ಚಿಕ್ಕೋಡಿ: ಹುಕ್ಕೇರಿ ಓಟಕ್ಕೆ ಮೋದಿ ‘ಅಲೆ’ ಅಡ್ಡಿ

ಶನಿವಾರ, ಏಪ್ರಿಲ್ 20, 2019
27 °C
ಕಾಂಗ್ರೆಸ್‌, ಬಿಜೆಪಿ ಎರಡಕ್ಕೂ ಒಳಏಟಿನದ್ದೇ ಆತಂಕ!

ಚಿಕ್ಕೋಡಿ: ಹುಕ್ಕೇರಿ ಓಟಕ್ಕೆ ಮೋದಿ ‘ಅಲೆ’ ಅಡ್ಡಿ

Published:
Updated:

ಬೆಳಗಾವಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ 11 ಅಭ್ಯರ್ಥಿಗಳು ಕಣದಲ್ಲಿದ್ದರೂ ಕಾಂಗ್ರೆಸ್‌– ಬಿಜೆಪಿ ನಡುವೆ ಮಾತ್ರ ನೇರ ಮತ್ತು ತುರುಸಿನ ಪೈಪೋಟಿ ಕಂಡುಬಂದಿದೆ.

ಒಮ್ಮೆ ಸೋತು, ಕಳೆದ ಬಾರಿ ಗೆದ್ದಿದ್ದ ಕಾಂಗ್ರೆಸ್‌ನ ಪ್ರಕಾಶ ಹುಕ್ಕೇರಿ ಪುನರಾಯ್ಕೆ ಬಯಸಿದ್ದಾರೆ. 72ರ ಇಳಿವಯಸ್ಸಿನಲ್ಲೂ ಮಿಂಚಿನ ಸಂಚಾರ ನಡೆಸುತ್ತಿದ್ದಾರೆ. ‘ಅಭಿವೃದ್ಧಿಗೆ ಆದ್ಯತೆ ಕೊಟ್ಟಿದ್ದೇನೆ. ಜನರೊಂದಿಗೆ ಇದ್ದೇನೆ. ಹೀಗಾಗಿ, ಮತದಾರರು ಮತ್ತೊಮ್ಮೆ ಆಶೀರ್ವದಿಸುತ್ತಾರೆ’ ಎನ್ನುವ ನಂಬಿಕೆ ಅವರದು.

ವಿಧಾನಸಭೆ ಚುನಾವಣೆಯಲ್ಲಿ ಎರಡು ಬಾರಿ (‌2004ರಲ್ಲಿ ಸದಲಗಾ ಹಾಗೂ 2018ರಲ್ಲಿ ಚಿಕ್ಕೋಡಿ–ಸದಲಗಾ) ಸೋತಿದ್ದ ಉದ್ಯಮಿ ಅಣ್ಣಾಸಾಹೇಬ ಜೊಲ್ಲೆ ಬಿಜೆಪಿ ಅಭ್ಯರ್ಥಿ. ಉದ್ಯಮಿ, ಸಹಕಾರಿಯೂ ಆಗಿರುವ ಅವರು ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಗಳ ಮೂಲಕ ಎರಡು ಸಾವಿರ ಮಂದಿಗೆ ಉದ್ಯೋಗ ಕೊಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಲೆ ಪ್ಲಸ್ ಆಗಲಿದೆ ಎಂಬ ವಿಶ್ವಾಸದಲ್ಲಿದ್ದಾರೆ.

ಇಲ್ಲಿ 8 ವಿಧಾನಸಭಾ ಕ್ಷೇತ್ರಗಳಿವೆ. ತಲಾ 4 ಕ್ಷೇತ್ರಗಳನ್ನು ಕಾಂಗ್ರೆಸ್‌ ಹಾಗೂ ಬಿಜೆಪಿ ತಮ್ಮದಾಗಿಸಿಕೊಂಡಿವೆ. ಇಬ್ಬರು ಪ್ರಮುಖ ಅಭ್ಯರ್ಥಿಗಳ ಕುಟುಂಬದಲ್ಲೂ ಒಬ್ಬೊಬ್ಬ ಶಾಸಕರಿದ್ದಾರೆ. ಇಬ್ಬರೂ ಕ್ಷೇತ್ರದ ವ್ಯಾಪ್ತಿಯವರೇ. ಪತಿ ಗೆಲುವಿಗೆ ಪತ್ನಿ ಶಶಿಕಲಾ ಹಾಗೂ ತಂದೆ ಪುನರಾಯ್ಕೆಗೆ ಪುತ್ರ ಗಣೇಶ ತಮ್ಮ ವರ್ಚಸ್ಸನ್ನು ಧಾರೆ ಎರೆಯುತ್ತಿದ್ದಾರೆ. ಒಂದೇ ಊರಿನವರ (ಯಕ್ಸಂಬಾ) ನಡುವಿನ ಹೋರಾಟದಲ್ಲಿ ಯಾರ ಕೈಮೇಲಾದೀತೆಂಬ ಕುತೂಹಲವಿದೆ.

ಜೆಡಿಎಸ್‌ ಪ್ರಭಾವವಿಲ್ಲ: ಜೆಡಿಎಸ್‌ಗೆ ನೆಲೆ ಇಲ್ಲದಿರುವುದರಿಂದ, ಮೈತ್ರಿಕೂಟದ ಅಭ್ಯರ್ಥಿ ಹುಕ್ಕೇರಿಗೆ ಆ ಪಕ್ಷದಿಂದ ಹೆಚ್ಚಿನ ಅನುಕೂಲ ನಿರೀಕ್ಷಿಸುವಂತಿಲ್ಲ. ಸಾಂ‍ಪ್ರದಾಯಿಕ ಮತ ಬ್ಯಾಂಕನ್ನು ಕಾಂಗ್ರೆಸ್ ನೆಚ್ಚಿಕೊಂಡಿದೆ. ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ. ಸೋದರನ ‘ಅಸಹಕಾರ’ ಅವರಿಗೆ ತೊಡಕಾಗಬಹುದು.

ಕೃಷ್ಣಾ ನದಿ ದಡದಲ್ಲಿರುವ, ಅತಿ ಹೆಚ್ಚು ಪ್ರಮಾಣದಲ್ಲಿ ಕಬ್ಬು ಬೆಳೆದು ಸಿಹಿ ಹಂಚುವ, ಹಲವು ಸಕ್ಕರೆ ಕಾರ್ಖಾನೆಗಳನ್ನು ಹೊಂದಿರುವ, ಸಹಕಾರಿ ರಂಗದಲ್ಲೂ ಮುಂದಿರುವ ಈ ಕ್ಷೇತ್ರದ ಉದ್ದಕ್ಕೂ ಫಲಿತಾಂಶದ ಬಗ್ಗೆ ‘ರಸವತ್ತಾದ’ ಚರ್ಚೆಗಳು ನಡೆಯುತ್ತಿವೆ.

ಇಬ್ಬರಿಗೂ ‘ರಮೇಶ’ ತಲೆನೋವು!: ಶಾಸಕ ರಮೇಶ ಜಾರಕಿಹೊಳಿ ಕಾಂಗ್ರೆಸ್‌ ಹಾಗೂ ಬಿ.ಡಿ.ಸಿ.ಸಿ ಬ್ಯಾಂಕ್‌ ಅಧ್ಯಕ್ಷ ರಮೇಶ ಕತ್ತಿ ಬಿಜೆಪಿಗೆ ತಲೆನೋವಾಗಿದ್ದಾರೆ. ಅವರ ನಡೆ ಆಯಾ ಪಕ್ಷದವರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ತಳ್ಳಿಹಾಕಲಾಗದು.

ಸಚಿವ ಸ್ಥಾನ ಕಿತ್ತುಕೊಂಡಿದ್ದರಿಂದಾಗಿ ಸಿಟ್ಟಾಗಿರುವ ರಮೇಶ ಜಾರಕಿಹೊಳಿ ಪ್ರಚಾರದಿಂದ ದೂರ ಉಳಿದಿದ್ದಾರೆ. ‘ಅವರು ಒಳಗೊಳಗೇ ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ’ ಎಂದು ಬಿಜೆಪಿ ಮುಖಂಡರು ಹೇಳಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ, ಹಿಂದಿನ ಚುನಾವಣೆಯಲ್ಲಿ ಕಡಿಮೆ ಮತಗಳ ಅಂತರದಿಂದ ಸೋತಿದ್ದ ರಮೇಶ ಕತ್ತಿ ಟಿಕೆಟ್‌ ಕೈ ತಪ್ಪಿದ್ದರಿಂದ ಬೇಸರಗೊಂಡಿದ್ದು, ಪ್ರಚಾರಕ್ಕೆ ಇಳಿದಿಲ್ಲ. ಹೀಗಾಗಿ, ಉಭಯ ಪಕ್ಷಗಳ ಅಭ್ಯರ್ಥಿಗಳಿಗೂ ‘ಒಳಏಟಿನ’ ಭಯವಿದೆ.

‘ಸಂಸದರು ಅನುದಾನ ಹಂಚಿಕೆಯಲ್ಲಿ ಪುತ್ರನ ಚಿಕ್ಕೋಡಿ– ಸದಲಗಾಕ್ಕೆ ಸೀಮಿತವಾಗಿ ಉಳಿದ ಕ್ಷೇತ್ರಗಳನ್ನು ಕಡೆಗಣಿಸಿದರು’ ಎನ್ನುವ ಅಸಮಾಧಾನವಿದೆ. ಆದರೆ ಸುಲಭವಾಗಿ ಕೈಗೆ ಸಿಗುತ್ತಾರೆ ಎಂಬ ಮೆಚ್ಚುಗೆಯೂ ಜನರಲ್ಲಿದೆ.

50:50: ‘ವಿಧಾನಸಭೆ ಚುನಾವಣೆಯಲ್ಲಿ ಸಂಸದರು ಪುತ್ರನ ಪರವಷ್ಟೇ ಓಡಾಡಿದರು, ಇತರ ಕ್ಷೇತ್ರಗಳನ್ನು ಕಡೆಗಣಿಸಿದರು’ ಎಂಬ ಸಿಟ್ಟು ಕಾಂಗ್ರೆಸ್‌ನ ಕೆಲವರಲ್ಲಿದೆ. ಇದು ಪರಿಣಾಮ ಬೀರಿದರೂ ಅಚ್ಚರಿ ಇಲ್ಲ.

‘ಜೊಲ್ಲೆ ಉದ್ಯಮಿ. ಸಾಮಾನ್ಯರು ಅವರನ್ನು ಭೇಟಿಯಾಗುವುದು ಸುಲಭವಲ್ಲ. ಮೋದಿ ಅಲೆಯಲ್ಲಿ ತೇಲಿಕೊಂಡು ಬರಬಹುದು’ ಎಂಬ ಅಭಿ‍ಪ್ರಾಯಗಳಿವೆ. ಹೋರಾಟ ತೀವ್ರವಾಗಿದ್ದು, ಗೆಲುವು ಇಬ್ಬರಿಗೂ ಸುಲಭದ ತುತ್ತಲ್ಲ.

ಹಿಂದಿನ ಚುನಾವಣೆಗಳ ಫಲಿತಾಂಶ ಗಮನಿಸಿದರೆ ಇದು ಕಾಂಗ್ರೆಸ್‌ನ ಭದ್ರಕೋಟೆ. 2 ಬಾರಿಯಷ್ಟೇ ಕಮಲ ಅರಳಿದೆ. ಮತ್ತೊಮ್ಮೆ ವಶಕ್ಕೆ ತಂತ್ರ ಹೆಣೆದಿರುವ ಬಿಜೆಪಿ, ಕಾಂಗ್ರೆಸ್‌ನಲ್ಲಿ ಅತೃಪ್ತರಾದವರ ನೆರವಿನಿಂದ ‘ಫಸಲು’ ಬೆಳೆಯುವ ಯೋಜನೆ ರೂಪಿಸಿದೆ!

ಈ ಭಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲಾಗಿಲ್ಲ; ಉದ್ಯೋಗ ಸೃಷ್ಟಿಯಾಗಿಲ್ಲ ಎನ್ನುವ ಸಿಟ್ಟು ಯುವಜನರಲ್ಲಿದೆ. ಚಿಕ್ಕೋಡಿಯನ್ನು ಜಿಲ್ಲೆ ಮಾಡಬೇಕು. ನೀರಾವರಿ ಒದಗಿಸಬೇಕು. ಸವಳು– ಜವಳು ಸಮಸ್ಯೆ ಪರಿಹರಿಸಬೇಕು ಎಂಬ ಬೇಡಿಕೆಗಳು ಪ್ರತಿಷ್ಠೆಯ ನಡುವೆ ಹಿನ್ನೆಲೆಗೆ ಸರಿದಿವೆ.

‘ಇಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದವರ ಮತಗಳು ನಿರ್ಣಾಯಕ. ಹುಕ್ಕೇರಿ ಪಂಚಮಸಾಲಿ, ಜೊಲ್ಲೆ ಲಿಂಗಾಯತ ಚತುರ್ಥ. ಯಾವ ಸಮಾಜ ಯಾರ ಕೈಹಿಡಿಯುತ್ತದೆ ನೋಡಬೇಕು’ ಎಂದು ಹತ್ತರವಾಟದ ಮುಖಂಡರೊಬ್ಬರು ವ್ಯಕ್ತಪಡಿಸಿದ ಕುತೂಹಲ ಕ್ಷೇತ್ರದೆಲ್ಲೆಡೆ ಇದೆ.

ಕ್ಷೇತ್ರದಲ್ಲಿ, ಲಿಂಗಾಯತರೊಂದಿಗೆ ಕುರುಬರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅಲ್ಪಸಂಖ್ಯಾತರ ಮತಗಳು ಕೂಡ ನಿರ್ಣಾಯಕ. ಅಥಣಿ, ಕಾಗವಾಡ ಹಾಗೂ ಚಿಕ್ಕೋಡಿ–ಸದಲಗಾ ಕ್ಷೇತ್ರದಲ್ಲಿ ಜೈನರು ಜಾಸ್ತಿ ಇದ್ದಾರೆ. ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ನಿಪ್ಪಾಣಿ ಹಾಗೂ ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಮರಾಠಿ ಭಾಷಿಕರಿದ್ದು, ಅವರ ಮನವೊಲಿಕೆಗೆ ಅಭ್ಯರ್ಥಿಗಳು ಮರಾಠಿ ಭಾಷೆಯಲ್ಲೇ ಮತ ಯಾಚಿಸುತ್ತಿದ್ದಾರೆ. ಹುಕ್ಕೇರಿ–ಜೊಲ್ಲೆ ಕುಟುಂಬದವರು ಕೂಡ ಪ್ರಚಾರಕ್ಕೆ ಇಳಿದಿದ್ದು, ಕಣ ರಂಗೇರಿದೆ. ಕೊನೆಯ 2–3 ದಿನಗಳಲ್ಲಿ ನಡೆಯುವ ಬೆಳವಣಿಗೆಗಳು ಫಲಿತಾಂಶ ನಿರ್ಧರಿಸಲಿವೆ.

**
ನರೇಂದ್ರ ಮೋದಿ ಅಲೆ ನನಗೂ ನೆರವಾಗಲಿದೆ. ಮೂರು ದಶಕಗಳಿಂದ ಮಾಡಿರುವ ಸಮಾಜ ಸೇವೆ ಕೈಹಿಡಿಯುವ ವಿಶ್ವಾಸವಿದೆ. ಪಕ್ಷದ ಮುಖಂಡರೆಲ್ಲರೂ ಶ್ರಮಿಸುತ್ತಿದ್ದಾರೆ.
-ಅಣ್ಣಾಸಾಹೇಬ ಜೊಲ್ಲೆ, ಬಿಜೆಪಿ

**
ಬಿಜೆಪಿಯವರನ್ನು ಟೀಕಿಸಿ ಮತ ಕೇಳುವುದಿಲ್ಲ. ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಅವುಗಳನ್ನು ತಿಳಿಸಿ ಬೆಂಬಲ ಕೋರುತ್ತಿದ್ದೇನೆ. ಜನ ನನ್ನ ಕೈಬಿಡುವುದಿಲ್ಲ.
-ಪ್ರಕಾಶ ಹುಕ್ಕೇರಿ, ಕಾಂಗ್ರೆಸ್

**
ನಿರುದ್ಯೋಗಿಗಳಿಗೆ ನೆರವಾಗಬೇಕು. ಕರಾಡ– ಧಾರವಾಡ ರೈಲು ಮಾರ್ಗ ನಿರ್ಮಾಣಕ್ಕೆ ಪ್ರಯತ್ನಿಸಬೇಕು. ಚಿಕ್ಕೋಡಿ ಜಿಲ್ಲೆ ಘೋಷಣೆಗೆ ಆದ್ಯತೆ ಕೊಡಬೇಕು.
-ಗುರುನಾಥ ಹಿರೇಮಠ, ಚಿಕ್ಕೋಡಿ

**
ಗಡಿಯಲ್ಲಿರುವ ಈ ಕ್ಷೇತ್ರದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಸಂಸದರು ಆದ್ಯತೆ ನೀಡಬೇಕು. ಯುವಜನರು ಕೆಲಸಕ್ಕಾಗಿ ಮಹಾರಾಷ್ಟ್ರಕ್ಕೆ ಹೋಗುವುದನ್ನು ತಪ್ಪಿಸಬೇಕು.
-ಭಾರ್ಗವಿ ಭಿರಡೀಕರ‌, ಅಥಣಿ

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !