ಬುಧವಾರ, ಮಾರ್ಚ್ 29, 2023
24 °C
ಎಂಟು ಸಿರಿಧಾನ್ಯಗಳನ್ನು ಬಳಸಿ 201 ಬಗೆಯ ಖಾದ್ಯ ಸಿದ್ಧಪಡಿಸಿದ ವಿದ್ಯಾರ್ಥಿಗಳು

ಬೆಳಗಾವಿ: ‘ಕಲಾಂ ವಿಶ್ವದಾಖಲೆ ಬುಕ್‌’ ಸೇರಿದ ಕೆಎಲ್‌ಇ ಸಂಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಎಂಟು ಬಗೆಯ ಸಿರಿಧಾನ್ಯಗಳನ್ನು ಬಳಸಿಕೊಂಡು 201 ತರಹದ ತಿನಿಸುಗಳನ್ನು ಸಿದ್ಧಪಡಿಸುವ ಮೂಲಕ, ಇಲ್ಲಿನ ಕೆಎಲ್‌ಇ ಸಂಸ್ಥೆಯ ಪದವೀಧರರ ಸ್ಕೂಲ್‌ ಆಫ್‌ ಹೋಟೆಲ್‌ ಮ್ಯಾನೇಜ್‌ಮೆಂಟ್‌ ‘ಕಲಾಂ ವಿಶ್ವದಾಖಲೆ ಬುಕ್‌’ ಸೇರಿಕೊಂಡಿತು.

ಕೆಎಲ್‌ಇ ಶತಮಾನೋತ್ಸವ ಭವನದ ಡಾ.ವಿ.ಡಿ. ಪಾಟೀಲ ಸಭಾಂಗಣದಲ್ಲಿ ಶನಿವಾರ ನಡೆದ ವೈವಿಧ್ಯಮಯ ಖಾದ್ಯಗಳ ಪ್ರದರ್ಶನ ತೀರ್ಪುಗಾರರ ಮನ ಗೆದ್ದಿತು. ಚೆನ್ನೈನ ಕಲಾಂ ವಿಶ್ವದಾಖಲೆ ಬುಕ್‌ ಸಂಸ್ಥೆಯ ತೀರ್ಪುಗಾರರ ತಂಡ ಪ್ರತಿಯೊಂದು ಖಾದ್ಯವನ್ನು ಪರಿಶೀಲಿಸಿ, ರುಚಿ ನೋಡಿತು.

‘ಸಾಂಪ್ರದಾಯಿಕ ಆಹಾರ ಖಾದ್ಯಗಳ ತಯಾರಿಕೆ ಹಾಗೂ ಪ್ರದರ್ಶನದಲ್ಲಿ ಕೆಎಲ್‌ಇ ಸಂಸ್ಥೆಯ ಹೋಟೆಲ್‌ ಮ್ಯಾನೇಜ್‌ಮೆಂಟ್‌ ಕಾಲೇಜು ವಿಶ್ವದಾಖಲೆ ಬರೆದಿದೆ’ ಎಂದು ಪ್ರಧಾನ ತೀರ್ಪುಗಾರ, ಬುಕ್‌ನ ಮುಖ್ಯಸ್ಥ ಡಾ.ಆರ್‌.ಹರೀಶ್‌ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಲ್‌.ಐಗಿರಿ ಘೋಷಣೆ ಮಾಡಿದರು.

ಸಿರಿಧಾನ್ಯಗಳಾದ ನವನೆ, ಸಾವೆ, ಬರಗು, ರಾಗಿ, ಜೋಳ, ಸಜ್ಜೆ, ಹಾರಕೆ, ಊದಲು ಬಳಸಿಕೊಂಡು 101 ತಿನಿಸುಗಳನ್ನು ಸಿದ್ಧಪಡಿಸಬೇಕು ಎಂಬುದು ಸಂಸ್ಥೆಯ ನಿಯಮವಾಗಿದೆ. ಆದರೆ, ಕೆಎಲ್‌ಇ ಹೋಟೆಲ್‌ ಮ್ಯಾನೇಜ್‌ಮೆಂಟ್ ಕಾಲೇಜಿನ ವಿದ್ಯಾರ್ಥಿಗಳು 201 ಖಾದ್ಯಗಳನ್ನು ಸಿದ್ಧಪಡಿಸಿದರು. 73 ವಿದ್ಯಾರ್ಥಿಗಳು ಸತತ ಒಂದು ತಿಂಗಳ ಅಧ್ಯಯನ ಮಾಡಿ, ಒಂದೇ ದಿನದಲ್ಲಿ ಈ ಖಾದ್ಯಗಳನ್ನು ತಯಾರಿಸಿದರು.

ಖಾರದ ತಿನಿಸುಗಳು, ಸಿಹಿತಿಂಡಿ, ಬೇಕರಿ ಪದಾರ್ಥ, ಕುರಕಲುಗಳು, ಸ್ಟಾರ್ಟರ್ಸ್‌, ಫುಲ್‌ಮೀಲ್ಸ್‌, ತಂಪು ಪಾನೀಯಗಳು, ಐಸ್‌ಕ್ರೀಂ, ಅಂಬಲಿ, ನುಚ್ಚು, ರೊಟ್ಟಿ, ಮುದ್ದೆ... ಹೀಗೆ ಉತ್ತರ ಕರ್ನಾಟಕ ಶೈಲಿಯ ತರತರದ ತಿನಿಸುಗಳನ್ನು ತೀರ್ಪುಗಾರರು ನಾಲಿಗೆ ಚಪ್ಪರಿಸಿ ಸವಿದರು.


ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಪದವೀಧರರ ಸ್ಕೂಲ್‌ ಆಫ್‌ ಹೋಟೆಲ್‌ ಮ್ಯಾನೇಜ್‌ಮೆಂಟ್‌ನಿಂದ ‘ಕಲಾಂ ವಿಶ್ವದಾಖಲೆ ಬುಕ್‌’ ರೆಕಾರ್ಡ್‌ ಸಲುವಾಗಿ ಶನಿವಾರ ಆಯೋಜಿಸಿದ್ದ ಖಾದ್ಯಗಳನ್ನು ತೀರ್ಪುಗಾರ ಡಾ.ಆರ್‌.ಹರೀಶ್‌ ಸವಿದರು

ಕೆಎಲ್‌ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ (ಕಹೆರ್‌) ಕುಲಸಚಿವ ಡಾ.ವಿ.ಎ. ಕೋಠಿವಾಲೆ ಅವರಿಗೆ ಸಂಸ್ಥೆಯಿಂದ ಪ್ರಮಾಣಪತ್ರ, ಪಾರಿತೋಷಕ ಹಾಗೂ ಪದಕ ನೀಡಲಾಯಿತು. ಕಹೆರ್‌ನ ಉಪ ಕುಲಸಚಿವ ಡಾ.ಎಂ.ಎಸ್‌. ಗಣಾಚಾರಿ, ಕಾಲೇಜಿನ ಪ್ರಾಂಶುಪಾಲ ನಂದಕುಮಾರ್‌ ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದರು.

ಈ ದಾಖಲೆಯಲ್ಲಿ ಭಾಗಿಯಾದ ಕಾಲೇಜಿನ 73 ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರ ವಿತರಿಸಲಾಯಿತು.

ಏನಿದು ದಾಖಲೆ?

ದೇಸಿ ಖಾದ್ಯಗಳ ಉತ್ಪಾದನೆಯಲ್ಲಿ ಗಮನಾರ್ಹ ಸಾಧನೆ ತೋರಿದ ವ್ಯಕ್ತಿ ಹಾಗೂ ಸಂಸ್ಥೆಗಳನ್ನು ಗುರುತಿಸಿ ಚೆನ್ನೈನ ಕಲಾಂ ವಿಶ್ವದಾಖಲೆ ಬುಕ್‌ ಸಂಸ್ಥೆಯು ಬುಕ್‌ನಲ್ಲಿ ದಾಖಲಿಸುತ್ತದೆ. 2018ರಿಂದ ಈವರೆಗೆ 5 ಸಾವಿರ ವೈಯಕ್ತಿಕ ದಾಖಲೆ ಹಾಗೂ 500ಕ್ಕೂ ಹೆಚ್ಚು ಸಂಸ್ಥೆಗಳು ಈ ಬುಕ್‌ ಸೇರಿವೆ. ಈ ದಾಖಲೆ ಮಾಡಿದ ರಾಜ್ಯದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆ ಕೆಎಲ್‌ಇ ಸಂಸ್ಥೆಗೆ ಸಂದಿದೆ ಎಂದು ಬುಕ್‌ನ ಮುಖ್ಯಸ್ಥ ಡಾ.ಆರ್‌.ಹರೀಶ್ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು