ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಕುಂದು ಕೊರತೆ: ಎರಡು ವರ್ಷದಿಂದ ನೀರು ಪೋಲು!

Last Updated 14 ಡಿಸೆಂಬರ್ 2022, 20:57 IST
ಅಕ್ಷರ ಗಾತ್ರ

ಎರಡು ವರ್ಷದಿಂದ ನೀರು ಪೋಲು!

ಬೆಳಗಾವಿ: ಇಲ್ಲಿನ ಆದರ್ಶ ನಗರದ ಮುಖ್ಯರಸ್ತೆಯಲ್ಲಿ, ಕರ್ನಾಟಕ ಬ್ಯಾಂಕ್‌ ಇರುವ ಸ್ಥಳದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ ಒಡೆದು ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ಇದು ಇಂದು ನಿನ್ನೆಯದಲ್ಲ; ಬರೋಬ್ಬರಿ ಎರಡು ವರ್ಷಗಳಿಂದ ಪೋಲಾಗುತ್ತಲೇ ಇದೆ. ಈ ಬಗ್ಗೆ ಹಲವು ಬಾರಿ ಮಹಾನಗರ ಪಾಲಿಕೆ, ನೀರು ಪೂರೈಸುವ ಎಲ್‌ ಆ್ಯಂಡ್‌ ಟಿ ಕಂಪನಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ.

ಈ ಕೊಳವೆ ಮಾರ್ಗದಿಂದ ನಗರದ ಬಹುಪಾಲು ಕಡೆ ನೀರು ಹರಿಯುತ್ತದೆ. ಹಾಗಾಗಿ, ಪ್ರತಿ ದಿನ ಬೆಳಿಗ್ಗೆ 5ರಿಂದ ರಾತ್ರಿ 10ರವರೆಗೂ ನಿರಂತರ ನೀರು ಪೋಲಾಗುತ್ತದೆ. ರಸ್ತೆಯಲ್ಲಿ ನಿಂತು ಕೊಚ್ಚೆ ನಿರ್ಮಾಣವಾಗುತ್ತದೆ. ಬೇಸಿಗೆಯಲ್ಲಿ ನೀರಿನ ಅಭಾವ ಇದ್ದಾಗಲೂ ಇಲ್ಲಿ ನೀರು ವ್ಯರ್ಥವಾಗುವುದು ನಿಂತಿಲ್ಲ. ಈಗಲಾದರೂ ಪಾಲಿಕೆ ಅಧಿಕಾರಿಗಳು ಇತ್ತ ಗಮನ ಹರಿಸಬೇಕು. ಜನರು ಬೇಸರಗೊಂಡು ಹೋರಾಟ ಮಾಡುವವರೆಗೆ ಕಾಯಬಾರದು.

–ಪ್ರೊ.ದತ್ತಾತ್ರೇಯ ಚೌಧರಿ, ಉಪನ್ಯಾಸಕ, ಬೆಳಗಾವಿ

*

ಮೂತ್ರಾಲಯ ನಿರ್ಮಿಸಿ

ರಾಮದುರ್ಗ: ಪಟ್ಟಣದ ಜನನಿಬಿಡ ಸ್ಥಳಗಳಲ್ಲಿ ಮಹಿಳೆ ಹಾಗೂ ಪುರುಷರಿಗೆ ಪ್ರತ್ಯೇಕ ಮೂತ್ರಾಲಯಗಳ ಕೊರತೆ ಇದೆ. ಸ್ಟೇಟ್ ಬ್ಯಾಂಕ್ ಇಂಡಿಯಾ, ಕೆನರಾ ಬ್ಯಾಂಕ್ ಹಾಗೂ ಯೂನಿಯನ್ ಬ್ಯಾಂಕುಗಳ ಸಮೀಪ, ಅಂಚೆ ಕಚೇರಿ ಸಮೀಪ ಹಾಗೂ ಮಿನಿ ವಿಧಾನ ಸೌಧದ ಸಮೀಪ ಮೂತ್ರಾಲಯವೇ ಇಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ತುಂಬ ತೊಂದರೆಯಾಗಿದೆ. ಆದ್ದರಿಂದ ಪುರಸಭೆಯವರು ಪಟ್ಟಣದ ಬ್ಯಾಂಕುಗಳು, ಅಂಚೆ ಕಚೇರಿ ಹಾಗೂ ಮಿನಿ ವಿಧಾನಸೌಧ ಸಮೀಪ ಮಹಿಳೆ ಹಾಗೂ ಪುರುಷರಿಗೆ ಪ್ರತ್ಯೇಕ ಮೂತ್ರಾಲಯ ನಿರ್ಮಿಸಬೇಕು.

–ಮಲ್ಲನಗೌಡ ಪಾಟೀಲ, ರಂಕಲಕೊಪ್ಪ, ರಾಮದುರ್ಗ

*

ಪ್ಲಾಸ್ಟಿಕ್‌ ತ್ಯಾಜ್ಯಕ್ಕೆ ಮುಕ್ತಿ ನೀಡಿ

ಬೆಳಗಾವಿ: ನಗರದ ಅತ್ಯಂತ ಜನನಿಬಿಡ ಹಾಗೂ ವಾಹನ ದಟ್ಟಣೆಯ ಮಾರ್ಗವಾದ ರಾಮಲಿಂಗ ಖಿಂಡ ಗಲ್ಲಿಯಲ್ಲಿ ಅಂಗಡಿಕಾರರು ಯಥೇಚ್ಚವಾಗಿ ಪ್ಲಾಸ್ಟಿಕ್‌ ಬಳಸುತ್ತಿದ್ದಾರೆ. ಮಾತ್ರವಲ್ಲ, ರಾತ್ರಿ ಅಂಗಡಿ ಮುಚ್ಚುವಾಗ ಪ್ಲಾಸ್ಟಿಕ್‌ನ ವ್ಯರ್ಥ ಪದಾರ್ಥಗಳನ್ನು ರಸ್ತೆ ಪಕ್ಕದಲ್ಲೇ ಹಾಕುತ್ತಾರೆ. ಇದರಿಂದ ವಾತಾವರಣ ಮಲಿನವಾಗುತ್ತಿದೆ. ಶಾಲೆ– ಕಾಲೇಜಿಗೆ ಹೋಗುವ ಮಕ್ಕಳು, ಜನರ ಸಂಚಾರಕ್ಕೆ ಕಿರಿಕಿರಿಯಾಗುತ್ತದೆ. ಪ್ಲಾಸ್ಟಿಕ್‌ ನಿಷೇಧ ಮಾಡಿದ್ದರೂ ಈ ರಸ್ತೆಯಲ್ಲಿ ಪ್ರತಿಯೊಬ್ಬರೂ ಅದನ್ನು ಬಳಕೆ ಮಾಡುತ್ತಿದ್ದಾರೆ. ಮೇಲಾಗಿ, ಸರಿಯಾದ ವಿಲೇವಾರಿ ಕೂಡ ಮಾಡುವುದಿಲ್ಲ. ಪಾಲಿಕೆ ಅಧಿಕಾರಿಗಳು ತಕ್ಷಣ ಕ್ರಮ ವಹಿಸಬೇಕು. ಪ್ಲಾಸ್ಟಿಕ್‌ ಬಳಿಕೆ ನಿಲ್ಲಿಸಬೇಕು.

–ಸುಭಾಷಚಂದ್ರ ರೇವಣಕರ್, ನಗರ ನಿವಾಸಿ

*

ಎರಡು ಬಾರಿ ತ್ಯಾಜ್ಯ ವಿಲೇವಾರಿ ಮಾಡಿ

ಬೆಳಗಾವಿ: ಇಲ್ಲಿನ ಶಹಾಪುರ ಪ್ರದೇಶದ ಮುಖ್ಯರಸ್ತೆಗಳಲ್ಲಿ ವಾಣಿಜ್ಯ ಮಳಿಗೆಗಳು, ಹೋಟಲ್‌, ಬೇಕರಿಗಳ ಸಂಖ್ಯೆ ಹೆಚ್ಚು. ಈ ವ್ಯಾಪಾರಿಗಳು ಉಳಿಕೆ ತಿನಿಸು, ಸಾಮಗ್ರಿಗಳನ್ನು ಪ್ರತಿ ದಿನ ರಸ್ತೆ ಪಕ್ಕದಲ್ಲೇ ಹಾಕುತ್ತಾರೆ. ರಾತ್ರಿ ಹಾಕಿದ ತ್ಯಾಜ್ಯವನ್ನು ಪಾಲಿಕೆ ಸಿಬ್ಬಂದಿ ಬೆಳಿಗ್ಗೆ ವಿಲೇವಾರಿ ಮಾಡುತ್ತಾರೆ. ಆದರೆ, ಬೆಳಿಗ್ಗೆಯಿಂದ ರಾತ್ರಿಯವರೆಗೆ ಪದೇಪದೇ ಅದೇ ಸ್ಥಳದಲ್ಲಿ ತ್ಯಾಜ್ಯ ಹಾಕುತ್ತಾರೆ. ಇದನ್ನು ಮಾರನೇ ದಿನದವರೆಗೆ ವಿಲೇವಾರಿ ಮಾಡುವುದಿಲ್ಲ. ನಾಯಿ, ಹಂದಿಗಳ ಈ ತ್ಯಾಜ್ಯವನ್ನು ಎಳೆದಾಡಿ ರಸ್ತೆ ತುಂಬ ಹರಡುತ್ತವೆ. ಈ ಪ್ರದೇಶ ಮಾಲಿನ್ಯದಿಂದ ಕೂಡಿದೆ. ಸರಿಯಾಗಿ ತ್ಯಾಜ್ಯ ವಿಲೇವಾರಿ ಮಾಡಲು ವ್ಯಾಪಾರಿಗಳಿಗೆ ಸೂಚಿಸಬೇಕು ಹಾಗೂ ದಿನಕ್ಕೆ ಎರಡು ಬಾರಿ ಕಸ ಎತ್ತಲು ಪಾಲಿಕೆ ಕ್ರಮ ವಹಿಸಬೇಕು.

–ಸುರೇಖಾ ಹಿರೇಮಠ, ಗೃಹಿಣಿ, ಶಹಾಪುರ

*

ಚರಂಡಿಗಳನ್ನು ಮುಚ್ಚಿ

ಮುನವಳ್ಳಿ: ಸ್ಥಳೀಯ ಪುರಸಭೆಯಿಂದ ಮುಖ್ಯರಸ್ತೆಯ ಎರಡು ಬದಿಯಲ್ಲಿ ಚರಂಡಿ ನಿರ್ಮಾಣದ ಕೆಲಸ ಮಾಡಲಾಗುತ್ತಿದೆ. ಅಂಗಡಿಗಳ ಮುಂದೆ ಚರಂಡಿ ನಿರ್ಮಾಣ ಮಾಡಿ ಎರಡು ತಿಂಗಳಾಗಿದೆ. ಅದರ ಮೇಲೆ ಸಿಮೆಂಟ್ ಚಪ್ಪಡಿಗಳನ್ನು ಹಾಕದೆ ಬಿಟ್ಟದ್ದು ಅದರಲ್ಲಿ ಕಸ ತುಂಬಿದೆ. ಚರಂಡಿ ಮುಚ್ಚದ ಕಾರಣ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ. ಚರಂಡಿಗಳಿಂದ ಅಗೆದ ಮಣ್ಣನ್ನು ಅಲ್ಲೇ ಬಿಟ್ಟದ್ದು ದೂಳು ಆವರಿಸುತ್ತದೆ. ಇದರಿಂದ ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ತೊಂದರೆಯಾಗಿದೆ. ಶೀಘ್ರ ಚಪ್ಪಡಿ ಮುಚ್ಚಿ, ಮಣ್ಣು ತೆರುವ ಮಾಡಬೇಕು.

–ಕಿರಣ ಯಲಿಗಾರ, ಮುನವಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT