ಭಾನುವಾರ, ಮೇ 22, 2022
28 °C
ಅಧಿಕಾರಿಗಳ ಸಭೆ ನಡೆಸಿದ ಶಾಸಕ ಬಾಲಚಂದ್ರ

ಸಮರ್ಪಕ ಪಡಿತರ ವಿತರಣೆಗೆ ಶಾಸಕ ಬಾಲಚಂದ್ರ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಕಾಕ: ‘ಸಾರ್ವಜನಿಕರಿಗೆ ಪಡಿತರ ಧಾನ್ಯ ಸಮರ್ಪಕವಾಗಿ ವಿತರಣೆ ಆಗುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಜನರಿಗೆ ಅನ್ಯಾಯ  ಆಗದಂತೆ ನೋಡಿಕೊಳ್ಳುವಂತೆ ನ್ಯಾಯಬೆಲೆ ಅಂಗಡಿಗಳವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು’ ಎಂದು ಕೆಎಂಎಫ್‌ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಲ್ಲಿನ ಮಿನಿವಿಧಾನಸೌಧದ ತಹಶೀಲ್ದಾರ್‌ ಕಚೇರಿಯಲ್ಲಿ ನಡೆದ ಗೋಕಾಕ ಮತ್ತು ಮೂಡಲಗಿ ತಾಲ್ಲೂಕುಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದರು.

‘ಪ್ರತಿ ತಿಂಗಳ 10ರಿಂದ 25ನೇ ತಾರೀಖಿನೊಳಗೆ ಆಹಾರ ಧಾನ್ಯ ವಿತರಿಸಬೇಕು. ಅಂಗಡಿ ಮಾಲೀಕರು ಜನರೊಂದಿಗೆ ಸೌಜನ್ಯಯುತವಾಗಿ ವರ್ತಿಸಬೇಕು’ ಎಂದು ತಾಕೀತು ಮಾಡಿದರು.

ನಿರ್ಲಕ್ಷ್ಯ ವಹಿಸಿದ್ದಾರೆ:

‘ಅರಭಾವಿ ಮತ ಕ್ಷೇತ್ರದಲ್ಲಿ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಅನುದಾನ ಬರುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಸ್ಥಳಕ್ಕೆ ಭೇಟಿ ನೀಡುತ್ತಿಲ್ಲ. ಕುಲಗೋಡದಿಂದ ಯಾದವಾಡದವರೆಗಿನ ರಸ್ತೆ ಕಾಮಗಾರಿ ತ್ವರಿತವಾಗಿ ನಡೆಯುತ್ತಿಲ್ಲ. ಪ್ರತಿ ವರ್ಷ ರಸ್ತೆಗಳ ನಿರ್ವಹಣೆಗಾಗಿ ಅನುದಾನ ಬರುತ್ತಿದ್ದರೂ  ಅದನ್ನು ಸಮರ್ಪಕವಾಗಿ ಬಳಸುತ್ತಿಲ್ಲ. ಯಾವುದಕ್ಕೆ ಖುರ್ಚು ಮಾಡಲಾಗಿದೆ ಎಂಬ ಬಗ್ಗೆ ತಕ್ಷಣವೆ ವರದಿ ನೀಡಬೇಕು. ಕರ್ತವ್ಯದಲ್ಲಿ ಲೋಪ ಎಸಗುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಆಗಲಿದೆ’ ಎಂದು ಎಚ್ಚರಿಕೆ ನೀಡಿದರು.

‘ಟೆಂಡರ್ ಆಗಿದ್ದರೂ ಇದುವರೆಗೂ ಕಾಮಗಾರಿಗಳನ್ನು ಆರಂಭಿಸಿಲ್ಲವೇಕೆ’ ಎಂದರು.

‘ಅರಭಾವಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಆಕ್ರಮ-ಸಕ್ರಮ ಯೋಜನೆಯಲ್ಲಿ 1,500 ಅರ್ಜಿಗಳು ಸಲ್ಲಿಕೆಯಾಗಿದ್ದು, ಹಕ್ಕುಪತ್ರ ನೀಡಿ ಬಡ ಕುಟುಂಬಗಳಿಗೆ  ಅನುಕೂಲ ಕಲ್ಪಿಸಬೇಕು’ ಎಂದು ಸೂಚಿಸಿದರು.

‘ಆಯ್ದ ಮಾರ್ಗಗಳಲ್ಲಿ ಮಾತ್ರ ಬಸ್ ಸಂಚಾರ ಪುನರಾರಂಭಗೊಂಡಿದೆ. ಇದರಿಂದ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಕೂಡಲೇ ಎಲ್ಲ ಮಾರ್ಗಗಳಲ್ಲೂ ಬಸ್‌ಗಳ ಕಾರ್ಯಾಚರಣೆಯನ್ನು ಹಿಂದಿನ ವೇಳಾಪಟ್ಟಿಯಂತೆ ನಡೆಸಲು ಕ್ರಮ ವಹಿಸಬೇಕು’ ಎಂದು ತಿಳಿಸಿದರು.

‘ಪ್ರವಾಹದಿಂದ ಹಾನಿಗೊಳಗಾದ ಮನೆಗಳ ಜಿಪಿಎಸ್ ಕಾರ್ಯ ಬಾಕಿ ಉಳಿದಿದ್ದು, ಕೂಡಲೇ ಅಂತಹ ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡಬೇಕು. ಅಗತ್ಯ ಬಿದ್ದರೆ ಜಿಲ್ಲಾಧಿಕಾರಿ ಜೊತೆ ನಾನೇ ಮಾತನಾಡುತ್ತೇನೆ. ಅಂಗನವಾಡಿ ಸಹಾಯಕ ಹುದ್ದೆಯಿಂದ ಕಾರ್ಯಕರ್ತೆ ಹುದ್ದೆಗೆ ಬಡ್ತಿಗಾಗಿ ಮಾಡಿದ ಪಟ್ಟಿಯಲ್ಲಿರುವ 12 ಜನರಿಗೆ ಕೂಡಲೇ ಪದೋನ್ನತಿ ನೀಡಬೇಕು’ ಎಂದರು.

‘ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿದ್ದು ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿವೆ. ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಸಭೆಗೆ ಗೈರು ಹಾಜರಾಗುತ್ತಿರುವ ಭೂ ಸೇನಾ ನಿಗಮದ ಅಧಿಕಾರಿಗಳಿಗೆ ತಕ್ಷಣವೇ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಬೇಕು’ ಎಂದು ಸೂಚಿಸಿದರು.

ಗೋಕಾಕ ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ, ಮೂಡಲಗಿ ತಹಶೀಲ್ದಾರ್ ದಿಲಶಾದ ಮಹಾತ, ತಾ.ಪಂ. ಇಒ ಬಸವರಾಜ ಹೆಗ್ಗನಾಯಕ, ಡಿವೈಎಸ್ಪಿ ಜಾವೀದ್ ಇನಾಮದಾರ, ಜಿ.ಪಂ. ಎಇಇ ಉದಯಕುಮಾರ ಕಾಂಬಳೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು