ಸೋಮವಾರ, ಆಗಸ್ಟ್ 2, 2021
23 °C
ಪ್ರಜಾವಾಣಿ– ಡೆಕ್ಕನ್‌ ಹೆರಾಲ್ಡ್‌ ಆಯೋಜನೆ

ವಿದ್ಯಾರ್ಥಿಗಳ ಜ್ಞಾನ ದಾಹ ತಣಿಸಿದ ಕಾರ್ಯಾಗಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕೋಡಿ: ಶೈಕ್ಷಣಿಕ ಕ್ಷೇತ್ರದಲ್ಲಿರುವ ಉಜ್ವಲ ಅವಕಾಶಗಳ ಕುರಿತು ಮಾಹಿತಿ ನೀಡಲು ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್‌’ ಪತ್ರಿಕಾ ಬಳಗವು ಪಟ್ಟಣದ ಕೇಶವ ಕಲಾ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಶೈಕ್ಷಣಿಕ ಹಾಗೂ ಸಿಇಟಿ ಪ್ರಿ ಕೌನ್ಸೆಲಿಂಗ್ ಮಾರ್ಗದರ್ಶನ’ ಕಾರ್ಯಾಗಾರವು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಜ್ಞಾನದ ದಾಹ ತಣಿಸಿತು.

ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಕಾರ್ಯಾಗಾರವನ್ನು ಇದೇ ಮೊದಲ ಬಾರಿಗೆ ಚಿಕ್ಕೋಡಿಯಲ್ಲಿ ಆಯೋಜಿಸಲಾಗಿತ್ತು. ಸುತ್ತಮುತ್ತಲಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಂದ ಹಾಗೂ ಪಾಲಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. 800ಕ್ಕೂ ಹೆಚ್ಚು ವಿದ್ಯಾರ್ಥಿ ಮತ್ತು ಪೋಷಕರು ಭಾಗವಹಿಸಿ, ಶೈಕ್ಷಣಿಕ ಮಾಹಿತಿ ಪಡೆದುಕೊಂಡರು.

ಕಿಕ್ಕಿರಿದು ತುಂಬಿದ ಸಭಾಭವನ:
ಗೋಕಾಕ, ಚಿಕ್ಕೋಡಿ, ಅಥಣಿ, ರಾಯಬಾಗ, ಕಾಗವಾಡ, ಮೂಡಲಗಿ ಮತ್ತು ನಿಪ್ಪಾಣಿ ತಾಲ್ಲೂಕುಗಳಿಂದ ವಿದ್ಯಾರ್ಥಿ ಮತ್ತು ಪಾಲಕರು ಹಾಜರಾಗಿದ್ದರು. ಬೆಳಿಗ್ಗೆ 8.30 ರಿಂದಲೇ ವಿದ್ಯಾರ್ಥಿಗಳು ದಂಡು ದಂಡಾಗಿ ಕೇಶವ ಕಲಾಭವನದತ್ತು ಹೆಜ್ಜೆಹಾಕಿದ್ದರು. ಚಿಕ್ಕೋಡಿ ಪಟ್ಟಣದ ಸಿಎಲ್‌ಇ, ಸಿಟಿಇ, ಜಿಎಸ್‌ಇಎಸ್‌ ಸಂಸ್ಥೆಗಳ ಶಾಲೆ, ಕಾಲೇಜುಗಳು, ಸರ್ಕಾರಿ ಪದವಿ ಹಾಗೂ ಪಪೂ ಕಾಲೇಜುಗಳು ಸೇರಿದಂತೆ ವಿವಿಧೆಡೆಯಿಂದ ವಿದ್ಯಾರ್ಥಿ ಮತ್ತು ಪಾಲಕರು ಪಾಲ್ಗೊಂಡಿದ್ದರು.

ವಿಶೇಷ ವಾಹನ ವ್ಯವಸ್ಥೆ:

ತಾಲ್ಲೂಕಿನ ಮಜಲಟ್ಟಿಯ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯ ಹಾಗೂ ನಿಪ್ಪಾಣಿಯ ವಿಎಸ್‌ಎಂ ಪದವಿಪೂರ್ವ ಮಹಾವಿದ್ಯಾಲಯಗಳ ಉಪನ್ಯಾಸಕರು ನೂರಾರು ವಿದ್ಯಾರ್ಥಿಗಳನ್ನು ವಿಶೇಷ ವಾಹನ ವ್ಯವಸ್ಥೆ ಮಾಡಿಕೊಂಡು ಕಾರ್ಯಾಗಾರಕ್ಕೆ ಕರೆದುಕೊಂಡು ಬಂದಿದ್ದರು. ಕೇಶವ ಕಲಾ ಭವನದ ಸಭಾಭವನ ವಿದ್ಯಾರ್ಥಿ ಮತ್ತು ಪಾಲಕರಿಂದ ಕಿಕ್ಕಿರಿದು ತುಂಬಿತ್ತು.

ಸಂದೇಹ, ಗೊಂದಲಗಳಿಗೆ ಪರಿಹಾರ:
ಮೂರು ಗಂಟೆಗಳಿಗೂ ಅಧಿಕ ಕಾಲ ಸಂಪನ್ಮೂಲ ವ್ಯಕ್ತಿಗಳು ವಿವಿಧ ವಿಷಯಗಳ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳು ಆಸಕ್ತಿಯಿಂದ ಆಲಿಸಿದರು. ತಮ್ಮಲ್ಲಿರುವ ಗೊಂದಲಗಳು, ಸಂದೇಹಗಳನ್ನು ವಿಷಯ ಪರಿಣಿತರೊಂದಿಗೆ ಹಂಚಿಕೊಂಡು ಪರಿಹಾರವನ್ನೂ ಪಡೆದುಕೊಂಡರು.

ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಸಲಹೆ ನೀಡಿದರು. ಶೈಕ್ಷಣಿಕ ಕೋರ್ಸ್‌ಗಳ ಆಯ್ಕೆಗಳ ಕುರಿತು ಮಾಹಿತಿ ನೀಡಿದರು. ಯಾವ ರೀತಿ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕು, ಅದಕ್ಕಾಗಿ ಯಾವ ಮಾರ್ಗ ಅನುಸರಿಸಬೇಕು ಎನ್ನುವ ಕುರಿತು ಮಾರ್ಗದರ್ಶನ ನೀಡಿದರು.

ಪಿಯುಸಿ ನಂತರ ಮುಂದೇನು? ಎಂಜಿನಿಯರಿಂಗ್, ವೈದ್ಯಕೀಯ ಕೋರ್ಸ್‌ಗಳ ಆಯ್ಕೆ ಹೇಗೆ? ಈ ಕೋರ್ಸ್‌ಗಳಿಂದ ಉದ್ಯೋಗಾವಕಾಶಗಳು ಹೇಗಿವೆ? ಶೈಕ್ಷಣಿಕ ಸಾಲ ಸೌಲಭ್ಯಗಳನ್ನು ಪಡೆಯುವುದು ಹೇಗೆ? ಸಿಇಟಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಯಾವ ರೀತಿಯಾಗಿರುತ್ತದೆ? ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯಾವ ರೀತಿಯಲ್ಲಿ ಅಧ್ಯಯನ ಮಾಡಬೇಕು? ಹೀಗೆ ಹತ್ತಾರು ಸಂದೇಹಗಳನ್ನು ಹೊತ್ತುಕೊಂಡು ಬಂದ ವಿದ್ಯಾರ್ಥಿಗಳಿಗೆ ಕಾರ್ಯಾಗಾರದಲ್ಲಿ ಸ್ಪಷ್ಟ ಉತ್ತರಗಳು ದೊರಕಿದವು.

ಮಾಹಿತಿ ಮಳಿಗೆಗಳಿಗೆ ಭೇಟಿ:
ಚಿಕ್ಕೋಡಿಯ ಕೆಎಲ್‌ಇ ಎಂಜಿನಿಯರಿಂಗ್ ಕಾಲೇಜು, ಬೆಳಗಾವಿಯ ಜೈನ್ ಕಾಲೇಜ್ ಆಫ್‌ ಎಂಜಿನಿಯರಿಂಗ್, ಕೊಲ್ಹಾಪುರದ ಸಂಜಯ ಘೋಡಾವತ್ ಯುನಿರ್ವಸಿಟಿ, ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ, ನಿಪ್ಪಾಣಿಯ ವಿಎಸ್‌ಎಂ ಸಂಸ್ಥೆಯ ಸೋಮಶೇಖರ ಆರ್. ಕೋಠಿವಾಲೆ ಇನ್‌ಸ್ಟಿಟ್ಯೂಟ್‌ ಆಫ್‌ ಟೆ‌ಕ್ನಾಲಜಿ, ಧಾರವಾಡದ ಎಸ್‌ಡಿಎಂ ಯುನಿರ್ವಸಿಟಿ, ಬೆಳಗಾವಿಯ ಎಸ್‌.ಜಿ.ಬಾಳೇಕುಂದ್ರಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಕಾಲೇಜುಗಳು ಕೇಶವ ಕಲಾಭವನದ ನೆಲಮಹಡಿಯಲ್ಲಿ ಅಳವಡಿಸಿದ್ದ ಮಾಹಿತಿ ಮಳಿಗೆಗಳಿಗೂ ಭೇಟಿ ನೀಡಿದ ವಿದ್ಯಾರ್ಥಿ ಮತ್ತು ಪಾಲಕರು ಶೈಕ್ಷಣಿಕ ಅವಕಾಶಗಳ ಕುರಿತು ತಿಳುವಳಿಕೆ ಪಡೆದುಕೊಂಡರು.

ಇದೇ ಮೊದಲ ಬಾರಿಗೆ ಚಿಕ್ಕೋಡಿಯಂತಹ ಪ್ರದೇಶದಲ್ಲಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ದಿನಪತ್ರಿಕೆಗಳು ಏರ್ಪಡಿಸಿದ್ದ ಈ ಕಾರ್ಯಾಗಾರದ ಕುರಿತು ಪೋಷಕರು ಮತ್ತು ವಿದ್ಯಾರ್ಥಿಗಳು ಸಂತಸ ಹಂಚಿಕೊಂಡರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು