ಸೋಮವಾರ, ಏಪ್ರಿಲ್ 19, 2021
32 °C
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ವಿಧಾನಸಭಾಧ್ಯಕ್ಷ ಕಾಗೇರಿ ಹೇಳಿಕೆ

ಆಧ್ಯಾತ್ಮಿಕ ಶಕ್ತಿ ಬಲಗೊಳಿಸಿಕೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಎಲ್ಲ ಸಾಧನೆಗೂ ಮೂಲವಾಗಿರುವ ಆಧ್ಯಾತ್ಮಿಕ ಶಕ್ತಿಯನ್ನು ನಾವು ಬಲಗೊಳಿಸಿಕೊಳ್ಳಬೇಕು’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಇಲ್ಲಿನ ಧರ್ಮದರ್ಶನಗಳ ತೌಲನಿಕ ಅಧ್ಯಯನ ಸಂಸ್ಥೆ (ಎಸಿಪಿಆರ್‌) ಗುರುದೇವ ರಾನಡೆ ಮಂದಿರದಲ್ಲಿ ಬಿ.ಆರ್‌. ಕುಲಕರ್ಣಿ ಸಂಗ್ರಹಿಸಿರುವ ‘ದಿ ಗ್ಲಿಂಪ್ಸಸ್ ಆಫ್ ಶ್ರೀಗುರುದೇವ ರಾನಡೆ’ ಇಂಗ್ಲಿಷ್‌ ಪುಸ್ತಕವನ್ನು ಶುಕ್ರವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಅಧ್ಯಾತ್ಮದಲ್ಲಿ ಸಾಧನೆ ಮಾಡಿದ ಅನೇಕ ದಾರ್ಶನಿಕರು ಆಧ್ಯಾತ್ಮಿಕ ತಳಹದಿಯನ್ನು ಭದ್ರಪಡಿಸಿಕೊಳ್ಳಬೇಕು ಎಂದು ಒತ್ತಿ ಹೇಳಿದ್ದಾರೆ. ಹೀಗಾಗಿ, ನಾವು ಹಣ ಗಳಿಕೆ ಎನ್ನುವ ಭಾವನೆಯನ್ನು ಮೀರಿ ಯೋಚಿಸಬೇಕಾಗುತ್ತದೆ. ವಯಸ್ಸಾದ ಬಳಿಕ ಅಧ್ಯಾತ್ಮ ಬೇಕಾಗುತ್ತದೆ’ ಎಂದು ಪ್ರತಿಪಾದಿಸಿದರು.

ಸಂಸ್ಕಾರ ರೂಢಿಸಿಕೊಳ್ಳಬೇಕು:

‘ನಮ್ಮ ಶಿಕ್ಷಣ ವ್ಯವಸ್ಥೆಯು ಹಣ ಗಳಿಕೆಯ ಉದ್ದೇಶಕ್ಕಾಗಿ ಮಾತ್ರವಲ್ಲದೇ ಸಂಸ್ಕಾರ ರೂಢಿಸಿಕೊಳ್ಳುವುದನ್ನೂ ಕಲಿಸಬೇಕು’ ಎಂದು ಹೇಳಿದರು.

‘ಬೆಳಗಾವಿಯು ‌ಅಧ್ಯಾತ್ಮದ ತವರು ಎಂದು ಗುರುತಿಸುವಂತೆ ಆಗಬೇಕು. ಸನಾತನ ಹಿಂದೂ ಧರ್ಮ, ಸಂಸ್ಕೃತಿ, ಪರಂಪರೆಯ ನಾವೆಲ್ಲರೂ ಪುಣ್ಯವಂತರು. ಆದರೆ, ಸೃಷ್ಟಿಯ ಸತ್ಯಗಳನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಬೇಕು’ ಎಂದು ಸಲಹೆ ನೀಡಿದರು.

‘ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹದಿಂದ ಬಹಳ‌ ಹಾನಿಯಾಗಿದೆ. ಕಷ್ಟದಲ್ಲಿ ಇರುವ ಜನರಿಗೆ ಇಡೀ ಸಮಾಜ ನೆರವಾಗುತ್ತಿದೆ. ಪರಿಹಾರ ಕಲ್ಪಿಸಲು ಸರ್ಕಾರವೂ ಉತ್ತಮವಾಗಿ ಕೆಲಸ ಮಾಡುತ್ತಿದೆ. ನಮ್ಮ ಜನರು ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಎಲ್ಲರೂ ಕೈಯಲ್ಲಾದ ಸಹಾಯ ಮಾಡಬೇಕು’ ಎಂದು ಕೋರಿದರು.

ಅಥಣಿಯ ಜಾಧವಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅರವಿಂದರಾವ್ ದೇಶಪಾಂಡೆ ಮಾತನಾಡಿ, ‘ರಾನಡೆ ಅವರನ್ನು ಗುರುದೇವ ಎಂದು ಇಡೀ ಜಗತ್ತೇ ಒಪ್ಪಿಕೊಂಡಿದೆ. ಅದಕ್ಕೆ ಅವರ ಸಾಧನೆ ಕಾರಣ’ ಎಂದರು.

ಆತ್ಮದರ್ಶನ ಮಾಡಿಕೊಳ್ಳಬೇಕು:

‘ಜೀವನ ಸಾರ್ಥಕವಾಗಬೇಕಾದರೆ ಆತ್ಮದರ್ಶನ ಮಾಡಿಕೊಳ್ಳಬೇಕು. ಅದು ಸುಲಭವಲ್ಲ. ಶರೀರ, ಮನಸ್ಸು ಹಾಗೂ ಬುದ್ಧಿ‌ ಶುದ್ಧವಾಗಿರಬೇಕಾಗುತ್ತದೆ. ಭಾರತೀಯ ಪರಂಪರೆಯಲ್ಲಿ ತರ್ಕಬದ್ಧತೆ ಇದೆ. ಪುರಾಣದ ಕತೆಗಳಲ್ಲೂ ತರ್ಕವಿದೆ. ಧರ್ಮ, ಕರ್ಮ ಹಾಗೂ ಪುಣ್ಯ ಮನೆಗಳಲ್ಲೇ ಅಡಗಿದೆ’ ಎಂದು ತಿಳಿಸಿದರು.

ಎಸಿಪಿಆರ್‌ ಕಾರ್ಯದರ್ಶಿ ಮಾರುತಿ ಝಿರಲಿ ಮಾತನಾಡಿ, ‘ಗುರುದೇವ ರಾನಡೆ ಅವರು ವಿದೇಶಗಳಿಗೆ ಹೋಗಲಿಲ್ಲ. ಆದರೆ ವಿದೇಶಗಳ ದಾರ್ಶನಿಕರೆಲ್ಲರೂ ಬಂದು ಅವರನ್ನು ಭೇಟಿಯಾದರು. ‘ದೊಡ್ಡ ಕಟ್ಟಡಗಳನ್ನು ಕಟ್ಟುವುದರಲ್ಲಿ ಅರ್ಥವಿಲ್ಲ. ಪುಸ್ತಕಗಳ ಪ್ರಕಟಣೆಗೆ ಆದ್ಯತೆ‌ ನೀಡಬೇಕು’ ಎಂದು ರಾನಡೆಯವರು ಹೇಳಿದ್ದರು. ಅದನ್ನು ಇಲ್ಲಿ ಅನುಸರಿಸುತ್ತಿದ್ದೇವೆ. ಸರ್ಕಾರದ ಯಾವುದೇ ಸಹಾಯವಿಲ್ಲದೇ ಸಂಸ್ಥೆಯಲ್ಲಿ ಚಟುವಟಿಕೆಗಳನ್ನು ನಡೆಸುತ್ತಿದ್ದೇವೆ. ರಾನಡೆ ಅವರನ್ನು ಆರಾಧಿಸುವವರು ದೇಣಿಗೆ ಕೊಡುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

ಸೊಲ್ಹಾಪುರದ ನಿವೃತ್ತ ಪ್ರಾಧ್ಯಾಪಕಿ ಡಾ.ಆಶ್ವಿನಿ ಅವಿನಾಶ್ ಜೋಗ್ ಪುಸ್ತಕ ಕುರಿತು ಮಾತನಾಡಿದರು.

ಎಸಿಪಿಆರ್ ಅಧ್ಯಕ್ಷ ಅಶೋಕ ‍ಪೋತದಾರ್, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ ಇದ್ದರು.

ಕಿಶೋರ್ ಕಾಕಡೆ ಪ್ರಾರ್ಥಿಸಿದರು. ಸುಬ್ರಹ್ಮಣ್ ಭಟ್ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು