ಬುಧವಾರ, ಮಾರ್ಚ್ 29, 2023
32 °C
ದೀಪಾವಳಿ ಅಂಗವಾಗಿ ಕುಂದಾನಗರಿಯಲ್ಲಿ ವಿಶೇಷ ಆಚರಣೆ

ಬೆಳಗಾವಿ: ‘ಕೋಟೆ’ ಕಟ್ಟಿ ಸಂಭ್ರಮಿಸುವ ಚಿಣ್ಣರು

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಬೆಳಕಿನ ಹಬ್ಬದೊಂದಿಗೆ ಗತವೈಭವವನ್ನು ಬೆಸೆಯುವ, ಅದನ್ನು ಇಂದಿನ ಮಕ್ಕಳು ಹಾಗೂ ಯುವಪೀಳಿಗೆಯವರಿಗೆ ತಿಳಿಸಿಕೊಡುವ ವಿಶೇಷ ಆಚರಣೆಯೊಂದು ಕುಂದಾನಗರಿ ಬೆಳಗಾವಿಯಲ್ಲಿ ದೀಪಾವಳಿ ಸಂದರ್ಭದಲ್ಲಿ ಕಂಡುಬರುತ್ತದೆ.

‘ಕೋಟೆ’ಗಳ ಮಾದರಿ ನಿರ್ಮಾಣ ಇಲ್ಲಿನ ವಿಶೇಷ. ಪ್ರತಿ ವರ್ಷವೂ ಇದು ನಡೆಯುತ್ತಿರುವುದರಿಂದಾಗಿ ಸಂಪ್ರದಾಯದಂತೆಯೇ ಆಗಿ ಹೋಗಿದೆ.

ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿರುವ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಪ್ರಭಾವವಿರುವ ಈ ನೆಲದಲ್ಲಿ ಕೋಟೆ ಕಟ್ಟುವ ಸಂಪ್ರದಾಯ ಹಿಂದಿನಿಂದಲೂ ಬಂದಿದೆ. ಶಿವಾಜಿ ಅವರು ತಮ್ಮ ಆಡಳಿತ ಸಂದರ್ಭದಲ್ಲಿ ಬಹಳಷ್ಟು ಕೋಟೆಗಳನ್ನು ಕಟ್ಟಿದ್ದರು. ಶತ್ರುಗಳಿಂದ ರಕ್ಷಿಸಿಕೊಳ್ಳಲು ಹಲವು ಕೌಶಲಗಳನ್ನು ಅಲ್ಲಿ ಅಳವಡಿಸಿಕೊಂಡಿದ್ದರು. ಆ ಗತವೈಭವವನ್ನು ಇಂದಿನ ಮಕ್ಕಳಿಗೆ ತಿಳಿಸಿಕೊಡುವ ಭಾಗವಾಗಿ ಕೋಟೆ ಕಟ್ಟುವ ಆಚರಣೆ ಇಲ್ಲಿ ನಡೆಯತ್ತಿದೆ.

ಶಿವಾಜಿಯು ಮೊಗಲ್ ಸಾಮ್ರಾಜ್ಯದ ವಿರುದ್ಧ ವಿಜಯ ಪತಾಕೆ ಹಾರಿಸಿದ ಸವಿನೆನಪಿಗಾಗಿ ಅವರ ಭಕ್ತರು ಮತ್ತು ಅನುಯಾಯಿಗಳು ದೀಪಾವಳಿಯಿಂದ ತುಳಸಿ  ವಿವಾಹದವರೆಗೆ ಶಿವಾಜಿ ಮಹಾರಾಜರು ನಿರ್ಮಿಸಿದ ವಿವಿಧ ಕೋಟೆಗಳ ಮಾದರಿಯನ್ನು ಮಣ್ಣಿನಿಂದ ಸಿದ್ಧಪಡಿಸಿ ಪ್ರದರ್ಶಿಸುತ್ತಾರೆ. ಶಿವಾಜಿಯ ಸಾಹಸ, ಧೈರ್ಯ, ದೇಶಭಕ್ತಿ ಮತ್ತು ಧ್ಯೇಯಗಳ ಬಗ್ಗೆ ಇಂದಿನ ಯುವಪೀಳಿಗೆಗೆ ಪರಿಚಯಿಸುವ ಕಾರ್ಯ ಈ ಮೂಲಕ ನಡೆಯುತ್ತದೆ.

ಶಿವಾಜಿ ಯುದ್ಧಕ್ಕೆ ಹೊರಟ ದಿನವಾದ ಬಲಿಪಾಡ್ಯಮಿಯಿಂದ ಕೋಟೆಗಳನ್ನು ಅನಾವರಣಗೊಳಿಸಲಾಗುತ್ತದೆ. ಸ್ಥಳೀಯ ಹಿರಿಯರು ಸಮಿತಿ ರಚಿಸಿ ಕೋಟೆಗಳ ಮೌಲ್ಯಮಾಪನ ನಡೆಸಿ ಉತ್ತಮ ಕೋಟೆಗೆ ಬಹುಮಾನ ಘೋಷಿಸುತ್ತಾರೆ. ಹೀಗಾಗಿ ಇತ್ತೀಚಿನ ವರ್ಷಗಳಲ್ಲಿ ಕೋಟೆ ನಿರ್ಮಾಣ ಹಬ್ಬದ ಮಾದರಿಯಲ್ಲಿ ಪ್ರಸಿದ್ಧಿ ಗಳಿಸಿದೆ.

‘ಶಿವಾಜಿ ಮಹಾರಾಜರ ತ್ಯಾಗ ಬಲಿದಾನ ಮತ್ತು ಹಿಂದೂ ಸಂಸ್ಕೃತಿಯ ಶೌರ್ಯದ ಪ್ರತೀಕವಾದ ಕೋಟೆಗಳು ಅವರ ಗತಕಾಲದ ವೈಭವಗಳನ್ನು ತಿಳಿಸುತ್ತವೆ. ದೀಪಾವಳಿ ಸಂದರ್ಭದಲ್ಲಿ ಕೋಟೆಗಳ ಮಾದರಿ ನಿರ್ಮಾಣದಿಂದ ಇಂದಿನ ಪೀಳಿಗೆಗೆ ನಮ್ಮ ದೇಶದ ಇತಿಹಾಸ ತಿಳಿಸಿದಂತಾಗುತ್ತದೆ. ಜೊತೆಗೆ ಸ್ಪರ್ಧಾತ್ಮಕ ಮನೋಭಾವದಿಂದ ಹೊಸತನಕ್ಕೆ ಹುಮ್ಮಸ್ಸು ಮೂಡುತ್ತದೆ’ ಎನ್ನುತ್ತಾರೆ ಹಿರಿಯರು.

ಬೆಳಗಾವಿ ನಗರ ಹಾಗೂ ತಾಲ್ಲೂಕಿನ ಜೊತೆಗೆ ಖಾನಾಪುರ, ನಿಪ್ಪಾಣಿ ಪಟ್ಟಣ ಸೇರಿದಂತೆ ವಿವಿಧೆಡೆ ದೀಪಾವಳಿ ಪ್ರಯುಕ್ತ ಕೋಟೆಗಳನ್ನು ಮಕ್ಕಳು ಕಟ್ಟುತ್ತಾರೆ. ಅಲ್ಲಲ್ಲಿ ಸ್ಥಳೀಯವಾಗಿ ವಂತಿಗೆ ಸಂಗ್ರಹಿಸುತ್ತಾರೆ. ಮಕ್ಕಳೊಂದಿಗೆ ಸ್ಥಳೀಯರು ಸೇರಿ ಕಲ್ಲು, ಇಟ್ಟಿಗೆ, ಮರಳು, ಕೆಂಪು ಮಣ್ಣು ಬಳಸಿ ಕೋಟೆ ನಿರ್ಮಿಸುತ್ತಾರೆ. ಮನೆ, ವ್ಯಾಯಾಮ ಶಾಲೆ, ಕುದುರೆ ಲಾಯ, ದೇವಸ್ಥಾನ, ರಾಜನ ಆಸ್ಥಾನಗಳನ್ನು ತಯಾರಿಸಿ ಅವುಗಳಲ್ಲಿ ಪುಟ್ಟ ಮಣ್ಣಿನ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಾರೆ. ದೀಪಾಲಂಕಾರ ಮಾಡುವುದೂ ಅಲ್ಲಲ್ಲಿ ಕಂಡುಬರುತ್ತದೆ.

ಶಿವಾಜಿ ನಿರ್ಮಿಸಿದ ರಾಯಗಡ, ಪ್ರತಾಪಗಡ, ಪನಾಳಗಡ, ರಾಜಹಂಸಗಡ ಮೊದಲಾದ ಮಾದರಿಯ ಕೋಟೆಗಳನ್ನು ನಿರ್ಮಿಸಿ, ಶಿವಾಜಿ ಮಹಾರಾಜ ಹಾಗೂ ಸೈನಿಕರ ವಿಗ್ರಹಗಳನ್ನು ಇಟ್ಟು ಅಲಂಕರಿಸುತ್ತಾರೆ ಮಕ್ಕಳು. ಹೀಗಾಗಿ, ಆ ಮೂರ್ತಿಗಳು ಮಾರುಕಟ್ಟೆಯಲ್ಲಿ ಕಾಣಸಿಗುತ್ತವೆ. ಮಕ್ಕಳಲ್ಲಿ ಕಟ್ಟುವ, ಉಳಿಸುವ ಕೌಶಲ ಬೆಳೆಸುವ ಭಾಗವಾಗಿ ಈ ಆಚರಣೆ ನಡೆಸಿಕೊಂಡು ಬರಲಾಗುತ್ತಿದೆ.

ಬೆಳಗಾವಿಯ ಮಾಳಮಾರುತಿ ಬಡಾವಣೆಯ ಮಂಥನ ರಮೇಶ ಚೌಗಲೆ ಹಾಗೂ ಸ್ಥಳೀಯರು ಕೋಟೆ ನಿರ್ಮಿಸಿ ಅಲ್ಲಿಯೇ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಿದ್ದು ವಿಶೇಷವಾಗಿತ್ತು.

‘ಮಕ್ಕಳಲ್ಲಿ ಹಿಂದೂ ಧರ್ಮ ಜಾಗೃತಿ ಮೂಡಿಸುವುದು ಈ ಕೋಟೆಗಳನ್ನು ಕಟ್ಟುವುದರ ಉದ್ದೇಶವಾಗಿದೆ. ರಾಷ್ಟ್ರ ಧರ್ಮ, ಶಿವಾಜಿ ಮಹಾರಾಜ ಹಾಗೂ ಧರ್ಮವೀರ ಸಂಭಾಜಿ ಮಹಾರಾಜ ಯಾರು ಎನ್ನುವುದನ್ನು ಮಕ್ಕಳಿಗೆ ತಿಳಿಸಿಕೊಡಬೇಕು. ಇತಿಹಾಸ ತಿಳಿಯಬೇಕು. ಜಾತೀಯತೆ ಬಿಡಬೇಕು, ರಾಷ್ಟ್ರ ಧರ್ಮ ಬೇಕು. ಈ ನಿಟ್ಟಿನಲ್ಲಿ ಹುಡುಗರಿಗೆ ಪ್ರೋತ್ಸಾಹ ಕೊಡುತ್ತಿದ್ದೇವೆ’ ಎನ್ನುತ್ತಾರೆ ಮಹಾದ್ವಾರ ರಸ್ತೆಯ ಸಂಭಾಜಿ ಗಲ್ಲಿಯ ಹಿರಿಯರಾದ ವಾಮನ ಕುಲಕರ್ಣಿ.

‘ಗಲ್ಲಿಯ ಹುಡುಗರೆಲ್ಲರೂ ಸೇರಿಕೊಂಡು ಮೂರು ವರ್ಷದಿಂದ ಕೋಟೆ ಕಟ್ಟುತ್ತಿದ್ದೇವೆ. ದೀಪಾವಳಿ ಸಂದರ್ಭದಲ್ಲಿ 12 ದಿನಗಳವರೆಗೆ ಪ್ರದರ್ಶಿಸುತ್ತೇವೆ.  ಹಿರಿಯರು ಮಾರ್ಗದರ್ಶನ ಮಾಡುತ್ತಾರೆ’ ಎಂದು ಶಹಾಪುರದ ಮಹಾದ್ವಾರ ರಸ್ತೆ 3ನೇ ಕ್ರಾಸ್‌ನ ಬಾಲಕ ಪ್ರಣವ ಜನಗೌಡ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು