ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಜನರ ಸಮಸ್ಯೆಗಳಿಗೆ ಕಿವಿಯಾದ ಜಿಲ್ಲಾಧಿಕಾರಿ

Last Updated 20 ಫೆಬ್ರುವರಿ 2021, 7:24 IST
ಅಕ್ಷರ ಗಾತ್ರ

ಬೆಳಗಾವಿ: ಗ್ರಾಮೀಣ ಜನರ ಸಮಸ್ಯೆಗಳಿಗೆ ಕಿವಿಯಾಗಿ ಪರಿಹರಿಸುವ ನಿಟ್ಟಿನಲ್ಲಿ ಹಳ್ಳಿಯ ಕಡೆ ಹೆಜ್ಜೆ ಹಾಕಿರುವ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಬೈಲಹೊಂಗಲ ತಾಲ್ಲೂಕಿನ ಬೈಲವಾಡ ಗ್ರಾಮಕ್ಕೆ ಬಂದಿದ್ದಾರೆ.

ಪ್ರತಿ ತಿಂಗಳು ಮೂರನೇ ಶನಿವಾರ ಎಲ್ಲ ಜಿಲ್ಲಾಧಿಕಾರಿಗಳು ಗ್ರಾಮದಲ್ಲಿ ವಾಸ್ತವ್ಯ ಮಾಡಬೇಕು ಸರ್ಕಾರದ ಮಾರ್ಗಸೂಚಿಯಂತೆ ಶನಿವಾರ ಮೊದಲ ಗ್ರಾಮ‌ವಾಸ್ತವ್ಯ ಕಾರ್ಯಕ್ರಮ ಆರಂಭಗೊಂಡಿದೆ.

ಗ್ರಾಮದ ವರ್ತಿ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವ ಮೂಲಕ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಆರಂಭಿಸಿದ ಜಿಲ್ಲಾಧಿಕಾರಿ ₹ 25 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನನ ನೂತನ‌ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಶಾಸಕ ಮಹಾಂತೇಶ ಕೌಜಲಗಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಶಿಕ್ಷಣ ಪಡೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಇದಾದ ಬಳಿಕ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದರು. ವಸತಿನಿಲಯದ ಊಟದ ಕೋಣೆಯಲ್ಲಿ ಶಾಸಕ ಮಹಾಂತೇಶ ಕೌಜಲಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಸೇರಿದಂತೆ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಜೊತೆಗೆ ಉಪಾಹಾರ ಸೇವಿಸಿದರು.

ಬಳಿಕ ಜಿಲ್ಲಾಧಿಕಾರಿ ಹಾಗೂ ಶಾಸಕರು ಗುಂಡೇಟಿಗೆ ಬಲಿಯಾದ ಸಿ.ಆರ್.ಪಿ.ಎಫ್. ಹುತಾತ್ಮ ಯೋಧ ಮಂಜುನಾಥ ಮುದುಕನಗೌಡರ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮಾಲಾರ್ಪಣೆ ಮಾಡಿ ಗ್ರಾಮಕ್ಕೆ ಬರಮಾಡಿಕೊಂಡರು.

ಅಲ್ಲಿಂದ ಗ್ರಾಮ ಪ್ರದಕ್ಷಿಣೆ ಆರಂಭಿಸಿದ ಅವರು ಮೊದಲಿಗೆ ಪರಿಶಿಷ್ಟರ ಕೇರಿಗೆ ಭೇಟಿ ನೀಡಿದರು.ಇದೇ ವೇಳೆ ಕರಿಯಮ್ಮ ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.

ಕೈಬರಹದ ಮನವಿ ನೀಡಿದ ಬಾಲಕ!:

ಶೈಕ್ಷಣಿಕ ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ ಎಂದು ತಂದೆ ಕಳೆದುಕೊಂಡಿರುವ ಮೂರನೇ ತರಗತಿಯ ಬಾಲಕ ಕಿರಣ ಬಸವರಾಜ ಕೋಣಿಣ್ಣವರ ಕೈಬರಹದ ಮನವಿಪತ್ರ ನೀಡಿದ. ತಂದೆ ಇಲ್ಲ; ಅನಾರೋಗ್ಯ ಪೀಡಿತ ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಅಕ್ಕ ಕೀರ್ತಿ ಸಂಪಗಾಂವ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಓದುತ್ತಿದ್ದಾಳೆ. ಸಮೀಪದ ಕಾನ್ವೆಂಟಿನಲ್ಲಿ ಓದುತ್ತಿದ್ದೇನೆ. ಆದ್ದರಿಂದ ಶೈಕ್ಷಣಿಕ ವೆಚ್ಚ ಭರಿಸುವುದು ಕಷ್ಟವಾಗಿದೆ ಎಂದು ಜಿಲ್ಲಾಧಿಕಾರಿ ಗಮನಕ್ಕೆ ತಂದ.

ಬಾಡಿಗೆ ಮನೆಯಲ್ಲಿ ಇದ್ದಾರೆ. ಮನೆ ಖರ್ಚು ನಿಭಾಯಿಸಲು ಕಷ್ಟ ಎಂದು ಅಜ್ಜ ಸೋಮನಗೌಡ ದೊಡ್ಡವೀರಪ್ಪನವರ ಅಲವತ್ತುಕೊಂಡರು.

ಬಾಲಕನ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು‌ ಭರವಸೆ ನೀಡಿ ಸಮಾಧಾನ ಹೇಳಿದರು.

ಗೌಡರ ಓಣಿಯಲ್ಲಿ ಜನರ ಸಮಸ್ಯೆಗಳನ್ನು ಆಲಿಸಿದರು. ಸ್ವಾತಂತ್ರ್ಯ ಯೋಧರ ಪಿಂಚಣಿ; ವಿದ್ಯುತ್ ಕಂಬ ತೆರವು; ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜನರು ಮನವಿ ಮಾಡಿಕೊಂಡರು.

ಜಲಜೀವನ ಮಿಷನ್ ಯೋಜನೆಯಡಿ ಮನೆ ಮನೆಗೆ ನೀರು ಕಲ್ಪಿಸುವ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹಾಗೂ ಶಾಸಕ ಮಹಾಂತೇಶ ಕೌಜಲಗಿ ಅವರು ಜನರಿಗೆ ತಿಳಿಸಿದರು.

ಬಳಿಕ ಗ್ರಾಮ ಪಂಚಾಯ್ತಿ ಕಾರ್ಯಾಲಯಕ್ಕೆ ಭೇಟಿ ಜನರ ಅಹವಾಲು ಆಲಿಸಿದರು. ಗ್ರಾಮದ ವಿವಿಧ ಕಡೆಗಳಲ್ಲಿ ಮತ್ತು ಹೊಲಗಳಲ್ಲಿ ಶಿಥಿಲಗೊಂಡ ವಿದ್ಯುತ್ ಕಂಬಗಳು ಹಾಗೂ ಜೋತುಬಿದ್ದಿರುವ ವಿದ್ಯುತ್ ತಂತಿಗಳಿಂದ ಅಪಾಯ ಎದುರಾಗಿದೆ. ಆದ್ದರಿಂದ ತಕ್ಷಣವೇ ಇದನ್ನು ಸರಿಪಡಿಸಿಕೊಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡರು.

ಈ ಸಮಸ್ಯೆಯನ್ನು ವಾರದೊಳಗೆ ಸರಿಪಡಿಸಿ ವರದಿ‌ ಸಲ್ಲಿಸಬೇಕು ಎಂದು ಹೆಸ್ಕಾಂ ಸ್ಥಳೀಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.ನಂತರ ಗಾಡದಾರ ಓಣಿಯಲ್ಲಿ ಸಂಚರಿಸಿ ಸಮಸ್ಯೆಗಳನ್ನು ಪರಿಶೀಲಿಸಿದರು.

ನಾಯಕರ‌ ಓಣಿಯ ಜನರು, ಮಳೆಗಾಲದಲ್ಲಿ ನೀರು ಹರಿಯಲು ಜಾಗೆ ಇಲ್ಲದಿರುವುದರಿಂದ ತೀವ್ರ ತೊಂದರೆಯಾಗುತ್ತಿದೆ ಎಂದು ಜಿಲ್ಲಾಧಿಕಾರಿ ಗಮನಸೆಳೆದರು.

ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ಚನ್ನನಸಪ್ಪ ಕೊಡ್ಲಿ, ಕೃಷಿ ಇಲಾಖೆ ಜಂಟಿ‌ ನಿರ್ದೇಶಕರಾದ ಶಿವನಗೌಡ ಪಾಟೀಲ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಡಾ.ಉಮಾ ಸಾಲಿಗೌಡರ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರವೀಂದ್ರ ಹಕಾಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರ ಬಸವರಾಜ ವರವಟ್ಟಿ, ಡಿಡಿಪಿಐ ಎ.ಬಿ. ಪುಂಡಲೀಕ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT