ಭಾನುವಾರ, ಸೆಪ್ಟೆಂಬರ್ 26, 2021
24 °C

ಬೆಳಗಾವಿ ಮಹಾನಗರ ಪಾಲಿಕೆ: 385 ಅಭ್ಯರ್ಥಿಗಳ ಭವಿಷ್ಯ ನಿರ್ಧಾರಕ್ಕೆ ಕ್ಷಣಗಣನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇದೇ ಪ್ರಥಮ ಬಾರಿಗೆ ರಾಜಕೀಯ ಪಕ್ಷಗಳ ಚಿಹ್ನೆಗಳ ಆಧಾರದ ಮೇಲೆ ನಡೆಯುತ್ತಿರುವುದರಿಂದಾಗಿ ರಾಜ್ಯದ ಗಮನಸೆಳೆದಿರುವ ಇಲ್ಲಿನ  ಮಹಾನಗರಪಾಲಿಕೆ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ.

ಶುಕ್ರವಾರ ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದ್ದು, 58 ವಾರ್ಡ್‌ಗಳಲ್ಲಿ ಕಣದಲ್ಲಿರುವ 385 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಹಕ್ಕು ಚಲಾಯಿಸುವುದಕ್ಕೆ ಮತದಾರರು ಸಿದ್ಧವಾಗಿದ್ದು, ಜಿಲ್ಲಾಡಳಿತದಿಂದ ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆ. ಕೋವಿಡ್ ಭೀತಿಯ ಕಾರಣದಿಂದ ಒಂದು ತಾಸು ಹೆಚ್ಚುವರಿ ಸಮಯವನ್ನು ನೀಡಲಾಗಿದೆ. ಮತಗಟ್ಟೆಗಳಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆಗೆ ಒತ್ತು ನೀಡಲಾಗಿದೆ. ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮತದಾರರು ಹಕ್ಕು ಚಲಾಯಿಸಲು ಅನುಕೂಲ ಆಗಲೆಂದು ಸಾರ್ವತ್ರಿಕ ರಜೆ ಘೋಷಿಸಲಾಗಿದೆ.

ಮಹಿಳಾ ಮತದಾರರು ಹೆಚ್ಚು:

ಇಲ್ಲಿ ಒಟ್ಟು 58 ವಾರ್ಡ್‌ಗಳಿದ್ದು, 385 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ–55, ಕಾಂಗ್ರೆಸ್‌– 45, ಆಮ್ ಆದ್ಮಿ ಪಕ್ಷ– 27, ಜೆಡಿಎಸ್– 11,  ಎಐಎಂಐಎಂ–7, ಎಸ್‌ಡಿಪಿಐ– 1, ಉತ್ತಮ ಪ್ರಜಾಕೀಯ ಪಕ್ಷ–1, ಪಕ್ಷೇತರರು 238 ಮಂದಿ ಕಣದಲ್ಲಿದ್ದಾರೆ. 2,13,526 ಪುರುಷರು ಮತ್ತು 2,14,838 ಮಹಿಳೆಯರು ಸೇರಿ ಒಟ್ಟು 4,28,363 ಮತದಾರರು ಇದ್ದಾರೆ. ಮಹಿಳಾ ಮತದಾರರು ನಿರ್ಣಾಯಕರಾಗಿದ್ದಾರೆ.

415 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿಗೆ ತರಬೇತಿ ನೀಡಿ ಸಜ್ಜುಗೊಳಿಸಲಾಗಿದೆ. ಅವರಿಗೆ ಇವಿಎಂ (ವಿದ್ಯುನ್ಮಾನ ಮತಯಂತ್ರ)ಗಳನ್ನು ಹಂಚಿಕೆ ಮಾಡುವ ಕೆಲಸ ಇಲ್ಲಿನ ಬಿ.ಕೆ. ಮಾಡೆಲ್‌ ಶಾಲೆಯಲ್ಲಿ ಗುರುವಾರ ನಡೆಯಿತು. ಸಾಮಗ್ರಿಗಳನ್ನು ಪಡೆದುಕೊಂಡು ಪರಿಶೀಲಿಸಿಕೊಂಡ ಅವರು, ತಮಗೆ ನಿಗದಿಯಾದ ಮತಗಟ್ಟೆಗಳತ್ತ ತಲುಪಿಸಿದ್ದಾರೆ. ಅವರಿಗಾಗಿ ಜಿಲ್ಲಾಡಳಿತದಿಂದ ಬಸ್‌ಗಳ ವ್ಯವಸ್ಥೆ ಮಾಡಲಾಯಿತು.

ತೀವ್ರ ಪೈಪೋಟಿ:

ಈವರೆಗೆ ಕನ್ನಡ, ಮರಾಠಿ, ಉರ್ದು ಭಾಷೆಯ ಆಧಾರದ ಮೇಲೆ ನಡೆಯುತ್ತಿದ್ದ ಚುನಾವಣೆಯು ಈ ಬಾರಿ ಪಕ್ಷಗಳ ರಂಗಪ್ರವೇಶದಿಂದ ರಂಗೇರಿದೆ. ಪಕ್ಷಗಳು ಪ್ರಚಾರಕ್ಕಾಗಿ ತಮ್ಮ ಶ್ರಮವನ್ನು ಹಾಕಿವೆ.

ಬಿಜೆಪಿಯು ಗರಿಷ್ಠ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಕಾರ್ಯಕರ್ತರಿಗೆ ಹಾಗೂ ಹೊಸ ಮುಖಗಳಿಗೆ ಅವಕಾಶ ಕಲ್ಪಿಸಿದೆ. ತಮ್ಮವರನ್ನು ಗೆಲ್ಲಿಸಿಕೊಳ್ಳಲು ಆ ಪಕ್ಷದ ಮುಖಂಡರು ವ್ಯಾಪಕ ಪ್ರಚಾರ ನಡೆಸಿದ್ದಾರೆ. ಕಾಂಗ್ರೆಸ್‌ ಕೂಡ ಪ್ರತಿಷ್ಠೆಯಾಗಿ ಸ್ವೀಕರಿಸಿದೆ. ಮತ್ತೊಂದೆಡೆ ಪಕ್ಷೇತರರು ಕೂಡ ತೀವ್ರ ಪೈಪೋಟಿ ನೀಡಿದ್ದಾರೆ. ಆಮ್‌ ಆದ್ಮಿ ‍ಪಕ್ಷ ಮತ್ತು ಎಐಎಂಐಎಂ ಖಾತೆ ತೆರೆಯಲು ತಂತ್ರ ರೂಪಿಸಿವೆ. ಮತದಾರ ಪ್ರಭುಗಳು ಯಾರಿಗೆ ಮಣೆ ಹಾಕುತ್ತಾರೆ ಎನ್ನುವುದು ನಿರ್ಧಾರವಾಗಲಿದೆ. ತಮ್ಮ ವಾರ್ಡ್‌ನ ಜನಪ್ರತಿನಿಧಿ ಆಯ್ಕೆ ಮಾಡಿಕೊಳ್ಳುವ ಅವಕಾಶ ಸದ್ಬಳಕೆಗೆ ಮತದಾರರು ಮುಂದಾಗಿದ್ದಾರೆ.

ಹಲವು ದಿನಗಳಿಂದ ಅಬ್ಬರದ ಪ್ರಚಾರ ನಡೆಸಿದ್ದ ಮುಖಂಡರು, ಮತದಾರರ ಮನವೊಲಿಕೆಗೆ ಕೊನೆ ಕ್ಷಣದ ಕಸರತ್ತನ್ನು ಗುರುವಾರವೂ ಮುಂದುವರಿಸಿದರು. ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತ ಯಾಚಿಸಿದರು.

ಪೊಲೀಸರ ನಿಯೋಜನೆ:

415 ಮತಗಟ್ಟೆಗಳ ಪೈಕಿ 142 ಸೂಕ್ಷ್ಮ ಹಾಗೂ 207 ಮತಗಟ್ಟೆಗಳಿವೆ. 1,828 ಮತಗಟ್ಟೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮಾದರಿ ನೀತಿಸಂಹಿತೆ ಉಲ್ಲಂಘಿಸಿ ಅಕ್ರಮವಾಗಿ ಮದ್ಯ ಸರಬರಾಜು ಮಾಡುತ್ತಿದ್ದ ವಾಹನಗಳ ಮೇಲೆಯೂ ದಾಳಿ ನಡೆಸಲಾಗಿದೆ. 1,400 ಲೀಟರ್ ಮದ್ಯ, 228 ಲೀಟರ್ ಬಿಯರ್‌ ಹಾಗೂ 260 ಲೀಟರ್ ಕಳ್ಳಬಟ್ಟಿ ವಶಪಡಿಸಿಕೊಂಡು 6 ವಾಹನಗಳನ್ನು ‌ಜಪ್ತಿ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ನಗರದಾದ್ಯಂತ ವಿಶೇಷವಾಗಿ ಮತಗಟ್ಟೆಗಳ ಬಳಿ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ಕಿಡಿಗೇಡಿಗಳ ಮೇಲೆ ನಿಗಾ: ಡಿಸಿಪಿ

‘ನಗರ ಪೊಲೀಸ್ ಆಯುಕ್ತಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ 6 ಕೆಎಸ್ಆರ್‌ಪಿ ತುಕಡಿಗಳು, 4 ಐಆರ್‌ಬಿ ತುಕಡಿಗಳು, ಗೃಹರಕ್ಷಕ ದಳದ 300 ಸಿಬ್ಬಂದಿ ಮತ್ತು 75 ಹೆಚ್ಚುವರಿ ಸಿಬ್ಬಂದಿಯನ್ನು ಬಂದೋಬಸ್ತ್‌ಗಾಗಿ ನಿಯೋಜಿಸಲಾಗಿದೆ. ಪಥಸಂಚಲನ ನಡೆಸಿ, ಸಾರ್ವಜನಿಕರಿಗೆ ಧೈರ್ಯ ತುಂಬುವ ಕೆಲಸ ಮಾಡಲಾಗಿದೆ’ ಎಂದು ಡಿಸಿ‍ಪಿ ವಿಕ್ರಂ ಅಮಟೆ ತಿಳಿಸಿದರು.

ಇಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗಿದೆ. 15ರಿಂದ 20 ಮತಗಟ್ಟೆಗಳಿಗೆ ಪೊಲೀಸ್ ಸೆ‌ಕ್ಟರ್‌ ಅಧಿಕಾರಿಗಳನ್ನು ನೇಮಿಸಲಾಗಿದೆ. ಅಧಿಕಾರಿಗಳು ಮೇಲ್ವಿಚಾರಣೆ ನೋಡಿಕೊಳ್ಳುತ್ತೇವೆ. ಸಾರ್ವಜನಿಕರು ಯಾವುದೇ ಭೀತಿ ಇಲ್ಲದೆ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಮಾಹಿತಿ ನೀಡಿದರು.

‘ನೀತಿಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ 2 ಪ್ರಕರಣ ದಾಖಲಾಗಿದೆ. ಚುನಾವಣಾ ನೀತಿಸಂಹಿತೆ ಹಿನ್ನೆಲೆಯಲ್ಲಿ 612 ಆಯುಧಗಳನ್ನು ಠೇವಣಿ ಪಡೆದುಕೊಳ್ಳಲಾಗಿದೆ. 600ಕ್ಕೂ ಹೆಚ್ಚು ರೌಡಿಗಳು ಹಾಗೂ ಕಿಡಿಗೇಡಿಗಳ ಮೇಲೆ ಎಚ್ಚರಿಕೆ ನೀಡಲಾಗಿದೆ. ಕೆಲವರ ಮೇಲೆ ನಿಗಾ ವಹಿಸಲಾಗಿದೆ. ಎಲ್ಲ ಮತಗಟ್ಟೆಗಳ 100 ಮೀಟರ್ ವ್ಯಾಪ್ತಿಯಲ್ಲಿ 144 ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಕೋವಿಡ್ ನಿಯಮ ಪಾಲನೆಗೂ ನಿಗಾ ವಹಿಸುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ. ಮತಗಟ್ಟೆಗಳ ಬಳಿ ಟೆಂಟ್‌ಗಳನ್ನು ಹಾಕಿ ಜನರು ಸೇರಿಸುವಂತಿಲ್ಲ’ ಎಂದು ತಿಳಿಸಿದರು.

ಅಂಕಿ ಅಂಶ

58

ವಾರ್ಡ್‌ಗಳು

385

ಅಭ್ಯರ್ಥಿಗಳು

55

ಬಿಜೆಪಿ

45

ಕಾಂಗ್ರೆಸ್

285

ಪಕ್ಷೇತರರು

415

ಮತಗಟ್ಟೆಗಳು

4,28,363

ಮತದಾರರು

ಸಿದ್ಧತೆ ಮಾಡಿಕೊಳ್ಳಲಾಗಿದೆ

ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಾಗಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮತದಾರರು ನಿರ್ಭೀತಿಯಿಂದ ಹಕ್ಕು ಚಲಾಯಿಸಬೇಕು.

–ಎಂ.ಜಿ. ಹಿರೇಮಠ, ಜಿಲ್ಲಾ ಚುನಾವಣಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು