕು’ ಎಂದು ಕರೆ ನೀಡಿದರು.

‘ಗಡಿಭಾಗದಲ್ಲಿನ ಮರಾಠಿ ಭಾಷಿಕರ ಸಮಸ್ಯೆಗಳು ನನ್ನ ಗಮನಕ್ಕೆ ಬಂದಿವೆ. ಅವುಗಳನ್ನು ಈಡೇರಿಸಲು ಪ್ರಯತ್ನಿಸುತ್ತೇನೆ. ಇದಕ್ಕಾಗಿ ಮರಾಠಿ ಭಾಷಿಕರೆಲ್ಲರೂ ಮೊದಲು ಒಗ್ಗೂಡಬೇಕಿದೆ’ ಎಂದರು.

‘ನಾನು ಮರಾಠ ಸಮುದಾಯದವರ ಸಾಮಾಜಿಕ ಅಗತ್ಯಗಳಿಗಾಗಿ ಕೆಲಸ ಮಾಡುತ್ತೇನೆಯೇ ಹೊರತು; ರಾಜಕೀಯ ಲಾಭಕ್ಕಾಗಿ ಅಲ್ಲ. ದೇಶದಾದ್ಯಂತ ಇರುವ ಮರಾಠ ಸಮುದಾಯದವರ ಸಮಸ್ಯೆಗಳ ಪರಿಹಾರಕ್ಕಾಗಿ ನಾನು ಆಂದೋಲನ ಕೈಗೊಳ್ಳುತ್ತೇನೆ’ ಎಂದು ಕರೆ ಕೊಟ್ಟರು.

ಮುಖಂಡರಾದ ರಮಾಕಾಂತ್‌ ಕೊಂಡೂಸ್ಕರ್‌, ಮನೋಹರ ಕಿಣೇಕರ, ಮಾಲೋಜಿರಾವ್‌ ಅಷ್ಟೇಕರ, ರಂಜೀತ್‌ ಚವ್ಹಾಣಪಾಟೀಲ, ವಿಕಾಸ ಕಲಘಟಗಿ ಇತರರಿದ್ದರು.

ಇದಕ್ಕೂ ಮುನ್ನ, ಮನೋಜ್‌ ಜರಾಂಗೆ ಪಾಟೀಲ ಅವರನ್ನು ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು.

ನಾಡವಿರೋಧಿ ಘೋಷಣೆ: ಅಪಾರ ಸಂಖ್ಯೆಯಲ್ಲಿ ಸೇರಿದ್ದ ಮರಾಠಿಗರು, ‘ಬೆಳಗಾವಿ, ನಿಪ್ಪಾಣಿ, ಖಾನಾಪುರ, ಕಾರವಾರ, ಬೀದರ್‌, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ಝಾಲಾಚ್‌ ಪಾಹಿಜೆ’ ಎಂದು ಘೋಷಣೆಗಳನ್ನು ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT