ಬೆಳಗಾವಿ: ಈ ವರ್ಷ ಮುಂಗಾರು ಕೈಹಿಡಿದಿದ್ದರಿಂದ ಭರ್ತಿಯಾಗಿರುವ ರಾಜ್ಯದ ವಿವಿಧ ಜಲಾಶಯಗಳಿಗೆ ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವರು ಹಾಗೂ ಆಯಾ ಜಿಲ್ಲೆ ಸಚಿವರು ಬಾಗಿನ ಅರ್ಪಿಸುತ್ತಿದ್ದಾರೆ. ಆದರೆ, ಈ ಬಾರಿ ಜಿಲ್ಲೆಯಲ್ಲಿ ತುಂಬಿರುವ ಎರಡೂ ಜಲಾಶಯಗಳಿಗೆ ಬಾಗಿನ ಅರ್ಪಣೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ.
ಪ್ರಸಕ್ತ ಬಾರಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಹುಕ್ಕೇರಿ ತಾಲ್ಲೂಕಿನ ಹಿಡಕಲ್, ಸವದತ್ತಿ ತಾಲ್ಲೂಕಿನ ನವಿಲುತೀರ್ಥ ಜಲಾಶಯ ಭರ್ತಿಯಾಗಿವೆ. ಕಳೆದ ಒಂದೂವರೆ ತಿಂಗಳಿಂದ ಎರಡೂ ಅಣೆಕಟ್ಟೆಗಳು ಮೈದುಂಬಿಕೊಂಡು ಕಂಗೊಳಿಸುತ್ತಿವೆ. ಕುಡಿಯುವ ಉದ್ದೇಶಕ್ಕಾಗಿ ಮತ್ತು ಕೃಷಿಗಾಗಿ ಇವುಗಳನ್ನೇ ನೆಚ್ಚಿಕೊಂಡಿದ್ದ ಜನರು ಸಂತಸಗೊಂಡಿದ್ದಾರೆ. ಆದರೆ, ಸರ್ಕಾರದಿಂದ ಅಧಿಕೃತವಾಗಿ ಬಾಗಿನ ಅರ್ಪಿಸಿಲ್ಲ.
ನವಿಲುತೀರ್ಥ ಜಲಾಶಯದ ಅಧೀಕ್ಷಕ ಎಂಜಿನಿಯರ್ ಕಚೇರಿಯಲ್ಲಿ 2024ರ ಜುಲೈ 30ರಂದು ಮಲಪ್ರಭಾ ನೀರಾವರಿ ಸಲಹಾ ಸಮಿತಿ ಸಭೆ ನಡೆದಿತ್ತು. ಸಮಿತಿ ಅಧ್ಯಕ್ಷೆಯೂ ಆಗಿರುವ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹಾಗೂ ವಿವಿಧ ಶಾಸಕರು, ‘ಮುಂದಿನ ಮಂಗಳವಾರ ಅಥವಾ ಶುಕ್ರವಾರ ಮಲಪ್ರಭೆಗೆ ಬಾಗಿನ ಅರ್ಪಿಸಲಾಗುವುದು’ ಎಂದು ಹೇಳಿದ್ದರು. ಆದರೆ, ಈವರೆಗೂ ಅದಕ್ಕೆ ಬಾಗಿನ ಭಾಗ್ಯ ಸಿಕ್ಕಿಲ್ಲ.
‘ಅಣೆಕಟ್ಟೆ ಭರ್ತಿಯಾಗುವುದು ಆ ನಾಡಿಗೆ ಶುಭದ ಸಂಕೇತ. ಹಾಗಾಗಿ ಜಲಸಂಪನ್ಮೂಲ ಇಲಾಖೆ ಬಾಗಿನ ಅರ್ಪಿಸಿ, ಜನರಿಗೆ ಒಳ್ಳೆಯದಾಗಲೆಂದು ಪ್ರಾರ್ಥಿಸುತ್ತದೆ. ಆದರೆ, ಈ ಬಾರಿ ಜಿಲ್ಲೆಯ ಎರಡೂ ಜಲಾಶಯಗಳಿಗೆ ಬಾಗಿನ ಅರ್ಪಣೆಗೆ ಜನಪ್ರತಿನಿಧಿಗಳು ಆಸಕ್ತಿ ತೋರುತ್ತಿಲ್ಲ’ ಎಂಬುದು ಜನರ ಆರೋಪ.
2,175 ಅಡಿ ಗರಿಷ್ಠ ಸಂಗ್ರಹ ಸಾಮರ್ಥ್ಯದ ಹಿಡಕಲ್ ಜಲಾಶಯದಲ್ಲಿ ಸೆ.23ರಂದು 2,173.46 ಅಡಿ ನೀರು ಸಂಗ್ರಹವಿದೆ. 2,079.50 ಅಡಿ ಗರಿಷ್ಠ ಸಂಗ್ರಹ ಸಾಮರ್ಥ್ಯದ ನವಿಲುತೀರ್ಥದಲ್ಲಿ 2,078.35 ಅಡಿ ನೀರು ಸಂಗ್ರಹವಾಗಿದೆ. ಗರಿಷ್ಠ ಮಟ್ಟಕ್ಕಿಂತ ಒಂದೆರಡು ಅಡಿ ಕಡಿಮೆ ನೀರು ಉಳಿಸಿಕೊಂಡು, ಉಳಿದ ನೀರನ್ನು ಹೊರಬಿಡಲಾಗುತ್ತಿದೆ.
ಕಳೆದ ವರ್ಷ ಹಿಡಕಲ್ ಡ್ಯಾಂ ತುಂಬುವ ಹಂತಕ್ಕೆ ತಲುಪಿತ್ತು. ಇನ್ನೂ ನವಿಲುತೀರ್ಥ ಜಲಾಶಯ ಅರ್ಧದಷ್ಟೂ ಭರ್ತಿಯಾಗಿರಲಿಲ್ಲ.
ಸವದತ್ತಿ ತಾಲ್ಲೂಕಿನ ನವಿಲುತೀರ್ಥ ಜಲಾಶಯ
ಪ್ರಜಾವಾಣಿ ಚಿತ್ರ: ಬಸವರಾಜ ಶಿರಸಂಗಿ
ನವಿಲುತೀರ್ಥ ಜಲಾಶಯಕ್ಕೆ ಬಾಗಿನ ಅರ್ಪಣೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಶೀಘ್ರ ದಿನಾಂಕ ನಿಗದಿಯಾಗಲಿದೆವಿವೇಕ ಮುದಿಗೌಡರ ಕಾರ್ಯನಿರ್ವಾಹಕ ಎಂಜಿನಿಯರ್ ನವಿಲುತೀರ್ಥ ಜಲಾಶಯ
ಬಾಗಿನ ಅರ್ಪಣೆಗಾಗಿ ಜಿಲ್ಲೆಯ ಎರಡೂ ಜಲಾಶಯಕ್ಕೆ ಮುಖ್ಯಮಂತ್ರಿ ಕರೆತರಲು ಈ ಭಾಗದ ಜನಪ್ರತಿನಿಧಿಗಳು ಪ್ರಯತ್ನಿಸಬೇಕುಸಿದಗೌಡ ಮೋದಗಿ ರೈತ ಹೋರಾಟಗಾರ
ಗೋಕಾಕ ಜಲಪಾತೋತ್ಸವಕ್ಕೆ ಒತ್ತಾಯ ಮಂಡ್ಯ ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ಇದೇ ತಿಂಗಳು ಅದ್ದೂರಿಯಾಗಿ ‘ಗಗನಚುಕ್ಕಿ ಜಲಪಾತೋತ್ಸವ’ ಆಚರಿಸಿದ ಮಾದರಿಯಲ್ಲೇ ಗೋಕಾಕ ಜಲಪಾತೋತ್ಸವ ಆಚರಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ‘ನಮಗೂ ಜಲಪಾತೋತ್ಸವ ವೀಕ್ಷಿಸಬೇಕೆಂಬ ಆಸೆ ಇತ್ತು. ಆದರೆ ಮಂಡ್ಯಕ್ಕೆ ಹೋಗುವುದು ಕಷ್ಟ. ನಮ್ಮೂರಿನಲ್ಲೇ ಜಲಪಾತೋತ್ಸವ ಆಚರಿಸಿದರೆ ಪಾಲ್ಗೊಂಡು ಸಂಭ್ರಮಿಸಬಹುದು. ಜತೆಗೆ ಪ್ರವಾಸೋದ್ಯಮವೂ ಬೆಳೆಯುತ್ತದೆ’ ಎನ್ನುತ್ತಾರೆ ಗೋಕಾಕದ ವಕೀಲ ಆನಂದ ಹುಲಗಬಾಳಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.