ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ | ಅಗ್ನಿವೀರರಿಗೆ ಮಾರ್ಗದರ್ಶನ ಮಾಡಿದ ಅನಿಲ್‌ ಚೌಹಾಣ್‌

Published 20 ಮೇ 2024, 13:22 IST
Last Updated 20 ಮೇ 2024, 13:22 IST
ಅಕ್ಷರ ಗಾತ್ರ

ಬೆಳಗಾವಿ: ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್‌ ಅನಿಲ್ ಚೌಹಾಣ್ ಅವರು ಸೋಮವಾರ, ಇಲ್ಲಿನ ಮರಾಠಾ ಲಘು ಪದಾತಿ ದಳಕ್ಕೆ ಭೇಟಿ ನೀಡಿ ‘ಅಗ್ನಿವೀರ’ ಯೋಧರಿಗೆ ಮಾರ್ಗದರ್ಶನ ಮಾಡಿದರು.

ವಿಶೇಷ ವಿಮಾನದ ಮೂಲಕ ಬೆಳಗಾವಿಗೆ ಬಂದಿಳಿದ ಅವರು, ನೇರವಾಗಿ ಎಂಎಲ್‌ಐಆರ್‌ಸಿಗೆ ತೆರಳಿದರು. ಕೇಂದ್ರದ ಸೇನಾಧಿಕಾರಿಗಳು ಶಿಷ್ಟಾಚಾರದಂತೆ ಅವರನ್ನು ಬರಮಾಡಿಕೊಂಡರು. ಅವರು ಸಾಗುವ ಮಾರ್ಗದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಯಿತು.

ಅಗ್ನಿವೀರರನ್ನು ಉದ್ದೇಶಿಸಿ ಮಾತನಾಡಿದ ಅನಿಲ್‌ ಚೌಹಾಣ್‌, ‘ಯುವಜನರು ದೇಶ ರಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರುತ್ತಿದ್ದಾರೆ. ಇದು ಆಶಾದಾಯಕ ಬೆಳವಣಿಗೆ. ಅಗ್ನಿವೀರ ನೇಮಕಾತಿಯು ಯುವಜನರಿಗೆ ಹೆಚ್ಚಿನ ಅವಕಾಶಗಳನ್ನು ನೀಡಿದೆ. ನಿಮ್ಮ ಬುದ್ಧಿವಂತಿಕೆ, ಕರ್ತವ್ಯಪ್ರಜ್ಞೆ ಹಾಗೂ ದೂರದೃಷ್ಟಿಯೇ ನಿಮ್ಮನ್ನು ಮುನ್ನಡೆಸುತ್ತದೆ’ ಎಂದರು.

‘ಅಗ್ನಿವೀರರು ಕೇವಲ ಸೈನಿಕರಲ್ಲ; ದೇಶದ ಸಾರ್ವಭೌಮತ್ವದ ಪ್ರತೀಕ. ಸೇನೆಯಲ್ಲಿ ಸೇವೆ ಸಲ್ಲಿಸುವುದಕ್ಕಿಂತ ಗೌರವ ಇನ್ನೊಂದಿಲ್ಲ. ಆಧುನಿಕ ಯುಗದ ಯುದ್ಧ ನೀತಿ– ರೀತಿಗಳು ಬೇರೆಯೇ ಆಗಿವೆ. ಸೈಬರ್‌ ಸಮರ, ಕೃತಕ ಬುದ್ಧಿಮತ್ತೆ ಬಳಕೆಯಂತ ಅಘಾತಗಳೂ ನಮ್ಮ ಮುಂದಿವೆ. ಭವಿಷ್ಯದಲ್ಲಿ ಇವು ಇನ್ನಷ್ಟು ರೂಪಗಳನ್ನು ಪಡೆಯಬಹುದು. ಅಗ್ನಿವೀರರು ಎಂಥದ್ದೇ ಸಂದಿಗ್ದ ಸ್ಥಿತಿಗೂ ಸನ್ನದ್ಧರಾಗಿರಬೇಕು. ತಾಂತ್ರಿಕ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಮಾತೃಭೂಮಿ ನಿಮ್ಮ ಅವಿಭಾಜ್ಯ ಅಂಗವಾಗಬೇಕು’ ಎಂದು ಕಿವಿಮಾತು ಹೇಳಿದರು.

‘ಸಶಸ್ತ್ರಪಡೆಗೆ ಸೇರಬೇಕು ಎಂದು ನೀವು ನಿರ್ಧರಿಸಿದಾಗಲೇ ನಿಮ್ಮ ಸಾಮರ್ಥ್ಯ ಸಾಬೀತು ಮಾಡಿದ್ದೀರಿ. ಸೇನೆಯ ಸೇವೆ ಅತ್ಯಂತ ಸವಾಲಿನದ್ದು. ತಾಯ್ನಾಡಿಗಾಗಿ ಕುಟುಂಬವನ್ನು, ವೈಯಕ್ತಿಕ ಬದುಕನ್ನು, ಎಲ್ಲವನ್ನೂ ತ್ಯಾಗ ಮಾಡಬೇಕಾಗುತ್ತದೆ. ಹಾಗೆ ಮಾಡಿದಾಗಲೇ ದೇಶವು ನಿಮ್ಮ ಸೇವೆ ಗುರುತಿಸಿ ಗೌರವಿಸುತ್ತದೆ’ ಎಂದರು.

‘ಬೆಳಗಾವಿಯಲ್ಲಿ ಉತ್ತಮ ಅಗ್ನಿವೀರರನ್ನು ತಯಾರು ಮಾಡಲಾಗುತ್ತಿದೆ. ಇಲ್ಲಿನ ತರಬೇತಿ ಅಚ್ಚುಕಟ್ಟಾಗಿದೆ. ಇದಕ್ಕಾಗಿ ಮಾರ್ಗದರ್ಶಕ ಬಳಗವನ್ನು ನಾನು ಅಭಿನಂದಿಸುತ್ತೇನೆ. ರಾಷ್ಟ್ರ ರಕ್ಷಣೆಗೆ ಬೇಕಾದ ಮೌಲ್ಯಯುತ ಶಕ್ತಿ ಇಲ್ಲಿಂದ ಹೊರಬರಲಿದೆ’ ಎಂದರು.

ಎಂಎಲ್‌ಐಆರ್‌ಸಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ಅಗ್ನಿವೀರ ತರಬೇತಿ ಪಟುಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT