ಕರ್ನಾಟಕ ರಾಜ್ಯೋತ್ಸವ ಬಹಿಷ್ಕರಿಸಿ ಎಂಇಎಸ್‌ನಿಂದ ‘ಕರಾಳ ದಿನಾಚರಣೆ’

ಬೆಳಗಾವಿ: ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಮತ್ತು ಶಿವಸೇನಾ ಕಾರ್ಯಕರ್ತರು ಕರ್ನಾಟಕ ರಾಜ್ಯೋತ್ಸವ ಬಹಿಷ್ಕರಿಸಿ ಕರಾಳ ದಿನಾಚರಣೆ ನಡೆಸಿ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಸೋಮವಾರ ಘೋಷಣೆ ಕೂಗಿದರು. ಪ್ರಚೋದನಕಾರಿ ಭಾಷಣ ಮಾಡಿದ ಮುಖಂಡರು, ಗಡಿ ವಿವಾದವನ್ನು ಕೆಣಕಿದರು.
ನಗರದ ಮರಾಠಾ ಮಂದಿರದಲ್ಲಿ 350ಕ್ಕೂ ಹೆಚ್ಚು ಮಂದಿ ಸೇರಿ ಪ್ರತಿಭಟನಾ ಸಭೆ ನಡೆಸಿದರು. ಬಹುತೇಕರು ಕಪ್ಪು ಬಟ್ಟೆ ಧರಿಸಿದ್ದರು. ಕೆಲವರು, ಕಪ್ಪು ಬಾವುಟಗಳನ್ನು ಹಿಡಿದಿದ್ದರು. ಹಲವರು ಕಪ್ಪು ಪಟ್ಟಿ ಧರಿಸಿದ್ದರು.
‘ಬೆಳಗಾವಿ, ಖಾನಾಪುರ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಸೇರಿದಂತೆ ಗಡಿ ಭಾಗದ ಎಲ್ಲ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಲೇಬೇಕು. ಮಹಾನಗರ ಪಾಲಿಕೆ ಎದುರಿನ ಕನ್ನಡ ಧ್ವಜ ತೆರವುಗೊಳಿಸಬೇಕು, ಇಲ್ಲವೇ ಅಲ್ಲಿ ಭಗವಾಧ್ವಜ ಹಾರಿಸಲು ಅವಕಾಶ ಕೊಡಬೇಕು’ ಎಂದು ಆಗ್ರಹಿಸಿದರು. ‘ಇದ್ದರೆ ಮಹಾರಾಷ್ಟ್ರದಲ್ಲಿ; ಇಲ್ಲದಿದ್ದರೆ ಕಾರಾಗೃಹದಲ್ಲಿ’, ‘ಬೆಳಗಾವಿ ನಮ್ಮದು; ಯಾರಪ್ಪನದಲ್ಲ' ಎಂಬಿತ್ಯಾದಿ ಘೋಷಣೆಗಳನ್ನು ಹಾಕಿದರು. ಜೈ ಮಹಾರಾಷ್ಟ್ರ ಘೋಷಣೆ ಮೊಳಗಿಸಿದರು.
ಕನ್ನಡ ಹೇರುವುದು ಸರಿಯಲ್ಲ
ಮುಖಂಡ ಮನೋಹರ ಕಿಣೇಕರ ಮಾತನಾಡಿ, ‘ಕರ್ನಾಟಕ ಸರ್ಕಾರ ಗಡಿ ಭಾಗದಲ್ಲಿ ಕನ್ನಡ ಹೇರುವುದು ಸರಿಯಲ್ಲ. ಬೆಳಗಾವಿ ನಮ್ಮ ಆಸ್ತಿ. ನಾವು ಮಹಾರಾಷ್ಟ್ರಕ್ಕೆ ಸೇರಿದ ಬಳಿಕ ಈ ಆಸ್ತಿ ಆ ರಾಜ್ಯದ ಪಾಲಾಗಲಿದೆ. ಹೀಗಾಗಿ ಅಲ್ಲಿನ ನಾಯಕರು ಕರ್ನಾಟಕಕ್ಕೆ ತಕ್ಕೆ ಪಾಠ ಕಲಿಸಲು ನಮ್ಮ ಹೋರಾಟಕ್ಕೆ ಕೈಜೋಡಿಸಬೇಕು. ಅವರು ನಮ್ಮ ಜೊತೆಗೆ ಇರದಿದ್ದರೂ ಎಂಇಎಸ್ ಬಲದ ಮೇಲೆ ಹೋರಾಡುತ್ತೇವೆ’ ಎಂದು ಹೇಳಿದರು.
ನಾಯಕಿ ಸರಿತಾ ಪಾಟೀಲ ಮಾತನಾಡಿ, ‘ಒಮ್ಮೆಯಲ್ಲ ಲಕ್ಷ ಬಾರಿ ನಾವು ಜೈ ಮಹಾರಾಷ್ಟ್ರ ಎಂಬ ಘೋಷಣೆ ಕೂಗುತ್ತೇವೆ. ನಾವು ಸಾಯವವರೆಗೂ ಜೈ ಮಹಾರಾಷ್ಟ್ರ ಎಂದು ಹೋರಾಡುತ್ತೇವೆ. ಎಷ್ಟೇ ಪ್ರಕರಣ ಹಾಕಿದರೂ ಹೆದರುವುದಿಲ್ಲ’ ಎಂದು ಸವಾಲು ಹಾಕಿದರು.
‘2017ರಲ್ಲಿ ನಾನು ಮಹಾನಗರಪಾಲಿಕೆ ಮೇಯರ್ ಆಗಿದ್ದಾಗ ಜೈ ಮಹಾರಾಷ್ಟ್ರ ಎಂದಿದ್ದಕ್ಕೆ ಪ್ರಕರಣ ದಾಖಲಿಸಿದ್ದಾರೆ. ಇಂತಹ ಅನೇಕ ಮೊಕದ್ದಮೆ ಎಂಇಎಸ್ ನಾಯಕರ ಮೇಲಿವೆ. ಆದರೆ, ನಮ್ಮ ಹೋರಾಟ ಮುಂದುವರಿಯಲಿದೆ’ ಎಂದರು.
ಭಗವಾಧ್ವಜ ಹಾರಿಸಲಿ
‘ಬೆಳಗಾವಿಯ ಮರಾಠಿ ಭಾಷಿಕರಿಗೆ ಸರ್ಕಾರದಿಂದ ಅನ್ಯಾಯ ಮಾಡಲಾಗುತ್ತಿದೆ. ರಾಷ್ಟ್ರೀಯ ಪಕ್ಷಗಳಿಗೆ ಕಾರ್ಯಕರ್ತರು ಕಡಿಮೆಯಾಗಿದ್ದಾರೆ. ಹೀಗಾಗಿ ನಮ್ಮವರನ್ನು ಆ ಪಕ್ಷಗಳಿಗೆ ಸೇರಿಸಿಕೊಳ್ಳುತ್ತಿದ್ದಾರೆ. ಹೀಗೆ ಹೋಗಿರುವವರನ್ನು ಮತ್ತೆ ಕರೆತರಲಾಗುವುದು’ ಎಂದು ತಿಳಿಸಿದರು.
‘ಹಿಂದುತ್ವವಾದಿ ಪಕ್ಷ ಎಂದು ಹೇಳಿಕೊಳ್ಳುವವರು ಮಹಾನಗರ ಪಾಲಿಕೆ ಮೇಲೆ ಭಗವಾಧ್ವಜ ಹಾರಿಸಲಿ. ನೂತನ ಪಾಲಿಕೆ ಸದಸ್ಯರು ಹಾಗೂ ಶಾಸಕರ ರಕ್ತದಲ್ಲಿ ಹಿಂದುತ್ವವಿದ್ದರೆ ಭಗವಾ ಧ್ವಜ ಹಾರಿಸಲಿ. ಆಗ ಅವರ ಮರಾಠಿ ಹಾಗೂ ಹಿಂದೂ ಪ್ರೀತಿ ಗೊತ್ತಾಗಲಿದೆ’ ಎಂದರು.
ನಾಯಕಿ ಸರಸ್ವತಿ ಪಾಟೀಲ, ‘ನಾವು ಕನ್ನಡ ಭಾಷೆಯ ವಿರೋಧಿಗಳಲ್ಲ. ಆದರೆ, ಬೆಳಗಾವಿಯಲ್ಲಿ ಮರಾಠಿ ಭಾಷೆ ರಕ್ಷಿಸಬೇಕಾದ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಮರಾಠಿಗರಿಗೆ ಜಯ ಸಿಗುವುದು ಖಚಿತ. ಮಹಾನಗರ ಮಾಲಿಕೆಯಲ್ಲಿ ಗೆಲುವು ಸಾಧಿಸಿದ ಸದಸ್ಯರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಜೊತೆ ಭಗವಾಪೇಟ ಧರಿಸಿದ್ದರು. ಅದು ಮರಾಠಿ ವಿಜಯವಾಗಿದೆ’ ಎಂದು ಹೇಳಿದರು.
ರೇಣು ಕಿಲ್ಲೇಕರ, ‘ಹಣ ಕೊಟ್ಟು ಜನರನ್ನು ಕರೆ ತಂದು ಕರ್ನಾಟಕ ರಾಜ್ಯೋತ್ಸವ ಮಾಡಲಾಗುತ್ತಿದೆ. ಇದು ಕೊನೆಯ ಕರಾಳದಿನ ಆಗಲಿದ್ದು, ಮುಂದಿನ ವರ್ಷ ನಾವು ಮಹಾರಾಷ್ಟ್ರದಲ್ಲಿ ಸಂಭ್ರಮಾಚರಣೆ ಮಾಡುತ್ತೇವೆ’ ಎಂದರು.
ಮುಖಂಡ ಶುಭಂ ಶೆಳಕೆ, ‘ಬೆಳಗಾವಿ ಮುಂಬೈ ಪ್ರಾಂತ್ಯಕ್ಕೆ ಸೇರಿತ್ತು. ಹಾಗಾಗಿ ಮಹಾರಾಷ್ಟ್ರಕ್ಕೆ ಸೇರಬೇಕು. ಸಂವಿಧಾನ ಬದ್ಧವಾಗಿ ಅದನ್ನು ಕೇಳುವ ಹಕ್ಕು ನಮಗಿದೆ. ಈ ಹೋರಾಟದಲ್ಲಿ ನಮ್ಮ ಮೇಲೆ ಎಷ್ಟು ಕೇಸು ಹಾಕುತ್ತೀರೋ ಹಾಕಿ; ನಾವು ಹೆದರುವುದಿಲ್ಲ’ ಎಂದು ಸವಾಲೆಸೆದರು.
ಸಮಿತಿಯ ಅಧ್ಯಕ್ಷ ದೀಪಕ ದಳವಿ, ಶಿವಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ್ ಶಿರೋಳಕರ, ಮುಖಂಡರಾದ ಮನೋಹರ ಕಿಣೇಕರ, ಮಾಲೋಜಿರಾವ ಅಷ್ಟೇಕರ, ರಂಜಿತ ಪಾಟೀಲ ಇದ್ದರು.
ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಇದನ್ನೂ ಓದಿ: ಮುರುಡೇಶ್ವರ: ಸಮುದ್ರದಾಳದಲ್ಲಿ ಕನ್ನಡದ ಬಾವುಟ ಅನಾವರಣ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.