ಬುಧವಾರ, ಜೂನ್ 23, 2021
25 °C
ಜಿಲ್ಲೆಯಾದ್ಯಂತ ಜಯಂತಿ ಆಚರಣೆ; ಗಮನಸೆಳೆದ ಮೆರವಣಿಗೆ

ಹಕ್ಕುಗಳನ್ನು ನೀಡಿದ ಶೋಷಿತರ ಧ್ವನಿ: ಡಾ.ಎಚ್‌.ಬಿ. ಬೂದೆಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಶೋಷಿತ ಹಾಗೂ ದುರ್ಬಲ ವರ್ಗದವರಿಗೆ ಮಾನವ ಹಕ್ಕುಗಳನ್ನು ಒದಗಿಸಿದ ಶ್ರೇಯಸ್ಸು ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ’ ಎಂದು ಹೆಚ್ವುವರಿ ಜಿಲ್ಲಾಧಿಕಾರಿ ಡಾ.ಎಚ್‌.ಬಿ. ಬೂದೆಪ್ಪ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ನಗರಪಾಲಿಕೆ ಹಾಗೂ ಸಮಾಜಕಲ್ಯಾಣ ಇಲಾಖೆ ಸಹಯೋಗದಲ್ಲಿ ಭಾನುವಾರ ಇಲ್ಲಿ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಅವರ 128ನೇ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಅವರು ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಮಹಾನ್ ನಾಯಕ. ನೊಂದವರ, ದೀನದಲಿತರ ಬದುಕು ಬೆಳಗಿಸಿದ ಸೂರ್ಯ. ಶ್ರೇಷ್ಠ ಅರ್ಥಶಾಸ್ತ್ರಜ್ಞ. ಸಮಾಜ ಸುಧಾರಕ. ವಿಶ್ವರತ್ನ. ಮಹಾಮಾನವತಾವಾದಿ ಹಾಗೂ ಸಂವಿಧಾನ ಶಿಲ್ಪಿ. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಉಪನ್ಯಾಸ ನೀಡಿದ ಸವದತ್ತಿ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ವೈ.ಬಿ. ಯಾಕೊಳ್ಳಿ, ‘ಮೌಡ್ಯತೆಯನ್ನು ತೊಲಗಿಸಲು ಶಿಕ್ಷಣವು ಪ್ರಬಲ ಅಸ್ತ್ರವಾಗಬೇಕೆಂದು ಪ್ರತಿಪಾದಿಸಿದ್ದ ಅವರು ಶಿಕ್ಷಣಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದರು’ ಎಂದರು.

‘ಮನುಷ್ಯ ಚಿರಂಜೀವಿಯಾಗಲಾರ. ಆದರೆ ಆತನ ಚಿಂತನೆಗಳು ಶಾಶ್ವತವಾಗಿ ಉಳಿಯುತ್ತವೆ. ಗಿಡಕ್ಕೆ ನೀರು ಎಷ್ಟು ಮುಖ್ಯವೋ ಅದೇ ರೀತಿಯಾಗಿ ಒಂದು ಚಿಂತನೆಯು ಸಮಾಜದಲ್ಲಿ ಪ್ರಸರಣವಾಗುವುದು ಕೂಡ ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ಅಂಬೇಡ್ಕರ್ ಅವರ ಜೀವನ, ಧ್ಯೇಯಗಳು, ಚಿಂತನೆಗಳು ನಮಗೆ ಆದರ್ಶವಾಗಬೇಕು. ಅವು ಅದಮ್ಯ ಚೇತನಗಳೂ ಆಗಿವೆ. ಇದನ್ನು ಯುವಪೀಳಿಗೆ ಅರಿತುಕೊಂಡು ಆದರ್ಶ ಪಥದಲ್ಲಿ ನಡೆಯಬೇಕು’ ಎಂದು ಸಲಹೆ ನೀಡಿದರು.

2017–18ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಸಮಾಜಕಲ್ಯಾಣ ಇಲಾಖೆ ಜಂಟಿನಿರ್ದೇಶಕ ರಾಮನಗೌಡ ಕನ್ನೊಳ್ಳಿ ಸ್ವಾಗತಿಸಿದರು. ಸುದರ್ಶನ ಉಪ್ಪಾರ ನಿರೂಪಿಸಿದರು. ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಸದಾಶಿವ ಬಡಿಗೇರ ವಂದಿಸಿದರು.

ಜಿಲ್ಲಾ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಬಸವರಾಜ ಚನ್ನಣ್ಣವರ, ಎಸಿಪಿ ಎನ್.ವಿ. ಭರಮನಿ, ಮುಖಂಡರಾದ ಮಲ್ಲಿಕಾರ್ಜುನ ರಾಶಿಂಗೆ, ಮಹಾದೇವ ತಳವಾರ ಇದ್ದರು.

ಭಾವಚಿತ್ರ ಪೂಜೆ:

ಬೆಳಿಗ್ಗೆ ಡಾ.ಬಿ.ಆರ್. ಅಂಬೇಡ್ಕರ್ ಉದ್ಯಾನದಲ್ಲಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಜಿಲ್ಲಾಡಳಿತದೊಂದಿಗೆ, ಇತರ ಸಂಘ–ಸಂಸ್ಥೆಗಳವರು, ಸಂಘಟನೆಗಳ ಮುಖಂಡರು ನಮನ ಸಲ್ಲಿಸಿದರು.

ಸಂಸದ ಸುರೇಶ ಅಂಗಡಿ, ಶಾಸಕರಾದ ಲಕ್ಷ್ಮಿ ಹೆಬ್ಬಾಳಕರ, ಅನಿಲ ಬೆನಕೆ, ಜಿಲ್ಲಾಧಿಕಾರಿ ಡಾ.ಆರ್. ವಿಶಾಲ್, ಐಜಿಪಿ ರಾಘವೇಂದ್ರ ಸುಹಾಸ, ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್ ಕುಮಾರ್, ಎಸ್ಪಿ ಸುಧೀರಕುಮಾರ್ ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಬಿ. ಬೂದೇಪ್ಪ, ಜಿಲ್ಲಾ ಪಂಚಾಯ್ತಿ ಸಿಇಒ ಕೆ.ವಿ. ರಾಜೇಂದ್ರ, ಪಾಲಿಕೆ ಆಯುಕ್ತ ಇಬ್ರಾಹಿಂ ಮೈಗೂರ, ಮುಖಂಡರಾದ ಫಿರೋಜ್ ಸೇಠ್, ಮಲ್ಲೇಶ ಚೌಗುಲೆ, ದುರಗೇಶ ಮೆತ್ರೆ, ಗಣಪಾಲ ಅಗಸಿಮನಿ ಭಾಗವಹಿಸಿದ್ದರು.

ಸಂಬಾಜಿ ವೃತ್ತದಿಂದ ನಡೆದ ಭಾವಚಿತ್ರದ ಮೆರವಣಿಗೆಗೆ ಜಿಲ್ಲಾಧಿಕಾರಿ ಚಾಲನೆ ನೀಡಿದರು. ವಿವಿಧ ಬಡಾವಣೆಗಳವರು ರೂಪಕಗಳೊಂದಿಗೆ ಭಾಗವಹಿಸಿದ್ದರು. ಹಾಡುಗಳಿಗೆ ನರ್ತಿಸುತ್ತಾ ಸಾಗುತ್ತಾ ಸಂಭ್ರಮಿಸಿದರು. ರಾತ್ರಿವರೆಗೂ ಮೆರವಣಿಗೆ ನಡೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು