ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಲಹೊಂಗಲ: ಇಂದು ಚನ್ನಬಸವೇಶ್ವರರ ವೈಭವದ ಜಾತ್ರೆ

ಹಾರೂಗೊಪ್ಪ ಗ್ರಾಮದಲ್ಲಿದೆ ಉಳವಿ ಚನ್ನಬಸವೇಶ್ವರು ನೆಲೆ ನಿಂತ ಜಾಗ
Last Updated 5 ಫೆಬ್ರುವರಿ 2023, 6:05 IST
ಅಕ್ಷರ ಗಾತ್ರ

ಬೈಲಹೊಂಗಲ: ಸವದತ್ತಿ ತಾಲ್ಲೂಕಿಗೆ ಒಳಪಟ್ಟ, ಬೈಲಹೊಂಗಲ ಸಮೀಪದ ಹಾರೂಗೊಪ್ಪ ಗ್ರಾಮದಲ್ಲಿ ಈಗ ಜಾತ್ರೆ ಸಡಗರ ಮನೆ ಮಾಡಿದೆ. 12ನೇ ಶತಮಾನದ ಮಹಾಶರಣ ಚನ್ನಬಸವೇಶ್ವರರು ಉಳವಿಗೆ ಹೋಗುವ ಸಂದರ್ಭದಲ್ಲಿ ಈ ಊರಿಗೆ ಬಂದು ತಂಗಿದ್ದರು. ಅಂದಿನಿಂದ ಇಲ್ಲಿ ಜಾತ್ರೆ ನಡೆಸಿಕೊಂಡು ಬರಲಾಗಿದೆ.

ಈ ಬಾರಿ ನಡೆಯುತ್ತಿರುವುದು 18ನೇ ವರ್ಷದ ಜಾತ್ರಾ ಮಹೋತ್ಸವ. ಜ.5ರಂದು ಸಂಜೆ 5ಕ್ಕೆ ರಥೋತ್ಸವ ನೆರವೇರಲಿದೆ. ಜಿಲ್ಲೆಯ ವಿವಿಧೆಡೆಯಿಂದ ಇಲ್ಲಿಗೆ ಭಕ್ತಾದಿಗಳು ಬರುತ್ತಾರೆ. ಭಾನುವಾರ ನಸುಕಿನಿಂದಲೇ ಚನ್ನಬಸವೇಶ್ವರ ಮೂರ್ತಿಗೆ ಮಹಾಭಿಷೇಕ ನೆರವೇರಿಸಿ, ದರ್ಶನಕ್ಕೆ ಅವಕಾಶ ಮಾಡಿ ಕೊಡಲಾಗುವುದು.

ನಂತರ ಆನೆಯ ಮೇಲೆ ಚನ್ನಬಸವೇಶ್ವರರ ಚಿತ್ರಪಟ ಇಟ್ಟು ಮೆರವಣಿಗೆ ಮಾಡಲಾಗುವುದು. ಕುಂಭಮೇಳ, ಪಲ್ಲಕ್ಕಿ ಉತ್ಸವ, ಪ್ರಸಾದ ವಿತರಣೆಗಳು ಈ ಬಾರಿಯ ವಿಶೇಷ. ಅರಭಾವಿಯ ಪುಣ್ಯಾರಣ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಈ ಜಾತ್ರೆಯ ನೇತೃತ್ವ ವಹಿಸಲ್ಲಿದ್ದಾರೆ.

ಗ್ರಾಮದ ಜನರ ಆರಾಧ್ಯ ದೈವವಾಗಿರುವ ಉಳವಿ ಚನ್ನಬಸವೇಶ್ವರ ದೇವಸ್ಥಾನದ ಜಾತ್ರೆಯನ್ನು ಗ್ರಾಮಸ್ಥರು ಪ್ರತಿವರ್ಷ ಅದ್ಧೂರಿಯಿಂದ ನೆರವೇರಿಸಿಕೊಂಡು ಬಂದಿದ್ದಾರೆ. ಈ ದೇವಸ್ಥಾನದಲ್ಲಿ ಚನ್ನಬಸವೇಶ್ವರ, ನಂದಿ ಮೂರ್ತಿಗಳಿವೆ. ಪ್ರತಿದಿನ ವಿಶೇಷ ಪೂಜಾ ಕೈಂಕರ್ಯಗಳು ನೆರವೇರುತ್ತವೆ.

ಪ್ರತಿ ವರ್ಷ ಪದ್ಧತಿಯಂತೆ ನಡೆದ ಜಾತ್ರೆಗೆ ಜಾತ್ರಾ ಸಮಿತಿ ಒಗ್ಗಟ್ಟಿನಿಂದ ಸೇವೆ ಮಾಡುತ್ತಿದೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಕುಡಿಯುವ ನೀರು, ಪ್ರಸಾದ ವ್ಯವಸ್ಥೆ ಕಲ್ಪಿಸಿದೆ. ದೇವಸ್ಥಾನವನ್ನು ತಳಿರು ತೋರಣ, ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ಮಾಡಲಾಗಿದೆ.

ಇತಿಹಾಸ ಏನು?: ಕಲ್ಯಾಣ ಕ್ರಾಂತಿಯ ನಂತರ ಬೀದರ್‌ ಜಿಲ್ಲೆಯ ಬಸವಕಲ್ಯಾಣದಿಂದ ಹೊರಟ ಶರಣರ ತಂಡದ ನೇತೃತ್ವ ವಹಿಸಿದ್ದು ಚನ್ನಬಸವೇಶ್ವರರು. ವಚನ ಸಾಹಿತ್ಯವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಆ ಶರಣರ ಯಾತ್ರೆ ಉಳವಿಯತ್ತ ಸಾಗಿತು. ಪಾದಯಾತ್ರೆ ಮೂಲಕ ಬಂದ ಶರಣ– ಶರಣೆಯರು ಕೆಲ ಸಮಯ ಮಾರ್ಗದಲ್ಲಿ ಹಾರೂಗೊಪ್ಪ ಗ್ರಾಮದಲ್ಲಿ ವಿಶ್ರಾಂತಿ ಪಡೆದರು. ಲಿಂಗಪೂಜೆಗಳನ್ನು ಮಾಡಿದರು.

ಅದರ ಸ್ಮರಣಾರ್ಥ ಚಿಕ್ಕ ದೇವಸ್ಥಾನವನ್ನು ಇಲ್ಲಿ ನಿರ್ಮಿಸಲಾಗಿದೆ. ಊರಿನ ಭಕ್ತರು ಅದನ್ನು ಕಾಲಕಾಲಕ್ಕೆ ಅಭಿವೃದ್ಧಿ ಮಾಡುತ್ತ ಬಂದಿದ್ದಾರೆ. ಕೊನೆಗೆ ಚನ್ನಬಸವೇಶ್ವರರು ಉಳವಿಯಲ್ಲಿ ನೆಲೆ ನಿಂತ ಕಾರಣ ಈ ದೇವಸ್ಥಾನಕ್ಕೆ ಉಳವಿ ಚನ್ನಬಸವೇಶ್ವರ ಮಂದಿರ ಎಂದೇ ಕರೆಯಲಾಗಿದೆ ಎನ್ನುತ್ತವೆ ಗ್ರಾಮದ ಐತಿಹ್ಯಗಳು.

ಚನ್ನಬಸವೇಶ್ವರರು ರೈತರ ಆರಾಧ್ಯ ದೈವ. ಹೀಗಾಗಿ, ಗ್ರಾಮದಲ್ಲಿರುವ ಪ್ರತಿಯೊಂದು ಸಮುದಾಯದ ರೈತರೂ ಈ ದೇವಸ್ಥಾನಕ್ಕೆ ಭಕ್ತರಾಗಿದ್ದಾರೆ. ಜಾತಿ, ಧರ್ಮದ ಚೌಕಟ್ಟು ಮೀರಿ ಇಲ್ಲಿ ಎಲ್ಲ ಸಮಾಜದವರೂ ಪಾಲ್ಗೊಳ್ಳುವುದು ವಿಶೇಷ ಎನ್ನುತ್ತಾರೆ ಗ್ರಾಮದ
ಹಿರಿಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT