ಸೋಮವಾರ, ಮೇ 23, 2022
30 °C

ಸಿದ್ದರಾಮಯ್ಯ ವೇಸ್ಟ್ ಬಾಡಿ- ಡಿಕೆಶಿ ಮಾತಿಗೆ ಕಠೋರವಾಗಿ ಪ್ರತಿಕ್ರಿಯೆ: ಜಾರಕಿಹೊಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: 'ವಿಧಾನಪರಿಷತ್ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ನಮ್ಮ ಪಕ್ಷದಲ್ಲಿ ಏನೇನು ಬೆಳವಣಿಗೆ ಆಗಿವೆ ಎನ್ನುವುದನ್ನೆಲ್ಲದರ ಕುರಿತು ನಮ್ಮ ವರಿಷ್ಠರ ಜತೆಗೆ ಮಾತನಾಡಿದ್ದೇನೆ' ಎಂದು ಗೋಕಾಕ‌ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ‌ ಹೇಳಿದರು.

ಜಿಲ್ಲೆಯ ಗೋಕಾಕದ ತಮ್ಮ ಗೃಹ ಕಚೇರಿಯಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, 'ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕಿತ್ತು.‌ ಆದರೆ ಸೋತಿದ್ದೇಕೆ ಎನ್ನುವುದನ್ನು ಪಕ್ಷದ ಆಂತರಿಕ ವೇದಿಕೆಯಲ್ಲಿ ಚರ್ಚೆ ಮಾಡಿ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ‌' ಎಂದರು.

'ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಬಗ್ಗೆ ಬಹಳ ಕಠೋರವಾಗಿ ಹೇಳುವವನಿದ್ದೆ. ಆದರೆ, ನಮ್ಮ‌ ದೊಡ್ಡ ನಾಯಕರು ಆ ಬಗ್ಗೆ ಈಗಲೇ ಏನನ್ನೂ ಮಾತನಾಡಬೇಡಿ ಎಂದು ಸಲಹೆ‌ ನೀಡಿದ್ದಾರೆ. ಮುಂದಿನ‌ ದಿನಗಳಲ್ಲಿ ಎಲ್ಲದರ ಬಗ್ಗೆಯೂ ಮಾತನಾಡುತ್ತೇನೆ. ಕೆಲವೇ ದಿನಗಳಲ್ಲಿ ಡಿಕೆಶಿ ಹೇಳಿಕೆ ಬಗ್ಗೆ ಕಠೋರವಾಗಿ ಉತ್ತರ ಕೊಡುತ್ತೇನೆ' ಎಂದು ಹೇಳಿದರು.

'ಜಿಲ್ಲೆಯ ವಿಧಾನಪರಿಷತ್ ಚುನಾವಣೆಯಲ್ಲಿ, ಕೊನೆಯ ಮೂರು ದಿನಗಳಲ್ಲಿ ಚಿತ್ರಣ ಬದಲಾಯಿತು. ಹೀಗಾಗಿ ಸೋಲಾಗಿದೆ. ವಿಧಾನಪರಿಷತ್ ಚುನಾವಣೆಯಲ್ಲಿ ಗೆದ್ದಿರುವ ಸಹೋದರ ಲಖನ್ ಬಿಜೆಪಿ ಸೇರುತ್ತಾರೆಯೋ,‌ ಪಕ್ಷೇತರರಾಗಿಯೇ ಉಳಿಯುತ್ತಾರೆಯೋ ಎನ್ನುವುದು ಅವರಿಗೆ ಬಿಟ್ಟ ವಿಚಾರ. ಲಖನ್ ಜಾರಕಿಹೊಳಿ‌ ಕೊನೆಯ ಮೂರು ದಿನ ನಮ್ಮ ಕೈಗೆ ಸಿಗಲಿಲ್ಲ‌. ಹೀಗಾಗಿ ಚಿತ್ರಣ ಬದಲಾಯಿತು' ಎಂದರು.

ಬಿಜೆಪಿ ಸೋಲನ್ನು ತಲೆಗೆ ಕಟ್ಟುತ್ತಿದ್ದಾರೆಯೇ ಎಂಬ ಪ್ರಶ್ನೆಗೆ, 'ಗುಡ್ಡಕ್ಕೆ ಶಕ್ತಿ ಹೊರುವ ತಾಕತ್ತು ಇದೆ ಬಿಡಿ. ನನ್ನ ವಿರುದ್ಧ ಸಂಚು ನಡೆದಿರುವ ಬಗ್ಗೆ ನನಗೆ ಖಚಿತ ಮಾಹಿತಿ‌ ಇಲ್ಲ. ಮಾಹಿತಿ‌‌ ಸಿಕ್ಕ ಬಳಿಕ ಮಾತನಾಡುತ್ತೇನೆ. ಸೋಲಿನ ಪಟ್ಟವನ್ನು ಲೀಡರ್ ಆದವರಿಗೇ ಕಟ್ಟುತ್ತಾರೆ' ಎಂದು ಹೇಳಿದರು.

'ಜಿಲ್ಲೆಯಲ್ಲಿ ನಾನು ಕಾಂಗ್ರೆಸ್ ಸೋಲಿಸುತ್ತೇನೆ ಎಂದು ಹಟಕ್ಕೆ ಬಿದ್ದಿದ್ದುದು ನಿಜ. ಆದರೆ ಆ ಪಕ್ಷ ಗೆದ್ದಿದೆ. ಅದರ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಎಲ್ಲಿ ತಪ್ಪಾಗಿದೆ ಎನ್ನುವುದನ್ನು ಆಂತರಿಕವಾಗಿ ಚರ್ಚೆ ಮಾಡುತ್ತೇವೆ' ಎಂದರು.

'ಬಿಜೆಪಿಗೆ ಧಮ್ ಇದ್ದರೆ ರಮೇಶ ಜಾರಕಿಹೊಳಿ ವಿರುದ್ಧ ಕ್ರಮ‌ ಕೈಗೊಳ್ಳಲಿ‌ ಎಂಬ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ, 'ಸಿದ್ದರಾಮಯ್ಯ ವೇಸ್ಟ್ ಬಾಡಿ.‌ ಒಬ್ಬ ಹಿಂದುಳಿದ ವರ್ಗದ ನಾಯಕ ಬೆಳೆಯುತ್ತಿರುವುದಕ್ಕೆ ಹೆದರುತ್ತಿದ್ದಾನೆ. ಮುಂದೆ ಸೋಲುತ್ತಾನೆ.‌ ಸೋಲುವ ಹಾಗೂ ಹಳ್ಳಕ್ಕೆ ಬಿದ್ದಿರುವ ವ್ಯಕ್ತಿ ಬಗ್ಗೆ ಮಾತನಾಡಿ ಪ್ರಯೋಜನವಿಲ್ಲ' ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು