ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ಕರ್ನಾಟಕಕ್ಕೆ ಕಿತ್ತೂರು ಕರ್ನಾಟಕವೆಂದು ಮರುನಾಮಕರಣ: ಸಿಎಂ ಬೊಮ್ಮಾಯಿ ಘೋಷಣೆ

ರಾಜ್ಯಮಟ್ಟದ ಉತ್ಸವವಾಗಿ ಕಿತ್ತೂರು ಉತ್ಸವ: ಮುಖ್ಯಮಂತ್ರಿ ‌ಘೋಷಣೆ
Last Updated 23 ಅಕ್ಟೋಬರ್ 2021, 15:40 IST
ಅಕ್ಷರ ಗಾತ್ರ

ಬೆಳಗಾವಿ: ಕಿತ್ತೂರು ಉತ್ಸವವನ್ನು ಇನ್ನು ಮುಂದೆ ರಾಜ್ಯಮಟ್ಟದ ಉತ್ಸವವಾಗಿ ಆಚರಿಸಲಾಗುವುದು. ಮುಂಬೈ ಕರ್ನಾಟಕಕ್ಕೆ ಕಿತ್ತೂರು ಕರ್ನಾಟಕ ಎಂದು ಮರುನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ‌ ಇಲಾಖೆ ಸಹಯೋಗದಲ್ಲಿ ಜಿಲ್ಲೆಯ ಕಿತ್ತೂರಿನ ಕೋಟೆ ಆವರಣದಲ್ಲಿ ಆಯೋಜಿಸಿರುವ ಎರಡು ದಿನಗಳ 'ಚನ್ನಮ್ಮನ ಕಿತ್ತೂರು' ಉತ್ಸವಕ್ಕೆ ಶನಿವಾರ ಸಂಜೆ ವರ್ಣರಂಜಿತ ಚಾಲನೆ ದೊರೆಯಿತು.ವಿದ್ಯುದ್ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿದ್ದ ವೇದಿಕೆಯಲ್ಲಿ ಬೊಮ್ಮಾಯಿ ಅವರು ಉತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಕಿತ್ತೂರು ಉತ್ಸವಕ್ಕೆ ಅಥವಾ ಕಿತ್ತೂರಿಗೆ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೌಢ್ಯವನ್ನು ತೊಡೆದು ಹಾಕುವ ಪ್ರಯತ್ನವನ್ನೂ ಮುಖ್ಯಮಂತ್ರಿ ಮಾಡಿದರು.

ಬಳಿಕ ಮಾತನಾಡಿದ ಬೊಮ್ಮಾಯಿ ಅವರು, ‘ಕಿತ್ತೂರು ಉತ್ಸವದಲ್ಲಿ ಭಾಗವಹಿಸಲು ಬಹಳ ಸಂತಸ ಆಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವನಾಗಿ ಉತ್ಸವ ಮಾಡಿದ್ದು ನೆನಪಾಗುತ್ತಿದೆ. ಹಿಂದೆಲ್ಲಾ ಇಷ್ಟು ದೊಡ್ಡ ವೇದಿಕೆ ಇರುತ್ತಿರಲಿಲ್ಲ. ಬರುವುದಕ್ಕೆ ಸರಿಯಾದ ರಸ್ತೆಗಳೂ ಇರಲಿಲ್ಲ. ಒಟ್ಟಾರೆ ಅಭಿವೃದ್ಧಿಗೆ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ 2008ರಲ್ಲಿ ಆರಂಭವಾಯಿತು’ ಎಂದು ನೆನೆದರು.

ಕಿತ್ತೂರು ಜ್ಯೋತಿ ಜಿಲ್ಲೆಯೊಂದಿಗೆ ಬೆಂಗಳೂರಿಗೆ ಹೋಗುತ್ತಿತ್ತು. ನಂತರ ಬಂದ ಸರ್ಕಾರದವರು ಮುಂದುವರಿಸಲಿಲ್ಲ. ಮುಂದಿನ ಉತ್ಸವದಲ್ಲಿ ಜ್ಯೋತಿಯನ್ನು ರಾಜ್ಯದಾದ್ಯಂತ ಸಂಚರಿಸಲು ವ್ಯವಸ್ಥೆ ಮಾಡಬೇಕು ಎಂದು ಆದೇಶಿಸುತ್ತಿದ್ದೇನೆ.‌ ಸಂಬಂಧಿಸಿದವರು ಈ ನಿಟ್ಟಿನಲ್ಲಿ ಕ್ರಮ‌ ವಹಿಸಬೇಕು ಎಂದು ಸೂಚಿಸಿದರು.

ಕಿತ್ತೂರು ಉತ್ಸವವನ್ನು ಮುಂದಿನ‌ ವರ್ಷದಿಂದ ರಾಜ್ಯಮಟ್ಟದ ಉತ್ಸವವನ್ನಾಗಿ ಆಚರಿಸಲು ಆದೇಶ ಮಾಡಲಾಗುವುದು ಎಂದು ಪ್ರಕಟಿಸಿದರು.

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರಥಮ ಮಹಿಳೆ ಎನ್ನುವುದನ್ನು ಪುನರ್ ಪ್ರತಿಪಾದಿಸಬೇಕಾಗಿದೆ. ರಾಣಿ ಚನ್ನಮ್ಮ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಆಕೆ ಇನ್ನೂ ಜೀವಂತವಾಗಿದ್ದಾಳೆ. ಚನ್ನಮ್ಮಳ‌ ಸ್ಫೂರ್ತಿಯಿಂದ ನಮ್ಮನ್ನು ಜಾಗೃತಗೊಳಿಸುತ್ತಿದ್ದಾಳೆ. ಅದಕ್ಕಿಂತ ಜೀವಂತಿಕೆ ಇನ್ನೇನು ಬೇಕು? ಎಂದು ಕೇಳಿದರು.

ಕಿತ್ತೂರು ಭಾಗದ ಜನರನ್ನು ಸಂಘಟಿಸಿ ದೈತ್ಯ ಬ್ರಿಟಿಷರ ವಿರುದ್ಧ ಹೋರಾಡಿದ ಚನ್ನಮ್ಮ‌ ಶೌರ್ಯ ದಿಟ್ಟವಾದುದು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಚನ್ನಮ್ಮನದು ತಾಯಿ- ಮಗನ ಸಂಬಂಧ. ಯಾವುದಕ್ಕೂ ಹೆಸರದ ಚನ್ನಮ್ಮ ಸಂಗೊಳ್ಳಿ ರಾಯಣ್ಣನನ್ಬು ಕೊಂದಾಗ ಕುಸಿಯುತ್ತಾಳೆ. ಅಷ್ಟು ನಂಬಿಕೆ ಹಾಗೂ ವಿಶ್ವಾಸವನ್ನು ಚನ್ನಮ್ಮ ರಾಯಣ್ಣನ ಮೇಲೆ ಇಟ್ಟಿದ್ದರು ಎಂದರು.

ಯಾರೇನೇ ಹೇಳಲಿ ದೇಶ‌ ಮೊದಲು ಎನ್ನುವುದನ್ನು ಅರಿತು ರಾಜಕಾರಣ ಮಾಡುವುದು ಇಂದಿನ ಅಗತ್ಯವಾಗಿದೆ. ದೇಶ ಉಳಿದರೆ ನಾವು. ಇಲ್ಲವಾದರೆ ನಾವ್ಯಾರೂ ಇರುವುದಿಲ್ಲ. ಟೀಕೆ- ಟಿಪ್ಪಣಿಗಳನ್ನು ಲೆಕ್ಕಿಸದೆ ದೇಶದ ಹಿತಾಸಕ್ತಿ ಕಾಪಾಡಲು ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕೆಲಸ ಮಾಡುತ್ತಿದ್ದಾರೆ ಎಂದರು.

ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಮಾಡಬೇಕು ಎಂಬ ಬೇಡಿಕೆ ಬಹಳ ವರ್ಷಗಳ ಹಿಂದಿನಿಂದಲೂ ‌ಇದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಮಾಡಲಾಗುವುದು ಎಂದು ಘೋಷಿಸಿದರು. ಆಗ ನೆರೆದಿದ್ದವರಿಂದ ಹೆಚ್ಚಿನ ಚಪ್ಪಾಳೆ ಬರಲಿಲ್ಲ. ಅದಕ್ಕೆ ಮುಖ್ಯಮಂತ್ರಿ ಅಸಮಾಧಾನ ವ್ಯಕ್ತಪಡಿಸಿದರು. ಬೇಡಿಕೆ ಈಡೇರಿದ ಮೇಲೆ ಕಿಚ್ಚು ಹೋಗಬಾರದು ಎಂದು ಹೇಳಿದ ನಂತರ ಜೋರಾಗಿ ಚಪ್ಪಾಳೆಗಳು ಬಂದವು.

ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರಸ್ತಾವದಂತೆ (ಮಾಸ್ಟರ್ ಪ್ಲಾನ್ ಪ್ರಕಾರ) ₹ 150 ಕೋಟಿ ಬಿಡುಗಡೆಗೆ ಕ್ರಮ‌ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಸಮುದಾಯಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಹೆಚ್ಚಿನ ಅವಕಾಶ ಕೊಡುವಂತೆ ಬೇಡಿಕೆ ಇದೆ. ನ್ಯಾಯಾಲಯದಿಂದ ಅನುಮತಿ ಸಿಗದ ಕಾರಣ ಬೇರೆ ರೀತಿಯಲ್ಲಿ ತೀರ್ಮಾನ ಮಾಡಲಾಗುವುದು. ಕಾನೂನಿನ ಚೌಕಟ್ಟಿನಲ್ಲಿ ಅದನ್ನು ಮಾಡಲಾಗುವುದು. ಕಾನೂನಿನ ನಿರ್ಬಂಧದಿಂದ ಜಟಿಲವಾಗಿರುವ ಸಮಸ್ಯೆಗೆ ಪರಿಹಾರವನ್ನು ಕಲ್ಪಿಸಲಾಗುವುದು ಎಂದರು.

ಕಿತ್ತೂರು ಕೋಟೆಯನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.

ಅವನತಿಗೊಂಡಿರುವ ಕಿತ್ತೂರು ಅರಮನೆಯ ಪ್ರತಿರೂಪವನ್ನು ಮರು ಸೃಷ್ಟಿಸಲಾಗುವುದು. ಚನ್ನಮ್ಮ ಬಳಸಿದ್ದ ಖಡ್ಗ ಸೇರಿದಂತೆ ಎಲ್ಲ ವಸ್ತುಗಳನ್ನೂ ಎಲ್ಲೆಲ್ಲಿವೆಯೋ ಅಲ್ಲಿಂದ ತರಿಸಲು ಕ್ರಮ‌ ವಹಿಸಲಾಗುವುದು. ಈ ಬಗ್ಗೆ ವರದಿ ಸಲ್ಲಿಕೆಯಾಗಿದೆ. ಅದರಂತೆ ಕ್ರಮ ವಹಿಸಲಾಗುವುದು ಎಂದರು.

ಕಿತ್ತೂರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ತಂದುಕೊಡಲು ಬೇಕಾದ ಕ್ರಮವನ್ನು ನಮ್ಮ‌ ಸರ್ಕಾರ ಮಾಡಲಿದೆ ಎಂದು ತಿಳಿಸಿದರು.

ರಾಯಣ್ಣನ ಸೈನಿಕ‌ ಶಾಲೆಯನ್ನು ಸೈನ್ಯದ ವ್ಯಾಪ್ತಿಗೆ ತರುವಂತೆ ಕೇಂದ್ರ ಸಚಿವರನ್ನು ಕೋರಿದ್ದೇನೆ ಎಂದರು.

ಉತ್ಸವದಲ್ಲಿ ಪಾಲ್ಗೊಂಡಿದ್ದು ನನ್ನ ಸೌಭಾಗ್ಯವೆಂದು ಭಾವಿಸಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.

ಕಿತ್ತೂರು ಉತ್ಸವದ ಬೆಳ್ಳಿ ಹಬ್ಬ ಇದಾಗಿದ್ದು, ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಲಿಂಗಾಯತ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಹರಿಹರದ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ಸಚಿವರಾದ ಉಮೇಶ ಕತ್ತಿ, ಮುರುಗೇಶ ನಿರಾಣಿ, ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ, ವಿಧಾನಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಸಂಸದರಾದ ಮಂಗಲಾ ಅಂಗಡಿ,‌ ಈರಣ್ಣ ಕಡಾಡಿ ಹಾಗೂ ಅಣ್ಣಾಸಾಹೇಬ ಜೊಲ್ಲೆ, ಶಾಸಕರಾದ ಅನಿಲ ಬೆನಕೆ, ಮಹಾದೇವಪ್ಪ ಯಾದವಾಡ, ಮಹೇಶ ಕುಮಠಳ್ಳಿ ಭಾಗವಹಿಸಿದ್ದರು. ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಅಧ್ಯಕ್ಷತೆ ವಹಿಸಿದ್ದರು.

ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ಜಿಲ್ಲಾ ಉತ್ಸವವಾಗಿರುವ ಇದನ್ನು ರಾಜ್ಯ ಮಟ್ಟದ ಉತ್ಸವ ಎಂದು ಘೋಷಿಸಬೇಕು. ಮುಂಬೈ ಕರ್ನಾಟಕಕ್ಕೆ ಕಿತ್ತೂರು ಕರ್ನಾಟಕ ಎಂದು ಮರುನಾಮಕರಣ ಮಾಡಬೇಕು. ಕಲ್ಯಾಣ ಕರ್ನಾಟಕದ ಮಾದರಿಯಲ್ಲಿ ಕಿತ್ತೂರು ಕರ್ನಾಟಕಕ್ಕೂ ವಿಶೇಷ ಅನುದಾನ ಕೊಡಬೇಕು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳನ್ನು ಇಲ್ಲಿ ಆರಂಭಿಸಬೇಕು. ಅದಕ್ಕೆ ಅಗತ್ಯವಾದ ಜಾಗ ಒದಗಿಸಲು ಸಿದ್ಧವಿದ್ದೇವೆ ಎಂದು ತಿಳಿಸಿದರು.

ಕಿತ್ತೂರು ಉತ್ಸವಕ್ಕೆ ₹ 2 ಕೋಟಿ ಅನುದಾನ ಕೊಡಬೇಕು. ನೀರಿನ‌ ಕೊರತೆ ಇರುವ ಕಡೆಗಳಿಗೆ ಏತ ನೀರಾವರಿ ಯೋಜನೆ ನೀಡಬೇಕು ಎಂದು ಒತ್ತಾಯಿಸಿದರು.

ಚನ್ನಮ್ಮ ಅಭಿವೃದ್ಧಿ ಪ್ರಾಧಿಕಾರಕ್ಕೆ ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ₹ 50 ಕೋಟಿ ನೀಡಿದ್ದಾರೆ. ಅದರಲ್ಲಿ ₹ 10 ಕೋಟಿ ಬಿಡುಗಡೆ ಆಗಿದೆ. ₹ 40 ಕೋಟಿಯನ್ನು ಹಾಗೂ ಒಟ್ಟು ಪ್ರಸ್ತಾವದ ಬಾಕಿ ₹ 150 ಕೋಟೆಯನ್ನು ಮುಂದಿನ ಬಜೆಟ್‌ನಲ್ಲಿ ಒದಗಿಸಬೇಕು ಎಂದು ಮುಖ್ಯಮಂತ್ರಿಯನ್ನು ಆಗ್ರಹಿಸಿದರು.

ಕಿತ್ತೂರಿನಲ್ಲಿ ಅಂತರರಾಷ್ಟ್ರೀಯ ವಿಮಾನನಿಲ್ದಾಣ ಮಾಡಬೇಕು. ಕಿತ್ತೂರು ಕೋಟೆಯನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಣೆ ಮಾಡಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ‌ ಜೋಶಿ ಅವರನ್ನು ಕೋರಿದರು.

ರಾಣಿ ಚನ್ನಮ್ಮನಿಗೆ ಸಿಗಬೇಕಾದ ಗೌರವ ಸಿಕ್ಕಿಲ್ಲ: ಜೋಶಿ

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ರಾಣಿ ಚನ್ನಮ್ಮನಿಗೆ ಸಿಗಬೇಕಾದ ಗೌರವ ಸಿಕ್ಕಿಲ್ಲ. ದೊಡ್ಡ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಹೋರಾಡಿದ ಚನ್ನಮ್ಮ ಕಪ್ಪ ಕೊಡದೆ ದಿಟ್ಟತೆ ತೋರಿದ ಕೀರ್ತಿ ಸಲ್ಲುತ್ತದೆ. ರಾಯಣ್ಣನ ಮೇಲೆ ಬಲವಾದ ವಿಶ್ವಾಸವನ್ನು ಇಟ್ಟಿದ್ದರು ಎಂದು ಸ್ಮರಿಸಿದರು.

ಕಿತ್ತೂರು ಉತ್ಸವವನ್ನು ರಾಜ್ಯ ಮಟ್ಟದ ಉತ್ಸವ ಮಾಡಿದರೆ ಬರುವ ಹೆಚ್ಚಿನ‌ ಅನುದಾನದಲ್ಲಿ ಶಾಲಾ- ಕಾಲೇಜುಗಳಲ್ಲಿ ಪ್ರಬಂಧ, ಭಾಷಣ ಸ್ಪರ್ಧೆ ಹಾಗೂ ನಾಟಕ ಸ್ಪರ್ಧೆ ನಡೆಸಬೇಕು ಎಂದು ಸಲಹೆ ನೀಡಿದರು. ಇಲ್ಲವಾದಲ್ಲಿ ಇತಿಹಾಸವನ್ನು ನಾವು ಮರುರಚನೆ ಮಾಡಲಾಗುವುದಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT