ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಡಬಲ್, ತ್ರಿಬಲ್ ಆಸೆ ಹುಟ್ಟಿಸಿ ವಂಚನೆ: ದೂರು ದಾಖಲು

Last Updated 24 ನವೆಂಬರ್ 2021, 21:04 IST
ಅಕ್ಷರ ಗಾತ್ರ

ಗೋಕಾಕ (ಬೆಳಗಾವಿ ಜಿಲ್ಲೆ): ಹೆಚ್ಚಿನ ಲಾಭಾಂಶ ಹಾಗೂ ಹೂಡಿದ ಹಣವನ್ನು ಡಬಲ್, ತ್ರಿಬಲ್ ಮಾಡಿಕೊಡುವುದಾಗಿ ನಂಬಿಸಿ ಠೇವಣಿದಾರರಿಗೆ ವಂಚಿಸಿರುವ ಪ್ರಕರಣ ಇಲ್ಲಿ ಬಯಲಾಗಿದೆ. ಬಿಯುಡಿಎಸ್‌ (ಅನಿಯಂತ್ರಿತ ಹೂಡಿಕೆ ಯೋಜನೆಗಳ ನಿಷೇಧ) ಅಡಿ ಜಿಲ್ಲೆಯಲ್ಲಿ ಮೊದಲಿಗೆ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಲ್ಲಿನ ಕಿಲ್ಲಾ ನಿವಾಸಿ ಅನೀಶ್‌ ಗೋಪಾಲ ಯಾರ್ದಿ ಎನ್ನುವವರು ಹಣ ಕಳೆದುಕೊಂಡವರು. ಅವರು, ನಗರದವರೆ ಆದ ಭೀಮಶಿ ಯಲ್ಲಪ್ಪ ಹೆಗಡೆ, ಮಹಾದೇವ ಮುನಗೋಳಿ, ಅಶ್ವಿನಕುಮಾರ ಪೋತದಾರ, ನಿಜಾಮುದ್ದಿನ ಜಕಾತಿ ಮತ್ತು ಚಂದ್ರಶೇಖರ ಅಂದಾನಿ ಹಾಗೂ ಇತರರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

‘ಸ್ಟಾರ್ಟಮನಿ ಡಾಟ್ ಇನ್ ಎಂಬ ಹೆಸರಿನ ಜಾಲತಾಣದ ಕಂಪನಿ ಮೂಲಕ, ಹೆಚ್ಚಿನ ಲಾಭಾಂಶ ಬರುವಂತೆ ಮಾಡುತ್ತೇವೆ ಎಂದು ಹೇಳಿದ್ದರು. ನನ್ನಿಂದ ಒಟ್ಟು ₹ 19.65 ಲಕ್ಷ ಹೂಡಿಕೆ ಮಾಡಿಸಿ ವಾಪಸ್ ಕೊಡದೆ ನಂಬಿಕೆ ದ್ರೋಹ ಎಸಗಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇದೇ 15ರಂದು ಮಹಿಳೆಯೊಬ್ಬರು ತಮ್ಮ ಪುತ್ರ ಸೇರಿದಂತೆ 11 ಜನರು ನಗರದ ರಮೇಶಣ್ಣ ಕಾಲೊನಿಯ ಮನೆಯಿಂದ ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದರು. ಅದರಲ್ಲಿ ನಮೂದಿಸಿದ್ದ ವ್ಯಕ್ತಿಗಳಲ್ಲಿ ಒಬ್ಬರ ಹೆಸರು (ಭೀಮಶಿ ಯಲ್ಲಪ್ಪ ಹೆಗಡೆ), ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸಿ ವಂಚಿಸಿದ ಪ್ರಕರಣದಲ್ಲೂ ಇದೆ. ಆರೋಪಿಗಳು ಇನ್ನೂ ಬಹಳಷ್ಟು ಮಂದಿಗೆ ನಂಬಿಕೆ ದ್ರೋಹ ಎಸಗಿದ್ದಾರೆ ಎಂಬ ಮಾಹಿತಿ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಆರೋಪಿಗಳು, ₹10ಸಾವಿರ ಹೂಡಿದರೆ ದಿನಕ್ಕೆ ₹ 288ರಂತೆ 75 ದಿನಕ್ಕೆ ₹ 21,600, ₹ 25ಸಾವಿರ ಹೂಡಿದರೆ ದಿನಕ್ಕೆ ₹ 742ರಂತೆ 75 ದಿನಕ್ಕೆ ₹ 55,650, ₹ 50ಸಾವಿರ ಹೂಡಿದರೆ ದಿನಕ್ಕೆ ₹ 1,507ರಂತೆ 75 ದಿನಕ್ಕೆ ₹ 1.13 ಲಕ್ಷ ಮತ್ತು ₹ 1 ಲಕ್ಷಕ್ಕೆ ₹ 75 ದಿನಗಳಲ್ಲಿ ₹ 2.29 ಲಕ್ಷ ಮಾಡಿಕೊಡುತ್ತೇವೆ. ಹೊಸ ಸದಸ್ಯರಿಂದ ₹ 1 ಲಕ್ಷ ಹೂಡಿಸಿದರೆ 50 ಗ್ರಾಂ. ಬೆಳ್ಳಿ, ₹ 3 ಲಕ್ಷ ಹಾಕಿಸಿದರೆ 5 ಗ್ರಾಂ. ಚಿನ್ನ, ₹ 4 ಲಕ್ಷ ಹೂಡಿಸಿದರೆ 10 ಗ್ರಾಂ. ಚಿನ್ನ ಕೊಡಲಾಗುವುದು ಎಂದು ಹೇಳಿ ನಂಬಿಸಿದ್ದರು. ನ.11ರಂದು ಅವರ ಕಚೇರಿಗೆ ಹೋದಾಗ ಬೀಗ ಹಾಕಿತ್ತು. ನನಗೆ ತಿಳಿದಿರುವಂತೆ 500ರಿಂದ 600 ಮಂದಿಗೆ ಮೋಸ ಮಾಡಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ಕೆಲವು ತಿಂಗಳ ಹಿಂದೆ ಪ್ರಾರಂಭಿಸಿದ ಈ ಕಂಪನಿಯಲ್ಲಿ, ಆರಂಭದ ಕೆಲವು ದಿನ ನಿತ್ಯವೂ ಹಣ ಪಾವತಿಸುತ್ತಿದ್ದರು. ಬಳಿಕ ನಿಲ್ಲಿಸಿದರು. ವಿವಿಧ ರೀತಿಯ ಪ್ಯಾಕೇಜ್‌ಗಳನ್ನು ತಿಳಿಸಿ ಜನರನ್ನು ಆಕರ್ಷಿಸುತ್ತಿದ್ದರು’ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT