ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ | ಗುಂಪು ಘರ್ಷಣೆ: 10 ಮಂದಿ ಬಂಧನ

Published 24 ಮೇ 2024, 8:30 IST
Last Updated 24 ಮೇ 2024, 8:30 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಶಹಾಪುರದ ಆಳ್ವಾನ್‌ ಗಲ್ಲಿಯಲ್ಲಿ ಗುರುವಾರ ಮಕ್ಕಳ ನಡುವಿನ ‘ಕ್ರಿಕೆಟ್ ಜಗಳ’ ವಿಕೋಪಕ್ಕೆ ಹೋದ ಪರಿಣಾಮ ಎರಡು ಗುಂಪುಗಳ ಮಧ್ಯೆ ನಡೆದ ಘರ್ಷಣೆಗೆ ಸಂಬಂಧಿಸಿ, ಪೊಲೀಸರು ಶುಕ್ರವಾರ 10 ಜನರನ್ನು ಬಂಧಿಸಿದ್ದಾರೆ. ಸದ್ಯ ಈ ಪ್ರದೇಶದಲ್ಲಿ ಪರಿಸ್ಥಿತಿ ಹತೋಟಿಗೆ ಬಂದಿದೆ.

ಆಳ್ವಾನ್‌ ಗಲ್ಲಿಯ ಶಾಲೆ ಮೈದಾನದಲ್ಲಿ ಮಕ್ಕಳು ಕ್ರಿಕೆಟ್‌ ಆಡುವಾಗ ಜಗಳವಾಗಿದೆ. ಅವರು ಮನೆಗೆ ತೆರಳಿ ಪಾಲಕರಿಗೆ ವಿಷಯ ತಿಳಿಸಿದ ನಂತರ, ಎರಡೂ ಕಡೆಯವರು ಬಂದು ಹೊಡೆದಾಡಿಕೊಂಡರು. ಪರಸ್ಪರರು ತಮ್ಮ ಮನೆಗಳ ಮೇಲೆ ಕಲ್ಲುತೂರಾಟ ನಡೆಸಿದರು. ಇದರಿಂದಾಗಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು, ಎರಡು ಗುಂಪುಗಳನ್ನು ಹತ್ತಿಕ್ಕಲು ಯತ್ನಿಸಿದರು. ‘ಕಲ್ಲುತೂರಾಟ ಮಾಡಿದವರ ಮತ್ತು ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಿದವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿ ಮತ್ತೊಂದು ಗುಂಪಿನ ಜನರು ಶಹಾಪುರ ಪೊಲೀಸ್ ಠಾಣೆ ಎದುರು ಜಮಾಯಿಸಿದರು.

ಈ ಘರ್ಷಣೆಯಲ್ಲಿ ವ್ಯಕ್ತಿಯೊಬ್ಬ ಪೊಲೀಸರ ಸಮ್ಮುಖದಲ್ಲೇ ತಲ್ವಾರ್‌ ಪ್ರದರ್ಶಿಸಿರುವುದು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೆಎಸ್‌ಆರ್‌ಪಿಯ ಮೂರು ತುಕಡಿಗಳನ್ನು ಆಳ್ವಾನ್‌ ಗಲ್ಲಿಯಲ್ಲಿ ನಿಯೋಜಿಸಲಾಗಿದ್ದು, ಬಿಗಿ ಭದ್ರತೆ ಮುಂದುವರಿಸಲಾಗಿದೆ.

ನಗರ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್‌, ನಗರ ಪೊಲೀಸ್‌ ಉಪ ಆಯುಕ್ತ(ಕಾನೂನು ಮತ್ತು ಸುವ್ಯವಸ್ಥೆ) ರೋಹನ ಜಗದೀಶ್‌ ಮತ್ತಿತರ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿದರು.

ಆಳ್ವಾನ್‌ ಗಲ್ಲಿಯಲ್ಲಿ ಈಗ ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ, ಯುವಕರು ಮತ್ತು ಮಕ್ಕಳ ಓಡಾಟ ವಿರಳವಾಗಿತ್ತು. ಮಹಿಳೆಯರು ಎಂದಿನಂತೆ ತಮ್ಮ ಕೆಲಸದಲ್ಲಿ ನಿರತವಾಗಿದ್ದು ಕಂಡುಬಂತು.

ಎಲ್ಲ ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದೇವೆ: ಕಮಿಷನರ್‌

ಬೆಳಗಾವಿ: ‘ಇಲ್ಲಿನ ಶಹಾಪುರದ ಆಳ್ವಾನ್‌ ಗಲ್ಲಿಯಲ್ಲಿ ನಡೆದ ಗುಂಪು ಘರ್ಷಣೆಗೆ ಸಂಬಂಧಿಸಿ, ಶಹಾಪುರ ಪೊಲೀಸ್‌ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದ್ದು, ಎಲ್ಲ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದೇವೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ಹೇಳಿದರು.

ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕ್ರಿಕೆಟ್‌ ಪಂದ್ಯದಲ್ಲಿ ಬಾಲ್‌ ತರುವ ವಿಚಾರವಾಗಿ, ಎರಡು ಗುಂಪುಗಳು ಮಧ್ಯೆ ಸಣ್ಣ ಗಲಾಟೆಯಾಗಿತ್ತು. ಅವರು ಮನೆಗೆ ಬಂದು ವಿಚಾರ ತಿಳಿಸಿದಾಗ, ಮತ್ತೆ ಘರ್ಷಣೆಯಾಗಿದೆ. ಒಂದು ಗುಂಪಿನವರು ಸ್ಟಂಪ್‌ನಿಂದ ಹೊಡೆದರೆ, ಮತ್ತೊಂದು ಗುಂಪಿನವರು ಕಲ್ಲುತೂರಾಟ ಮಾಡಿದ್ದಾರೆ, ಹಲ್ಲೆ ನಡೆಸಿದ್ದಾರೆ. ಸದ್ಯ ಎರಡೂ ಗುಂಪಿನ 10 ಮಂದಿ ಬಂಧಿಸಿದ್ದೇವೆ. ಇದರಲ್ಲಿ ತಲ್ವಾರ್‌ ಹಿಡಿದ ವ್ಯಕ್ತಿಯೂ ಇದ್ದಾರೆ’ ಎಂದರು.

‘ಗಲಾಟೆ ನಡೆದ ಐದೇ ನಿಮಿಷದಲ್ಲಿ ಪೊಲೀಸರು ಘಟನಾ ಸ್ಥಳಕ್ಕೆ ಹೋಗಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಆರೋಪಿಗಳ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ. ನಾಲ್ಕು ವರ್ಷಗಳ ಹಿಂದೆ ಅದೇ ಜಾಗದಲ್ಲಿ ಘರ್ಷಣೆ ನಡೆದಿತ್ತು ಎಂಬ ಮಾಹಿತಿ ಇದೆ. ಆ ಬಗ್ಗೆಯೂ ತನಿಖೆ ಮಾಡುತ್ತಿದ್ದೇವೆ. ನಗರದಲ್ಲಿ ಕಾನೂನು ಉಲ್ಲಂಘಿಸುವವರಿಗೆ ಕಠಿಣ ಶಿಕ್ಷೆ ನೀಡಲಾಗುವುದು’ ಎಂದು ಹೇಳಿದರು.

‘ಸದ್ಯಕ್ಕೆ ಪರಿಸ್ಥಿತಿ ಶಾಂತವಾಗಿದೆ. ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶದಲ್ಲಿ ಭದ್ರತೆಗಾಗಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT