ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಾ: ದುಡಿದರೂ ಸಿಗದ ಕೂಲಿ, ಸಂಕಷ್ಟದಲ್ಲಿ ಕಾರ್ಮಿಕರು

₹342 ಕೋಟಿ ಬಾಕಿ
Published 3 ಫೆಬ್ರುವರಿ 2024, 23:30 IST
Last Updated 3 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಬೆಳಗಾವಿ: ‘ಮೊದ್ಲ ಬರದಿಂದ ಕಂಗೆಟ್ಟೇವ್ರಿ. ಈ ಕೆಲ್ಸಾದ್ರೂ ಕೈಹಿಡಿತೇತ ಅಂತ ನರೇಗಾದಡಿ ದುಡಿದೇವ್ರಿ. ಆದ್ರ, ಎರಡು ತಿಂಗಳಿಂದ ಕೂಲೀನ ಕೊಟ್ಟಿಲ್ಲ. ರೊಕ್ಕ ಇಲ್ಲದ್ದಕ್ಕ ಸಂತಿ ಮಾಡಿಲ್ಲ. ಹೀಂಗಾದ್ರ ತಿನ್ನೂದು, ಉಣ್ಣೂದು ಹೆಂಗ್ರಿ’

ಇದು ಜಿಲ್ಲೆಯ ಸವದತ್ತಿ ತಾಲ್ಲೂಕಿನ ಹಂಚಿನಾಳ ಕಾರ್ಮಿಕರ ನೋವಿನ ಮಾತು. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ರಾಜ್ಯದೆಲ್ಲೆಡೆ ದುಡಿಯುತ್ತಿರುವ ಕಾರ್ಮಿಕರ ಸ್ಥಿತಿ ಇದಕ್ಕಿಂತ ಭಿನ್ನವಿಲ್ಲ.

ಬರ ಪರಿಸ್ಥಿತಿಯಿಂದಾಗಿ ಕೃಷಿ ಕಾರ್ಮಿಕರಿಗೆ ಕೆಲಸ ಇಲ್ಲ. ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಲು ಬಂದರೂ ಅಲ್ಲಿ ಅವರಿಗೆ ಕೆಲಸ ಸಿಗುತ್ತಿಲ್ಲ.

‘ದುಡಿಯಲಿಕ್ಕೆಂದೇ ಬೇರೆ ಊರಿಗೆ ಹೋಗಲು ಹಣ ಇಲ್ಲ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಎರಡು ತಿಂಗಳು ಕೆಲಸ ಮಾಡಿದ್ದರೂ ಕೂಲಿ ಸಿಕ್ಕಿಲ್ಲ’ ಎಂದು ಹಂಚಿನಾಳದ ಕಾರ್ಮಿಕ ಶಿವಾಜಿ ತಿಳಿಸಿದರು.

₹342 ಕೋಟಿ ಬಾಕಿ: ನರೇಗಾ ಯೋಜನೆಯಡಿ ಬದು, ಶೆಡ್‌ಗಳ ನಿರ್ಮಾಣ, ಕೆರೆ ಮತ್ತು ನಾಲೆಗಳ ಹೂಳೆತ್ತುವಿಕೆ ಸೇರಿ ವಿವಿಧ ಅಭಿವೃದ್ಧಿ ಚಟುವಟಿಕೆಗಳು ‍ಪ್ರಗತಿಯಲ್ಲಿವೆ. ಪ್ರತಿ ಮಾನವ ದಿನ ಸೃಜನೆಗೆ ₹ 316 ಕೂಲಿ ಇದೆ. 2023ರ ನವೆಂಬರ್ 30 ರಿಂದ 2024ರ ಫೆಬ್ರುವರಿ 3ರವರೆಗೆ ದುಡಿದ ಕಾರ್ಮಿಕರಿಗೆ ₹342.56 ಕೋಟಿ ಕೂಲಿ ಪಾವತಿಸಬೇಕು. ಆದರೆ, ಪಾವತಿ ಆಗಿಲ್ಲ’ ಎಂದು ಉದ್ಯೋಗ ಖಾತ್ರಿ ಯೋಜನೆ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೇಂದ್ರದಿಂದ ರಾಜ್ಯಕ್ಕೆ ಅನುದಾನ ಬಿಡುಗಡೆ ಆಗುವುದು ವಿಳಂಬವಾಗಿದೆ. ಹೀಗಾಗಿ ಕಾರ್ಮಿಕರಿಗೆ ಕೂಲಿ ಪಾವತಿಸಲು ಸಾಧ್ಯವಾಗಿಲ್ಲ’ ಎಂದು ಹೇಳಿದರು.

‘ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಮಿಕರಿಗೆ ತ್ವರಿತವಾಗಿ ವೇತನ ಪಾವತಿಸಲು ಅಧಿಕಾರಿಗಳಿಗೆ ಒತ್ತಾಯಿಸಿದ್ದೇವೆ. ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು’ ಎಂದು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಮುಖಂಡ ಯಲ್ಲಪ್ಪ ಕೋಲಕಾರ ತಿಳಿಸಿದರು.

ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರಿಗೆ ಕೂಲಿ ಪಾವತಿ ಆಗಬೇಕಿದೆ. ಅನುದಾನ ಬಿಡುಗಡೆಯಾದ ತಕ್ಷಣವೇ ಕೂಲಿ ಪಾವತಿಗೆ ಕ್ರಮ ಕೈಗೊಳ್ಳುತ್ತೇವೆ.
– ರಾಹುಲ್‌ ಶಿಂಧೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಲ್ಲಾ ಪಂಚಾಯಿತಿ ಬೆಳಗಾವಿ
ರಾಜ್ಯದಲ್ಲಿ ಬರದ ಛಾಯೆ ಆವರಿಸಿದೆ. ಬದುಕು ಕಷ್ಟವಾಗಿದೆ. ಸಕಾಲಕ್ಕೆ ಕೂಲಿ ಪಾವತಿ ಆಗದಿದ್ದರೆ ಕಾರ್ಮಿಕರ ಪರಿಸ್ಥಿತಿ ಇನ್ನಷ್ಟು ಶೋಚನೀಯ ಆಗಲಿದೆ.
–ಮಲ್ಲಿಕಾರ್ಜುನ, ಮುಖಂಡ ದೇವಲತ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT