ಸೋಮವಾರ, ಆಗಸ್ಟ್ 10, 2020
23 °C
ಅವಶ್ಯವಿದ್ದವರಿಗೆ ನೀಡಲು 120 ಆಕ್ಸಿಜನ್ ಸಿಲಿಂಡರ್‌ ಖರೀದಿ

ಅಂಜುಮನ್ ಸಂಸ್ಥೆಯಿಂದ ಆರೋಗ್ಯ ಸೇವೆ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇಲ್ಲಿನ ಅಂಜುಮನ್ ಎ ಇಸ್ಲಾಂ ಸಮಿತಿಯು ಸಾರ್ವಜನಿಕರಿಗೆ ಉಚಿತವಾಗಿ ಆರೋಗ್ಯ ಸೇವೆ ಒದಗಿಸುವ ಮೂಲಕ ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಸರ್ಕಾರದೊಂದಿಗೆ ಕೈ ಜೋಡಿಸಲು ಸಿದ್ಧತೆ ಮಾಡಿಕೊಂಡಿದೆ.

ಲಕ್ಷಣಗಳಿಲ್ಲದಿದ್ದರೂ ಕೋವಿಡ್ ಪಾಸಿಟಿವ್ ಬಂದು ಮನೆಗಳಲ್ಲಿ ಆರೈಕೆಯಲ್ಲಿರುವವರಿಗೆ ಅಥವಾ ಇತರ ಆರೋಗ್ಯ ಸಂಬಂಧಿ ಸಮಸ್ಯೆಯಿಂದ ಉಸಿರಾಟದ ತೊಂದರೆ ಕಾಣಿಸಿಕೊಂಡವರಿಗೆ ಚಿಕಿತ್ಸಾ ಸೇವೆ ನೀಡಲಿದೆ. ರೋಗಿಗಳ ಮನೆಗಳಿಗೇ ಕಳುಹಿಸುವುದಕ್ಕೆಂದು ಈಗಾಗಲೇ 120 ಆಕ್ಸಿಜನ್ ಸಿಲಿಂಡರ್‌ಗಳನ್ನು ಖರೀದಿಸಿ ಸಂಗ್ರಹಿಸಿದೆ. ಸಿಲಿಂಡರ್‌ ಒಂದನ್ನು ₹ 9,500ಕ್ಕೆ ಖರೀದಿಸಲಾಗಿದೆ. ಸಮಿತಿಯಿಂದಲೇ ವಾಹನದ ವ್ಯವಸ್ಥೆ ಮಾಡಿ ಸಿಲಿಂಡರ್‌ ಅನ್ನು ತಲುಪಿಸಲಾಗುವುದು. ಅದನ್ನು ಬಳಸುವ ವಿಧಾನವನ್ನೂ ಕೂಡ ತಿಳಿಸಿಕೊಡಲು ಉದ್ದೇಶಿಸಲಾಗಿದೆ. ಇದಕ್ಕಾಗಿ ವೈದ್ಯರ ತಂಡವನ್ನು ಕೂಡ ರಚಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಿಲಿಂಡರ್‌ ಖರೀದಿಗೆ ಯೋಜಿಸಲಾಗಿದೆ.

ಸಂಕಷ್ಟದಲ್ಲಿ ನೆರವಾಗಲು: ‘ಮನೆಗಳಲ್ಲಿ ಆರೈಕೆಯಲ್ಲಿರುವವರು ಉಸಿರಾಟದ ತೊಂದರೆ ಕಾಣಿಸಿಕೊಂಡಾಗ ನಮ್ಮನ್ನು ಸಂಪರ್ಕಿಸಬಹುದು. ಸ್ವಯಂಸೇವಕರು ಹಾಗೂ 8 ಮಂದಿ ವೈದ್ಯರ ತಂಡವನ್ನು ರಚಿಸಿದ್ದು, ಅವರಲ್ಲಿ ಯಾರಾದರೊಬ್ಬರು ರೋಗಿಗೆ ನೆರವಾಗುತ್ತಾರೆ. ಮೊಬೈಲ್‌ ಫೋನ್‌ನಲ್ಲಿ ವಿಡಿಯೊ ಕಾಲ್‌ ಮಾಡಿ ತಕ್ಷಣ ಸ್ಪಂದಿಸುತ್ತಾರೆ. ಅವರು ರೆಫರ್‌ ಮಾಡುವವರಿಗೆ ಸಮಿತಿಯಿಂದ ಆಕ್ಸಿಜನ್ ಸಿಲಿಂಡರ್‌ ಕಳುಹಿಸಲಾಗುವುದು. ಅದನ್ನು ಅಳವಡಿಸುವುದು ಹಾಗೂ ಬಳಸುವ ಕುರಿತು ವೈದ್ಯರು ತಿಳಿಸಿಕೊಡುತ್ತಾರೆ. ಈ ಮೂಲಕ ಸಂಕಷ್ಟದಲ್ಲಿದ್ದವರಿಗೆ ನೆರವಾಗುವ ಉದ್ದೇಶ ನಮ್ಮದು’ ಎಂದು ಅಂಜುಮನ್ ಎ ಇಸ್ಲಾಂ ಸಮಿತಿಯ ಅಧ್ಯಕ್ಷ ರಾಜು ಸೇಠ್‌ ‘ಪ್ರಜಾವಾಣಿ’ಗೆ ತಿಳಿಸಿದರು.‌

ಎಲ್ಲ ಧರ್ಮೀಯರಿಗೂ: ‘ನಮ್ಮ ಈ ಸೇವಾ ಕಾರ್ಯ ಮುಸ್ಲಿಮರಿಗೆ ಮಾತ್ರ ಸೀಮಿತವಾಗಿಲ್ಲ. ಎಲ್ಲ ಜಾತಿ, ಧರ್ಮದವರಿಗೂ ಒದಗಿಸಲಾಗುವುದು. ಇದರಿಂದ ಬಿಮ್ಸ್‌ ಕೋವಿಡ್ ಆಸ್ಪತ್ರೆ ಮೇಲಿನ ಅವಲಂಬನೆ ಕಡಿಮೆಯಾಗಲಿ ಎನ್ನುವ ಆಶಯವೂ ನಮ್ಮದಾಗಿದೆ. ಸಮಿತಿಯಿಂದಲೇ ವಾಹನದ ವ್ಯವಸ್ಥೆ ಮಾಡಿ ಆಕ್ಸಿಜನ್ ಸಿಲಿಂಡರ್‌ಗಳನ್ನು  ಕಳುಹಿಸಲಾಗುವುದು. ಶೀಘ್ರವೇ ವಾಟ್ಸ್‌ ಆ್ಯಪ್‌ ಗ್ರೂಪ್‌ ಕೂಡ ರಚಿಸಲಾಗುವುದು. ತಂಡದ ಮೊಬೈಲ್‌ ಫೋನ್‌ ಸಂಖ್ಯೆಗಳನ್ನು ಹಂಚಿಕೊಳ್ಳಲಾಗುವುದು. ತುರ್ತು ಅಗತ್ಯವಿದ್ದವರು ಆ ಸಂಖ್ಯೆಗಳನ್ನು ಸಂಪರ್ಕಿಸಿ ನೆರವು ಪಡೆಯಬಹುದು. ನನಗೂ (ಮೊ:9844053866) ಕರೆ ಮಾಡಬಹುದು’ ಎಂದು ಮಾಹಿತಿ ನೀಡಿದರು.

ಕೋವಿಡ್‌ನಿಂದ ಮೃತರಾದವರ ಅಂತ್ಯಸಂಸ್ಕಾರಕ್ಕಾಗಿ ಅಂಜುಮನ್ ಖಬರಸ್ತಾನದಲ್ಲಿ ಪ್ರತ್ಯೇಕ ಜಾಗ ನೀಡಲಾಗಿದೆ. ಅಲ್ಲದೇ, ಸಮಿತಿಯಿಂದಲೇ ರಚಿಸಿರುವ ತಂಡದವರು ಅಂತ್ಯಸಂಸ್ಕಾರ ನೆರವೇರಿಸುತ್ತಿದ್ದಾರೆ. ಅವರಿಗೆ ಪಿಪಿಇ ಕಿಟ್‌ ಮೊದಲಾದ ಸುರಕ್ಷತಾ ಪರಿಕರಗಳನ್ನು ಒದಗಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು