ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾ ರ‍್ಯಾಲಿಗೆ ಚಾಲನೆ: 62,217 ಯುವಕರ ನೋಂದಣಿ

ಬೆಳಗಾವಿಯವರೇ 51,423 ಮಂದಿ
Last Updated 4 ಫೆಬ್ರುವರಿ 2021, 9:45 IST
ಅಕ್ಷರ ಗಾತ್ರ

ಬೆಳಗಾವಿ: ಸೇನಾ ನೇಮಕಾತಿ ಪ್ರಧಾನ ಕಚೇರಿ ಆಶ್ರಯದಲ್ಲಿ ಇಲ್ಲಿನ ವಿಟಿಯು ಮೈದಾನದಲ್ಲಿ ಆಯೋಜಿಸಿರುವ ಸೇನಾ ನೇಮಕಾತಿ ರ‍್ಯಾಲಿ ಗುರುವಾರದಿಂದ ಆರಂಭಗೊಂಡಿದ್ದು, 6 ಜಿಲ್ಲೆಗಳ 62,217 ಯುವಕರು ನೋಂದಾಯಿಸಿದ್ದಾರೆ.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಕರ್ನಲ್‌ ರಾಹುಲ್ ಆರ್ಯ ಮತ್ತು ಬ್ರಿಗೇಡಿಯರ್‌ ಎ.ಎಸ್. ವಾಳಿಂಬೆ ಸಮ್ಮುಖದಲ್ಲಿ ಆಯ್ಕೆ ಪ್ರಕ್ರಿಯೆಗೆ ಹಸಿರುನಿಶಾನೆ ತೋರಿದರು.

ಸೇನೆಯಿಂದ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಈ ಪೈಕಿ ಬೆಳಗಾವಿ ಜಿಲ್ಲೆಯವರು ಅತಿ ಹೆಚ್ಚು ಸಂಖ್ಯೆಯಲ್ಲಿ ಅಂದರೆ 51,423 ಮಂದಿ ನೋಂದಾಯಿಸಿದ್ದಾರೆ. ಬೀದರ್‌ನ 2,709, ಕಲಬುರ್ಗಿಯ 3,007, ಕೊಪ್ಪಳದ 2,909, ರಾಯಚೂರಿನ 1,445 ಹಾಗೂ ಯಾದಗಿರಿಯ 724 ಮಂದಿ ನೋಂದಾಯಿಸಿದ್ದಾರೆ. ಫೆ. 15ರವರೆಗೆ ಪ್ರಕ್ರಿಯೆ ನಡೆಯಲಿದ್ದು, ನಿತ್ಯ ಸರಾಸರಿ 4,800 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈಗಾಗಲೇ ನೋಂದಾಯಿಸಿದವರಿಗೆ ಮಾತ್ರ ಅವಕಾಶವಿದೆ.

‘ದಾಖಲೆ ಪ್ರಮಾಣದಲ್ಲಿ ಯುವಕರು ನೋಂದಾಯಿಸಿದ್ದಾರೆ ಎಂದು ಸೈನ್ಯಾಧಿಕಾರಿಗಳು ತಿಳಿಸಿದ್ದಾರೆ. ಈ ಭಾಗದ ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಲಿ ಎಂಬ ಉದ್ದೇಶದಿಂದ, ರ‍್ಯಾಲಿಗಾಗಿ ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರ ನೀಡಿದ್ದೇವೆ. ವಿವಿಧ ಜಿಲ್ಲೆಗಳಿಂದ ಬರುವವರಿಗೆ ಪೀರನವಾಡಿಯ ಮೂರು ಕಲ್ಯಾಣಮಂಟಪದಲ್ಲಿ ವಸತಿ ಮತ್ತು ಊಟೋಪಹಾರದ ವ್ಯವಸ್ಥೆ ಮಾಡಲಾಗಿದೆ. ವಿಟಿಯು ಮೈದಾನದಲ್ಲೂ ಮೂಲಸೌಲಭ್ಯ ಕಲ್ಪಿಸಲಾಗಿದೆ. ಕೋವಿಡ್ ಬಳಿಕ ನಡೆಯುತ್ತಿರುವ ದೊಡ್ಡ ನೇಮಕಾತಿ ರ‍್ಯಾಲಿ ಇದಾಗಿದೆ’ ಎಂದು ಹೇಳಿದರು.

‘ಅಭ್ಯರ್ಥಿಗಳಿಗೆ ಕೋವಿಡ್-19 ಪರೀಕ್ಷೆ ಅಥವಾ ತಪಾಸಣಾ ವರದಿಯ ಅಗತ್ಯವಿಲ್ಲ. ಆರ್.ಟಿ.ಪಿ.ಸಿ.ಆರ್. ಅಥವಾ ಆಂಟಿಜೆನ್ ಸೇರಿದಂತೆ ಯಾವುದೇ ರೀತಿಯ ಪರೀಕ್ಷೆ ಮಾಡಿಸಬೇಕಿಲ್ಲ. ಆದರೆ, ಲಕ್ಷಣ ಇಲ್ಲದಿರುವ ಬಗ್ಗೆ ಯಾವುದಾದರೂ ವೈದ್ಯರಿಂದ ಪಡೆದಿರುವ ಪತ್ರವಿದ್ದರೆ ಸಾಕು. ಇದಕ್ಕಾಗಿ ಜಿಲ್ಲಾಡಳಿತದಿಂದ ಕೆಲವು ವೈದ್ಯರನ್ನು ಮೈದಾನದ ಬಳಿ ನಿಯೋಜಿಸಲಾಗುವುದು. ಕೋವಿಡ್ ಪರೀಕ್ಷಾ ವರದಿ ಇಲ್ಲವೆಂಬ ಕಾರಣಕ್ಕೆ ಅವಕಾಶದಿಂದ ವಂಚಿತವಾಗದಂತೆ ನೋಡಿಕೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

‘ರ‍್ಯಾಲಿಯಲ್ಲಿ ಅಂದಾಜು 5,500 ಮಂದಿ ಆಯ್ಕೆ ಮಾಡಿಕೊಳ್ಳಲಾಗುವುದು. 2019ರಲ್ಲಿ ಕೊಪ್ಪಳದಲ್ಲಿ ರ‍್ಯಾಲಿ ನಡೆದಿತ್ತು. ಬೆಳಗಾವಿ ಪ್ರದೇಶದಿಂದ ಸೈನ್ಯಕ್ಕೆ ಸೇರುವವರ ಸಂಖ್ಯೆ ಹೆಚ್ಚಿದೆ. ಅವರೆಲ್ಲ ಅತ್ಯುತ್ತಮ ಸೈನಿಕರಾಗಿದ್ದಾರೆ ಎಂಬುದು ಹೆಮ್ಮೆಯ ವಿಷಯ. ಇಲ್ಲಿ ಆಯ್ಕೆಯಾಗುವವರಿಗೆ ಎರಡು ವರ್ಷ ತರಬೇತಿ ನೀಡಲಾಗುವುದು. ಯಾವ ರೆಜಿಮೆಂಟ್‌ನಲ್ಲಾದರೂ (ದಳ) ತರಬೇತಿಗೆ ನಿಯೋಜಿಸಬಹುದು. ಯಶಸ್ವಿಯಾಗಿ ಪೂರ್ಣಗೊಳಿಸಿದವರು, ಸೈನ್ಯದಲ್ಲಿ ಕರ್ತವ್ಯಕ್ಕೆ ಸೇರ್ಪಡೆಯಾಗುತ್ತಾರೆ’ ಎಂದು ಬ್ರಿಗೇಡಿಯರ್‌ ಎ.ಎಸ್. ವಾಳಿಂಬೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT