ಮಂಗಳವಾರ, ಜುಲೈ 27, 2021
25 °C

ಚಿನ್ನಾಭರಣ ಖರೀದಿ: ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಲಾಕ್‌ಡೌನ್‌ ತೆರವಾಗುತ್ತಿದ್ದಂತೆಯೇ, ನಗರದಲ್ಲಿ ಚಿನ್ನಾಭರಣ ಖರೀದಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಸೋಮವಾರ ವ್ಯಕ್ತವಾಯಿತು.

ಇಲ್ಲಿನ ಖಡೇಬಜಾರ್‌, ಸಮಾದೇವಿ ಗಲ್ಲಿ, ತಿಲಕವಾಡಿ, ಶಹಾಪುರದ ಅಂಗಡಿಗಳು ಮತ್ತು ಬ್ರಾಂಡೆಡ್ ಚಿನ್ನಾಭರಣ ಮಳಿಗೆಗಳು ಸೇರಿದಂತೆ ನಗರವೊಂದರಲ್ಲೇ 250ಕ್ಕೂ ಹೆಚ್ಚಿನ ಚಿನ್ನಾಭರಣ ಅಂಗಡಿಗಳಿವೆ. ಕೋವಿಡ್ ಕಾರಣದಿಂದ ಒಮ್ಮೆಗೆ ಇಂತಿಷ್ಟು ಮಂದಿಗೆ ಮಾತ್ರ ಅಂಗಡಿಯೊಳಗೆ ಪ್ರವೇಶ ನೀಡಲಾಗುತ್ತಿತ್ತು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪೋತದಾರ್‌ ಜ್ಯುವೆಲ್ಲರ್ಸ್‌ ಅಂಗಡಿ ಮಾಲೀಕ ಅನಿಲ್ ‍‍ಪೋತದಾರ, ‘ಬಹಳ ಜನ ಹಿಂದೆಯೇ ಆರ್ಡರ್‌ ನೀಡಿದ್ದರು. ಬಾಕಿ ಹಣ ಪಾವತಿಸಿ, ಆ ಆಭರಣಗಳನ್ನು ಪಡೆದುಕೊಳ್ಳಲು ಬಂದಿದ್ದರು. ಲಾಕ್‌ಡೌನ್‌ನಿಂದಾಗಿ ಮದುವೆ ಮೊದಲಾದ ಕಾರ್ಯಕ್ರಮಗಳನ್ನು ಮುಂದೂಡಲಾಗಿತ್ತು. ಮುಂಗಡ ಬುಕ್‌ ಮಾಡಿದವರು ಆಭರಣಗಳನ್ನು ತೆಗೆದುಕೊಂಡಿರಲಿಲ್ಲ. ಹೀಗೆ ಪಡೆದುಕೊಳ್ಳಲು ಬಂದಿದ್ದವರೆ ಹೆಚ್ಚಿನ ಸಂಖ್ಯೆಯಲ್ಲಿದ್ದರು’ ಎಂದು ಮಾಹಿತಿ ನೀಡಿದರು.

‘ಸೋಮವಾರ ಶೇ 25ಕ್ಕೂ ಹೆಚ್ಚಿನ ವಹಿವಾಟು ನಡೆದಿದೆ. ನಗರದ ಅಂಗಡಿಗಳಲ್ಲಿ ಅಂದಾಜು ₹ 5 ಕೋಟಿ ವಹಿವಾಟು ಆಗಿರುವ ಲೆಕ್ಕಾಚಾರವಿದೆ. ಲಾಕ್‌ಡೌನ್‌ ತೆರವಾಗುತ್ತಿದ್ದಂತೆಯೇ, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಮುಂಬರುವ ಮದುವೆಗಳಿಗೆ ಒಂದಷ್ಟು ಜನ ಆರ್ಡರ್‌ ನೀಡಿದ್ದಾರೆ. ಕೋವಿಡ್ ಮಾರ್ಗಸೂಚಿ ಪಾಲಿಸಿ ವಹಿವಾಟು ನಡೆಸಲಾಗುತ್ತಿದೆ’ ಎಂದು ಹೇಳಿದರು.

‘ಕರ್ಫ್ಯೂ ಹಾಗೂ ಲಾಕ್‌ಡೌನ್‌ ಕಾರಣದಿಂದ ನಗರವೊಂದರಲ್ಲೇ ₹ 200 ಕೋಟಿಗೂ ಹೆಚ್ಚಿನ ನಷ್ಟ ಉಂಟಾಗಿದೆ’ ಎಂದರು.

‘ಲಾಕ್‌ಡೌನ್‌ಗೆ ಮುಂಚೆ 10 ಗ್ರಾಂ.ಗೆ ₹ 52ಸಾವಿರದವರೆಗೆ ತಲುಪಿತ್ತು. ಈಗ, 49ಸಾವಿರಕ್ಕೆ ಇಳಿದಿದೆ. ಇದರಿಂದ ಗ್ರಾಹಕರಿಗೆ ಅನುಕೂಲವಾಗಿದೆ’ ಎನ್ನುತ್ತಾರೆ ಅವರು.

‘ಅಕ್ಷಯ ತೃತೀಯ ಸಂದರ್ಭದಲ್ಲಿ ಲಾಕ್‌ಡೌನ್‌ ಇತ್ತು. ಆಗ, ಚಿನ್ನಾಭರಣ ತೆಗೆದುಕೊಂಡಿಲ್ಲದವರು ಅಥವಾ ಬುಕ್‌ ಮಾಡಿದ್ದವರು ಖರೀದಿಗೆ ಬಂದಿದ್ದರು. ಮೊದಲ ದಿನವೇ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಮಾರ್ಗಸೂಚಿ ಉಲ್ಲಂಘನೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ’ ಎಂದು ಮಲಬಾರ್‌ ಗೋಲ್ಡ್ ಅಂಡ್ ಡೈಮಂಡ್ಸ್ ಮಳಿಗೆಯ ಹಿರಿಯ ವ್ಯವಹಾರ ಅಭಿವೃದ್ಧಿ ಪ್ರತಿನಿಧಿ ಆನಂದ ಬುಲಬುಲೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು