ಬುಧವಾರ, ಮೇ 25, 2022
22 °C
ಅಂತರರಾಜ್ಯ ಕುಸ್ತಿಪಟುಗಳ ಶಕ್ತಿ ಪ್ರದರ್ಶನ, ಜಾನುವಾರು ಜಾತ್ರೆ

ಬೈಲಹೊಂಗಲ: ಮರಡಿ ಬಸವೇಶ್ವರ ಜಾತ್ರೆ ಸಂಭ್ರಮ

ರವಿ ಎಂ.ಹುಲಕುಂದ Updated:

ಅಕ್ಷರ ಗಾತ್ರ : | |

Prajavani

ಬೈಲಹೊಂಗಲ: ಹಿಂದೂ–ಮುಸ್ಲಿಮರ ಭಾವೈಕ್ಯದ ಸಂಕೇತವಾಗಿರುವ ಪಟ್ಟಣದ ಇತಿಹಾಸ ಪ್ರಸಿದ್ಧ ಮರಡಿ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ನ.22ರಿಂದ 26ರವರೆಗೆ ವಿಜೃಂಭಣೆಯಿಂದ ನೆರವೇರಲಿದ್ದು, ಸಂಭ್ರಮ ಮನೆ ಮಾಡಿದೆ.

ಕೊರೊನಾ ಹಿನ್ನಲೆಯಲ್ಲಿ ಎರಡು ವರ್ಷ ಜಾತ್ರೆಯನ್ನು ಸರಳವಾಗಿ ಮಾಡಲಾಗಿತ್ತು. ಈಗ ಕೊರೊನಾ ಸೋಂಕು ಕಡಿಮೆಯಾಗಿದ್ದು, ಜಾತ್ರೆಗೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಉತ್ತರ ಕರ್ನಾಟಕದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿರುವ ಈ ಜಾತ್ರೆಗೆ ಅಪಾರ ಭಕ್ತರು ಬರುತ್ತಾರೆ. ಬೇರೆಬೇರೆ ಪ್ರದೇಶಗಳ ಭಕ್ತರು ಕೂಡ ಜಾತ್ರೆಗೆ ತಂಡೋಪ ತಂಡವಾಗಿ ಬರುತ್ತಿದ್ದಾರೆ.

ಕೊರೊನಾ ಹಾವಳಿಯಿಂದ ದೇಶ, ವಿದೇಶ, ಹೊರ ರಾಜ್ಯಗಳಲ್ಲಿದ್ದ ನೌಕರರು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿರುವುದರಿಂದ ಈ ಬಾರಿಯ ಮರಡಿ ಬಸವೇಶ್ವರ ದೇವಸ್ಥಾನದ ಜಾತ್ರೆ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ಹರಹರ ಮಹಾದೇವ, ಮರಡಿ ಬಸವೇಶ್ವರ ಮಹರಾಜಕೀ ಜೈ ಎಂದು ರಥೋತ್ಸವ ಎಳೆದು ಪುನೀತ ಭಾವ ತಳೆಯಲು ಕಾತರರಾಗುತ್ತಿದ್ದಾರೆ. ಎಲ್ಲಿ ನೋಡಿದರಲ್ಲಿ ಜಾತ್ರೆಯ ವೈಭವ, ಹಬ್ಬದ ಕಳೆಗಟ್ಟಿದೆ. 

ರಥೋತ್ಸವ ಆಕರ್ಷಣೆ: ನ.22ರಂದು ಸಂಜೆ 5ಕ್ಕೆ ನಡೆಯುವ ಮಹಾರಥೋತ್ಸವ ಕಣ್ಣಿಗೆ ಹಬ್ಬ. ಇದನ್ನು ಕಣ್ತುಂಬಿಕೊಳ್ಳುವುದು ಪುಣ್ಯ ಎಂದು ಭಕ್ತರ ನಂಬಿಕೆ. ಶ್ರದ್ಧೆ, ಭಕ್ತಿಯಿಂದ ತೇರಿಗೆ ಎಸೆಯುವ ಹೂವು, ಹಣ್ಣು, ಕಾರಿಕು ಸಮರ್ಪಣೆ ಗಮನಸೆಳೆಯುತ್ತದೆ. ಭಕ್ತರ ಸಹಾಯದಿಂದ ತೇರನ್ನು ಎಳೆದು ತಂದು ದೇವಸ್ಥಾನಕ್ಕೆ ನಿಲ್ಲಿಸಲಾಗುತ್ತದೆ. ಮಹಾರಥೋತ್ಸವ ಸಾಗುವ ದೃಶ್ಯ ರೋಮಾಂಚನಗೊಳಿಸುತ್ತದೆ. ಎಪಿಎಂಸಿ ಕಾರ್ಮಿಕರು ಪ್ರತಿ ವರ್ಷ ಬಗೆ, ಬಗೆಯ ಹೂಮಾಲೆಗಳನ್ನು ತಯಾರಿಸಿ ರಥೋತ್ಸವಕ್ಕೆ ಅರ್ಪಿಸುತ್ತಾರೆ. ಉಳವಿ ಚನ್ನಬಸವೇಶ್ವರ ದೇವಸ್ಥಾನದಿಂದ ಹೂ ಮಾಲೆ ಬಂದ ತಕ್ಷಣ ರಥ ಎಳೆಯಲಾಗುತ್ತದೆ.

ಹಿನ್ನೆಲೆ: ಗುರು ಚನ್ನಬಸವಣ್ಣನವರು ವಿಶ್ರಮಿಸಿ ಮುಂದೆ ಸಾಗಿದ ನೆಲವೇ ಇಂದಿನ ಮರಡಿ ಬಸವೇಶ್ವರ ದೇವಸ್ಥಾನವಾಗಿದೆ. ಕಲ್ಯಾಣದ ಶರಣರು ಕ್ರಾಂತಿಯ ಸಮಯದಲ್ಲಿ ಬಿಜ್ಜಳ ರಾಜನ ಸೈನ್ಯದೊಂದಿಗೆ ಸೆಣಸಾಡಿ ಬಂದು ಇಲ್ಲಿ ತಂಗಿದ್ದರು. ಇದರಿಂದ ಸಾಕ್ಷಾತ ಉಳವಿ ಚನ್ನಬಸವೇಶ್ವರ ನೆಲೆ ನಿಂತ ಸ್ಥಾನವಾಗಿದೆ ಎನ್ನುತ್ತಾರೆ ಹಿರಿಯರು.

ಪ್ರಮುಖ ಆಕರ್ಷಣೆ ಬೃಹತ್ ಉಯ್ಯಾಲೆಗಳು, ಆಟಿಕೆ ಸಾಮಾನುಗಳು. ಬಣ್ಣ, ಬಣ್ಣದ ಬಳೆಗಳು ಮಹಿಳೆಯರನ್ನು ಕೈಬಿಸಿ ಕರೆಯುತ್ತವೆ. ಜಾತ್ರೆ ಅಂಗವಾಗಿ ಪ್ರತಿ ಮನೆ, ಮನಗಳಲ್ಲಿ ಗುರು ಬಸವಣ್ಣನ ಧ್ಯಾನ ಮಾಡಲಾಗುತ್ತದೆ. ಅಂತರರಾಜ್ಯ ಕುಸ್ತಿಪಟುಗಳ ಜಂಗೀ ನಿಖಾಲಿ ಕುಸ್ತಿ, ಜಾನುವಾರು ಜಾತ್ರೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಜನರನ್ನು ಆಕರ್ಷಿಸಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು