ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಹಾರ್ದ ಸಮಾಜ ನಿರ್ಮಾಣವಾಗಲಿ: ಡಿಸಿಪಿ ಯಶೋದಾ ಒಂಟಗೋಡಿ

ನಗರದಲ್ಲಿ ಸಂಭ್ರಮದ ಬಸವೇಶ್ವರ ಜಯಂತ್ಯುತ್ಸವ
Last Updated 7 ಮೇ 2019, 10:50 IST
ಅಕ್ಷರ ಗಾತ್ರ

ಬೆಳಗಾವಿ: ‘ಜಾತೀಯತೆ ಬದಿಗಿಟ್ಟು, ಬಸವಣ್ಣನವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸೌಹಾರ್ದ ಸಮಾಜ ನಿರ್ಮಾಣ ಮಾಡುವುದು ಇಂದಿನ ಅಗತ್ಯವಾಗಿದೆ’ ಎಂದು ಡಿಸಿಪಿ ಯಶೋದಾ ಒಂಟಗೋಡಿ ಪ್ರತಿಪಾದಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ನಗರಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಇಲ್ಲಿನ ಬಸವೇಶ್ವರ ಉದ್ಯಾನದಲ್ಲಿ ಮಂಗಳವಾರ ಆಯೋಜಿಸಿದ್ದ ಬಸವೇಶ್ವರ ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಪಾಶ್ಚಿಮಾತ್ಯ ಜೀವನಶೈಲಿಗೆ ದುಂಬಾಲು ಬಿದ್ದಿರುವ ಪ್ರಸ್ತುತ ಪೀಳಿಗೆಯು ಬಸವಣ್ಣನವರು ಬೋಧಿಸಿದ ಶೂನ್ಯ ಸಂಪಾದನೆ ಮಹತ್ವ ಅರಿತುಕೊಳ್ಳಬೇಕು. ಇಂದಿನ ದಾವಂತದ ಜೀವನಕ್ಕೆ ಶರಣರ ಜೀವನಶೈಲಿಯು ಆದರ್ಶಪ್ರಾಯವಾಗಿದೆ’ ಎಂದರು.

ಉಪನ್ಯಾಸ ನೀಡಿದ ಬೆನನ್‌ಸ್ಮಿತ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಶ್ರೀಕಾಂತ್ ಶಾನವಾಡ, ‘ಬಸವಣ್ಣ ಯುಗದ ಬೆಳಕು. ಅವರ ಕುರಿತು ಮಾತನಾಡುವುದು ಎಂದರೆ ಭಾರತದ ಸಂವಿಧಾನದ ಆಶಯದ ಕುರಿತು ಮಾತನಾಡಿದಂತಾಗುತ್ತದೆ. ಮಾನವೀಯ ಮೌಲ್ಯಗಳು, ಆಚಾರ-ವಿಚಾರ, ಬದುಕಿನ ಸಿದ್ಧಾಂತಗಳು ಸೇರಿದಂತೆ ಎಲ್ಲ ಸೂತ್ರಗಳನ್ನು ಒಳಗೊಂಡ ಸಪ್ತಸೂತ್ರವನ್ನು ನೀಡಿದ ಅವರು ನಿಜವಾದ ಸಾಮಾಜಿಕ ಕ್ರಾಂತಿಯ ಹರಿಕಾರ’ ಎಂದು ಬಣ್ಣಿಸಿದರು.

‘ದಯವೇ ಧರ್ಮದ ಮೂಲವಯ್ಯ ಎಂದು ಪ್ರತಿಪಾದಿಸುವ ಜೊತೆಗೆ ಅನಾಯಾಸದಿಂದ ನಿರಾಯಾಸದ ಕಡೆಗೆ ತೆರಳುವ ವಿಧಾನವನ್ನು ಬೋಧಿಸುವ ಮೂಲಕ ನವಯುಗಕ್ಕೆ ನಾಂದಿ ಹಾಡಿದ ಕೀರ್ತಿ ಬಸವಣ್ಣಗೆ ಸಲ್ಲುತ್ತದೆ. ಸಮಾಜವಾದ, ಸಮತಾವಾದದ ಬೀಜ ಬಿತ್ತಿದ ಅವರು, ಜಾತಿ ವ್ಯವಸ್ಥೆಯಲ್ಲಿ ತುಳಿತಕ್ಕೆ ಒಳಗಾದ ಜನರ ಏಳಿಗೆಗೆ ನಿಷ್ಠುರ ಮತ್ತು ಪ್ರಾಮಾಣಿಕವಾಗಿ ಶ್ರಮಿಸಿದವರು’ ಎಂದು ಸ್ಮರಿಸಿದರು.

ಶಾಸಕ ಅನಿಲ ಬೆನಕೆ, ಎಸಿಪಿ ನಾರಾಯಣ ಭರಮನಿ, ಹೆಸ್ಕಾ ಎಇ ಅಶ್ವಿನ್‌ ಸಿಂಧೆ, ಮುಖಂಡರಾದ ಆರ್.ಪಿ. ಪಾಟೀಲ, ರಮೇಶ ಕಳಸಣ್ಣವರ, ಸೋಮಲಿಂಗ ಮಾವಿನಕಟ್ಟಿ, ಮಲ್ಲೇಶಿ ಚೌಗಲೆ, ಪಾಲಿಕೆಯ ಎಇಇ ಆರ್.ಎಚ್. ಕುಲಕರ್ಣಿ, ಅಬಕಾರಿ ಉಪ ಆಯುಕ್ತ ಅರುಣಕುಮಾರ ಭಾಗವಹಿಸಿದ್ದರು.

ಶಿಕ್ಷಕ ಎಸ್.ಪಿ. ಕಂಕಣವಾಡಿ ನಿರೂಪಿಸಿದರು. ನಿವೃತ್ತ ಅಧಿಕಾರಿ ಎಸ್.ಯು. ಜಮಾದಾರ ವಂದಿಸಿದರು. ಸುರೇಶ ಚಂದರಗಿ ಹಾಗೂ ತಂಡದವರು ನಾಡಗೀತೆ ಹಾಡಿದರು.

ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಡಾ.ಆರ್. ವಿಶಾಲ್ ಬಸವೇಶ್ವರ ಉದ್ಯಾನದಲ್ಲಿ ಇರುವ ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಜಿಲ್ಲಾ ಪಂಚಾಯ್ತಿ ಸಿಇಒ ಬಿ.ಎಸ್. ಲೋಕೇಶಕುಮಾರ, ಡಿಸಿಪಿ ಸೀಮಾ ಲಾಟ್ಕರ್, ಸಮಾಜಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನ್ನೊಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT