ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ‘ಯುಜಿಡಿ ಸಿಟಿ’ ಆಗುವುದು ಯಾವಾಗ?

ಬಹುತೇಕ ಕಡೆಗಳಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ
Last Updated 7 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಬೆಳಗಾವಿ: ರಾಜ್ಯದ ಪ್ರಮುಖ ನಗರವಾದ ಇಲ್ಲಿನ ಬಹುತೇಕ ಬಡಾವಣೆಗಳಲ್ಲಿ ಕನಿಷ್ಠ ಮೂಲಸೌಲಭ್ಯವಾದ ಒಳಚರಂಡಿ (ಯುಜಿಡಿ) ವ್ಯವಸ್ಥೆ ಇಲ್ಲದಿರುವುದು ಹಲವು ಸಮಸ್ಯೆಗಳಿಗೆ ಕಾರಣವಾಗಿದೆ.

58 ವಾರ್ಡ್‌ಗಳ ವಿಶಾಲ ವ್ಯಾಪ್ತಿ ಹಾಗೂ 6ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ಇಲ್ಲಿ ಈವರೆಗೆ ಶೇ 45ರಷ್ಟು ಪ್ರದೇಶಗಳಲ್ಲಿ ಮಾತ್ರವೇ ಯುಜಿಡಿ ಇದೆ. ಇದು ಕೂಡ ಹಲವು ದಶಕಗಳ ಹಿಂದೆಯೇ ಮಾಡಿದ್ದಾಗಿದೆ. ಇರುವುದು ಹಳೆಯ ಬೆಳಗಾವಿ ಎನಿಸಿಕೊಂಡಿರುವ ಪ್ರದೇಶಗಳಲ್ಲಿ ಮಾತ್ರ. ಅವುಗಳಲ್ಲೂ ಬಹಳಷ್ಟು ಹಾಳಾಗಿವೆ! ಇದರಿಂದಾಗಿ, ವ್ಯವಸ್ಥಿತ ಯುಜಿಡಿ ವ್ಯವಸ್ಥೆಯೇ ಇಲ್ಲದಂತಹ ನಗರವಿದು ಎನ್ನಬಹುದು! ಯುಜಿಡಿ ಅನುಷ್ಠಾನ ಯೋಜನೆಯು ಹಲವು ವರ್ಷಗಳಿಂದಲೂ ‘ನನೆಗುದಿಗೆ’ ಬಿದ್ದಿದೆ. ಮಾಮೂಲಿ ಚರಂಡಿಯಲ್ಲೇ ಒಳಚರಂಡಿ ನೀರು ಹರಿಯುವುದು ಸಾಮಾನ್ಯವಾಗಿದೆ.

ಬೆಳೆದಂತೆಲ್ಲಾ:

ನಗರವು ಬೆಳೆದಂತೆಲ್ಲಾ, ಬಡಾವಣೆಗಳು ಹೆಚ್ಚಾದಂತೆಲ್ಲಾ ಯುಜಿಡಿ ವ್ಯವಸ್ಥೆಯನ್ನು ಕಂಡುಕೊಳ್ಳುವ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿಲ್ಲ. ಪರಿಣಾಮ, ಇರುವ ಚರಂಡಿಗಳು, ನಾಲೆಗಳಿಗೇ ಒಳಚರಂಡಿ ನೀರು ಸೇರುತ್ತಿರುವುದು ತಪ್ಪಿಲ್ಲ. ಜಲಮೂಲಗಳಿಗೂ ಕಲುಷಿತ ನೀರು ಸೇರ್ಪಡೆಯಾಗುತ್ತಿರುವುದು ಕಳವಳ ಮೂಡಿಸುತ್ತದೆ. ಇದ್ಯಾವುದನ್ನೂ ಸ್ಥಳೀಯ ಸಂಸ್ಥೆಯಾಗಲಿ, ಆಡಳಿತ ನಡೆಸುವವರಾಗಲೀ ಗಂಭೀರವಾಗಿ ಪರಿಗಣಿಸಿದಂತೆಯೇ ಇಲ್ಲ.

ಪ್ರಮುಖ ಮೂಲಸೌಲಭ್ಯಗಳನ್ನೇ ಕಲ್ಪಿಸದೇ ಇತರ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವುದು ‘ಹೊಟ್ಟೆಗೆ ಹಿಟ್ಟಿಲ್ಲ; ಜುಟ್ಟಿಗೆ ಮಲ್ಲಿಗೆ ಹೂವು’ ಎನ್ನುವಂತಾಗಿದೆ. ಸ್ಮಾರ್ಟ್‌ ಸಿಟಿ ಎನ್ನುವುದು ಹೇಳಿಕೊಳ್ಳುವುದಕ್ಕಷ್ಟೇ ಸೀಮಿತವಾಗಿದೆ. ಈ ವಿಷಯದಲ್ಲಿ ಬೆಳಗಾವಿಯು ಸಣ್ಣ ಪುಟ್ಟ ಪಟ್ಟಣಗಳು, ನಗರಗಳಿಗಿಂತಲೂ ‘ಕಡೆ’ಯಾಗಿದೆ.

ಪ್ರತ್ಯೇಕವಾಗಿ ಹೋಗಬೇಕು:

ಸ್ನಾನ, ಅಡುಗೆ ಕೋಣೆ ಹಾಗೂ ಶೌಚಾಲಯದ ನೀರು ಪ್ರತ್ಯೇಕವಾಗಿ ಹರಿದು ಹೋಗುವುದಕ್ಕೆ ಯುಜಿಡಿ ವ್ಯವಸ್ಥೆ ಬೇಕಾಗುತ್ತದೆ. 58 ವಾರ್ಡ್‌ಗಳ ಪೈಕಿ 35 ವಾರ್ಡ್‌ಗಳ ವ್ಯಾಪ್ತಿಯಲ್ಲಷ್ಟೇ ಈ ವ್ಯವಸ್ಥೆ ಇದೆ. ಉಳಿದ ಕಡೆಗಳಲ್ಲಿ ಈ ನೀರು ತೆರೆದ ಚಂರಂಡಿಗಳ ಮೂಲಕ ಹರಿದು ನಾಲೆ, ಮಳೆ ನೀರು ಚರಂಡಿಗೆ ಸೇರುತ್ತಿದೆ.

ಯುಜಿಡಿ ನೀರನ್ನು ಸಂಸ್ಕರಿಸಿದ ನಂತರ ಚರಂಡಿಗೆ ಹರಿಸುವುದು ಸರಿಯಾದ ಕ್ರಮ. ಆದರೆ. ಇದ್ಯಾವುದೂ ನಡೆಯುತ್ತಿಲ್ಲ. ಇಲ್ಲಿ ಯುಜಿಡಿ ವ್ಯವಸ್ಥೆಯೂ ಇಲ್ಲ; ಮಲಿನ ನೀರು ಶುದ್ದೀಕರಣ ಘಟಕ (ಎಸ್‌ಟಿಪಿ)ವೂ ಇಲ್ಲ. ಪರಿಣಾಮ ಕಲುಷಿತ ನೀರು ನೈಸರ್ಗಿಕವಾದ ನಾಲೆಗಳಲ್ಲಿ ಹರಿದು ಹೋಗಿ ಕೆರೆ–ಕಟ್ಟೆಗಳು, ಕೊನೆಗೆ ಜಲಾಶಯಗಳಿಗೆ ಸೇರುತ್ತಿದೆ. ಜಲಮೂಲಗಳು ಕಲುಷಿತವಾಗುತ್ತಿವೆ. ನೀರು ಪೂರೈಕೆ ಮಾಡುವ ಮಾರ್ಗಗಳಿಗೂ (ಪೈಪ್‌ಲೈನ್‌ ಒಡೆದ ಸಂದರ್ಭದಲ್ಲಿ) ಈ ಕಲುಷಿತ ನೀರು ಸೇರ್ಪಡೆಯಾಗುತ್ತಿದೆ. ಇದು ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತಿದೆ.

ಅಲ್ಲೂ ನಡೆಯುತ್ತಿಲ್ಲ:

ಹೊಸದಾಗಿ ನಿರ್ಮಾಣವಾಗುವ ಅಪಾರ್ಟ್‌ಮೆಂಟ್‌, ಮನೆಗಳ ಬಳಿ ಚಿಕ್ಕದಾಗಿ ಎಸ್‌ಟಿಪಿ ಸ್ಥಾಪಿಸಿ ಕಲುಷಿತ ನೀರನ್ನು ಸಂಸ್ಕರಿಸಿ ನಂತರ ಚರಂಡಿಗೆ ಹರಿಸಬೇಕು ಎನ್ನುತ್ತದೆ ನಿಯಮ. ಇದು ಕೂಡ ಬಹುತೇಕ ಕಾಗದದ ಮೇಲೆಯೇ ಉಳಿದಿದೆ. ಹೀಗಾಗಿ, ಮಲಿನ ನೀರನ್ನು ಮೂಲದಲ್ಲೇ ಸಂಸ್ಕರಿಸುವ ಕಾರ್ಯ ಹೆಚ್ಚಿನ ಕಡೆಗಳಲ್ಲಿ ನಡೆಯುತ್ತಿಲ್ಲ. ಒಳಚರಂಡಿ ಹಾಗೂ ಎಸ್‌ಟಿಪಿ ಇಲ್ಲದಿರುವುದರಿಂದಾಗಿಯೇ ನಗರವು ಕೇಂದ್ರ ಸರ್ಕಾರ ನಡೆಸುವ ‘ಸ್ವಚ್ಛ ಸರ್ವೇಕ್ಷಣಾ ಅಭಿಯಾನ’ದಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯಲು ಆಗುತ್ತಿಲ್ಲ. ರ್‍ಯಾಂಕಿಂಗ್ ಪಟ್ಟಿಯಲ್ಲಿ ಸ್ಥಾನ ಸುಧಾರಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ.

ಕೆಲವು ಬಡಾವಣೆಗಳಲ್ಲಿ ಭಾಗಶಃ ಯುಜಿಡಿ ವ್ಯವಸ್ಥೆ ಇದೆ. ಅಲ್ಲಲ್ಲಿ ಒಳಚರಂಡಿ ಕಟ್ಟಿಕೊಂಡಿದೆ. ಒಡೆದು ಸೋರಿಕೆಯಾಗಿ ಅಲ್ಲಿನ ಪರಿಸರ ಹಾಳಾಗುತ್ತಿದೆ. ಮ್ಯಾನ್‌ಹೋಲ್‌ಗಳ ಮುಚ್ಚಳಗಳು ಆಗಾಗ ತೆರೆದುಕೊಳ್ಳುವ ಉದಾಹರಣೆಗಳು ಸಾಕಷ್ಟಿವೆ.

ಅವ್ಯವಸ್ಥೆಗಳು ಹಲವು:

ನಗರದ ಹೃದಯ ಭಾಗದಲ್ಲೇ ಅವ್ಯವಸ್ಥೆಗಳು ಸಾಕಷ್ಟಿವೆ. ಕಾಕತಿವೇಸ್‌ನಿಂದ ಜಿಲ್ಲಾಧಿಕಾರಿ ಕಚೇರಿಗೆ ಹೋಗುವ ಸಾರ್ವಜನಿಕ ಶೌಚಾಲಯ ಬಳಿಯ ರಸ್ತೆಯಲ್ಲಿ, ನ್ಯಾಯಾಲಯಗಳ ಸಂಕೀರ್ಣಗಳ ಎದುರಿನ ರಸ್ತೆಯಲ್ಲಿ, ಜಿಲ್ಲಾಸ್ಪತ್ರೆಯ ಪ್ರವೇಶ ದ್ವಾರದಲ್ಲಿ (ಕ್ಲಬ್‌ ರಸ್ತೆ ಕಡೆಯಿಂದ) ಆಗಾಗ ಒಳಚರಂಡಿ ನೀರು ರಸ್ತೆಯ ಮೇಲೆ ಹರಿಯುವುದು, ದುರ್ನಾತ ಉಂಟಾಗುವುದು ಸಾಮಾನ್ಯವಾಗಿ ಹೋಗಿದೆ. ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಆಗಾಗ ಎದುರಾಗುತ್ತಿದೆ. ಪರಿಣಾಮ, ದುರ್ಗಂಧ ತಪ್ಪಿಸಲು ಕಲುಷಿತ ನೀರನ್ನು ಒಳಚರಂಡಿಯಲ್ಲಿ ಹರಿದು ಹೋಗುವಂತೆ ಮಾಡುವ ಉದ್ದೇಶ ಈಡೇರಿಕೆಯಾಗುತ್ತಿಲ್ಲ.

‘ಬೆಳಗಾವಿಯಂತಹ ದೊಡ್ಡ ನಗರಗಳಲ್ಲಿ ಯುಜಿಡಿ ವ್ಯವಸ್ಥೆ ಹಾಗೂ ಎಸ್‌ಟಿಪಿ ಘಟಕ ಅತ್ಯಗತ್ಯ. ಮಲಿನ ನೀರನ್ನು ಸಮರ್ಪಕವಾಗಿ ನಿರ್ವಹಿಸಬೇಕಾಗುತ್ತದೆ; ಸಂಸ್ಕರಿಸಬೇಕಾಗುತ್ತದೆ. ಜನರ ಆರೋಗ್ಯ ಕಾಪಾಡುವಲ್ಲಿ ಇದು ಪ್ರಮುಖ ಕಾರ್ಯವಾಗಿದೆ. ಇಲ್ಲವಾದಲ್ಲಿ ಜಲಮೂಲಗಳು ಕಲುಷಿತವಾಗುತ್ತವೆ. ಮಲೇರಿಯಾ, ಡೆಂಗಿ, ಚಿಕೂನ್‌ಗುನ್ಯಾ ಮೊದಲಾದ ಸಾಂಕ್ರಾಮಿಕ ರೋಗಗಳು ಹರಡುತ್ತವೆ’ ಎಂದು ಆರೋಗ್ಯ ಇಲಾಖೆ ಬೆಳಗಾವಿ ವಿಭಾಗದ ಉಪನಿರ್ದೇಶಕ ಡಾ.ಅಪ್ಪಾಸಾಹೇಬ ನರಹಟ್ಟಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮದಿಂದ 10 ವರ್ಷಗಳ ಹಿಂದೆಯೇ ಯೋಜನೆ ರೂಪಿಸಿ ಸಲ್ಲಿಸಲಾಗಿತ್ತು. ನಗರಕ್ಕೆ ಭೇಟಿ ನೀಡುವ ನಗರಾಭಿವೃದ್ಧಿ ಸಚಿವರೆಲ್ಲರೂ ಒಳಚರಂಡಿ ವ್ಯವಸ್ಥೆಗೆ ಅಗತ್ಯವಾದ ಅನುದಾನ ನೀಡಲಾಗುವುದು ಎಂದು ಭರವಸೆ ಕೊಟ್ಟು ಹೋಗಿದ್ದಾರೆ. ಆದರೆ, ಅನುಷ್ಠಾನವಾಗಿಲ್ಲ. ಈಗಿನ ಸರ್ಕಾರವಾದರೂ ಇತ್ತ ಗಮನಹರಿಸುವುದೇ ಕಾದು ನೋಡಬೇಕಿದೆ.

**

ನಗರಕ್ಕೆ ಯುಜಿಡಿ ಅತ್ಯಗತ್ಯವಾಗಿದೆ. ಹಲವು ವರ್ಷಗಳ ಹಿಂದೆಯೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ನಗರಪಾಲಿಕೆಯಿಂದ ಮನವಿ ಬಂದರೆ ಸಮಗ್ರ ಯೋಜನಾ ವರದಿ ಸಿದ್ಧಪಡಿಸಿ ಮತ್ತೊಮ್ಮೆ ಕಳುಹಿಸಲಾಗುವುದು.
- ವಿ.ಎಲ್. ಚಂದ್ರಪ್ಪ, ಕಾರ್ಯನಿರ್ವಾಹಕ ಎಂಜಿನಿಯರ್, ಕೆಯುಡಬ್ಲ್ಯುಎಸ್‌ಎಸ್‌ಬಿ

**
ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಯುಜಿಡಿಗೆ ಸಂಬಂಧಿಸಿದ ಕೆಲಸಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳಲಾಗಿದೆ. ಇನ್ನೆರಡು ವರ್ಷಗಳಲ್ಲಿ ಶೇ 70ರಿಂದ 80ರಷ್ಟು ಪ್ರದೇಶಗಳಲ್ಲಿ ಯುಜಿಡಿ ವ್ಯವಸ್ಥೆ ಇರಲಿದೆ.
- ಅಭಯ ಪಾಟೀಲ, ಶಾಸಕರು, ದಕ್ಷಿಣ ಕ್ಷೇತ್ರ

**
ಉತ್ತರ ಮತಕ್ಷೇತ್ರದಲ್ಲಿ ಯುಜಿಡಿ ಸಮಸ್ಯೆ ಜಾಸ್ತಿ ಇದೆ. ಇದನ್ನು ಪರಿಹರಿಸಲು ಕ್ರಮ ವಹಿಸಲಾಗಿದೆ. ವಿಶೇಷ ಅನುದಾನ ಬೇಕಾಗುತ್ತದೆ. ಸಂಬಂಧಿಸಿದ ಸಚಿವರನ್ನು ಭೇಟಿಯಾಗಿ ಮನವರಿಕೆ ಮಾಡಿಕೊಡಲಾಗುವುದು.
- ಅನಿಲ ಬೆನಕೆ, ಶಾಸಕರು, ಉತ್ತರ ಕ್ಷೇತ್ರ

**
‘₹500 ಕೋಟಿ ಬೇಕಾಗುತ್ತದೆ’
‘ನಗರದಾದ್ಯಂತ ಯುಜಿಡಿ ವ್ಯವಸ್ಥೆ ಹೊಂದುವುದು ಅತ್ಯಂತ ಅವಶ್ಯ ನಿಜ. ಆದರೆ, ಅದಕ್ಕೆ ₹ 500 ಕೋಟಿ ಅನುದಾನ ಬೇಕಾಗುತ್ತದೆ. ಪ್ರಸ್ತುತ ಕೇಂದ್ರ ಪುರಸ್ಕೃತ‘ಅಮೃತ್‌’ ಯೋಜನೆಯಡಿ ಎಸ್‌ಟಿಪಿ ನಿರ್ಮಾಣಕ್ಕಷ್ಟೇ ₹ 162 ಕೋಟಿ ಅನುದಾನ ದೊರೆತಿದೆ. ಇದರಲ್ಲಿ ಈಗಿರುವ ಯುಜಿಡಿ ಮಾರ್ಗ ದುರಸ್ತಿಪಡಿಸಿ ನೀರನ್ನು ಪೈಪ್‌ಲೈನ್‌ ಮೂಲಕ ಎಸ್‌ಟಿಪಿ ಘಟಕಕ್ಕೆ ಹರಿಸಿ ಸಂಸ್ಕರಿಸಿ ನಾಲೆಗೆ ಹರಿಸಲಾಗುವುದು’ ಎನ್ನುತ್ತಾರೆ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಕಾರ್ಯನಿರ್ವಾಹಕ ಎಂಜಿನಿಯರ್‌ ವಿ.ಎಲ್. ಚಂದ್ರಪ್ಪ.

‘ಹಲಗಾದಲ್ಲಿ ಎಸ್‌ಟಿಪಿ ಘಟಕ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಧಾರಾಕಾರ ಮಳೆಯಿಂದಾಗಿ ಕೆಲಸ ಸ್ಥಗಿತಗೊಂಡಿದೆ. ಮಳೆಗಾಲ ಮುಗಿದ ನಂತರ ದೊಡ್ಡ ಪ್ರಮಾಣದಲ್ಲಿ ಕಾಮಗಾರಿ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

**

ಅಂಕಿ–ಅಂಶ

58 - ನಗರದಲ್ಲಿರುವ ವಾರ್ಡ್‌ಗಳು
1.18 ಲಕ್ಷ - ಇಲ್ಲಿರುವ ಕುಟುಂಬಗಳ ಸಂಖ್ಯೆ
6 ಲಕ್ಷ - ಇಲ್ಲಿನ ಜನಸಂಖ್ಯೆ
ಶೇ 45 - ಯುಜಿಡಿ ವ್ಯವಸ್ಥೆ ಇರುವ ಪ್ರದೇಶಗಳು
ಶೇ 55 - ಯುಜಿಡಿ ವ್ಯವಸ್ಥೆ ಇಲ್ಲದ ಪ್ರದೇಶಗಳು
₹162 ಕೋಟಿ - ಎಸ್‌ಟಿಪಿ ನಿರ್ಮಾಣಕ್ಕೆ ದೊರೆತ ಅನುದಾನ
₹500 ಕೋಟಿ - ಇಡೀ ನಗರದಲ್ಲಿನ ಯುಜಿಡಿಗೆ ಬೇಕಾಗುವ ಅನುದಾನ
46 ಕಿ.ಮೀ. - ‘ಅಮೃತ್‌’ ಯೋಜನೆಯಡಿ ಅಳವಡಿಸಲಾಗುವ ಪೈಪ್‌ಲೈನ್‌ ಮಾರ್ಗ
10 ವರ್ಷ - ಯುಜಿಡಿ ಯೋಜನೆ ನನೆಗುದಿಗೆ ಬಿದ್ದಿರುವ ಸಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT