ಸೋಮವಾರ, ಫೆಬ್ರವರಿ 24, 2020
19 °C
ಜನಪ್ರತಿನಿಧಿಗಳಿಲ್ಲದೇ ಬರೋಬ್ಬರಿ 11 ತಿಂಗಳಾಗಿವೆ

ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆ ಯಾವಾಗ?!

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆ ಚುನಾಯಿತ ಸದಸ್ಯರ ಅಧಿಕಾರದ ಅವಧಿ (ಐದು ವರ್ಷಗಳು) ಪೂರ್ಣಗೊಂಡು ಬರೋಬ್ಬರಿ ಹನ್ನೊಂದು ತಿಂಗಳುಗಳೇ ಕಳೆದಿವೆ. ಆದರೆ, ಚುನಾವಣೆ ಯಾವಾಗ ಎನ್ನುವುದು ಇನ್ನೂ ಸ್ಪಷ್ಟವಿಲ್ಲ!

ಲೋಕಸಭಾ ಚುನಾವಣೆ ನಂತರ ಈ ಸ್ಥಳೀಯ ಸಂಸ್ಥೆಯ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ ಎಂಬ ನಿರೀಕ್ಷಿಸಲಾಗಿತ್ತು. ಆದರೆ, ನಡೆದಿಲ್ಲ. ಹೀಗಾಗಿ, ಸರ್ಕಾರದಿಂದ ನೇಮಿಸಿದ ಆಡಳಿತಾಧಿಕಾರಿ ಉಸ್ತುವಾರಿ ವಹಿಸಿದ್ದಾರೆ. ಪ್ರಸ್ತುತ ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಅವರಿಗೆ ಈ ಜವಾಬ್ದಾರಿ ಕೊಡಲಾಗಿದೆ.

2014ರ ಮಾರ್ಚ್‌ 10ರಂದು ಅಸ್ತಿತ್ವಕ್ಕೆ ಬಂದಿದ್ದ ನೂತನ ಆಡಳಿತ ಮಂಡಳಿಯ ಅಧಿಕಾರದ ಅವಧಿ 2019ರ ಮಾರ್ಚ್‌ 9ರವರೆಗೆ ಇತ್ತು. ಅಂದು ಶನಿವಾರ ಆಗಿದ್ದರಿಂದಾಗಿ, ಮುನ್ನಾ ದಿನವಾದ ಶುಕ್ರವಾರವೇ ಸದಸ್ಯರ ಅಧಿಕಾರ ಪೂರ್ಣಗೊಂಡಿತ್ತು.

ಎಲ್ಲರೂ ಬೆಂಬಲಿತರೆ:

58 ಸದಸ್ಯ ಬಲದ ಸಂಸ್ಥೆಗೆ 2014ರಲ್ಲಿ ಚುನಾವಣೆ ನಡೆದಿತ್ತು. ಇಲ್ಲಿ ಪಕ್ಷಗಳಿಂದ ಯಾರೂ ಸ್ಪರ್ಧಿಸಿರಲಿಲ್ಲ. ಎಲ್ಲರೂ ಬೆಂಬಲಿತರೇ ಇದ್ದರು. 32 ಎಂಇಎಸ್‌ ಬೆಂಬಲಿತ ಸದಸ್ಯರು ಹಾಗೂ ಇತರ (ಕನ್ನಡ ಮತ್ತು ಉರ್ದು ಭಾಷಿಕರು) 26 ಸದಸ್ಯರು ಆಯ್ಕೆಯಾಗಿದ್ದರು. ಮೊದಲ ನಾಲ್ಕು ಅವಧಿಗಳಿಗೆ ಎಂಇಎಸ್ ಬೆಂಬಲಿತರೇ ಮೇಯರ್‌ ಹಾಗೂ ಉಪ ಮೇಯರ್‌ ಆಗಿದ್ದರು. ಕೊನೆ ಅವಧಿಯಲ್ಲಿ ಮೀಸಲಾತಿ ಬಲದಿಂದಾಗಿ ಕನ್ನಡ ಭಾಷಿಕ ಸದಸ್ಯ ಬಸಪ್ಪ ಚಿಕ್ಕಲದಿನ್ನಿ ಅವರಿಗೆ ಮೇಯರ್‌ ಗಾದಿ ಒಲಿದಿತ್ತು. ಈ ಹುದ್ದೆ ಪ.ಪಂಗಡಕ್ಕೆ ಮೀಸಲಾಗಿದ್ದು ಈ ಪಾಲಿಕೆ ಇತಿಹಾಸಲ್ಲಿಯೇ ಮೊದಲಾಗಿತ್ತು. ಎಂಇಎಸ್‌ ಬೆಂಬಲಿತ ಸದಸ್ಯೆ ಮಧುಶ್ರೀ ಪೂಜಾರಿ ಉಪ ಮೇಯರ್ ಆಗಿದ್ದರು.

ವಾರ್ಡ್‌ಗಳ ವ್ಯಾಪ್ತಿ ಪುನರ್‌ವಿಂಗಡಣೆ ಮತ್ತು ಮೀಸಲಾತಿ ವಿಷಯದಲ್ಲಿ ಕೆಲವರು ಹೈಕೋರ್ಟ್‌ ಮೊರೆ ಹೋಗಿದ್ದರು. ಹೀಗಾಗಿ, ಚುನಾವಣೆ ಪ್ರಕ್ರಿಯೆ ನಡೆಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗುತ್ತಿದೆ. ಆದರೆ, ಈಗಾಗಲೇ ಮಾಜಿ ಆಗಿರುವವರು ಹಾಗೂ ಹೊಸ ಆಕಾಂಕ್ಷಿಗಳು ಚುನಾವಣೆಗಾಗಿ ಕಾಯುತ್ತಿದ್ದಾರೆ. ಸ್ಥಳೀಯವಾಗಿ ‘ಸಿದ್ಧತೆ’ಯಲ್ಲಿ ತೊಡಗಿದ್ದಾರೆ. ಯಾವ ವಾರ್ಡ್‌ ಯಾವ ವರ್ಗಕ್ಕೆ ಮೀಸಲಾಗಿದೆ ಎನ್ನುವ ವಿಷಯದಲ್ಲೂ ಸ್ಪಷ್ಟತೆ ಇಲ್ಲ!

ಬಹಳ ತಡವಾಗಿದೆ: ‘ಅಧಿಕಾರದ ಅವಧಿ ಮುಗಿದು 6 ತಿಂಗಳೊಳಗೆ ಚುನಾವಣೆ ನಡೆಸಬೇಕಿತ್ತು. ಈಗಾಗಲೇ ಬಹಳ ತಡವಾಗಿದೆ. ಇದು, ಅಭಿವೃದ್ಧಿ ಕೆಲಸಗಳ ಮೇಲೆ ಪರಿಣಾಮ ಬೀರಿದೆ. ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ, ಕೂಡಲೇ ಚುನಾವಣೆ ನಡೆಸಬೇಕು’ ಎಂದು ಒತ್ತಾಯಿಸಿ ನಗರಪಾಲಿಕೆ ಮಾಜಿ ಸದಸ್ಯರ ಸಂಘದವರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು.

ನಗರದ ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ ಒಂದೆರಡು ಬಾರಿ ಸಭೆ ನಡೆಸಿದ್ದಾರೆ. ಇದು ಬಿಟ್ಟರೆ, ಕೌನ್ಸಿಲ್‌ ಸಭೆ ಜರುಗುತ್ತಿಲ್ಲವಾದ್ದರಿಂದ ಕಾಮಗಾರಿಗಳ ಪ್ರಗತಿ ಪರಿಶೀಲನೆ ಆಗುತ್ತಿಲ್ಲ. ಇದರಿಂದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಆರೋಪಿಸಲಾಗುತ್ತಿದೆ.

ಸಂಪರ್ಕದಲ್ಲಿರುತ್ತಾರೆ: ‘ಜನಪ್ರತಿನಿಧಿಗಳು ಇಲ್ಲದಿರುವುದರಿಂದ ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದೆ. ತ್ಯಾಜ್ಯ ವಿಲೇವಾರಿ, ನೀರು ಪೂರೈಕೆ, ಬೀದಿದೀಪಗಳ ನಿರ್ವಹಣೆ ಮೊದಲಾದ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ. ಚುನಾಯಿತ ಜನಪ್ರತಿನಿಧಿಗಳು ಜನರೊಂದಿಗೆ ನೇರ ಸಂಪರ್ಕ ಹೊಂದಿರುತ್ತಾರೆ. ಅವರು ಇಂತಹ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ವಹಿಸುತ್ತಾರೆ. ಆದರೀಗ, ಜನರು ಎಲ್ಲದಕ್ಕೂ ಅಧಿಕಾರಿಗಳ ಬಳಿಗೇ ಹೋಗಬೇಕಾಗಿದೆ’ ಎಂದು ನಗರಪಾಲಿಕೆ ಮಾಜಿ ಸದಸ್ಯ ರಮೇಶ ಸೊಂಟಕ್ಕಿ ತಿಳಿಸಿದರು.

‘ಜನಪ್ರತಿನಿಧಿಗಳು ಇಲ್ಲದಿರುವುದರಿಂದ ಆಡಳಿತಕ್ಕೆ ತೊಂದರೆಯಾಗಿಲ್ಲ. ಸಮಸ್ಯೆಗಳಿದ್ದಲ್ಲಿ, ಜನರು ನೇರವಾಗಿ ಸಂಬಂಧಿಸಿದ ವಿಭಾಗಗಳ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಸರ್ಕಾರದಿಂದ ಆದೇಶ ಬಂದ ಬಳಿಕ ಚುನಾವಣೆ ನಡೆಯುತ್ತದೆ’ ಎಂದು ನಗರಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು