ಭಾನುವಾರ, ಮೇ 22, 2022
22 °C
ಕೊಕ್ಕೊ ಟೂರ್ನಿ ಉದ್ಘಾಟನೆ ಇಂದು

ಮೂಡಲಗಿ: ಕೊಕ್ಕೊ ಪಟುಗಳ ಬೀಡು ನಾಗನೂರ

ಬಾಲಶೇಖರ ಬಂದಿ Updated:

ಅಕ್ಷರ ಗಾತ್ರ : | |

Prajavani

ಮೂಡಲಗಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ನಾಗನೂರ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಕೊಕ್ಕೊ ಸಂಘದಿಂದ ಮೇ 7ರಿಂದ 9ರವರೆಗೆ ಆಯೋಜಿಸಿರುವ ಹೊನಲು ಬೆಳಕಿನ ಕೊಕ್ಕೊ ಟೂರ್ನಿಗೆ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆ ಆವರಣದಲ್ಲಿನ ಮೈದಾನ ಸಿದ್ಧಗೊಂಡಿದೆ.

18 ವಯಸ್ಸಿನ ಒಳಗಿನವರ 30 ತಂಡಗಳು ಹಾಗೂ ಬಾಲಕಿಯರ 16 ತಂಡಗಳು ಭಾಗವಹಿಸಲಿವೆ. 5ಸಾವಿರ ಪ್ರೇಕ್ಷಕರು ಕುಳಿತು ನೋಡುವಂತೆ ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ.

ನಾಗನೂರದಲ್ಲಿ ಮನೆಗೊಬ್ಬ ಕೊಕ್ಕೊ ಕ್ರೀಡಾ ಪಟು ಇದ್ದಾರೆ. ಕೊಕ್ಕೊ ಕಾಶಿ ಎನಿಸಿದೆ. ಇಲ್ಲಿ ತರಬೇತಿ ಪಡೆದ ನೂರಾರು ಕ್ರೀಡಾಪಟುಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಅನೇಕರು ವಿಶ್ವವಿದ್ಯಾಲಯದ ಬ್ಲೂ ಎನಿಸಿದ್ದಾರೆ ಹಾಗೂ ಖೋಲೋ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡು ಕೀರ್ತಿ ತಂದಿದ್ದಾರೆ.

ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸಗೌಡ ಪಾಟೀಲ ಅವರು ಕೊಕ್ಕೊ ಆಟಕ್ಕೆ ಪೋಷಕರಾಗಿ ಬೆಳೆಸುತ್ತಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ಕೊಕ್ಕೊ ಕ್ರೀಡಾಪಟು ಈರಣ್ಣ ಹಳಿಗೌಡರ ಎರಡು ದಶಕಗಳಿಂದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ರಾಷ್ಟ್ರಮಟ್ಟದಲ್ಲಿ ಹೊರಹೊಮ್ಮುವಂತೆ ಮಾಡುತ್ತಿದ್ದಾರೆ.

ಮಹಾಲಿಂಗೇಶ್ವರ ಶಾಲೆ ಆವರಣದಲ್ಲಿ ಕೊಕ್ಕೊ ಆಟಕ್ಕಾಗಿ ಶಾಶ್ವತ ಅಂಕಣವಿದದ್ದು, ವರ್ಷವಿಡೀ ತರಬೇತಿ ನಡೆಯುತ್ತದೆ. ಸಂಜೆಯಾಗುತ್ತಿದ್ದಂತೆ ‍ಪಟುಗಳ ಕಲರವ ಕೇಳಿಬರುತ್ತದೆ.

‘ಶಿಕ್ಷಣ ಇಲಾಖೆಯ ಹಾಗೂ ಒಕ್ಕೂಟಗಳ ಕೊಕ್ಕೊ ಪಂದ್ಯಾಟಗಳನ್ನು ಹಲವು ಬಾರಿ ನಾಗನೂರಲ್ಲಿ ಸಂಘಟಿಸಿಲಾಗಿದೆ. ಕೊಕ್ಕೊ ಆಟದ ಬಗ್ಗೆ ಊರಿನ ಜನರಲ್ಲಿರುವ ಅಭಿಮಾನವೇ ಇದಕ್ಕೆ ಕಾರಣ’ ಎನ್ನುತ್ಯಾರೆ ತರಬೇತುದಾರ ಈರಣ್ಣ ಹಳಿಗೌಡರ.

ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕೊಕ್ಕೊ ಕೂಟದಲ್ಲಿ ಪ್ರಶಸ್ತಿ ಪಡೆದ ಇಲ್ಲಿನ ನೂರಾರು ಕ್ರೀಡಾಪಟುಗಳು ಕ್ರೀಡಾ ಕೋಟಾದಲ್ಲಿ ಉನ್ನತ ಶಿಕ್ಷಣಕ್ಕೆ ಮತ್ತು ಸರ್ಕಾರಿ ನೌಕರಿಗೆ ಸೇರಿದ್ದು ಗಮನಾರ್ಹವಾಗಿದೆ.

ಉದ್ಘಾಟನೆ ಮೇ 8ರಂದು

ಮಹಾಲಿಂಗೇಶ್ವರ ಸ್ಪೋಟ್ಸ್‌ ಕ್ಲಬ್ ಆತಿಥ್ಯದಲ್ಲಿ ಮೇ 8ರ ಸಂಜೆ 4ಕ್ಕೆ ಕೊಕ್ಕೊ ಟೂರ್ನಿ ಉದ್ಘಾಟನೆಗೊಳ್ಳಲಿದೆ. ಹುಕ್ಕೇರಿ ಕ್ಯಾರಗುಡ್ಡದ ಅಭಿನವ ಮಂಜುನಾಥ ಸ್ವಾಮೀಜಿ ಸಾನ್ನಿಧ್ಯ, ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು. ಶಾಸಕ ಬಾಲಚಂದ್ರ ಜಾರಕಿಹೊಳಿ ಉದ್ಘಾಟಿಸುವರು. ಭಾರತೀಯ ಕೊಕ್ಕೊ ಒಕ್ಕೂಟದ ಕಾರ್ಯದರ್ಶಿ ಎಂ.ಎಸ್. ತ್ಯಾಗಿ, ಮುಖಂಡ ಆರ್.ಎಂ. ಪಾಟೀಲ, ಕೊಕ್ಕೊ ಸಂಘದ ಅಧ್ಯಕ್ಷ ಲೋಕೇಶ್ವರ ಮೊದಲಾದವರು ಭಾಗವಹಿಸಲಿದ್ದಾರೆ.

ಪ್ರೋತ್ಸಾಹ ನೀಡುತ್ತಿದ್ಧೇವೆ

ದೇಸಿ ಕ್ರೀಡೆ ಕೊಕ್ಕೊ ಬೆಳೆಸುವ ಉದ್ದೇಶದಿಂದ ಎಲ್ಲರೂ ಸೇರಿ ಪ್ರೋತ್ಸಾಹ ನೀಡುತ್ತಿದ್ದೇವೆ. ಬರುವ ವರ್ಷ ರಾಷ್ಟ್ರ ಮಟ್ಟದ ಟೂರ್ನಿ ಆಯೋಜಿಸಲಾಗುವುದು.

–ಬಸಗೌಡ ಪಾಟೀಲ, ಅಧ್ಯಕ್ಷ, ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆ, ನಾಗನೂರ

ವಂಚಿತರಾಗುತ್ತಿದ್ದಾರೆ

ಉತ್ತರ ಕರ್ನಾಟಕದ ಕ್ರೀಡಾ ಪ್ರತಿಭೆಗಳು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಗ್ರಾಮೀಣ ಭಾಗದ ಆಟಗಾರರಿಗೆ ಸರ್ಕಾರ ಪ್ರೋತ್ಸಾಹ ನೀಡಬೇಕು.

– ಈರಣ್ಣ ಹಳಿಗೌಡರ, ಕಾರ್ಯದರ್ಶಿ, ಬೆಳಗಾವಿ ಜಿಲ್ಲಾ ಕೊಕ್ಕೊ ಸಂಘ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು