ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಅಭಿವೃದ್ಧಿಗೆ ಕಾದಿರುವ ಕೈಗಾರಿಕಾ ಪ್ರದೇಶಗಳು

ಮೂಲಸೌಲಭ್ಯಗಳ ಕೊರತೆ; ಪ್ರಗತಿಗಿಲ್ಲ ಮನ್ನಣೆ
Last Updated 3 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯ ಅಲ್ಲಲ್ಲಿ ಇರುವ ಕೈಗಾರಿಕಾ ಪ್ರದೇಶಗಳು ಕನಿಷ್ಠ ಮೂಲಸೌಲಭ್ಯಗಳಿಂದಲೂ ವಂಚಿತವಾಗಿವೆ. ಅಭಿವೃದ್ಧಿಗೆ ಕಾಯುತ್ತಲೇ ಇವೆ.

ನಗರದಲ್ಲಿ ಉದ್ಯಮಬಾಗ್, ಕಾಕತಿ, ಮಚ್ಚೆ, ಹೊನಗಾ, ಆಟೊನಗರ, ಕಿತ್ತೂರಿನಲ್ಲಿ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಸಂಬಂಧಿಸಿದ ಇಲಾಖೆಗಳು ವಿಫಲವಾಗಿವೆ. ಪರಿಣಾಮ ಆ ಪ್ರದೇಶಗಳು ಕೈಗಾರಿಕೋದ್ಯಮಿಗಳನ್ನು ಹೂಡಿಕೆಗೆ ಆಕರ್ಷಿಸುವಲ್ಲಿ ವಿಫಲವಾಗಿವೆ.

ಕಾಲಕಾಲಕ್ಕೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಕೆಲಸ ಇಲ್ಲಿ ನಿಯಮಿತವಾಗಿ ನಡೆಯುತ್ತಿಲ್ಲ. ಕೈಗಾರಿಕೆಗಳ ಬೆಳವಣಿಗೆಗೆ ಬಹಳಷ್ಟು ಅವಕಾಶವಿದ್ದರೂ ಬಳಸಿಕೊಳ್ಳಲಾಗದ ಸ್ಥಿತಿಯಲ್ಲಿ ಇಲ್ಲಿನ ಉದ್ಯಮ ರಂಗದ್ದಾಗಿದೆ.

ಕೈಗಾರಿಕೆಗಳ ಅಭಿವೃದ್ಧಿ ವಿಷಯದಲ್ಲಿ, ಬೆಳಗಾವಿ, ಹುಬ್ಬಳ್ಳಿ–ಧಾರವಾಡವನ್ನು ತ್ರಿವಳಿ ಜಿಲ್ಲೆಗಳನ್ನಾಗಿ ಆದ್ಯತೆಯ ಮೇಲೆ ರೂಪಿಸಲಾಗುವುದು ಎನ್ನುವ ಕೈಗಾರಿಕಾ ಸಚಿವರ ಭರವಸೆಗಳು ಕೇವಲ ಮಾತುಗಳಾಗಿಯೇ ಉಳಿಯುತ್ತಿವೆ. ಆ ಸ್ಥಾನಕ್ಕೆ ಬರುವ ಸಚಿವರೆಲ್ಲರೂ ತ್ರಿವಳಿ ಜಿಲ್ಲೆಯ ಕನಸನ್ನು ಬಿತ್ತುವುದು ನಂತರ ಮರೆಯುವುದು ನಡೆಯುತ್ತಲೇ ಬಂದಿದೆ. ಇದು ಇಲ್ಲಿನ ಕೈಗಾರಿಕೋದ್ಯಮಿಗಳ ಅಸಮಾಧಾನ ಉಂಟು ಮಾಡಿದೆ. ಸರ್ಕಾರಕ್ಕೆ ಮನವಿ ಸಲ್ಲಿಸುವ ಕೆಲಸವನ್ನು ಅವರು ಮುಂದುವರಿಸಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯ

ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಸ್ಥಳವಾದ ಬೆಳಗಾವಿ ನಗರದಲ್ಲಿ ಕೈಗಾರಿಕೆಗಳ ಪ್ರಗತಿಗೆ ಸಾಕಷ್ಟು ಅವಕಾಶವಿದೆ. ರಸ್ತೆ, ರೈಲು ಹಾಗೂ ವಿಮಾನ ಸಂ‍ಪರ್ಕವೂ ಉತ್ತಮವಾಗಿದೆ. ಅದಕ್ಕೆ ತಕ್ಕಂತೆ ಕೈಗಾರಿಕಾ ಪ್ರದೇಶಗಳಲ್ಲಿ ಅಭಿವೃದ್ಧಿ ಕಾಣುತ್ತಿಲ್ಲ. ಸಂಬಂಧಿಸಿದ ಕೈಗಾರಿಕಾ ಇಲಾಖೆಯ ಅಧಿಕಾರಿಗಳು ಸರ್ಕಾರದತ್ತ ಕೈತೋರಿಸಿ ಸುಮ್ಮನಾಗುತ್ತಿದ್ದಾರೆ. ಪ್ರಸ್ತಾವಗಳ ಮೇಲೆ ಪ್ರಸ್ತಾವಗಳು ಸಲ್ಲಿಕೆಯಾಗುತ್ತಿವೆ. ಆದರೆ, ಅನುದಾನ ಬಿಡುಗಡೆ ಕನಸಾಗಿಯೇ ಉಳಿದಿದೆ.

ಇಲ್ಲಿನ ಯುವಕರು ಉದ್ಯೋಗಕ್ಕಾಗಿ ದೂರದ ಬೆಂಗಳೂರು, ಪುಣೆ, ಮುಂಬೈ, ಹೈದರಾಬಾದ್ ಮೊದಲಾದ ನಗರಗಳಿಗೆ ಹೋಗುವುದನ್ನು ತಪ್ಪಿಸಬೇಕು. ಇಲ್ಲಿಯೇ ಉದ್ಯೋಗ ಸಿಗುವಂತಾಗಬೇಕು ಎಂಬ ಕನಸು ನನಸಾಗಲು ಅದೆಷ್ಟೋ ವರ್ಷಗಳು ಬೇಕಾಗಬಹುದು ಎನ್ನುವುದು ಕೈಗಾರಿಕೋದ್ಯಮಿಗಳ ಹೇಳಿಕೆಯಾಗಿದೆ.

ನಗರದಲ್ಲಿ ಐಟಿ ಪಾರ್ಕ್‌ ಮತ್ತು ಚಿಕ್ಕೋಡಿಯಲ್ಲಿ ಜವಳಿ ಪಾರ್ಕ್‌ ಸ್ಥಾಪಿಸಬೇಕು ಎಂಬ ಬೇಡಿಕೆಗಳೂ ನನೆಗುದಿಗೆ ಬಿದ್ದಿವೆ. ಕೋವಿಡ್ ಪರಿಸ್ಥಿತಿಯ ಹೊಡೆತವು ಕೈಗಾರಿಕಾ ಕ್ಷೇತ್ರವನ್ನು ಜರ್ಜರಿತವನ್ನಾಗಿ ಮಾಡಿದೆ. ಸರ್ಕಾರ ನಮ್ಮ ನೆರವಿಗೆ ಬರಬೇಕು ಎನ್ನುವುದು ಉದ್ಯಮಿಗಳ ಮನವಿಯಾಗಿದೆ.

ಬಳಸಿಕೊಳ್ಳಲಾಗುತ್ತಿಲ್ಲ

ಆಟೊಮೊಬೈಲ್‌ ಕ್ಷೇತ್ರ ಪ್ರೋತ್ಸಾಹಿಸುವ ಉದ್ದೇಶದಿಂದ ‘ಆಟೊನಗರ’ ಸ್ಥಾಪಿಸಿ ದಶಕಗಳೆ ಕಳೆದಿವೆ. ಅಲ್ಲೂ ಮೂಲಸೌಲಭ್ಯಗಳಿಲ್ಲ. ಖಾಲಿ ನಿವೇಶನಗಳು ಬಹಳಷ್ಟಿವೆ. ನಗರದ ಮಧ್ಯದಲ್ಲಿನ ಆಟೊಮೊಬೈಲ್‌ ಉದ್ಯಮವನ್ನು ಆಟೊನಗರಕ್ಕೆ ಸ್ಥಳಾಂತರಿಸುವ ಉದ್ದೇಶವೂ ಈಡೇರಿಕೆಯಾಗಿಲ್ಲ. ಅಲ್ಲಿ, ಸ್ಥಳೀಯ ಕೈಗಾರಿಕಾ ಉತ್ಪನ್ನಗಳ ಪ್ರದರ್ಶನಕ್ಕಾಗಿ ₹ 12 ಕೋಟಿ ವೆಚ್ಚದಲ್ಲಿ ಶಾಶ್ವತ ಪ್ರದರ್ಶನ ಮಳಿಗೆ ನಿರ್ಮಿಸಲಾಗಿದೆ. ಆದರೆ, ಅದನ್ನು ನಿಗದಿತ ಕೆಲಸಕ್ಕೆ ಬಳಸಿಕೊಳ್ಳುವ ಕೆಲಸವೂ ನಡೆದಿಲ್ಲ!

ಆಟೊಮೊಬೈಲ್‌ ಬಿಡಿಭಾಗಗಳ ತಯಾರಿಕೆ ಹಾಗೂ ರಫ್ತಿಗೆ ಹೆಸರುವಾಸಿಯಾದ ಹಾಗೂ ಫೌಂಡ್ರಿ (ಎರಕ) ಉದ್ಯಮದಿಂದ ಗಮನಸೆಳೆದಿರುವ ‘ಉದ್ಯಮಬಾಗ್‌’ ದುಃಸ್ಥಿತಿಯಲ್ಲಿದೆ. ಸುಧಾರಣೆ ಮಾಡುವುದಿರಲಿ, ಕನಿಷ್ಠ ಮೂಲಸೌಲಭ್ಯಗಳೂ ಇಲ್ಲಿಲ್ಲ! ಉತ್ಪನ್ನಗಳ ಖರೀದಿ, ಒಪ್ಪಂದ, ಮಾತುಕತೆ, ಕೈಗಾರಿಕೆ ವೀಕ್ಷಣೆ ಮೊದಲಾದವುಗಳಿಗೆ ಬೇರೆಡೆಯಿಂದ ಬರುವ ಉದ್ಯಮಿಗಳು ಅಥವಾ ಪ್ರತಿನಿಧಿಗಳು ಮೂಗು ಮುರಿಯುವ, ಕೆಲವೆಡೆ ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಉದ್ಯಮಗಳಿಂದ ಕಾಲಕಾಲಕ್ಕೆ ತೆರಿಗೆ ಕಟ್ಟಿಸಿಕೊಳ್ಳುವ ಸರ್ಕಾರ ಆ ಪ್ರದೇಶದಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುತ್ತಿಲ್ಲ. ಕಾಲಕಾಲಕ್ಕೆ ರಸ್ತೆಗಳನ್ನು ಸುಧಾರಿಸುತ್ತಿಲ್ಲ. ಸರ್ಕಸ್ ಮಾಡಿಕೊಂಡು ಸಂಚರಿಸಬೇಕಾದ ಸ್ಥಿತಿ ಇದೆ.

ಅವಕಾಶವಿದೆ

ಖಾನಾಪುರ: ಬೆಳಗಾವಿ ನಗರಕ್ಕೆ ಸಮೀಪದಲ್ಲಿದ್ದರೂ ಖಾನಾಪುರ ಕೈಗಾರಿಕೆಗಳಿಂದ ವಂಚಿತವಾಗಿದೆ. ಬೆಳಗಾವಿ ಹಾಗೂ ಸುತ್ತಲಿನ ಭಾಗದಲ್ಲಿ ವಿವಿಧ ಪ್ರಕಾರದ ಕೈಗಾರಿಕೆಗಳು, ಕಾರ್ಖಾನೆಗಳು, ಉದ್ದಿಮೆಗಳು ಮತ್ತು ಔದ್ಯೋಗಿಕ ವಸಾಹತುಗಳಿವೆ. ಬೆಳಗಾವಿಯಿಂದ ಕೇವಲ 25 ಕಿ.ಮೀ. ದೂರದಲ್ಲಿದ್ದರೂ ಖಾನಾಪುರ ಪಟ್ಟಣ ಹಾಗೂ ಸುತ್ತಮುತ್ತ ಯಾವುದೇ ರೀತಿಯ ವಾಣಿಜ್ಯೋದ್ಯಮಗಳಿಲ್ಲ.

2.5 ಲಕ್ಷ ಜನಸಂಂಖ್ಯೆ ಹೊಂದಿರುವ ಖಾನಾಪುರ ತಾಲ್ಲೂಕಿನಲ್ಲಿ ಒಂದೇ ಒಂದು ಸಕ್ಕರೆ ಕಾರ್ಖಾನೆ ಇದೆ. ಉಳಿದಂತೆ ಬೇಸಿಗೆಯಲ್ಲಿ ಇಲ್ಲಿಯ ಕೆಲ ಗ್ರಾಮಗಳ ಜನತೆ ಇಟ್ಟಿಗೆ ತಯಾರಿಸುವ ಸಣ್ಣ ಪ್ರಮಾಣದ ಉದ್ಯಮವನ್ನು ಕೈಗೊಳ್ಳುತ್ತಾರೆ. ಖಾನಾಪುರ ತಾಲ್ಲೂಕಿನಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸಲು ಅನುಕೂಲಕರ ವಾತಾವರಣವಿದೆ. ಅಗತ್ಯ ಮೂಲಭೂತ ಸೌಕರ್ಯ ಲಭ್ಯತೆಯಿದೆ. ಕೈಗಾರಿಕೆಗಳು ಪ್ರಾರಂಭವಾದರೆ ಅವುಗಳಲ್ಲಿ ಕೆಲಸ ನಿರ್ವಹಿಸಲು ಸ್ಥಳೀಯವಾಗಿ ಬಹಳಷ್ಟು ಸಂಖ್ಯೆಯಲ್ಲಿ ಕಾರ್ಮಿಕರು ಸಿದ್ಧರಿದ್ದಾರೆ. ಆದರೆ, ಸ್ಥಳೀಯವಾಗಿ ಉದ್ಯೋಗ ಸಿಗದ ಕಾರಣ ತಾಲ್ಲೂಕಿನ ಬಹಳಷ್ಟು ಯುವಕರು ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಗೆ ವಲಸೆ ಹೋಗಿದ್ದಾರೆ.

ಉದ್ಯಮ ಸ್ನೇಹಿ ವಾತಾವರಣವಿಲ್ಲ

ಚನ್ನಮ್ಮನ ಕಿತ್ತೂರು: ಕಿತ್ತೂರು ಬಳಿ ಇರುವ ಕೈಗಾರಿಕೆ ಪ್ರದೇಶದಲ್ಲಿ ಉದ್ಯಮಿಗಳನ್ನು ಆಕರ್ಷಿಸಲು ಇಲಾಖೆ ಆಸಕ್ತಿ ವಹಿಸುತ್ತಿಲ್ಲ. ಅಲ್ಲಿ ಕೆಲ ಮೂಲ ಸೌಲಭ್ಯಗಳ ಕೊರತೆಯೂ ಕಾಣುತ್ತಿದೆ.

ರಸ್ತೆಗೆ ಹಾಕಿರುವ ಡಾಂಬರು ಕೆಲವು ಕಡೆಗಳಲ್ಲಿ ಕಿತ್ತು ಹೋಗಿದೆ. ಬೀದಿ ಬದಿಗೆ ಕಂಬ ಹಾಕಿದ್ದರೂ ದೀಪಗಳು ಬೆಳಗುವಂತೆ ವ್ಯವಸ್ಥೆ ಮಾಡಿರಲಿಲ್ಲ. ಈಚೆಗೆ ಬೃಹತ್ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಭೇಟಿ ಕೊಡುವುದನ್ನು ಅರಿತು ದೀಪದ ವ್ಯವಸ್ಥೆ ಮಾಡಲಾಯಿತು ಎಂದು ಉದ್ಯಮಿಗಳು ತಿಳಿಸಿದರು.

ಇನ್ನು ಮಳೆಗಾಲದಲ್ಲಂತೂ ಕೆಲವರ ಗೋಳು ಹೇಳತೀರದು. ಪಕ್ಕದಲ್ಲಿರುವ ಕಾಲುವೆ ಮೂಲಕ ನೀರು ಹರಿದು ಹೋಗುವ ವ್ಯವಸ್ಥೆ ಇದೆ. ಭಾರಿ ಪ್ರಮಾಣದ ನೀರು ನುಗ್ಗುವುದರಿಂದ ಕೆಲ ಕೈಗಾರಿಕಾ ಘಟಕಗಳ ಬಾಗಿಲಿನವರೆಗೂ ನೀರು ಬಂದು ನಿಲ್ಲುತ್ತದೆ ಎಂದು ಅಲ್ಲಿನವರು ದೂರುತ್ತಾರೆ.

‘ಕಿತ್ತೂರಿನಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಪಡಿಸುವ ಯೋಜನೆ ಪೂರ್ಣಗೊಂಡಿದೆ. ನಿಪ್ಪಾಣಿ ತಾಲ್ಲೂಕಿನ ಕಣಗಲಾದಲ್ಲಿ ಕೈಗಾರಿಕಾ ಪ್ರದೇಶ ರೂಪಿಸಲಾಗುತ್ತಿದೆ. ಇದರಿಂದ ಆ ಭಾಗದ ಕೈಗಾರಿಕೋದ್ಯಮಿಗಳಿಗೆ ಅನುಕೂಲ ಆಗಲಿದೆ’ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡ ಬಸವರಾಜ ತಿಳಿಸಿದರು.

***

ಜಿಲ್ಲೆಯ ಕೆಲವು ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿದ್ದೇನೆ. ಉದ್ಯಮಬಾಗ್‌ಗೂ ಬಂದು ಪರಿಶೀಲಿಸಿ, ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ.

–ಮುರುಗೇಶ ನಿರಾಣಿ, ಬೃಹತ್ ಕೈಗಾರಿಕಾ ಸಚಿವರು

ಬೆಳಗಾವಿಯ ಉದ್ಯಮಬಾಗ್ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಅನುದಾನ ಕೋರಿ ಪ್ರಸ್ತಾವ ಸಲ್ಲಿಕೆಯಾಗಿದೆ. ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ.

–ದೊಡ್ಡ ಬಸವರಾಜ, ಜಂಟಿ ನಿರ್ದೇಶಕ, ಜಿಲ್ಲಾ ಕೈಗಾರಿಕಾ ಕೇಂದ್ರ

ಖಾನಾಪುರ ತಾಲ್ಲೂಕಿನಲ್ಲೇ ಉದ್ಯೋಗ ಸೃಷ್ಟಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುವ ಕೈಗಾರಿಕೆಗಳನ್ನು ಪ್ರಾರಂಭಿಸಲು ಸ್ಥಳೀಯ ರಾಜಕೀಯ ನಾಯಕರಲ್ಲಿ ಇಚ್ಛಾಶಕ್ತಿಯ ಕೊರತೆ ಇದೆ. ಹೀಗಾಗಿ ಇಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಿದೆ.

–ಜಯಪ್ರಕಾಶ ಬಾಳಕಟ್ಟಿ, ನಿವೃತ್ತ ಬ್ಯಾಂಕ್ ಅಧಿಕಾರಿ

(ಪ್ರಜಾವಾಣಿ ತಂಡ: ಪ್ರದೀಪ ಮೇಲಿನಮನಿ, ಪ್ರಸನ್ನ ಕುಲಕರ್ಣಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT