ಬೆಳಗಾವಿ ಉಪ ಚುನಾವಣೆಗೆ ₹ 13.54 ಕೋಟಿ ವೆಚ್ಚ

ಬೆಳಗಾವಿ: ಈಚೆಗೆ ನಡೆದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಜಿಲ್ಲಾಡಳಿತದಿಂದ ₹ 13.54 ಕೋಟಿ ವೆಚ್ಚ ಮಾಡಲಾಗಿದೆ.
ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಅವರು ಪಡೆದಿರುವ ಮಾಹಿತಿಯನ್ನು ಮಾಧ್ಯಮಕ್ಕೆ ಭಾನುವಾರ ಬಿಡುಗಡೆ ಮಾಡಿದ್ದಾರೆ.
ಕ್ಷೇತ್ರ ವ್ಯಾಪ್ತಿಯ 2,566 ಮತಗಟ್ಟೆಗಳಿಗೆ ಚುನಾವಣಾ ವೆಚ್ಚ ಭರಿಸುವ ಉದ್ದೇಶಕ್ಕೆಂದು ತಲಾ ₹ 30ಸಾವಿರ ನಿಗದಿಪಡಿಸಿ ತಹಶೀಲ್ದಾರ್‌ಗಳಿಗೆ ಹಂಚಿಕೆ ಮಾಡಲಾಗಿದೆ. ಆ ಮೊತ್ತವೇ ₹ 8.69 ಕೋಟಿ ಆಗುತ್ತದೆ. ಇದರಲ್ಲಿ ಜಿಲ್ಲಾಧಿಕಾರಿ ಕಚೇರಿಗೂ ₹ 1 ಕೋಟಿ ನೀಡಲಾಗಿದೆ.
ವಿವಿಧ ಜಿಲ್ಲೆಗಳಿಂದ ಇವಿಎಂ ಮೊದಲಾದ ಸಾಮಗ್ರಿಗಳನ್ನು ಸಾಗಿಸಲು ವಾಹನ ಬಾಡಿಗೆಗೆಂದು ರೋಡ್‌ಲೈನ್ಸ್ ಒಂದಕ್ಕೆ ₹ 27.28 ಲಕ್ಷ ನೀಡಲಾಗಿದೆ. ಚುನಾವಣಾ ವಾಹನಗಳ ಇಂಧನ ಪೂರೈಕೆಗೆ ₹ 1.61 ಲಕ್ಷ ವ್ಯಯಿಸಲಾಗಿದೆ. ವಿವಿಧ ಕಾಮಗಾರಿಗಳನ್ನು ಮಾಡಿದ್ದಕ್ಕಾಗಿ ನಿರ್ಮಿತಿ ಕೇಂದ್ರಕ್ಕೆ ₹ 1.32 ಕೋಟಿ ಕೊಡಲಾಗಿದೆ. ವೀಕ್ಷಕರಿಗೆ ₹ 23,700 ವೆಚ್ಚದಲ್ಲಿ 2 ಮೊಬೈಲ್ ಫೋನ್ ಕೊಡಿಸಲಾಗಿದೆ.
ಸಾಮಾನ್ಯ ವೀಕ್ಷಕರು ಹಾಗೂ ವೆಚ್ಚ ವೀಕ್ಷಕರಿಗೆ ವಿವಿಧ ವೆಚ್ಚವಾಗಿ ₹ 57,680 ಪೂರೈಕೆದಾರರಿಗೆ ನೀಡಲಾಗಿದೆ. ಕೋವಿಡ್–19 ಸಾಮಗ್ರಿ ಪಡೆದಿದ್ದಕ್ಕಾಗಿ ಚುನಾವಣಾ ತರಬೇತಿ ವೇಳೆ ₹ 6.82 ಲಕ್ಷ ಮತ್ತು ಮತದಾನ ದಿನದಂದು ₹ 72.30 ಲಕ್ಷ, ಮತ ಎಣಿಕೆಯಂದು ₹ 2.70 ಲಕ್ಷ ವೆಚ್ಚ ಮಾಡಲಾಗಿದೆ.
‘ಜಿಲ್ಲಾಧಿಕಾರಿ ಕಚೇರಿಗೆ ಪಡೆದ ₹ 1 ಕೋಟಿಯನ್ನು ಯಾವ ಉದ್ದೇಶಕ್ಕಾಗಿ ಬಳಸಲಾಗಿದೆ ಎಂಬ ಮಾಹಿತಿಯನ್ನು ಒದಗಿಸಿಲ್ಲ. ಅವಶ್ಯವಿರುವ ಎಲ್ಲ ಸೌಲಭ್ಯಗಳನ್ನೂ ಜಿಲ್ಲಾಡಳಿತದಿಂದಲೇ ನೀಡುವಾಗ ತಹಶೀಲ್ದಾರ್‌ಗಳ ಕಚೇರಿಗಳಿಗೆ ದೊಡ್ಡ ಪ್ರಮಾಣದಲ್ಲಿ ಹಣ ಕೊಟ್ಟಿರುವುದು ಎಷ್ಟು ಸಮಂಜಸ?’ ಎಂದು ಕೇಳಿದ್ದಾರೆ.
‘ಚುನಾವಣೆಗಾಗಿ ‘ಅತಿ ಜರೂರು’ ಎಂಬ ಕಾರಣದಿಂದ ಪಾರದರ್ಶಕ ಕಾಯ್ದೆಯಿಂದ ಟೆಂಡರ್‌ಗಳಿಗೆ ವಿನಾಯಿತಿ ಪಡೆದು ಕಾಮಗಾರಿಗಳನ್ನು ನಿರ್ವಹಿಸಲು ಜಿಲ್ಲಾಡಳಿತ ಮೂಲಕ ವಿವಿಧ ಏಜೆನ್ಸಿ, ಸಂಸ್ಥೆ ಅಥವಾ ಗುತ್ತಿಗೆದಾರರಿಗೆ ಜವಾಬ್ದಾರಿ ನೀಡಲಾಗಿತ್ತು. ಆದರೆ, ಅವರಿಗೆ ವಹಿಸಿದ ಕಾಮಗಾರಿಗಳನ್ನು ಸಮರ್ಪಕ ಹಾಗೂ ಪಾರದರ್ಶಕವಾಗಿ ನಿರ್ವಹಿಸಿದ್ದಾರೆಯೇ ಎನ್ನುವುದನ್ನು ಅಧಿಕಾರಿಗಳು ಪರಿಶೀಲಿಸಿದ ಬಗ್ಗೆ ಉಲ್ಲೇಖಿಸಿಲ್ಲ. ಅಂಕಿ–ಅಂಶ ಗಮನಿಸಿದರೆ ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡಿರುವುದು ಕಂಡುಬಂದಿದೆ’ ಎಂದು ದೂರಿದ್ದಾರೆ.
ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ನಿಧನದಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆದಿತ್ತು. ಆ ವೇಳೆ ಡಾ.ಕೆ. ಹರೀಶ್‌ಕುಮಾರ್ ಜಿಲ್ಲಾಧಿಕಾರಿ ಆಗಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.